ನರೇಗಾ ಯೋಜನೆಯಲ್ಲಿ ಮಹಿಳೆಯರ ಮೇಲುಗೈ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ನಿರ್ವಹಣೆ ಮಾಡುತ್ತಿರುವ ಮಹತ್ವದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಗೆ ಗ್ರಾಮೀ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಸಿಗುವುದರಿಂದ ಪುರುಷರು ಮತ್ತು ಮಹಿಳೆಯರು ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ಪುರುಷರ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಹಿಳೆಯರು, ನರೇಗಾ ಯೋಜನೆಯಲ್ಲೂ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಮಹಿಳೆಯರು ಕೇವಲ ಮನೆ, ಮಕ್ಕಳು ಎನ್ನದೇ ಪುರುಷರಿಗೆ ಸಮಾನವಾದ ದುಡಿಮೆ ಮಾಡುತ್ತಿದ್ದಾರೆ. ಇಂತಹ ಸಮಾನ ದುಡಿಮೆಗೆ ವೇದಿಕೆಯನ್ನು ನರೇಗಾ ಒದಗಿಸಿಕೊಟ್ಟಿದೆ.

ಮಹಿಳೆಯರಿಗೆ ಸಮಾನ ಮತ್ತು ಸಹಬಾಳ್ವೆಯ ಹಾದಿಯಲ್ಲಿ ಸಾಗಲು ಸಹಕಾರಿಯಾಗಿರುವುದು ಹಾಗೂ ಹೊಸ ಚೈತನ್ಯ ತುಂಬಿರುವುದು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾಗಿದೆ.
ನರೇಗಾ ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆ ಮೂಲಕ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಕಳೆದ 6 ವರ್ಷಗಳಿಂದ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ಸಾಗುತ್ತಿರುವುದಲ್ಲದೇ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನರೇಗಾ ಯೋಜನೆ ಮಹಿಳೆಯರ ಪಾಲ್ಗೊಳ್ಳುವಿಕೆ: ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಒಟ್ಟು 262 ಗ್ರಾಮಗಳು ಇದ್ದು, 2.42 ಲಕ್ಷಕ್ಕೂ ಹೆಚ್ಚಿನ ಜನ ಉದ್ಯೋಗ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ 1.47 ಲಕ್ಷ ಜನರ ಜಾಬ್ ಕಾರ್ಡ್ ಚಾಲ್ತಿಯಲಿದೆ. ಇದರಲ್ಲಿ ಪರಿಶಿಷ್ಟ ಜಾತಿಯವರು ಶೇ. 2.82 ಹಾಗೂ ಪರಿಶಿಷ್ಟ ಪಂಗಡದವರು ಶೇ.5 ರಷ್ಟು ಇದ್ದಾರೆ. 2024-25 ರಲ್ಲಿ ಶೇ.54.95 ಮಹಿಳೆಯರಿದ್ದಾರೆ.
ಜಿಲ್ಲೆಯಲ್ಲಿ ಮಹಿಳೆಯರು ಯೋಜನೆಯ ಲಾಭವನ್ನು ಹೆಚ್ಚಾಗಿ ಪಡೆಯುತ್ತಿದ್ದು, 2019-20ರಲ್ಲಿ ಶೇ.64.96 ರಷ್ಟು ನರೇಗಾ ಯೋಜನೆಯ ಫಲಾನುಭಾವಿಗಳು ಇದ್ದರೆ ಅದರಲ್ಲಿ ಶೇ. 50.86 ರಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. 2020-21ರಲ್ಲಿ ಶೇ.49.65, 2021-22ರಲ್ಲಿ ಶೇ. 49.39, 2022-23ರಲ್ಲಿ ಶೇ.51.29, 2023-24ರಲ್ಲಿ ಶೇ. 53.84 ಮಹಿಳೆಯರು ಫಲಾನುಭವಿಗಳು.
ಈ ಕುರಿತು ಮಾತನಾಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಎನ್., 'ನರೇಗಾ ಯೋಜನೆ ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಹಿಳೆಯರು ಅತ್ಯಂತ ಸಕ್ರಿಯವಾಗಿ ಈ ಯೋಜನೆಯಡಿ ಪಾಲ್ಗೊಂಡು ಪ್ರಯೋಜನೆ ಪಡೆಯುತ್ತಿದ್ದಾರೆ. ಪ್ರಸ್ತುತ ಮಾನವ ದಿನಗಳನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಲು ಆಲೋಚನೆ ನಡೆಸಲಾಗುತ್ತದೆ. ಈ ಹಿಂದೆ ಪ್ರವಾಹ, ಬರದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದಾಗ 150 ದಿನಗಳು ಕೂಲಿಯನ್ನು ನೀಡಲಾಗುತ್ತಿತ್ತು. ಈಗ ಇದನ್ನು ಸಂಪೂರ್ಣ ಯೋಜನೆಗೆ 150 ದಿನಗಳನ್ನು ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ' ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ನರೇಗಾ ಯೋಜನೆಯು ಯಶಸ್ವಿಯಾಗಿ ಸಾಗುತ್ತಿದೆ. ಪ್ರತಿ ವರ್ಷವೂ ಈ ಯೋಜನೆಗೆ ಬೇಕಾದ ಅನುದಾನವನ್ನು ಸರಿಯಾದ ಕ್ರಮದಲ್ಲಿ ಎಲ್ಲೂ ವ್ಯರ್ಥವಾಗದಂತೆ ಜಿಲ್ಲಾ ಪಂಚಾಯತ್ ನಿಗಾವಹಿಸಿ ಬಳಸುತ್ತಿದೆ. ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಎಷ್ಟು ಅನುದಾನ ಬೇಕೋ ಅಷ್ಟು ಮಾತ್ರ ಅನುದಾನ ಪಡೆಯುತ್ತಿದ್ದು, ಅನುದಾನವನ್ನು ವ್ಯರ್ಥವಾಗದಂತೆ ಕಾಪಾಡಿಕೊಂಡು ಬರಲಾಗುತ್ತಿದೆ.
ಫಲಾನುಭವಿಗಳಿಗೆ ಕೂಲಿಯ ರೂಪದಲ್ಲಿ ದಿನಕ್ಕೆ ರೂ. 349 ರೂ. ಗಳು ನೀಡಲಾಗುತ್ತದೆ. 2024-25ನೇ ಸಾಲಿನಲ್ಲಿ ವಾರ್ಷಿಕ ಗುರಿ ಒಟ್ಟು 29,00,000 ಮಾನವ ದಿನಗಳಾಗಿದ್ದು 22,51,876 ಮಾನವ ದಿನಗಳನ್ನು ಪೂರೈಸಲಾಗಿದೆ. ಇದರಲ್ಲಿ ಭದ್ರಾವತಿ ಮೊದಲ ಸ್ಥಾನದಲ್ಲಿದ್ದರೆ, ತೀರ್ಥಹಳ್ಳಿ ಕೊನೆಯ ಸ್ಥಾನದಲ್ಲಿದೆ.
ಬರಹ ಕೃಪೆ: ಆಕಾಶ್. ಆರ್. ಎಸ್, ಅಪ್ರೆಂಟಿಸ್, ವಾರ್ತಾ ಇಲಾಖೆ












Click it and Unblock the Notifications