Onam 2024: ಎಲ್ಲೆಲ್ಲಿಯೂ ಓಣಂ ಸಂಭ್ರಮ: ಈ ಹಬ್ಬದ ವಿಶೇಷತೆಗಳು ಗೊತ್ತಾ?
ಓಣಂ ಕೇರಳಿಗರ ನಾಡ ಹಬ್ಬವಾದರೂ ಇದೀಗ ಅದರ ಸಂಭ್ರಮ, ಸಡಗರ ಕೇರಳ ಮಾತ್ರವಲ್ಲದೆ, ಕೇರಳಿಗರು ಎಲ್ಲೆಲ್ಲಿ ವಾಸಿಸುತ್ತಾರೋ ಅಲ್ಲೆಲ್ಲ ಪಸರಿಸಿದೆ. ತಾಯ್ನಾಡು ತೊರೆದವರು ಸಮಯ ಮಾಡಿಕೊಂಡು ತಮ್ಮೂರಿಗೆ ಮರಳಿದರೆ, ಬರಲಾಗದವರು ಇದ್ದಲ್ಲೇ ಹಬ್ಬಾಚರಣೆ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲಿಯೂ ಓಣಂ ಹಬ್ಬದ ಸಂಭ್ರಮ ಮನೆ ಮಾಡಿರುವುದು ಗೋಚರಿಸುತ್ತಿದೆ. ಅಷ್ಟೇ ಅಲ್ಲದೆ ಪ್ರಜೆಗಳನ್ನು ನೋಡಲು ಬರುವ ಬಲಿ ಚಕ್ರವರ್ತಿಗಾಗಿ ಹೂವಿನ ರಂಗೋಲಿಯಿಟ್ಟು ಅದರ ನಡುವೆ ದೀಪ ಬೆಳಗಿ ಕಾಯಲಾಗುತ್ತಿದೆ.
ಓಣಂ ಹಬ್ಬ ಕೇರಳದವರ ಪಾಲಿಗೆ ನಾಡಹಬ್ಬವಿದ್ದಂತೆ. ಕೃಷಿಯ ಹಿನ್ನಲೆಯಲ್ಲಿ ಆಚರಿಸಲ್ಪಡುವ ಈ ಹಬ್ಬ ಮಳೆಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮನ್ನೀಯುವ ಹಬ್ಬವಾಗಿದೆ. ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಅದನ್ನೆಲ್ಲಾ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಕಾಲ ಇದಾಗಿತ್ತು. ಅಲ್ಲದೆ ಮಳೆಯಲ್ಲಿ ಮಿಂದೆದ್ದ ಪ್ರಕೃತಿ ಹೊಸಪುಳಕದೊಂದಿಗೆ ಹಬ್ಬವನ್ನು ಸ್ವಾಗತಿಸಲು ನಿಂತಿದೆಯೇನೋ ಎಂಬಂತೆ ಗೋಚರಿಸುವ ಕಾಲವೂ ಇದಾಗಿದೆ.

ಹಾಗೆನೋಡಿದರೆ ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. (ಈ ಬಾರಿ ಸೆಪ್ಟಂಬರ್ 15ರಂದು ಆಚರಿಸಲಾಗುತ್ತಿದೆ.) ಈ ಸಿಂಹ ಮಾಸ ಕೇರಳದವರ ಪಾಲಿಗೆ ಚಿನ್ನದ ಮಾಸ. ಏಕೆಂದರೆ ಈ ವೇಳೆಗೆ ಕೃಷಿ ಚಟುವಟಿಕೆಯನ್ನು ಮುಗಿಸಿ ನೆಮ್ಮದಿಯಾಗಿರುತ್ತಾರಲ್ಲದೆ, ಹಬ್ಬವನ್ನು ಸ್ವಾಗತಿಸಲು ಉತ್ಸುಕರಾಗಿರುತ್ತಾರೆ. ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆಯಾದರೂ ಕೊನೆಯ ಶ್ರಾವಣ ನಕ್ಷತ್ರದ ದಿನ ಬಹುಮುಖ್ಯವಾಗಿದ್ದು, ಇದೇ ತಿರುವೋಣಂ ಆಗಿದೆ.
