ನಿತೀಶ್ ಹೊಸ ಸರ್ಕಾರದ ಸ್ವರೂಪ ಹೇಗೆ? ಯಾರಿಗೆಲ್ಲ ಸ್ಥಾನ?
ಪಾಟ್ನ, ಆಗಸ್ಟ್ 09: ಬಿಹಾರ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಬದಲಾವಣೆ ಕಂಡು ಬಂದಿದೆ. ಬಿಜೆಪಿ ಸಖ್ಯ ತೊರೆದಿರುವ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೊಮ್ಮೆ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಉದಯಕ್ಕೆ ವೇದಿಕೆ ಸಜ್ಜಾಗಿದೆ. ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಜೊತೆ ನಿತೀಶ್ ಕೈ ಜೋಡಿಸಿ ಹೊಸ ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ಸುದ್ದಿಯಿದೆ.
ನಿತೀಶ್ ನೇತೃತ್ವದ ಸರ್ಕಾರಕ್ಕೆ ಆರ್‌ಜೆಡಿ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಬೆಂಬಲ ಸಿಗುವ ಸಾಧ್ಯತೆಯಿದೆ. ಹೊಸ ಸರ್ಕಾರದಲ್ಲಿ ನಿತೀಶ್ ಮುಖ್ಯಮಂತ್ರಿಯಾಗಿದ್ದರೆ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿರಲಿದ್ದಾರೆ. ಇನ್ನು ಆರ್ ಜೆ ಡಿ ಹಾಗೂ ಜೆಡಿಯು ಸಮಾನವಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಗಳನ್ನು ಹಂಚಿಕೊಳ್ಳಲಿದ್ದು, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗೂ ಸೂಕ್ತ ಅವಕಾಶ ಒದಗಿಸುವ ಸಾಧ್ಯತೆಯಿದೆ.
ಮುಖ್ಯವಾಗಿ ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜಿತ್ ಶರ್ಮ, ಪರಿಷತ್ ನಾಯಕ, ಬಿಪಿಸಿಸಿ ಅಧ್ಯಕ್ಷ ಮದನ್ ಮೋಹನ್ ಝಾ ಅವರ ಹೆಸರನ್ನು ಪರಿಗಣಿಸಲಾಗುತ್ತದೆ. ಆದರೆ, ಹೈಕಮಾಂಡ್ ಏನಾದರೂ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮ ಪಾಲಿಸಿದರೆ ಇತರರಿಗೆ ಅವಕಾಶ ಸಿಗಬಹುದು. ಇದಕ್ಕೂ ಮುನ್ನ ಸದನದಲ್ಲಿ ನಿತೀಶ್ ಬಹುಮತ ಸಾಬೀತುಪಡಿಸಬೇಕಿದೆ.

ಒಟ್ಟಾರೆ, ಸರ್ಕಾರದ ಸ್ವರೂಪ ಹೀಗಿರಬಹುದು:
ಮುಖ್ಯಮಂತ್ರಿ: ಜೆಡಿಯು
ಸ್ಪೀಕರ್: ಕಾಂಗ್ರೆಸ್
ಉಪ ಮುಖ್ಯಮಂತ್ರಿ: ಆರ್ ಜೆ ಡಿ/ ಕಾಂಗ್ರೆಸ್
ಗೃಹ ಸಚಿವ: ಆರ್ ಜೆ ಡಿ
ಬಿಹಾರದಲ್ಲಿ ವಿಧಾನಸಭೆಯಲ್ಲಿ ಒಟ್ಟು 243 ಸ್ಥಾನಗಳಿವೆ. ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 122 ಆಗಿದೆ. ಪ್ರಸ್ತುತ ಆರ್ ಜೆಡಿ 75 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ ಮತ್ತು ಬಿಜೆಪಿ 74 ಸ್ಥಾನ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿಧಾನಸಭೆಯಲ್ಲಿ ಕೇವಲ 43 ಸ್ಥಾನಗಳನ್ನು ಹೊಂದಿದೆ.
2021ರ ಚುನಾವಣೆಯಲ್ಲಿ, ಬಿಜೆಪಿಯು ಜೆಡಿಯು, ಎಚ್‌ಎಎಂ ಮತ್ತು ವಿಐಪಿಯೊಂದಿಗೆ ಚುನಾವಣೆಗಳನ್ನು ಎದುರಿಸಿತು. ಎಚ್‌ಎಎಂ ಮತ್ತು ವಿಐಪಿ ತಲಾ 4 ಸ್ಥಾನಗಳನ್ನು ಗೆದ್ದಿವೆ.
ಮತ್ತೊಂದೆಡೆ ಕಾಂಗ್ರೆಸ್ ಸಿಪಿಐಎಂಎಲ್, ಸಿಪಿಎಂ ಮತ್ತು ಸಿಪಿಐ ಜೊತೆಗೆ ಆರ್‌ಜೆಡಿ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ 19, ಸಿಪಿಐಎಂಎಲ್ 11, ಸಿಪಿಎಂ ಮತ್ತು ಸಿಪಿಐ ಕ್ರಮವಾಗಿ 3 ಮತ್ತು 2 ಸ್ಥಾನಗಳನ್ನು ಗೆದ್ದಿವೆ. ವಿಧಾನಸಭೆಯಲ್ಲಿ ಈ ಮೈತ್ರಿಕೂಟದ ಸಂಖ್ಯಾಬಲ 153 ಆಗಲಿದೆ. ಬಿಜೆಪಿ ಕೇವಲ 82 ಸ್ಥಾನಗಳನ್ನು ಹೊಂದಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಎಐಎಂಎಂ 5 ಸ್ಥಾನಗಳನ್ನು ಹೊಂದಿದ್ದು, ಬಿಎಸ್‌ಪಿ 1 ಮತ್ತು ಪಕ್ಷೇತರ ಒಂದು ಸ್ಥಾನಗಳನ್ನು ಹೊಂದಿದೆ.
ಬಿಹಾರದಲ್ಲಿ ಜೆಡಿಯುನ ಮಾಜಿ ಸದಸ್ಯ ಆರ್‌ಸಿಪಿ ಸಿಂಗ್ ಪಕ್ಷ ತೊರೆಯುವಿಕೆ ನಂತರದಲ್ಲಿ ರಾಜಕೀಯ ಹೈಡ್ರಾಮಾ ಶುರುವಾಯಿತು. ಆರ್‌ಸಿಪಿ ಸಿಂಗ್ ಕೇಂದ್ರ ಸಚಿವ ಅಮಿತ್ ಶಾ ಪ್ರತಿನಿಧಿ ಎಂದು ನಿತೀಶ್ ಕುಮಾರ್ ದೂಷಿಸಿದ್ದರು. ಭ್ರಷ್ಟಾಚಾರದ ಆರೋಪ ಹಿನ್ನೆಲೆ ವಾರಾಂತ್ಯದಲ್ಲಿ ಆರ್‌ಸಿಪಿ ಸಿಂಗ್ ಜೆಡಿಯು ತೊರೆದರು.
ಕಳೆದ 2017ರಲ್ಲಿ ಸಿಂಗ್ ಅವರು ನಿತೀಶ್ ಕುಮಾರ್ ಪಕ್ಷದ ಪ್ರತಿನಿಧಿಯಾಗಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿದರು. ಕೇಂದ್ರದಲ್ಲಿ ಪಕ್ಷಕ್ಕೆ ಒಂದೇ ಒಂದು ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ ಎಂದು ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications