Mothers Day 2022: ಅಮ್ಮಂದಿರ ದಿನದ ಇತಿಹಾಸ ಮತ್ತು ಮಹತ್ವ
ಅಮ್ಮ ಎಂದು ಕರೆಯುವ ಪದದಲ್ಲಿ ಏನೋ ಶಕ್ತಿ ಇದೆ. ಎಂತಹ ನೋವಿದ್ದರೂ ಅಮ್ಮನ ಪ್ರೀತಿ ಮುಂದೆ ಅದೆಲ್ಲೂ ನಾಶವಾಗಿ ಹೋಗುತ್ತದೆ. ಹೀಗಾಗಿ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯನ್ನು ಹೊಗಳಲು ಪದಗಳಿಲ್ಲ. ಹೀಗಾಗಿ ತಾಯಿಯು ತನ್ನ ಮಗುವಿಗೆ ತೋರಿಸುವ ಪ್ರೀತಿ, ಕಾಳಜಿ ಮತ್ತು ತ್ಯಾಗವನ್ನು ಪ್ರಶಂಸಿಸಲು ಪ್ರತಿ ವರ್ಷ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
ಇದನ್ನು ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ತಾಯಂದಿರ ದಿನವನ್ನು ಮೇ 8ರಂದು ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ತಾಯಿಗೆ ವಿಶೇಷ ಕೃತಜ್ಞತೆ ಸಲ್ಲಿಸಲು ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಸುತ್ತಲಿನ ಜನರ ಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ತಾಯಂದಿರಿಗೆ ಕೃತಜ್ಞತೆ ಸಲ್ಲಿಸಲು ಈ ದಿನವು ಒಂದು ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.
ತಂದೆ-ತಾಯಿ, ಸಹೋದರಿ, ಮಗಳು, ಸ್ನೇಹಿತೆ ಮತ್ತು ಹೆಂಡತಿಯಾಗಿ, ಸಮಾಜದಲ್ಲಿನ ಅಂತ್ಯವಿಲ್ಲದ ಸಂಬಂಧಗಳವರೆಗೆ ಕುಟುಂಬವನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅದನ್ನು ಪೋಷಿಸುವ ಜವಾಬ್ದಾರಿಯನ್ನು ತಾಯಂದಿರು ಹೊರುತ್ತಾರೆ. ಈ ಅದ್ಭುತ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ತಾಯಿಯ ದಿನ ಯಾವಾಗ?
ಈ ಬಾರಿ ತಾಯಂದಿರ ದಿನವನ್ನು ಮೇ 8 ರ ಭಾನುವಾರ ಆಚರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ.
ತಾಯಂದಿರ ದಿನದ ಇತಿಹಾಸ
ಮದರ್ಸ್ ಡೇ ಅಥವಾ ತಾಯಂದಿರ ದಿನವನ್ನು 1908ರಲ್ಲಿ ಅಮೆರಿಕದಲ್ಲಿ ಆಚರಿಸಲು ಶುರು ಮಾಡಲಾಯಿತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಅವರು ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು. ಬಳಿಕ ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಮೇ 9, 1914ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಆದರೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 8ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.
ತಾಯಂದಿರ ದಿನದ ಮಹತ್ವ
ಈ ದಿನ ತಾಯಂದಿರ ಅಸ್ತಿತ್ವವನ್ನು ಆಚರಿಸಲಾಗುತ್ತದೆ ಮತ್ತು ಅವರು ತಮ್ಮ ಮಕ್ಕಳಿಗಾಗಿ ಮಾಡುವ ಎಲ್ಲಾ ಕಾರ್ಯಗಳನ್ನು ಪ್ರಶಂಸಿಸುವುದರಿಂದ ಈ ದಿನವು ಮಹತ್ವದ್ದಾಗಿದೆ. ಇದು ತಾಯಂದಿರನ್ನು ಗೌರವಿಸುತ್ತದೆ. ಜೊತೆಗೆ ಮಾತೃತ್ವ, ತಾಯಿಯ ಬಂಧಗಳು ಮತ್ತು ಸಮಾಜದಲ್ಲಿ ತಾಯಂದಿರ ಪ್ರಭಾವವನ್ನು ಗೌರವಿಸುತ್ತದೆ.












Click it and Unblock the Notifications