ಚಾಳುಕ್ಯರ ಸೂರ್ಯ ಮಂದಿರ ಇರುವ ಮೋಢೇರಾ ಭಾರತದ ಮೊದಲ ಸೌರಶಕ್ತ ಗ್ರಾಮ
ಅಹ್ಮದಾಬಾದ್, ಅ. 9: ಗುಜರಾತ್‌ನ ಮೆಹಸಾನ ಜಿಲ್ಲೆಯ ಮೋಢೇರಾ ಗ್ರಾಮ ಭಾರತದ ಮೊದಲ ಸೌರಶಕ್ತ ಹಳ್ಳಿ ಎಂದು ಘೋಷಣೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 9, ಭಾನುವಾರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡುತ್ತಿದ್ದಾರೆ.
ಮೋಢೇರಾವನ್ನು ಭಾರತದ ಮೊದಲ ಸೌರಶಕ್ತ ಗ್ರಾಮ ಎಂದು ಘೋಷಿಸುವ ಮೂಲಕ ಭಾರತದಲ್ಲಿ ಮರಬಳಕೆ ಶಕ್ತಿಯ ಹೊಸ ಶಕೆ ಆರಂಭವಾಗಿದೆ. ರಿನಿವಬಲ್ ಎನರ್ಜಿಯ ಮಹತ್ವ ಮತ್ತು ಪ್ರಾಯೋಗಿಕ ಉಪಯುಕ್ತತೆ ಬಗ್ಗೆ ಅರಿವು ಮೂಡಿಸಲು ಪುಷ್ಟಿ ಸಿಕ್ಕಂತಾಗಿದೆ.
ಸೂರ್ಯ ದೇವಸ್ಥಾನವನ್ನು ಸೌರಶಕ್ತ ಮಂದಿರವಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ತೊಟ್ಟಿದ್ದ ಸಂಪಲ್ಪ ಈಡೇರಿದಂತಾಗಿದೆ. ಇಲ್ಲಿನ ಸೂರ್ಯ ಮಂದಿರ ಮಾತ್ರವಲ್ಲ ಇಡೀ ಗ್ರಾಮವೇ ಸೌರಶಕ್ತವಾಗಿದೆ. ವಿದ್ಯುತ್ ವಿಚಾರದಲ್ಲಿ ಮೋಢೇರಾ ಗ್ರಾಮ ಸಂಪೂರ್ಣ ಸ್ವಾವಲಂಬನೆ ಸಾಧಿಸಿದೆ.

ಚಾಳುಕ್ಯರು ಕಟ್ಟಿದ ಸೂರ್ಯ ಮಂದಿರ
ಮೋಢೇರಾ ಗ್ರಾಮ ಈ ಮುಂಚೆ ಸೂರ್ಯ ದೇವಸ್ಥಾನಕ್ಕೆ ಖ್ಯಾತವಾಗಿತ್ತು. ಗುಜರಾತ್‌ನ ಸೋಳಂಕಿ ಚಾಳುಕ್ಯರ ದೊರೆ ಮೊದಲನೆಯ ಭೀಮಾ 11ನೇ ಶತಮಾನದಲ್ಲಿ ಪುಷ್ಪಾವತಿ ನದಿ ತೀರದಲ್ಲಿ ಸೂರ್ಯ ದೇವಸ್ಥಾನವನ್ನು ಕಟ್ಟಿಸಿದ್ದರು. ಗುಜರಾತ್‌ಗೆ ಪ್ರವಾಸ ಹೋಗುವ ಜನರಿಗೆ ನೆಚ್ಚಿನ ಸ್ಥಳಗಳಲ್ಲಿ ಸೂರ್ಯ ಮಂದಿರವೂ ಒಂದಾಗಿದೆ. ಈಗ ಸೂರ್ಯನ ದೇವಸ್ಥಾನಕ್ಕೆ ಸೂರ್ಯನ ಶಕ್ತಿಯನ್ನೇ ಧಾರೆ ಎರೆಯಲಾಗಿದೆ.
2ಡಿ ಪ್ರೊಜೆಕ್ಷನ್
ಸೂರ್ಯನ ದೇವಸ್ಥಾನದಲ್ಲಿ 3ಡಿ ಪ್ರೊಜೆಕ್ಷನ್ ವ್ಯವಸ್ಥೆ ಮಾಡಲಾಗಿದೆ. ಇದೂ ಕೂಡ ಸೌರಶಕ್ತಿಯಿಂದ ಚಾಲನೆಗೊಳ್ಳುತ್ತದೆ. ಮೋಢೇರಾ ಗ್ರಾಮದ ಇತಿಹಾಸದ ಬಗ್ಗೆ ಪ್ರವಾಸಿಗರಿಗೆ ಥ್ರೀಡಿ ಪ್ರೆಸೆಂಟೇಶನ್ ಕೊಡಲಾಗುತ್ತದೆ.
ದೇವಸ್ಥಾನದಲ್ಲಿ ವಿಶೇಷ ಸೋಲಾರ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಇದರ ವೈಭವವನ್ನು ದಿನವೂ ಸಂಜೆ 6ರಿಂದ 10 ಗಂಟೆಯವರೆಗೆ ಜನರು ವೀಕ್ಷಿಸಬಹುದು. ಹಾಗೆಯೇ, ಸಂಜೆ 3D ಪ್ರೊಜೆಕ್ಟರ್‌ನಲ್ಲಿ ದಿನವೂ ಸಂಜೆ ಪ್ರೆಸೆಂಟೇಶನ್ ಪ್ರಸಾರವಾಗುತ್ತಿರುತ್ತದೆ.

ಸಾವಿರ ಸೌರ ಫಲಕಗಳು
ಮೋಢೇರಾ ಗ್ರಾಮದ ಮನೆಗಳ ಮೇಲೆ ಒಂದು ಸಾವಿರಕ್ಕೂ ಹೆಚ್ಚು ಸೌರ ಫಲಕ (ಸೋಲಾರ್ ಪ್ಯಾನೆಲ್) ಗಳನ್ನು ಹಾಕಲಾಗಿದೆ. ದಿನದ 24 ಗಂಟೆಯೂ ಈ ಗ್ರಾಮದಲ್ಲಿ ವಿದ್ಯುತ್ ಇರುತ್ತದೆ. ಎಲ್ಲರಿಗೂ ಉಚಿತವಾಗಿ ವಿದ್ಯುತ್ ಹಂಚಲಾಗುತ್ತಿದೆ.
ವಿವಿಧ ಯೋಜನೆಗಳು
ಮೋಢೇರಾ ಗ್ರಾಮದಲ್ಲಿ 3900 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸುತ್ತಿದ್ದಾರೆ. ನೆಲದ ಮೇಲೆ ಸೌರ ವಿದ್ಯುತ್ ಘಟಕ ತಯಾರಿಸುವುದು, ಮನೆ ಮತ್ತು ಕಚೇರಿಗಳ ಮೇಲೆ ೧೩೦೦ಕ್ಕೂ ಹೆಚ್ಚು ರೂಫ್ ಟಾಪ್ ಸೋಲಾರ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಸೇರಿವೆ. ಈ ಸೋಲಾರ್ ಸಿಸ್ಟಂಗಳನ್ನು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂನೊಂದಿಗೆ ಜೋಡಿತವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications