ಮೈಸೂರು ದಸರಾ 2022: ಜಂಬೂಸವಾರಿ ಯಶಸ್ಸಿನ ಹಿಂದಿದೆ ಮಾವುತ-ಕಾವಾಡಿಗರ ಪರಿಶ್ರಮ
ಮೈಸೂರು ದಸರಾ ಎಂದಾಕ್ಷಣ ಅಂಬಾರಿ ಹೊತ್ತು ಸಾಗುವ ಗಜಪಡೆ ನಮ್ಮೆಲ್ಲರನ್ನು ಆಕರ್ಷಿಸುತ್ತದೆ. ಆದರೆ ಅದು ಸುಸೂತ್ರವಾಗಿ ಯಾವುದೇ ವಿಘ್ನವಿಲ್ಲದೆ ಸಾಗಬೇಕಾದರೆ ಅದರ ಹಿಂದಿರುವ ಮಾವುತರು ಮತ್ತು ಕಾವಾಡಿಗರ ಶ್ರಮ ಅಷ್ಟಿಷ್ಟಲ್ಲ. ಅವರು ತಿಂಗಳಾನುಗಟ್ಟಲೆ ಹಗಲು ರಾತ್ರಿ ಎನ್ನದೆ ದುಡಿಯುವುದರಿಂದಲೇ ಜಂಬೂಸವಾರಿ ಯಶಸ್ವಿಯಾಗಿ ಲಕ್ಷಾಂತರ ಜನರು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ.
ಒಂದು ದೈತ್ಯ ಪ್ರಾಣಿಯನ್ನು ಪಳಗಿಸಿ ಅದಕ್ಕೆ ತಮ್ಮದೇ ಆದ ಭಾಷೆಯನ್ನು ಕಲಿಸಿ ತಾವು ಹೇಳಿದಂತೆ ಕೇಳಿಸುವಂತೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅಂತಹದೊಂದು ಕಾರ್ಯವನ್ನು ಮಾವುತರು ಮತ್ತು ಕಾವಾಡಿಗರು ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ತಮ್ಮದೇ ಆನೆಗಳನ್ನು ಜತನದಿಂದ ನೋಡಿಕೊಳ್ಳುತ್ತಾ ಅವುಗಳ ಒಡನಾಟದಲ್ಲಿಯೇ ತಮ್ಮ ಬದುಕನ್ನು ಸವೆಸುವುದು ಸುಲಭದ ಕೆಲಸವೇನಲ್ಲ.
ಜಂಬೂಸವಾರಿಗೆ ಆಗಮಿಸಿರುವ ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗರು ಆನೆಗಳ ಒಡನಾಟದಲ್ಲಿ ಕಾಲ ಕಳೆಯುವುದನ್ನು ನೋಡಿದಾಗ ನಮಗೆ ಅಚ್ಚರಿಯಾಗುತ್ತದೆ. ಜಂಬೂಸವಾರಿ ಒಂದೇ ದಿನ ನಡೆಯುವ ಮೆರವಣಿಗೆ. ಆದರೂ ಅದು ಯಶಸ್ವಿಯಾಗಬೇಕಾದರೆ ಅದರ ಹಿಂದೆ ಸುಮಾರು ಎರಡು ತಿಂಗಳ ಕಾಲದ ಶ್ರಮವಿರುತ್ತದೆ. ಅವುಗಳನ್ನು ಅರಮನೆ ಆವರಣಕ್ಕೆ ತಂದು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಾಲೀಮು ನಡೆಸಿ, ಅವುಗಳಿಗೆ ಹೊತ್ತೊತ್ತಿಗೆ ಆಹಾರ ನೀಡಿ, ಸ್ನಾನ ಮಾಡಿಸಿ ಜತನದಿಂದ ನೋಡಿಕೊಳ್ಳುವ ಕಾರ್ಯ ಮಾವುತರು ಮತ್ತು ಕಾವಾಡಿಗರದ್ದಾಗಿದೆ.
ಜನ ಸಂಪರ್ಕವಿಲ್ಲದೆ ಕಾಡಿನಲ್ಲಿರುವ ಆನೆಶಿಬಿರಗಳಲ್ಲಿ ಬೀಡು ಬಿಟ್ಟ ಆನೆಗಳನ್ನು ವಿವಿಧ ಶಿಬಿರಗಳಿಂದ ತಂದು ಅವುಗಳಿಗೊಂದು ಶಿಸ್ತುಬದ್ಧ ನಡಿಗೆಯನ್ನು ಕಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಆ ಕೆಲಸವನ್ನು ಮಾವುತ ಮತ್ತು ಕಾವಾಡಿ ಮಾಡುತ್ತಾರೆ. ಅದರಲ್ಲೂ ಆನೆಗಳ ಬೇಕು ಬೇಡಗಳನ್ನು ಅರಿತುಕೊಂಡು ಅದರಲ್ಲೂ ತಮ್ಮದೇ ಭಾಷೆಯಿಂದ ಅವುಗಳಿಗೆ ತಾವು ಹೇಳಿದಂತೆ ಕೇಳಿಸುವುದು ಅಷ್ಟು ಸುಲಭವಲ್ಲ. ಆ ಕೆಲಸವನ್ನು ಮಾವುತರು ಮಾಡುತ್ತಾ ಬರುತ್ತಿದ್ದಾರೆ. ಆನೆಗಳ ಬೇಕು ಬೇಡಗಳನ್ನು ಅರಿತು ಅದರಂತೆ ನಡೆದುಕೊಳ್ಳುವುದು ಮತ್ತು ತಾವು ಹೇಳಿದಂತೆ ಅವುಗಳನ್ನು ನಡೆಸುವುದು ಸಾಮಾನ್ಯವಲ್ಲ. ಆದ್ದರಿಂದಲೇ ಮಾವುತರನ್ನು ಆನೆಗಳ ರಿಂಗ್ ಮಾಸ್ಟರ್ ಎಂದು ಕರೆದರೂ ತಪ್ಪಾಗಲಾರದು.

ಆನೆಗಳ ಸಂಪೂರ್ಣ ಜವಾಬ್ದಾರಿ
ಪ್ರತಿ ವರ್ಷವೂ ಆನೆಗಳೊಂದಿಗೆ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವ ಮಾವುತ ಮತ್ತು ಕಾವಡಿಗರು ಆನೆಗಳನ್ನು ಕಟ್ಟಿಹಾಕುವುದರಿಂದ ಆರಂಭವಾಗಿ ಅವುಗಳು ಹಾಕುವ ಲದ್ದಿಯನ್ನು ತೆಗೆಯುವುದು, ಆಹಾರ ತಯಾರಿಸಿ ನೀಡುವುದು, ಮಜ್ಜನ ಮಾಡುವುದು ಹೀಗೆ ಆನೆಗಳೊಂದಿಗೆ ಇದ್ದು ಅವುಗಳ ಲಾಲನೆ ಪಾಲನೆಯನ್ನು ಮಾವುತರು ಮತ್ತು ಕಾವಾಡಿಗಳು ಮಾಡುತ್ತಾರೆ.

ಮಾವುತರು-ಕಾವಾಡಿಗಳೊಂದಿಗೆ ಆನೆಗಳ ಒಡನಾಟ
ಆನೆಗಳು ಕೂಡ ತಮ್ಮೊಂದಿಗೆ ಇರುವ ಮಾವುತರು ಮತ್ತು ಕಾವಾಡಿಗಳೊಂದಿಗೆ ಕಾಲ ಕಳೆಯುವುದರಿಂದ ಅವರೊಂದಿಗೆ ಒಡನಾಟ ಹೊಂದಿರುತ್ತವೆ. ಅವರನ್ನು ಹೊರತು ಪಡಿಸಿ ಬೇರೆ ಮಾವುತ ಮತ್ತು ಕಾವಾಡಿಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಈ ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯನ್ನು ಮಾವುತ ದೊಡ್ಡ ಮಾಸ್ತಿ ಅವರು ನೋಡಿಕೊಳ್ಳುತ್ತಿದ್ದರು. ಆದರೆ ಅವರು ನಿಧನರಾದ ನಂತರ ಬೇರೆ ಮಾವುತ ಅದನ್ನು ಸಂಭಾಳಿಸುವುದು ಕಷ್ಟವಾಗಿತ್ತು.
ಆನೆಗಳು ತಮ್ಮ ಮಾವುತ ಮತ್ತು ಕಾವಡಿಗಳನ್ನು ಹೊರತು ಪಡಿಸಿ ಬೇರೆ ಮಾವುತರ ಮಾತನ್ನು ಕೇಳುವುದು ಕಷ್ಟವೇ. ಹೀಗಾಗಿಯೇ ಪ್ರತಿಯೊಂದು ಆನೆಗಳಿಗೂ ಅವರದ್ದೇ ಆದ ಮಾವುತರು ಮತ್ತು ಕಾವಡಿಗಳನ್ನು ನೇಮಿಸಲಾಗಿದ್ದು, ಅವರ ಉಸ್ತುವಾರಿಯಲ್ಲೇ ಆನೆಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ.

ಜಂಬೂಸವಾರಿಯಲ್ಲಿ 13 ಆನೆಗಳು ಭಾಗಿ
ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ಜಂಬೂಸವಾರಿ ಅರಮನೆ ಆವರಣದಲ್ಲಿ ಸರಳವಾಗಿ ನಡೆದಿತ್ತು. ಆದರೆ ಈ ಬಾರಿ ಜಂಬೂಸವಾರಿ ಹಿಂದಿನಂತೆಯೇ ಅದ್ಧೂರಿಯಾಗಿ ನಡೆಯುತ್ತಿದ್ದು ಅದರಂತೆ 14 ಆನೆಗಳನ್ನು ಕರೆ ತರಲಾಗಿತ್ತು. ಈ ಪೈಕಿ ಲಕ್ಷ್ಮಿ ಎಂಬ ಆನೆ ಮರಿಗೆ ಜನ್ಮ ನೀಡಿರುವುದರಿಂದ ಜಂಬೂಸವಾರಿಯಿಂದ ಹೊರಗುಳಿದಿದೆ. ಉಳಿದಂತೆ 13 ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಂಡು ತಮ್ಮದೇ ಆದ ಜವಬ್ದಾರಿಯನ್ನು ನಿರ್ವಹಿಸಲಿವೆ.

ಎಲ್ಲಾ ಆನೆಗಳಿಗೂ ಪ್ರತ್ಯೇಕ ಕಾವಾಡಿ, ಮಾವುತ
ಇನ್ನು ಯಾವ ಆನೆಗೆ ಯಾರು ಮಾವುತರು ಮತ್ತು ಕಾವಾಡಿಗರು ಎನ್ನುವುದನ್ನು ನೋಡುವುದಾದರೆ ಗಜಪಡೆಯ ಕ್ಯಾಪ್ಟನ್ ಆಗಿರುವ ಅಭಿಮನ್ಯುಗೆ ಮಾವುತ ವಸಂತ, ಕಾವಾಡಿ ಜೆ.ಕೆ.ರಾಜು, ಅರ್ಜುನನಿಗೆ ಮಾವುತ ವಿನು, ಕಾವಾಡಿ ಮಧು, ಕಾವೇರಿಗೆ ಮಾವುತ ಜೆ.ಕೆ.ಡೋಬಿ, ಕಾವಾಡಿ ಜೆ.ಎ.ರಂಜನ್, ವಿಜಯ ಆನೆಗೆ ಮಾವುತ ಬೋಜಪ್ಪ, ಕಾವಾಡಿ ಬಿ.ಪಿ.ಭರತ್, ಗೋಪಾಲಸ್ವಾಮಿಗೆ ಮಾವುತ ಜೆ.ಡಿ.ಮಂಜು, ಕಾವಾಡಿ ಸೃಜನ್, ಗೋಪಿಗೆ ಮಾವುತ ಭೋಜ, ಕಾವಾಡಿ ಖಲೀಂ ಪಾಶಾ, ಧನಂಜಯ ಆನೆಗೆ ಮಾವುತ ಜೆ.ಸಿ.ಭಾಸ್ಕರ, ಕಾವಾಡಿ ಜೆ.ಎ.ಮಣಿ, ಭೀಮನಿಗೆ ಮಾವುತ ಗುಂಡು, ಕಾವಾಡಿ ನಂಜುಂಡಸ್ವಾಮಿ, ಮಹೇಂದ್ರನಿಗೆ ಮಾವುತ ರಾಜಣ್ಣ, ಕಾವಾಡಿ ಮಲ್ಲಿಕಾರ್ಜುನ ಕಾರ್ಯ ನಿರ್ವಹಿಸುತ್ತಾರೆ.
ಇನ್ನು ಪಾರ್ಥಸಾರಥಿ ಆನೆಗೆ ಮಾವುತನಾಗಿ ಜೆ.ಎಸ್.ನಾಗೇಶ್, ಕಾವಾಡಿಯಾಗಿ ಆರ್.ಹೇಮಂತ್ ಕುಮಾರ್, ಶ್ರೀರಾಮ ಆನೆಗೆ ಮಾವುತನಾಗಿ ಜೆ.ಡಿ.ಸರಿ, ಕಾವಾಡಿ ಜೆ.ಗಣೇಶ್, ಸುಗ್ರೀವನಿಗೆ ಮಾವುತನಾಗಿ ಶಂಕರ್, ಕಾವಾಡಿ ಹರೀಶ್ ಹಾಗೂ ಲಕ್ಷ್ಮಿಗೆ ಮಾವುತನಾಗಿ ಜೆ.ಹೆಚ್.ಚಂದ್ರ, ಕಾವಾಡಿಯಾಗಿ ಜಿ.ಕೆ.ಗಣೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳ ಬೇಕೆಂದರೆ ಕಳೆದ ಎರಡು ತಿಂಗಳಿನಿಂದ ಗಜಪಡೆಗೆ ಜಂಬೂಸವಾರಿಗೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದ್ದು, ಅಕ್ಟೋಬರ್ 5ರಂದು ನಡೆಯುವ ಜಂಬೂಸವಾರಿಯಲ್ಲಿ ಮಾವುತರು ಮತ್ತು ಕಾವಾಡಿಗರು ಸಮವಸ್ತ್ರ ಧರಿಸಿ ಗಜಪಡೆಯೊಂದಿಗೆ ಸಾಗಲಿದ್ದಾರೆ.












Click it and Unblock the Notifications