ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆ
ಈಗಿನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ನಡೆದಿದ್ದರೆ ಬಿಜೆಪಿ 32 ಸಂಸತ್ ಸ್ಥಾನಗಳನ್ನು ಕಳೆದುಕೊಂಡಿರುತ್ತಿತ್ತು ಎಂದು ಮೂಡ್ ಆಫ್ ದಿ ನೇಷನ್ (ಎಂಓಟಿಎನ್) ಸಮೀಕ್ಷೆ ತಿಳಿಸಿದೆ.
ಇಂಡಿಯಾ ಟುಡೆ ಸಮೂಹ ಮತ್ತು ಕಾರ್ವಿ ಇನ್‌ಸೈಟ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ 12,141 ಸಂದರ್ಶನಗಳನ್ನು ನಡೆಸಲಾಗಿದೆ. ಇದರಲ್ಲಿ ಶೇ 67 ಗ್ರಾಮೀಣ ಮತ್ತು ಶೇ 33ರಷ್ಟು ನಗರ ಪ್ರದೇಶಗಳಲ್ಲಿ ನಡೆದಿದ್ದು, ಬಹುತೇಕ ಸಮಾನ ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು.
ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಅಸ್ಸಾಂ, ಬಿಹಾರ, ಛತ್ತೀಸಗಡ, ದೆಹಲಿ, ಗುಜರಾತ್, ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ 194 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ಬಿಜೆಪಿಗೆ 271 ಸೀಟು
2019ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 303 ಸೀಟುಗಳನ್ನು ಗೆದ್ದು ಸರಳ ಬಹುಮತ ಪಡೆದಿತ್ತು. ಒಂದು ವೇಳೆ ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಅದರ ಸಂಖ್ಯೆ 271ಕ್ಕೆ ಇಳಿಯುತ್ತಿತ್ತು. ಇದರಿಂದ ಸರಳ ಬಹುಮತಕ್ಕೆ ಒಂದು ಮತದ ಕೊರತೆ ಎದುರಾಗುತ್ತಿತ್ತು ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್‌ಗೆ ಹೆಚ್ಚುವರಿ ಎಂಟು ಸೀಟು
ಹಾಗೆಯೇ ಇಂದು ಚುನಾವಣೆ ನಡೆದಿದ್ದರೆ ಕಾಂಗ್ರೆಸ್ ಎಂಟು ಹೆಚ್ಚು ಸೀಟುಗಳನ್ನು ಪಡೆದುಕೊಳ್ಳುತ್ತಿತ್ತು. ಮೈತ್ರಿಕೂಟದ ಲೆಕ್ಕಾಚಾರದಲ್ಲಿ ಆಗಿದ್ದರೆ ಶಿವಸೇನಾದಿಂದ ಬೇರ್ಪಟ್ಟಿರುವುದು ಮತ್ತು ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳ ಕಾರಣ ಬಿಜೆಪಿ ನೇತೃತ್ವದ ಎನ್‌ಡಿಎ ಸುಮಾರು 50 ಸೀಟುಗಳನ್ನು ಕಳೆದುಕೊಳ್ಳುತ್ತಿತ್ತು. ಆದರೆ ಅದು ಒಟ್ಟು 303 ಸೀಟುಗಳನ್ನು ಪಡೆದುಕೊಳ್ಳುತ್ತಿದ್ದರಿಂದ ಸರ್ಕಾರ ರಚನೆಗೆ ಕಷ್ಟವಾಗುತ್ತಿರಲಿಲ್ಲ.

ಎನ್‌ಡಿಎ ಮತ ಹಂಚಿಕೆ ಕಡಿಮೆ
2019ರ ಮೇನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಡೆದ ಮತಗಳ ಹಂಚಿಕೆಯಲ್ಲಿ ಎನ್‌ಡಿಎ ಶೇ 4ರಷ್ಟು ಕಡಿಮೆ ಮತಗಳನ್ನು ಪಡೆದುಕೊಳ್ಳುತ್ತಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಶೇ 2ರಷ್ಟು ಹೆಚ್ಚಿನ ಮತಗಳಿಕೆಯೊಂದಿಗೆ 15 ಅಧಿಕ ಸೀಟುಗಳನ್ನು ಪಡೆದುಕೊಳ್ಳುತ್ತಿತ್ತು ಎಂದು ಸಮೀಕ್ಷೆ ತಿಳಿಸಿದೆ.

ಕಾಶ್ಮೀರ ಸಮಸ್ಯೆಗೆ ಕಾಯಂ ಪರಿಹಾರ ಸಿಕ್ಕಿತೇ?
370ನೇ ವಿಧಿಯನ್ನು ರದ್ದುಮಾಡಿದ ಕೇಂದ್ರ ಸರ್ಕಾರದ ನಿರ್ಧಾರವು ಕಾಶ್ಮೀರ ವಿವಾದಕ್ಕೆ ಶಾಶ್ವತ ಪರಿಹಾರ ನೀಡಲಿದೆಯೇ ಎಂಬ ಪ್ರಶ್ನೆಗೆ ಶೇ 58ರಷ್ಟು ಜನರು ಹೌದು ಎಂದಿದ್ದಾರೆ. ಈ ನಿರ್ಧಾರದಿಂದ ಕಾಶ್ಮೀರದ ಸಮಸ್ಯೆ ಪರಿಹಾರ ಕಂಡುಕೊಳ್ಳಲಿದೆ ಎಂದು ಹೆಚ್ಚಿನ ಜನರಿಗೆ ಅನಿಸಿದೆ. ಶೇ 26ರಷ್ಟು ಜನರಿಗೆ ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದೆನಿಸಿದೆ. ಇನ್ನು ಶೇ 16ರಷ್ಟು ಮಂದಿ ಅಂತಿಮ ಅಭಿಪ್ರಾಯ ಹೊಂದುವುದು ಕಷ್ಟ ಎಂದಿದ್ದಾರೆ.












Click it and Unblock the Notifications