ಭೂಮಿ ಬಿಟ್ಟು ಬದುಕಬಹುದು ಮಾನವರು, ವಿಜ್ಞಾನ ಲೋಕದ ಬಹುದೊಡ್ಡ ಸಾಧನೆ!
ಮಾನವ ಬದುಕಲು ಏನು ಬೇಕು ಹೇಳಿ..? ನೀರು, ಆಹಾರ, ಇದೆಲ್ಲದಕ್ಕಿಂತ ಮುಖ್ಯವಾಗಿ 'ಗಾಳಿ' ಅಂದರೆ ಆಕ್ಸಿಜನ್. ಗಾಳಿ ಒಂದಿದ್ದರೆ ಇನ್ನುಳಿದ ಎರಡನ್ನು ಹೇಗೋ ಸಂಪಾದಿಸಬಹುದು. ಆದರೆ ಗಾಳಿಯೇ ಇಲ್ಲದೆ ಮನುಷ್ಯ ಕ್ಷಣಕಾಲವೂ ಬದುಕಲಾರ. ಇದೇ ಕಾರಣಕ್ಕೆ ಮಂಗಳನ ಮೇಲೆ ನೆಲೆ ಕಂಡುಕೊಳ್ಳುವ ಮಾನವರ ಬಹುದಿನಗಳ ಕನಸು ಕನಸಾಗಿಯೇ ಉಳಿದಿತ್ತು.
ಆದರೆ ಈ ಕನಸನ್ನು ನನಸು ಮಾಡಿದೆ ನಾಸಾ ರೋವರ್. ಮಂಗಳ ಗ್ರಹದ ಮೇಲೆ ಮೊಟ್ಟಮೊದಲ ಬಾರಿಗೆ ಆಕ್ಸಿಜನ್ ಉತ್ಪಾದಿಸಲು ಮಾನವ ಯಶಸ್ವಿಯಾಗಿದ್ದಾನೆ. ಮಂಗಳ ಗ್ರಹದ ಮೇಲೆ ಅಧ್ಯಯನ ನಡೆಸಲು ಅತ್ಯಾಧುನಿಕ ಸಾಧನಗಳೊಂದಿಗೆ ಲ್ಯಾಂಡ್ ಆಗಿದ್ದ 'ನಾಸಾ' ರೋವರ್ ಪೆರ್‌ಸೆವೆರನ್ಸ್ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.
ಪೆರ್‌ಸೆವೆರನ್ಸ್ ತನ್ನಲ್ಲಿರುವ ಮಾಕ್ಸಿ (MOXIE) ಎಂಬ ಸಾಧನದಿಂದ ಆಕ್ಸಿಜನ್ ತಯಾರಿಸಿದೆ. ಮಂಗಳನ ಅಂಗಳದಲ್ಲಿ ಭಾರಿ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಇದ್ದು, ಈ ಕಾರ್ಬನ್ ಡೈ ಆಕ್ಸೈಡ್ ಅನ್ನ ಆಕ್ಸಿಜನ್ ಆಗಿ ಪರಿವರ್ತನೆ ಮಾಡಿದೆ ಪೆರ್‌ಸೆವೆರನ್ಸ್ ರೋವರ್. ಈ ಮೂಲಕ ಮಾನವರ ಭವಿಷ್ಯಕ್ಕೆ ಹೊಸ ದಾರಿ ಕರುಣಿಸಿದೆ ಪೆರ್‌ಸೆವೆರನ್ಸ್.

ಭೂಮಿ ಮೇಲಿನ ಮರಗಳಂತೆ ಕೆಲಸ..!
ಇದುವರೆಗೂ ಯಾವುದೇ ಯೋಜನೆಯೂ ಕಾಣದಂತಹ ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಪೆರ್‌ಸೆವೆರನ್ಸ್ ರೋವರ್ ಮಂಗಳ ಗ್ರಹಕ್ಕೆ ಹಾರಿತ್ತು. ಅದರಲ್ಲಿ ಹೆಲಿಕಾಪ್ಟರ್ ಕೂಡ ಇತ್ತು, ಹಾಗೇ ಆಕ್ಸಿಜನ್ ಉತ್ಪಾದಿಸುವ ಸಾಧನ ಮಾಕ್ಸಿ (MOXIE) ಕೂಡ ಇತ್ತು. ಮಾಕ್ಸಿ ಥೇಟ್ ಭೂಮಿ ಮೇಲಿನ ಮರಗಳಂತೆ ಕಾರ್ಯನಿರ್ವಹಿಸಿ, ಮಂಗಳ ಗ್ರಹದ ಮೇಲೆ ತುಂಬಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿದೆ. ಸುಮಾರು 5 ಗ್ರಾಂ ಆಕ್ಸಿಜನ್ ಉತ್ಪಾದಿಸಿರುವ ಮಾಕ್ಸಿ ತನ್ನ ಕಾರ್ಯಾಚರಣೆ ಮುಂದುವರಿಸಿದೆ. ಈ 5 ಗ್ರಾಂ ಆಕ್ಸಿಜನ್‌ನ ಬಳಸಿ ಬಾಹ್ಯಾಕಾಶ ಯಾನ ಕೈಗೊಳ್ಳುವ ವಿಜ್ಞಾನಿಗಳು ಸುಮಾರು 10 ನಿಮಿಷಗಳ ಕಾಲ ಉಸಿರಾಡಬಹುದು.

ಮಂಗಳನ ಮಣ್ಣು ತರಲಿದೆ ‘ನಾಸಾ’
ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ 'ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

200 ಕೋಟಿ ವರ್ಷಗಳಷ್ಟು ಹಳೇ ಕೆರೆ
ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ.
ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.
6 ಚಕ್ರದ ರೋವರ್..!
ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.












Click it and Unblock the Notifications