ರವಿವರ್ಮನ ಕಾಲದ ಶಾಸನದಲ್ಲಿ ಉಲ್ಲೇಖ
ಓಣಂ ಹಬ್ಬಕ್ಕೆ ತನ್ನದೇ ಆದ ಇತಿಹಾಸ ಹಾಗೂ ಪೌರಾಣಿಕ ಹಿನ್ನಲೆಯಿರುವುದನ್ನು ನಾವು ಕಾಣಬಹುದು. ಈ ಹಬ್ಬ ಪ್ರಾಚೀನ ಕಾಲದಲ್ಲಿಯೇ ಆಚರಣೆಯಲ್ಲಿತ್ತು ಎನ್ನಲಾಗುತ್ತಿದ್ದು, ಕ್ರಿ.ಶ. 861ರ ರವಿವರ್ಮನ ಕಾಲದ ತಾಮ್ರದ ಶಾಸನದಲ್ಲಿ ಓಣಂ ಕುರಿತಂತೆ ಉಲ್ಲೇಖಗಳಿವೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ಓಣಂ ಆಚರಣೆ ಹೇಗೆ ಜಾರಿಗೆ ಬಂತು ಎಂಬುವುದನ್ನು ಪುರಾಣದ ಹಿನ್ನಲೆಯಲ್ಲಿ ನೋಡುವುದಾದರೆ ವಾಮನ ರೂಪದಲ್ಲಿ ಬಂದ ವಿಷ್ಣು ಬಲಿಚಕ್ರವರ್ತಿಯನ್ನು ಸಂಹರಿಸಿದ ನಂತರ ಆಚರಣೆಗೆ ಬಂದಿದೆ ಎಂಬುದಾಗಿ ಹೇಳಲಾಗುತ್ತಿದೆ.

ಪೌರಾಣಿಕ ಯುಗದಲ್ಲಿ ಬಲಿ ಚಕ್ರವರ್ತಿ ರಾಕ್ಷಸನಾಗಿದ್ದರೂ ಪ್ರಜೆಗಳ ಬಗ್ಗೆ ಕಾಳಜಿವುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಟನೂ, ಮಹಾದಾನಿಯೂ ಹಾಗೂ ಮಹಾ ಪರಾಕ್ರಮಿಯೂ ಆಗಿದ್ದನು. ತನ್ನ ಮಹಾ ಪರಾಕ್ರಮದಿಂದ ಜಗತ್ತನ್ನೇ ಸುತ್ತುವ ದೇವ ವಾಹನವನ್ನು ಪಡೆದಿದ್ದನು. ಆದರೆ ರಾಕ್ಷಸ ಕುಲದವನಾದ ಬಲಿಗೆ ದೇವತೆಗಳ ಮೇಲೆ ಯುದ್ಧ ಸಾರಿ ಅವರನ್ನು ಬಗ್ಗುಪಡೆಯುವ ಹಂಬಲ ಉಂಟಾಗಿತ್ತಲ್ಲದೆ, ಇಂದ್ರಪದವಿಯನ್ನು ಪಡೆದೇ ತೀರಬೇಕೆಂಬ ದುರಾಸೆಯೂ ಮೂಡಿತ್ತು. ಹೀಗಾಗಿ ಇಂದ್ರಪದವಿಯನ್ನು ಪಡೆಯುವುದಕ್ಕಾಗಿ ಮಹಾಯಾಗ ಮಾಡಲು ಮುಂದಾದನು. ಯಾವಾಗ ಬಲಿಚಕ್ರವರ್ತಿ ಮಹಾಯಾಗ ಮಾಡಲು ಹೊರಟಿರುವ ವಿಷಯ ದೇವತೆಗಳ ಕಿವಿಗೆ ಬಿತ್ತೋ ದೇವತೆಗಳು ನಡುಗಿ ಹೋದರು.
ಮೂರಡಿ ಜಾಗ ಕೇಳಿದ ವಾಮನ
ಬಲಿಚಕ್ರವರ್ತಿ ದಂಡೆತ್ತಿ ಬಂದರೆ ನಮಗೆ ಉಳಿಗಾಲವಿಲ್ಲ ಎಂದರಿತ ದೇವತೆಗಳು ಹೇಗಾದರೂ ಮಾಡಿ ನಮ್ಮನ್ನು ಕಾಪಾಡು ಎಂದು ವಿಷ್ಣುವಿನ ಮೊರೆಹೋದರು. ದೇವತೆಗಳಿಗೆ ಒದಗಿ ಬಂದ ಕಷ್ಟವನ್ನು ಪರಿಹರಿಸಬೇಕಾದರೆ ಬಲಿಚಕ್ರವರ್ತಿಯನ್ನು ವಧಿಸಬೇಕು ಆದರೆ ಎದುರಿಗೆ ನಿಂತು ಯುದ್ಧ ಮಾಡುವ ಬದಲು ಉಪಾಯದಿಂದ ಸಂಹರಿಸುವ ತಂತ್ರ ರೂಪಿಸಿದ ವಿಷ್ಣು ವಾಮನ ರೂಪದಲ್ಲಿ ಬಲಿ ಚಕ್ರವರ್ತಿ ಬಳಿಗೆ ಬರುತ್ತಾನೆ. ನನಗೆ ತಪಸ್ಸು ಮಾಡಲು ಮೂರು ಅಡಿ ಜಾಗ ಬೇಕೆಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿಚಕ್ರವರ್ತಿಗೆ ಮೂರು ಅಡಿ ಜಾಗವನ್ನು ಕೇಳುತ್ತಿರುವ ವಾಮನನನ್ನು ಕಂಡು ಕನಿಕರ ಉಂಟಾಗುತ್ತದೆಯಲ್ಲದೆ, ಜಾಗಕೊಡಲು ಒಪ್ಪಿಗೆ ನೀಡುತ್ತಾನೆ.

ರಾಕ್ಷಸಗುರು ಶುಕ್ರಾಚಾರ್ಯರಿಗೆ ವಾಮನ ರೂಪದಲ್ಲಿ ಬಂದಾತ ವಿಷ್ಣುವೆಂದು ಗೊತ್ತಾಗುತ್ತದೆ. ಹಾಗಾಗಿ ಆತನಿಗೆ ದಾನವಾಗಿ ಜಾಗವನ್ನು ನೀಡದಂತೆ ಬಲಿ ಚಕ್ರವರ್ತಿಯಲ್ಲಿ ಭಿನ್ನವಿಸಿಕೊಳ್ಳುತ್ತಾರೆ. ಆದರೆ ಈಗಾಗಲೇ ದಾನ ನೀಡುವುದಾಗಿ ಮಾತುಕೊಟ್ಟ ಮೇಲೆ ಅದಕ್ಕೆ ತಪ್ಪುವಾತ ನಾನಲ್ಲ. ಎಂದೂ ತನ್ನ ಬಳಿಗೆ ಬೇಡಿ ಬಂದವರನ್ನು ಬರಿಕೈಯಲ್ಲಿ ಕಳುಹಿಸಿದವನು ನಾನಲ್ಲ ಆದ್ದರಿಂದ ವಾಮನನನ್ನು ಹಿಂದಕ್ಕೆ ಕಳುಹಿಸಲಾರೆ ಎಂದು ಶುಕ್ರಾಚಾರ್ಯರ ಮಾತನ್ನು ಲೆಕ್ಕಿಸದೆ ತಪಸ್ಸಿಗೆ ಸ್ಥಳ ನೀಡುತ್ತಾನೆ.
ಬಲಿಚ ಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ವಾಮನ
ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ವಾಮನ ರೂಪದಲ್ಲಿದ್ದ ವಿಷ್ಣು ಇದ್ದಕ್ಕಿದ್ದಂತೆ ತ್ರಿವಿಕ್ರಮನಾಗಿ ಆಕಾಶಕ್ಕೆತ್ತರ ಬೆಳೆಯುತ್ತಾನೆ. ಅಲ್ಲದೆ ಒಂದು ಪಾದದಿಂದ ಭೂಮಿಯನ್ನು ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿ ಮಾತಿಗೆ ತಪ್ಪದೆ ತನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ವಾಮನ ಅವತಾರದಲ್ಲಿದ್ದ ವಿಷ್ಣು ಆತನ ತಲೆ ಮೇಲೆ ಪಾದವನ್ನಿಡುತ್ತಿದ್ದಂತೆಯೇ ಬಲಿಚಕ್ರವರ್ತಿ ಪಾತಾಳ ಸೇರುತ್ತಾನೆ. ಆದರೆ ಪಾತಾಳ ಸೇರುವ ಮೊದಲು ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೋರುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆ ನೀಡುತ್ತಾನೆ.
ಪ್ರಜೆಗಳಿಗೆ ಮಾತು ಕೊಟ್ಟಂತೆ ಇಂದಿಗೂ ತಿರುವೋಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರದ್ದಾಗಿದೆ. ಹಾಗಾಗಿ ಮನೆ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ ಹಾಕಿ ಮಧ್ಯೆ ದೀಪವನ್ನಿಟ್ಟು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿ ಚಕ್ರವರ್ತಿಗಾಗಿ ಕಾಯುವುದು ಇಂದಿಗೂ ರೂಢಿಯಲ್ಲಿದೆ. ಅದರಂತೆ ಹಬ್ಬದ ದಿನದಂದು ಮುಂಜಾನೆ ಎದ್ದು ಸ್ನಾನ ಮಾಡಿ ಹೊಸಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಮಹಿಳೆಯರು ಶ್ವೇತ ವಸ್ತ್ರಧರಿಸಿ ಹೂವಿನ ರಂಗೋಲಿ ಹಾಕಿ ಮಧ್ಯೆ ಹಣತೆ ಬೆಳಗಿ ಪ್ರಾರ್ಥಿಸುತ್ತಾರೆ.
ಮಲಯಾಳಿಗರ ಮನೆಯಲ್ಲಿ ಸಡಗರ ಸಂಭ್ರಮ
ಮಧ್ಯಾಹ್ನ ಕುಟುಂಬದವರೆಲ್ಲಾ ಒಂದೆಡೆ ಕುಳಿತು ಭೋಜನ ಮಾಡುತ್ತಾರಲ್ಲದೆ, ಗೆಳೆಯರು, ಗೆಳತಿಯರು, ಸಂಬಂಧಿಕರು ಹೀಗೆ ಒಟ್ಟಾಗಿ ಕಲೆತು ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಂದು ಓಣಂ ಹಬ್ಬ ಹೊಸ ಬಟ್ಟೆ ತೊಟ್ಟು ಹೂವಿನ ರಂಗೋಲಿಯಿಟ್ಟು ಬಲಿಯನ್ನು ಸ್ವಾಗತಿಸಿ ಭೋಜನ ಮಾಡುವುದರಲ್ಲಿ ಕಳೆದು ಹೋಗುವುದಿಲ್ಲ.
ಹಬ್ಬದ ಸಂದರ್ಭ ಮನಕ್ಕೊಂದು ರಂಜನೆ ಬೇಡವೇ? ಅದಕ್ಕೆಂದೇ ಊರಿನ ಮೈದಾನದಲ್ಲಿ ಗಂಡಸರಿಗೆ ಕುಟ್ಟಿದೊಣ್ಣೆ, ಗಿಳಿಯಾಟ, ಚೆಂಪಾಟ್, ಕರಡಿಯಾಟ ಮುಂತಾದ ಆಟಗಳು ನಡೆದರೆ, ಮಕ್ಕಳು ಕುಮ್ಮಿ ಕೋಲಾಟ, ತುಂಬಿ ತುಳ್ಳಲ್, ತಿರುವಾದಿರ ಕಳಿ ಮುಂತಾದವುಗಳನ್ನು ಆಡುತ್ತಾರೆ. ಮಹಿಳೆಯರು ಉಯ್ಯಾಲೆ ಆಟದೊಂದಿಗೆ ಮನರಂಜನೆ ಪಡೆಯುತ್ತಾರೆ. ಇದೇ ಸಂದರ್ಭ ಜಲೋತ್ಸವ(ವಳ್ಳಂಕಳಿ)ವೂ ನಡೆಯುತ್ತದೆ.
ಪ್ರತಿ ಊರಿನಲ್ಲಿ ಬಡವ-ಬಲ್ಲಿದ ಎನ್ನದೆ ಎಲ್ಲರೂ ಒಂದೆಡೆ ಕಲೆತು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹಬ್ಬದ ಮತ್ತೊಂದು ವಿಶೇಷತೆಯಾಗಿದೆ. ಕೇರಳದಿಂದ ಹೊರ ಹೋಗಿ ನೆಲೆಸಿರುವ ಕೇರಳಿಯರು ಓಣಂ ದಿನದಂದು ಒಂದೆಡೆ ಬೆರೆತು ಸಾಮೂಹಿಕವಾಗಿ ಹಬ್ಬವನ್ನು ಆಚರಿಸುವ ಪರಿಪಾಠ ಇತ್ತೀಚೆಗೆ ಬೆಳೆದು ಬಂದಿದೆ.
ಈ ಸಂದರ್ಭ ಮಹಿಳೆಯರಿಗೆ ಹೂವಿನ ರಂಗೋಲಿ ಹಾಕುವುದು ಸೇರಿಂತೆ ಕಿರಿಯರಿಗೆ ಹಾಗೂ ಹಿರಿಯರಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಮುಂದುವರೆದ ಇಂದಿನ ದಿನದಲ್ಲಿ ಓಣಂ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ಬದಲಾವಣೆಗಳಾಗಿರಬಹುದು. ಆದರೆ ಹಬ್ಬದ ಸಂಭ್ರಮ ಮಾತ್ರ ಕಳೆಗುಂದಿಲ್ಲ ಹಾಗಾಗಿ ಇದು ಹೊನ್ನಿನ ಹಬ್ಬವಾಗಿ ಮುಂದುವರೆಯುತ್ತಿದೆ.












Click it and Unblock the Notifications