
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸುಪ್ರೀಂ: ವಲಸಿಗರಿಗೆ ಇನ್ನು ಮುಂದೆ ಆಟ?
ಎಐಸಿಸಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ಮುಖಂಡ, ಗಾಂಧಿ ಕುಟುಂಬದ ಆಪ್ತ ಮಲ್ಲಿಕಾರ್ಜುನ ಖರ್ಗೆ ಬಹುತೇಕ ಗೆಲುವು ಸಾಧಿಸುವುದು ನಿಕ್ಕಿ ಎಂದು ಹೇಳಲಾಗುತ್ತಿದೆ. ಹಾಗಾದರೆ, ರಾಜ್ಯ ಕಾಂಗ್ರೆಸ್ಸಿನ ಸ್ಥಿತಿಗತಿಯಲ್ಲಿ ಬದಲಾವಣೆಯ ಸಾಧ್ಯತೆಯಿದೆಯೇ?
ರಾಜ್ಯ ಕಾಂಗ್ರೆಸ್ಸಿನಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಪ್ರತ್ಯೇಕತೆ ಇನ್ನೂ ಇದೆ. ಈ ವಿಚಾರ ಸಾರ್ವಜನಿಕವಾಗಬಾರದು ಎನ್ನುವ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಹುಲ್ ತಬ್ಬಿಕೊಳ್ಳಲು ಹೇಳಿದ್ದರು, ಜೊತೆಯಾಗಿ ಕೈಕೈ ಹಿಡಿದು ಕೊಂಡು ಹೋದರು. ಬೆಂಕಿಯಿಲ್ಲದೇ ಹೊಗೆಯಾಡುತ್ತಾ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
ಖರ್ಗೆ ಬಹುತೇಕ ಎಐಸಿಸಿ ಬಾಸ್: ದೆಹಲಿಯಲ್ಲಿ 5 ಕನ್ನಡಿಗರ ಕಲರವ
ರಾಜ್ಯದಲ್ಲಿ ಹೇಳಿಕೇಳಿ ಈಗ ಚುನಾವಣಾ ವರ್ಷ, ಇದೇ ವೇಳೆ ಇನ್ನೇನು ಕೆಲವೇ ದಿನಗಳಲ್ಲಿ ಎಐಸಿಸಿಯ ಅಧ್ಯಕ್ಷರು ಯಾರು ಎನ್ನುವುದು ಅಂತಿಮವಾಗಲಿದೆ. ಇನ್ನೊಂದು ಕಡೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಜೋರಾಗಿಯೇ ಸಾಗಿ ಬರುತ್ತಿದೆ.
ಕಾಂಗ್ರೆಸ್ಸಿನ ಹೈಕಮಾಂಡ್ ಒಲವು ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆಶಿ ನಾಮುಂದೆ ತಾಮುಂದೆ ಎಂದು ಪೈಪೋಟಿಯಲ್ಲಿರುವುದು ಗೊತ್ತಿರುವ ವಿಚಾರ. ಇಂತಹ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೂಡುವ ದಾಳ ವಲಸೆ ಕಾಂಗ್ರೆಸ್ಸಿಗರಿಗೆ ಹಿನ್ನಡೆ ತರಲಿದೆಯೇ, ಸಿಎಂ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯನವರ ವಿಚಾರದಲ್ಲಿ ಖರ್ಗೆಯವರ ರಾಜಕೀಯ ಯಾವ ರೀತಿ ಇರಬಹುದು ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಸದ್ಯ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.

2018ರ ಅತಂತ್ರ ವಿಧಾನಸಭಾ ಫಲಿತಾಂಶ
2018ರ ಅತಂತ್ರ ವಿಧಾನಸಭಾ ಫಲಿತಾಂಶ ಬಂದ ಅವಧಿಯನ್ನು ಒಮ್ಮೆ ಅವಲೋಕಿಸುವುದಾದರೆ, ಹಿರಿಯ ಕಾಂಗ್ರೆಸ್ ಮುಖಂಡರು ಕುಮಾರಸ್ವಾಮಿಯವರ ಮನೆಬಾಗಿಲಿಗೆ ಹೋಗಿದ್ದರು. ಎಚ್ಡಿಕೆ ಸಿಎಂ ಮುಖ್ಯಮಂತ್ರಿಯಾದರು ಎನ್ನುವುದು ಬೇರೆ ವಿಚಾರ, ರಾಜೀನಾಮೆ ನೀಡಿದರು ಎನ್ನುವುದು ಇನ್ನೊಂದು ವಿಚಾರ. ಇನ್ನೊಂದು ಆಯಾಮ ಏನೆಂದರೆ, ದೇವೇಗೌಡ್ರು, ಖರ್ಗೆ ಸಿಎಂ ಮಾಡುವ ಪ್ರಸ್ತಾವನೆಯನ್ನು 2008ರಲ್ಲೇ ಇಟ್ಟಿದ್ದರು. ಆಗ ಬಿಜೆಪಿ 110 ಸ್ಥಾನ ಗಳಿಸಿತ್ತು, ಕಾಂಗ್ರೆಸ್, ಜೆಡಿಎಸ್ ಸೇರಿದರೆ ಬಹುಮತ ಸಾಬೀತು ಮಾಡಬಹುದಿತ್ತು. ಆಗ ಗೌಡ್ರು, ಖರ್ಗೆಯವರನ್ನು ಸಿಎಂ ಮಾಡಿ, 6 ಮಂದಿ ಪಕ್ಷೇತರರ ಸಹಕಾರ ಪಡೆಯಿರಿ ಎನ್ನುವ ಸಲಹೆಯನ್ನು ಕೊಟ್ಟಿದ್ದರು.

