ಪುನೀತ್ ಸಾವಿನ ನಂತರ ನಕ್ಕೀರನ್ ಗೋಪಾಲ್ ಹೊರಗಿಟ್ಟ ಸತ್ಯ - ಭಾಗ 1
"ಪುನೀತ್ ರಾಜಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ನಿಧನದ ಐದು ದಿನದ ನಂತರ ಬೆಂಗಳೂರಿಗೆ ಹೋಗಿದ್ದೆ. ವಿಮಾನ ನಿಲ್ದಾಣದಿಂದ ಅವರ ಮನೆಗೆ ಹೋಗುತ್ತಿದ್ದಾಗ ರಸ್ತೆಯ ಇಕ್ಕೆಲಗಳಲ್ಲಿ ಪುನೀತ್ ಪೋಸ್ಟರ್, ಬ್ಯಾನರ್. ಅಬ್ಬಬ್ಬಾ.. ಕರ್ನಾಟಕದ ಜನತೆ ಅವರ ಮೇಲಿಟ್ಟಿದ್ದ ಪ್ರೀತಿ, ಅವರ ಸಾವಿಗೆ ಮರುಗ ಪಡುತ್ತಿರುವ ರೀತಿಗೆ ನಾನು ಬೆರಗಾಗಿ ಹೋದೆ".
ವರನಟ ಡಾ.ರಾಜಕುಮಾರ್ ಅವರನ್ನು ದಂತಚೋರ ವೀರಪ್ಪನ್‌ನಿಂದ ಬಿಡುಗಡೆಗೊಳಿಸುವಲ್ಲಿ ಮತ್ತು ಕರ್ನಾಟಕ ಮತ್ತು ತಮಿಳುನಾಡು ಸರಕಾರಕ್ಕೆ ಕೊಂಡಿಯಂತಿದ್ದ ಪತ್ರಕರ್ತ ನಕ್ಕೀರನ್ ಗೋಪಾಲ್, ವಿಡಿಯೋ ಒಂದರ ಮೂಲಕ ಪವರ್ ಸ್ಟಾರ್ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಜೊತೆಗೆ, ಅಂದಿನ ಕೆಲವು ವಿಷಯಗಳನ್ನು ಪ್ರಸ್ತಾವಿಸಿದ್ದಾರೆ.
ಅಪ್ಪು ಕುಟುಂಬ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ನಕ್ಕೀರನ್ ಗೋಪಾಲ್, "ಪುನೀತ್ ಒಬ್ಬ ಬರೀ ನಟನಾಗಿರಲಿಲ್ಲ, ಅವರು ಮನುಷ್ಯತ್ವದ ಪ್ರತೀಕ, ದಿ ಮ್ಯಾನ್ ಆಗಿದ್ದರು. ಆತನ ಸಾವು ಬಹಳ ದಿನ ನಮ್ಮನ್ನೆಲ್ಲಾ ಕಾಡಲಿದೆ" ಎಂದು ಹೇಳಿದ್ದಾರೆ.
"ಶಿವಣ್ಣನ ಜೊತೆ ನನಗೆ ಆತ್ಮೀಯತೆಯಿದೆ. ನಾನು ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮತ್ತು ಕರುಣಾನಿಧಿಯವರ ಸಾವನ್ನು ನೋಡಿದ್ದೆ. ಆದರೆ, ಈ ಮಟ್ಟಿಗೆ ಜನ ನೋವು ಪಡುತ್ತಿರುವುದನ್ನು ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ನೋಡುತ್ತಿರುವುದು. ಹಾಗಾದರೆ, ಈ ಮನುಷ್ಯ ಎಂತಹ ಬಂಗಾರದ ಬದುಕನ್ನು ಬಾಳಿರಬೇಕು" ಎಂದು ನಕ್ಕೀರನ್ ಗೋಪಾಲ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

ರಾಜಕುಮಾರ್ ಸರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದ ನಂತರ
'ಪುನೀತ್‌ನನ್ನು ನಾನು ಹಿಂದಿನಿಂದಲೂ ಹುಡುಗ ಎಂದು ಕರೆಯುತ್ತಿದ್ದದ್ದು, ಅದಕ್ಕೆ ಕಾರಣವಿದೆ. ರಾಜಕುಮಾರ್ ಸರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದ ನಂತರ, ಆ ಕುಟುಂಬದ ಜೊತೆಗೆ ನನಗೆ ಹತ್ತಿರದ ಸಂಬಂಧವಿದೆ. ಆಗ ರಾಜಕುಮಾರ್ ಮಾತನಾಡುತ್ತಾ, ನಾನು ಈಗ ಕೂಡಾ ಸಾಯಲು ಸಿದ್ದನಿದ್ದೇನೆ, ನನ್ನ ಮೂರನೇ ಮಗ ಪುನೀತ್ ನನ್ನ ಜೊತೆ ನಟಿಸಿದ್ದಾನೆ. ಜೊತೆಗೆ ಒಳ್ಳೆ ಹಾಡುಗಾರ ಕೂಡಾ. ದಿಢೀರನೇ ನಟಿಸುವುದನ್ನು ನಿಲ್ಲಿಸಿಬಿಟ್ಟು, ಬ್ಯುಸಿನೆಸ್ ಮಾಡೋಕೆ ಹೊರಟಿದ್ದಾನೆ. ಅವನು ಮತ್ತೆ ಕಲಾವಿದನಾಗಬೇಕು ಎನ್ನುವುದು ನನ್ನ ಆಸೆ' ಎಂದು ಡಾ.ರಾಜ್ ನನ್ನಲ್ಲಿ ಹೇಳಿದ್ದರು.

ಪುನೀತ್ ರಾಜಕುಮಾರ್ ಪಾರ್ಥಿವ ಶರೀರದ ಮೊದಲ ದೃಶ್ಯ
"ಆ ವಿಚಾರದಲ್ಲಿ ನೀವು ತಲೆಕೆಡಿಸಿಕೊಳ್ಳಬೇಡಿ, ನಿಮಗಿಂತ ಉತ್ತಮ ಕೀರ್ತಿಯನ್ನು ಅವನು ಸಂಪಾದಿಸುತ್ತಾನೆ ಎಂದು ರಾಜಕುಮಾರ್ ಅವರಿಗೆ ಹೇಳಿದ್ದೆ. ಅವರನ್ನು ರಕ್ಷಿಸಲು ನಾನು ಕಾಡಿಗೆ ಹೋಗಿದ್ದಕ್ಕಾಗಿ ನನಗೆ ಬೆಂಗಳೂರಿನಲ್ಲಿ ತುಂಬಾ ಮರ್ಯಾದೆ ಇದೆ ಎಂದು ರಜನೀಕಾಂತ್ ಹೇಳಿದ್ದರು. ಪುನೀತ್ ರಾಜಕುಮಾರ್ ಪಾರ್ಥಿವ ಶರೀರದ ಮೊದಲ ದೃಶ್ಯ ನನ್ನ ಮೊಬೈಲಿಗೆ ಬಂದಾಗ ನಾನು ಬೆಚ್ಚಿಹೋಗಿ, ಹಾಗೇ ಸ್ವಲ್ಪ ಹೊತ್ತು ಮಾತು ಬಾರದೇ ಕೂತು ಬಿಟ್ಟೆ" ಎಂದು ನಕ್ಕೀರನ್ ಗೋಪಾಲ್ ಹೇಳಿದ್ದಾರೆ.

ಯಾಕೆ ಜನ ಇಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ
"ಈ ವಿಚಾರದ ಬಗ್ಗೆ ಮಾತನಾಡಲು ಶಿವಣ್ಣ ಅವರಿಗೆ ಅಂದು (ಅಕ್ಟೋಬರ್ 29) ಫೋನ್ ಮಾಡಿದೆ. ಅಂದೇ ಶಿವಣ್ಣ ಅವರ ಸಿನಿಮಾ ಒಂದು ಬಿಡುಗಡೆಯಾಗಿತ್ತು. ಪುನೀತ್ ಅವರ ಪತ್ನಿಯ ಮೂಲಕ ಶಿವಣ್ಣ ಅವರಿಗೆ ಆಗಷ್ಟೇ ವಿಚಾರ ಗೊತ್ತಾಗಿತ್ತು. ಪುನೀತ್ ಅವರ ಅಂತಿಮ ಸಂಸ್ಕಾರದಲ್ಲಿ ಸುಮಾರು 20-25 ಲಕ್ಷ ಜನ ಭಾಗವಹಿಸಿದ್ದರು, ಇದು ದಕ್ಷಿಣ ಭಾರತದಲ್ಲೇ ಅತಿಹೆಚ್ಚು. ಅವರ ಸಮಾಧಿಗೆ ಜನರು ಕೈಮುಗಿಯುತ್ತಾ, ಅಳುತ್ತಿದ್ದರು. ಶಿವಣ್ಣನ ಬಳಿ ಕೇಳಿದೆ, ಯಾಕೆ ಜನ ಇಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಆಗ, ಶಿವಣ್ಣ ಹೇಳಿದರು, ಅವನಿಗೆ ನನ್ನ ದೃಷ್ಟಿಯೇ ಆಯಿತೇನೋ ಎಂದು ಅವರು ಬೇಸರ ಮಾಡಿಕೊಂಡರು" ಎಂದು ನಕ್ಕೀರನ್ ಗೋಪಾಲ್ ಹೇಳಿದ್ದಾರೆ.

ಹೋದ ವಾರ ಒಂದೇ ದಿನ ಐದು ಸಿನಿಮಾಗೆ ಸಹಿ ಹಾಕಿದ್ದರು
"ಹೋದ ವಾರ ಒಂದೇ ದಿನ ಐದು ಸಿನಿಮಾಗೆ ಸಹಿ ಹಾಕಿದ್ದರು. ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಒಂದೇ ದಿನ ಐದು ಚಿತ್ರಕ್ಕೆ ಸಹಿ ಹಾಕಿದ ಉದಾಹರಣೆಯಿಲ್ಲ. ಅವನ ಸಾಮಾಜಿಕ ಕೆಲಸದ ಬಗ್ಗೆ ನನಗೆ ಬಿಡಿ, ಅವನ ಪತ್ನಿಗೂ ಗೊತ್ತಿಲ್ಲ ಎಂದು ಶಿವಣ್ಣ ಹೇಳಿದರು. ಅವರ ಸಾಮಾಜಿಕ ಕೆಲಸದ ಪಟ್ಟಿ ಬೆಳೆಯುತ್ತಲೇ ಇದೆ. ಪುನೀತ್ ಅವರ ಮ್ಯಾನೇಜರ್ ಒಬ್ಬರಿಗೇ ಮಾತ್ರ ಸಾಮಾಜಿಕ ಕೆಲಸದ ಬಗ್ಗೆ ಗೊತ್ತಿರುವುದು" ಎಂದು ನಕ್ಕೀರನ್ ಗೋಪಾಲ್ ವಿಡಿಯೋದಲ್ಲಿ ಹೇಳಿದ್ದಾರೆ.
ಭಾಗ - ಎರಡರಲ್ಲಿ ಮುಂದುವರಿಯಲಿದೆ.











Click it and Unblock the Notifications