Bengaluru cab driver: ಕ್ಯಾಬ್‌ನಲ್ಲಿ ನಿದ್ರೆಗೆ ಜಾರಿದ ಚಾಲಕ, ಕೀ ಪಡೆದು ಡ್ರೈವ್ ಮಾಡಿದ ಪ್ರಯಾಣಿಕ
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕ್ಯಾಬ್ ಚಾಲಕರೊಂದಿಗೆ ಗಲಾಟೆಗಳಾಗುವ ಘಟನೆಗಳೇ ಹೆಚ್ಚಾಗಿ ನಡೆಯುತ್ತಿತ್ತು. ಭಾಷಾ ವಿಚಾರಕ್ಕೆ ಅಥವಾ ಅವರ ವರ್ತನೆ ವಿಚಾರಕ್ಕೆ ಬೀದಿಗಳಲ್ಲಿ ಜಗಳ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಅವು ವೈರಲ್ ಕೂಡ ಆಗುತ್ತಿದ್ದವು. ಆದರೆ ಕ್ಯಾಬ್ ಚಾಲಕ ಹಾಗೂ ಪ್ರಯಾಣಿಕನ ನಡುವೆ ನಡೆದಿರುವ ಒಂದು ಸಂಗತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಜಾಗತಿಕ ನಗರವಾಗಿರುವ ಬೆಂಗಳೂರಿಗೆ ರಾತ್ರಿಯಿಡೀ ವಿದೇಶಗಳಿಂದ, ಹೊರರಾಜ್ಯಗಳಿಂದ ಜನ ಪ್ರಯಾಣಿಸುತ್ತಾರೆ. ಈ ಕಾರಣಕ್ಕೆ ಕ್ಯಾಬ್ ಸೇವೆ ಕೂಡ ರಾತ್ರಿಯಿಡೀ ಇದೆ. ಚಾಲಕರು ರಾತ್ರಿಯಿಡೀ ನಿದ್ದೆಗೆಟ್ಟು ಟ್ರಿಪ್ ಸಿಗುತ್ತೆ ಎಂದು ಕಾಯುತ್ತಿರುತ್ತಾರೆ. ನಿದ್ದೆಯನ್ನು ಬದಿಗಿಟ್ಟು ಮಾಡುವ ಈ ಕೆಲಸ ಕೂಡ ಒಂದು ಸವಾಲು ಎನ್ನಬಹುದು.

ಇದೇ ವಿಚಾರಕ್ಕೆ ಕೆಲವರು ಪ್ರಯಾಣಿಕರಿಂದ ಬೈಗುಳ ಪಡೆಯುವುದನ್ನು ನೋಡಿರುತ್ತೀವಿ. ಮೈಮೇಲೆ ಪ್ರಜ್ಞೆ ಇಟ್ಕೊಂಡು ಗಾಡಿ ಓಡ್ಸಪ್ಪಾ ಎಂದು ಪ್ರಯಾಣಿಕರು ಜೋರು ಮಾಡುವ ಘಟನೆಗಳೂ ನಡೆದಿವೆ. ಆದರೆ, ಚಾಲಕರ ಕಷ್ಟವನ್ನೂ ಅರ್ಥಮಾಡಿಕೊಳ್ಳುವ ಪ್ರಯಾಣಿಕರು ಕ್ಯಾಬ್ ಹತ್ತಿದರೆ, ಚಾಲಕರಿಗೂ ಸೋಪಾನವಿದ್ದಂತೆ. ಇಂತದ್ದೊಂದು ಅಪರೂಪದ ಸಂಗತಿ ಬೆಂಗಳೂರಿನಲ್ಲೇ ನಡೆದಿದೆ.