ಸೋನಿಯಾ, ರಾಹುಲ್ ಗಾಂಧಿ ಕೃಪಾಕಟಾಕ್ಷ ಯಾರಿಗೆ?
ಕುಮಾರಸ್ವಾಮಿ ಸರಕಾರ ಪತನಗೊಂಡ ನಂತರ ದೇವೇಗೌಡ್ರು ಹಲವು ಬಾರಿ ಖರ್ಗೆ ಸಿಎಂ ಆಗಬೇಕಿತ್ತು ಎನ್ನುವ ಹೇಳಿಕೆಯನ್ನು ನೀಡಿದ್ದರು, ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚಿಸಿದ್ದರು. ಇದು, ಖರ್ಗೆ ಮತ್ತು ಸಿದ್ದರಾಮಯ್ಯನವರ ನಡುವೆ ಕಂದಕ ಸೃಷ್ಟಿಯಾಗಲು ಕಾರಣವಾಗಿತ್ತು. ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಕೃಪಾಕಟಾಕ್ಷ ಸಿದ್ದರಾಮಯ್ಯ ಮತ್ತು ಖರ್ಗೆ ನಡುವೆ ಯಾರಿಗೆ ಎನ್ನುವ ಪ್ರಶ್ನೆ ಎದುರಾದಾಗ ಅದು ನಿಸ್ಸಂಸಯವಾಗಿ ಖರ್ಗೆ.

ಮತ್ತೆ ಖರ್ಗೆ ರಾಜ್ಯ ಸಿಎಂ ಪದವಿಯ ಮೇಲೆ ಕಣ್ಣಿಡಲಾರರು
ಎಐಸಿಸಿ ಅಧ್ಯಕ್ಷರಾದ ಮೇಲೆ ಮತ್ತೆ ಖರ್ಗೆ ರಾಜ್ಯ ಸಿಎಂ ಪದವಿಯ ಮೇಲೆ ಕಣ್ಣಿಡಲಾರರು. ಕೂಸು ಹುಟ್ಟುವ ಮುನ್ನವೇ ಕುಲಾವಿ ಎನ್ನುವ ಹಾಗೇ ಮುಂದಿನ ಸಿಎಂ ಯಾರು ಎನ್ನುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಿದ್ದಾಜಿದ್ದಿ ಇರುವುದು ಗೊತ್ತಿರುವ ವಿಚಾರ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬಂದಿದ್ದೇ ಆದಲ್ಲಿ, ಖರ್ಗೆಯವರ ನಿಲುವು ಮಹತ್ವವನ್ನು ಪಡೆದುಕೊಳ್ಳುತ್ತದೆ ಎನ್ನುವುದು ನೋಡೌಟ್.

ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ವಿಚಾರ
ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ವಿಚಾರ ಒಂದು ವೇಳೆ ಮುನ್ನಲೆಗೆ ಬಂದಿದ್ದೇ ಆದಲ್ಲಿ, ಮೂಲ ಕಾಂಗ್ರೆಸ್ಸಿಗ ಡಿ.ಕೆ.ಶಿವಕುಮಾರ್ ಅವರನ್ನು ಖರ್ಗೆ ಶಿಫಾರಸು ಮಾಡದೇ ಇರುತ್ತಾರೆಯೇ? ದಲಿತ ಸಿಎಂ ಎನ್ನುವುದು ಬರೀ ಮಾತು ಎಂದು ಬೇಸರ ವ್ಯಕ್ತ ಪಡಿಸಿಕೊಳ್ಳುತ್ತಿರುವ ಡಾ.ಪರಮೇಶ್ವರ್ ಅವರೂ ಮುನ್ನಲೆಗೆ ಬರಲಿದ್ದಾರೆಯೇ? ಅಥವಾ ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯನವರೇ ಸಿಎಂ ಆಗಲಿ ಎಂದು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ, ಖರ್ಗೆಯವರು ಎಐಸಿಸಿಯ ಸುಪ್ರೀಂ ಆದ ನಂತರ ವಲಸೆ ಕಾಂಗ್ರೆಸ್ಸಿಗರಲ್ಲಿ ಕೆಲವರು ಮೂಲೆಗುಂಪು ಆದರೂ ಆಗಬಹುದು.