ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ ನಂತರ ವಿಭೂತಿ ತಯಾರಕರ ಬದುಕು ಹಸನಾಗುತ್ತಾ?

|
Google Oneindia Kannada News

ಮೈಸೂರು, ಮಾರ್ಚ್ 11; ಶಿವರಾತ್ರಿ ಹಬ್ಬದಿಂದಾದರೂ ನಮ್ಮ ಬದುಕು ಹಸನಾಗುತ್ತಾ? ಎಂದು ವಿಭೂತಿ ತಯಾರಿಸುವುದನ್ನೇ ಕುಲಕಸುಬಾಗಿಸಿಕೊಂಡು ಬಂದಿರುವ ಹಿರೇಮಠ ಜನಾಂಗ ಕಾಯುತ್ತಿದೆ.

ಮೈಸೂರಿನಲ್ಲಿ ಪೂಜಾ ಕೈಂಕರ್ಯಕ್ಕೆ ಸಂಬಂಧಿಸಿದಂತೆ ಬೇಕಾಗುವ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಿ, ಅದರಿಂದ ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಬೇಕಾದಷ್ಟಿವೆ. ಕರ್ಪೂರ, ಬತ್ತಿ, ಸಾಂಬ್ರಾಣಿ ಹೀಗೆ ಹಲವು ರೀತಿಯ ಪೂಜಾ ಸಾಮಗ್ರಿಗಳನ್ನು ತಯಾರು ಮಾಡಿ ಅದನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿವೆ.

ಮಹಾ ಶಿವರಾತ್ರಿ ವಿಶೇಷ: ಮೈಸೂರಿನಲ್ಲಿ 21 ಅಡಿ ಎತ್ತರದ ತೆಂಗಿನಕಾಯಿ ಶಿವಲಿಂಗ ಮಹಾ ಶಿವರಾತ್ರಿ ವಿಶೇಷ: ಮೈಸೂರಿನಲ್ಲಿ 21 ಅಡಿ ಎತ್ತರದ ತೆಂಗಿನಕಾಯಿ ಶಿವಲಿಂಗ

ಇಂತಹವರ ನಡುವೆ ಹಿರೇಮಠ ಜನಾಂಗವೂ ಒಂದಾಗಿದ್ದು, ಇವರ ಕುಲಕಸುಬು ವಿಭೂತಿ ತಯಾರಿಸುವುದಾಗಿದೆ. ಹಾಗೆ ನೋಡಿದರೆ ಹಲವು ಜನಾಂಗದವರು ಶತಮಾನಗಳ ಹಿಂದೆಯೇ ಮೈಸೂರು ನಗರಕ್ಕೆ ಬಂದು ತಮ್ಮ ಕುಲಕಸುಬು ಮಾಡುವುದರೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ.

ವಿಶೇಷ ವರದಿ; ಶಿವರಾತ್ರಿಗೂ ಮುಸ್ಲಿಂ ಕುಟುಂಬಕ್ಕೂ ನಂಟು! ವಿಶೇಷ ವರದಿ; ಶಿವರಾತ್ರಿಗೂ ಮುಸ್ಲಿಂ ಕುಟುಂಬಕ್ಕೂ ನಂಟು!

ಹಿಂದೆ ಕಾರ್ಖಾನೆಗಳು ಇಲ್ಲದ ಕಾಲದಲ್ಲಿ ಪೂಜೆ, ಹೋಮ ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ಕೆ ಬೇಕಾದ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಲಾಗುತ್ತಿತ್ತು. ಹೀಗಾಗಿ ಕೆಲವು ಜನಾಂಗಗಳು ಒಂದೊಂದು ರೀತಿಯ ಕಸುಬನ್ನು ತಮ್ಮ ಕುಲಕಸುಬಾಗಿ ಮಾಡಿಕೊಂಡು ಬಂದಿದ್ದರು. ಅದರಂತೆ ಹಿರೇಮಠ ಜನಾಂಗ ವಿಭೂತಿಯನ್ನು ತಯಾರಿಸುವ ಕಸುಬು ಮಾಡಿಕೊಂಡು ಬರುತ್ತಿದ್ದು, ಅಂದಿನಿಂದ ಇಂದಿನವರೆಗೂ ಅದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದೆ.

 ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ

ಕಾರ್ಖಾನೆಗಳಿಂದ ತೀವ್ರ ಪೈಪೋಟಿ

ಕಾರ್ಖಾನೆಗಳಿಂದ ತೀವ್ರ ಪೈಪೋಟಿ

ಇವತ್ತು ವಿಭೂತಿ ತಯಾರಿಸುವ ಕಾರ್ಖಾನೆಗಳು ಬಂದಿದ್ದರೂ ಅವರ ನಡುವೆ ಪೈಪೋಟಿ ನೀಡುತ್ತಾ ವಿಭೂತಿ ತಯಾರಿಸಿಕೊಂಡು ಸಾಗುತ್ತಿರುವುದು ಅವರಿಗೊಂದು ಸವಾಲು ಎಂದರೂ ತಪ್ಪಾಗಲಾರದು. ಆದರೂ ಅನಿವಾರ್ಯವಾಗಿ ಅದನ್ನು ಮಾಡಲೇ ಬೇಕಾಗಿದೆ. ತಲತಲಾಂತರದಿಂದ ಅದನ್ನೇ ವೃತ್ತಿ ಮಾಡಿಕೊಂಡು ಬಂದಿದ್ದು, ಅದನ್ನು ಬಿಟ್ಟರೆ ಬೇರೆ ಉದ್ಯೋಗ ಮಾಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿಯೇ ಕಷ್ಟವೋ? ಸುಖವೋ? ಅನಿವಾರ್ಯವಾಗಿ ಕುಲಕಸುಬನ್ನು ಮುಂದುವರೆಸಿಕೊಂಡು ಹೋಗಲೇ ಬೇಕಾಗಿದೆ.

ಮೈಸೂರು ಸಮೀಪದ ಗೌರಿ ಶಂಕರ ನಗರ ಹಾಗೂ ಹುಲ್ಲಹಳ್ಳಿಯಲ್ಲಿ ಕೆಲವರು ವಿಭೂತಿ ತಯಾರಿಸುವ ಕಸುಬು ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಇವತ್ತಿನ ಮಟ್ಟಿಗೆ ವಿಭೂತಿ ತಯಾರಿಸುವುದು ಸುಲಭವಾಗಿ ಉಳಿದಿಲ್ಲ. ಅದೊಂದು ಕಷ್ಟದ ಕೆಲಸವಾಗಿದೆ. ಇದಕ್ಕೆ ಬೇಕಾದ ಕಚ್ಛಾವಸ್ತುಗಳನ್ನು ಆಂಧ್ರಪ್ರದೇಶದಿಂದ ತರಬೇಕಾಗಿದೆ. ಬಳಿಕ ವಿಭೂತಿ ತಯಾರಿಸಿ ಮಾರಾಟ ಮಾಡಬೇಕು. ಇದರಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ನಿರೀಕ್ಷಿತ ಲಾಭ ಸಿಗದೆ ಕಷ್ಟದಲ್ಲಿಯೇ ಬದುಕು ಸವೆಸಬೇಕಾದ ಪರಿಸ್ಥಿತಿ ಇವರದ್ದಾಗಿದೆ.

ಲಾಕ್ ಡೌನ್‍ನಿಂದ ಮೂರಾಬಟ್ಟೆಯಾಯ್ತು ಬದುಕು

ಲಾಕ್ ಡೌನ್‍ನಿಂದ ಮೂರಾಬಟ್ಟೆಯಾಯ್ತು ಬದುಕು

ಕಳೆದ ವರ್ಷ ಶಿವರಾತ್ರಿ ನಂತರ ಕೊರೋನಾ ಮಹಾಮಾರಿಯಿಂದ ಲಾಕ್ ಡೌನ್ ಆಗಿದ್ದರಿಂದ ಎಲ್ಲರ ಬದುಕು ಮೂರಾಬಟ್ಟೆಯಾಗಿತ್ತು. ಈ ವೇಳೆ ವಿಭೂತಿ ತಯಾರಕರ ಗೋಳು ಹೇಳ ತೀರದ್ದಾಗಿತ್ತು. ಶಿವನ ದೇಗುಲಗಳಿಗೆ ಭಕ್ತರು ಬರುತ್ತಿರಲಿಲ್ಲ. ಪೂಜೆ, ಜಾತ್ರೆ ಯಾವುದೂ ನಡೆಯಲಿಲ್ಲ. ಇದರಿಂದ ವಿಭೂತಿಯನ್ನು ಖರೀದಿಸುವವರೇ ಇಲ್ಲವಾಗಿದ್ದರು. ಇದರ ಜತೆಗೆ ಸುತ್ತೂರು ಜಾತ್ರೆಯೂ ಅದ್ಧೂರಿಯಾಗಿ ನಡೆಯಲಿಲ್ಲ. ಸಾಮಾನ್ಯವಾಗಿ ಪ್ರತಿವರ್ಷ ನಡೆಯುವ ಸುತ್ತೂರು ಜಾತ್ರೆಗೆ ಮೈಸೂರಿನ ಗೌರಿಶಂಕರ ಮತ್ತು ಹುಲ್ಲಹಳ್ಳಿಯಿಂದಲೇ ವಿಭೂತಿಯನ್ನು ಕೊಂಡೊಯ್ಯಲಾಗುತ್ತಿತ್ತು. ಈ ಬಾರಿ ಅದ್ಯಾವುದು ಅಂದುಕೊಂಡಂತೆ ನಡೆಯಲಿಲ್ಲ. ಸದ್ಯ ನಿಧಾನವಾಗಿ ಬದುಕು ಯಥಾಸ್ಥಿತಿಗೆ ಮರಳುತ್ತಿರುವುದರಿಂದ ವಿಭೂತಿ ತಯಾರಕರು ಸ್ವಲ್ಪ ಮಟ್ಟಿಗೆ ಉಸಿರಾಡುವಂತಾಗಿದೆ.

ಹೊಟ್ಟೆಪಾಡಿಗೆ ಪರ್ಯಾಯ ಹಾದಿ

ಹೊಟ್ಟೆಪಾಡಿಗೆ ಪರ್ಯಾಯ ಹಾದಿ

ಇದೆಲ್ಲದರ ನಡುವೆ ವರ್ಷದ ಎಲ್ಲ ದಿನಗಳಲ್ಲಿ ವಿಭೂತಿ ಬಳಕೆಯಾಗುತ್ತದೆಯಾದರೂ ಶಿವರಾತ್ರಿ ಬಂತೆಂದರೆ ಅದರ ಬಳಕೆ ತುಸು ಹೆಚ್ಚಾಗುತ್ತದೆ. ಏಕೆಂದರೆ ಶಿವನಿಗೆ ವಿಭೂತಿ ಪ್ರಿಯವಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಾರೆ. ಹೀಗಾಗಿ ವಿಭೂತಿ ತಯಾರಕರು ತಮ್ಮ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿ ಒಂದಷ್ಟು ಆದಾಯದ ನಿರೀಕ್ಷೆ ಮಾಡುತ್ತಿರುವುದು ಕಂಡು ಬರುತ್ತಿದೆ. ಮೈಸೂರು ನಗರದಲ್ಲಿ ನೂರಾರು ದೇಗುಲಗಳಿದ್ದು, ಹಿಂದಿನ ಕಾಲದಲ್ಲಿ ಈ ದೇಗುಲಗಳಲ್ಲಿ ಸ್ಥಳೀಯ ಹಿರೇಮಠ ಜನಾಂಗದವರು ತಯಾರಿಸುತ್ತಿದ್ದ ವಿಭೂತಿಯೇ ಬಳಕೆಯಾಗುತ್ತಿತ್ತು. ಹೀಗಾಗಿ ಹೆಚ್ಚಿನ ಬೇಡಿಕೆಯಿದ್ದುದರಿಂದ ಅದನ್ನು ತಯಾರಿಸುವ ಜನಾಂಗದವರ ಬದುಕು ಹಸನಾಗಿತ್ತು. ಈಗ ವಿಭೂತಿಗಳು ಕಾರ್ಖಾನೆಗಳಲ್ಲಿಯೇ ತಯಾರಾಗುತ್ತಿದೆ. ಇದರಿಂದ ಬಹುತೇಕರು ಕಸುಬನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಪರ್ಯಾಯ ಹಾದಿಯನ್ನು ಹಿಡಿದಿದ್ದಾರೆ.

ಇನ್ನಾದರೂ ಬದುಕು ಹಸನಾಗಲಿ

ಇನ್ನಾದರೂ ಬದುಕು ಹಸನಾಗಲಿ

ಕಾರ್ಖಾನೆಯಲ್ಲಿ ತಯಾರಿಸಿದ ವಿಭೂತಿಯತ್ತ ಜನ ಹೆಚ್ಚು ಒಲವು ತೋರುತ್ತಿರುವುದರಿಂದಾಗಿ ವಿಭೂತಿ ತಯಾರಿಸುವುದನ್ನೇ ಕುಲಕಸುಬಾಗಿ ಮಾಡಿಕೊಂಡು ಬಂದಿರುವ ಹಿರೇಮಠ ಜನಾಂಗದವರ ಬದುಕು ಸಂಕಷ್ಟದಲ್ಲಿದೆ. ಶಿವರಾತ್ರಿ ನಂತರವಾದರೂ ಇವರ ಬದುಕು ಹಸನಾಗಲಿ, ಜನ ಇವರು ತಯಾರಿಸಿದ ವಿಭೂತಿಯತ್ತ ಗಮನಹರಿಸಿ ಖರೀದಿಸಲಿ, ಇದರಿಂದಾದರೂ ಅವರು ನೆಮ್ಮದಿಯಾಗಿ ಜೀವಿಸಲು ಅವಕಾಶವಾಗಲಿ. ಶಿವರಾತ್ರಿಯಂದು ಹಣೆಗೆ ವಿಭೂತಿಯನ್ನಿಟ್ಟು ಸಂಕಷ್ಟವೆಲ್ಲ ಪರಿಹಾರವಾಗಲಿ ಎಂದು ಪ್ರಾರ್ಥಿಸುವ ನಾವು, ಆ ವಿಭೂತಿ ತಯಾರಿಸುವುದನ್ನೇ ಬದುಕಾಗಿಸಿಕೊಂಡ ಅವರಿಗೂ ಒಳಿತಾಗಲಿ ಎಂದು ಆಶಿಸೋಣ.

English summary
Mysuru Hiremath community which busy in production of vibhuti from past several years now facing challenges. After Shivaratri community may get economic relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X