ಕ್ಯಾಬ್ ಚಾಲಕನಿಗೆ ನಿದ್ದೆ ಬರುವುದನ್ನು ಗಮನಿಸಿದ ಪ್ರಯಾಣಿಕ, ಚಾಲಕನನ್ನು ನಿದ್ದೆ ಮಾಡುವಂತೆ ಸಲಹೆ ಕೊಟ್ಟಿದ್ದಾನೆ. ಅಲ್ಲದೆ ಚಾಲನಕನ್ನು ಮಲಗಿಸಿ, ಆ ಕ್ಯಾಬ್ ಅನ್ನು ತಾನೇ ಚಲಾಯಿಸಿಕೊಂಡು ಹೋಗುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದಾನೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಟೆಕ್ಕಿಯೊಬ್ಬರು ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಕ್ಯಾಬ್ ಹತ್ತಿ ಬೆಂಗಳೂರು ನಗರದ ಕಡೆಗೆ ಪ್ರಯಾಣ ಬೆಳೆಸಿದ್ದರು. ತಡರಾತ್ರಿ ಆದ ಕಾರಣ ಆ ಕ್ಯಾಬ್ ಚಾಲಕ ತುಸು ನಿದ್ರಗೆ ಜಾರುತ್ತಿರುವುದನ್ನು ಟೆಕ್ಕಿ ಗಮನಿಸಿದ್ದರು. ಬಳಿಕ ಅಣ್ಣಾ ನೀವು ಮಲಗಿ ಎಂದು ಹೇಳಿ ತಾವೇ ಕ್ಯಾಬ್ ಡ್ರೈವ್ ಮಾಡಿಕೊಂಡು ತಮ್ಮ ಸ್ಥಾನಕ್ಕೆ ತಲುಪಿದ್ದಾರೆ.
ಮಿಲಿಂದ್ ಚಂದವಾನಿ ಎಂಬುವರು ತಮಗೆ ಎದುರಾದ ಈ ಅನುಭವವನ್ನು ವಿಡಿಯೋ ಮಾಡಿಕೊಂಡು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರಿಗಾದ ಅನುಭವವನ್ನೂ ಟೆಕ್ಕಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 26ರಂದು ನನಗೆ ಅನಿರೀಕ್ಷಿತ ಘಟನೆಯೊಂದು ಎದುರಾಯಿತು. ನಾನು ಬೆಂಗಳೂರು ಏರ್‌ಪೋರ್ಟ್‌ನಿಂದ ಕ್ಯಾಬ್ ಹತ್ತಿಕೊಂಡು ಬರುತ್ತಿದ್ದಾಗ ಚಾಲಕ ನಿದ್ದೆಗೆ ಜಾರುತ್ತಿದ್ದರು.
ಬಳಿಕ ಅವರು ಟೀ ಕುಡಿದು, ಸಿಗರೇಟ್ ಸೇದಿ ಮತ್ತೆ ಕಾರು ಡ್ರೈವ್ ಮಾಡಿದರು. ಆದರೂ ಅವರನ್ನು ನಿದ್ರೆ ಬಿಡುತ್ತಿರಲಿಲ್ಲ. ಇದನ್ನು ಗಮನಿಸಿ ನೀವು ಮಲಗಿ, ನಾನೇ ಕಾರು ಚಲಾಯಿಸುವೆ ಎಂದು ಹೇಳಿದ ಕೂಡಲೇ ಅವರು ನನಗೆ ಕಾರಿನ ಕೀ ಕೊಟ್ಟೇಬಿಟ್ಟರು ಎಂದು ವಿವರಿಸಿದ್ದಾರೆ.
ಕೊನೆಗೆ ನಾನು ಗೂಗಲ್ ಮ್ಯಾಪ್ ಹಾಕಿಕೊಂಡು ನನ್ನ ಸ್ಥಳ ತಲುಪಿದೆ. ನನ್ನ ಮೇಲೆ ಅವರು ನಂಬಿಕೆ ಇಟ್ಟು ಕಾರು ಕೊಟ್ಟಿದ್ದು ನಿಜಕ್ಕೂ ಅಚ್ಚರಿ ಎನಿಸಿತು. ಬಳಿಕ ಅವರು ತಮ್ಮ ಮಾಲೀಕರೊಂದಿಗೆ ಮಾತನಾಡುತ್ತಿದ್ದರು. ನನಗೆ ನೈಟ್ ಶಿಫ್ಟ್ ಮಾಡಲು ಆಗ್ತಿಲ್ಲ. ಬೆಳಿಗ್ಗೆ ಶಿಫ್ಟ್‌ನಲ್ಲೇ ಕೆಲಸ ಮಾಡುತ್ತೇನೆ ಎನ್ನುತ್ತಿದ್ದರು. ಇದರಿಂದ ನನಗೆ ಅರ್ಥವಾಗಿದ್ದು, ಜೀವನದಲ್ಲಿ ಯಾವಾಗ ಏನಾದರೂ ಅನಿರೀಕ್ಷಿತ ಘಟನೆಗಳು ನಮಗೆ ಎದುರಾಗಬಹುದು. ಹಾಗಾಗಿ, ಎಲ್ಲದಕ್ಕೂ ರೆಡಿಯಾಗಿರಬೇಕು ಎಂದು ಟೆಕ್ಕಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications