ಮಣಿಪುರ ಚುನಾವಣೆ 2022: ಏನಿದು AFSPA, ಪ್ರಣಾಳಿಕೆಯಲ್ಲಿಯೂ ಇದರದ್ದೆ ಸದ್ದು
ಇಂಫಾಲ್, ಡಿಸೆಂಬರ್ 15: ಭದ್ರತಾ ಪಡೆಗಳ ಗುಂಡಿನ ದಾಳಿಗೆ ಡಿಸೆಂಬರ್ 4 ರಂದು ನಾಗಾಲ್ಯಾಂಡ್‌ನಲ್ಲಿ 14 ನಾಗರಿಕರು ಸಾವನ್ನಪ್ಪಿದರು ಮತ್ತು 30 ಜನರು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಮುಂದಿನ ವರ್ಷ ಅಂದರೆ 2022 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಣಿಪುರದಲ್ಲಿ ಈ ನಾಗರಿಕರ ಹತ್ಯೆ ವಿಚಾರವು ಸದ್ದು ಮಾಡಿದೆ. ಹೌದು ಚುನಾವಣಾ ತಯಾರಿಯಲ್ಲಿರುವ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) 1958 ರ ರದ್ದತಿಯು ಪ್ರಮುಖ ಚುನಾವಣಾ ವಿಚಾರ ಆಗಿದೆ.
ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಮಣಿಪುರದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಉತ್ತರ ಪ್ರದೇಶ ಸೇರಿ ನಾಲ್ಕು ರಾಜ್ಯಗಳು ಹೆಚ್ಚು ರಾಜಕೀಯವಾಗಿ ಸದ್ದು ಮಾಡುತ್ತಿದ್ದರೂ ಮಣಿಪುರವು ಹೆಚ್ಚು ರಾಜಕೀಯ ಸದ್ದು ಮಾಡಿರಲಿಲ್ಲ. ಆದರೆ ಈಗ ಈ ಬಿಜೆಪಿ ಆಡಳಿತ ಇರುವ ರಾಜ್ಯದ ನೆರೆ ರಾಜ್ಯ ನಾಗಾಲ್ಯಾಂಡ್‌ನಲ್ಲಿ ನಡೆದ ನಾಗರಿಕರ ಹತ್ಯೆಯು ಮಣಿಪುರದಲ್ಲಿ ಪ್ರಮುಖ ವಿಚಾರವಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿ ಇರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) 1958 ಆಗಿದೆ.
ಬಿಜೆಪಿ ಆಡಳಿತದ ಈ ಮಣಿಪುರ ರಾಜ್ಯದಲ್ಲಿ ಬಿಜೆಪಿಯ ಎರಡು ಪ್ರಮುಖ ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಈಗಾಗಲೇ ಎಎಫ್‌ಎಸ್‌ಪಿಎ ಅನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹ ಮಾಡಿದೆ. ಈ ಬೆನ್ನಲ್ಲೇ ಮಣಿಪುರದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಶನಿವಾರ ಈಶಾನ್ಯ ರಾಜ್ಯದಲ್ಲಿ ಎಎಫ್‌ಎಸ್‌ಪಿಎ ಅನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯ ಮಾಡಿದೆ. ಅಷ್ಟಕ್ಕೂ ಏನಿದು ಎಎಫ್‌ಎಸ್‌ಪಿಎ, ಏಕೆ ಅಷ್ಟೊಂದು ವಿವಾದವನ್ನು ಸೃಷ್ಟಿ ಮಾಡಿದೆ, ಚುನಾವಣೆಯಲ್ಲಿ ಯಾಕೆ ಪ್ರಮುಖ ವಿಚಾರ ಆಗಲಿದೆ ಎಂದು ತಿಳಿಯಲು ಮುಂದೆ ಓದಿ...

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಯಾವಾಗ ಜಾರಿಗೆ ಬಂದಿದೆ?
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯು (AFSPA) ಅನ್ನು 1942 ರಲ್ಲಿ ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯ ಹಿನ್ನೆಲೆಯಲ್ಲಿ ಬ್ರಿಟಿಷರು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದಾರೆ. ಸ್ವಾತಂತ್ರ್ಯದ ನಂತರದಲ್ಲಿ ಆ ಸಂದರ್ಭದಲ್ಲಿನ ಪ್ರಧಾನಿ ಜವಾಹರಲಾಲ್ ನೆಹರು ಅಸ್ಸಾಂ ಮತ್ತು ಮಣಿಪುರದಲ್ಲಿ ದಂಗೆಯ ದೃಷ್ಟಿಯಿಂದ ಕಾನೂನನ್ನು ಮುಂದುವರಿಸಲು ನಿರ್ಧರಿಸಿದರು. ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರಗಳ ಸುಗ್ರೀವಾಜ್ಞೆ 1958 ಅನ್ನು ಅಂದಿನ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರು ಮೇ 22, 1958 ರಂದು ಜಾರಿಗೆ ತಂದರು. ಬಳಿಕ ಸೆಪ್ಟೆಂಬರ್ 11, 1958 ರಂದು ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರಗಳ ಕಾಯಿದೆ, 1958 ಎಂದು ತಿದ್ದುಪಡಿ ಮಾಡಲಾಯಿತು. ಈ ಕಾಯ್ದೆಯು ಮಣಿಪುರ ಮಾತ್ರವಲ್ಲದೆ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂನಲ್ಲಿ ಜಾರಿಯಲ್ಲಿದೆ. ಇನ್ನು ಪ್ರದೇಶದಲ್ಲಿ ದಂಗೆಗಳು ಕಡಿಮೆಯಾಗಿದೆ ಎಂದು ಸರ್ಕಾರವು ಭಾವಿಸಿದರೆ ಆ ಪ್ರದೇಶದಲ್ಲಿ ಈ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡುವ ಹಕ್ಕು ಸರ್ಕಾರಕ್ಕೆ ಇದೆ. ಪಂಜಾಬ್ ಮಾತ್ರವಲ್ಲದೇ 2015 ರಲ್ಲಿ ತ್ರಿಪುರಾದಲ್ಲಿ 2018 ರಲ್ಲಿ ಮೇಘಾಲಯದಲ್ಲಿ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯಲಾಗಿದೆ.

ಏನಿದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)?
ಪ್ರಮುಖವಾಗಿ ಆಂತರಿಕ ಗಲಭೆಯನ್ನು ತಡೆಯಲು ಅಸಮರ್ಥವಾಗಿರುವ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಇದನ್ನು ಜಾರಿಗೊಳಿಸಲಾಗಿದೆ ಎಂದು AFSPA ಕಾಯ್ದೆಯಲ್ಲಿ ಉಲ್ಲೇಖ ಮಾಡಲಾಗಿದೆ. AFSPA ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನು ವಿನಾಯಿತಿಯನ್ನು ನೀಡಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಯಾರೊಬ್ಬರ ಮೇಲೆ ಗುಂಡು ಹಾರಿಸುವುದು, ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸುವುದು, ಯಾವುದೇ ವಾಹನ ಅಥವಾ ಹಡಗನ್ನು ನಿಲ್ಲಿಸುವುದು ಮತ್ತು ಹುಡುಕುವುದು ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿಷೇಧಿಸುವುದು ಮೊದಲಾದ ಅಧಿಕಾರಗಳು ಇದರಲ್ಲಿ ಸೇರಿದೆ. ನಾಗರಿಕರು ಬಂದೂಕು ಹೊಂದುವುದು ಕೂಡಾ ಈ ಕಾಯ್ದೆಯಡಿಯಲ್ಲಿ ನಿಷೇಧವಾಗಿದೆ. ಹಾಗೆಯೇ ಈ ಕಾಯ್ದೆಯು ಕಾನೂನು ನಿಯೋಜಿತ ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ಸಹ ನೀಡುತ್ತದೆ.

ಈ ಕಾಯ್ದೆ ಯಾಕಿಷ್ಟು ವಿವಾದ ಸೃಷ್ಟಿ ಮಾಡಿದೆ?
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಹೆಸರೇ ಹೇಳುವಂತೆ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಆದರೆ ಈ ವಿಶೇಷ ಅಧಿಕಾರದ ನೆಪದಲ್ಲಿ ಭದ್ರತಾ ಪಡೆಗಳು ಹಲವಾರು ಪ್ರದೇಶಗಳಲ್ಲಿ ನಕಲಿ ಎನ್‌ಕೌಂಟರ್ ಮಾಡಿದೆ ಹಾಗೂ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ ಎಂದು ಅನೇಕ ಆರೋಪಗಳು ಕೇಳಿ ಬಂದಿದೆ. ಮಣಿಪುರದಲ್ಲಿ 2000 ಮತ್ತು 2012 ರ ನಡುವೆ ಕನಿಷ್ಠ 1,528 ಹತ್ಯೆಗಳು ನಡೆದಿದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಐಪಿಎಲ್) ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಪೈಕಿ ಹಲವಾರು ಮಂದಿ ಯಾವುದೇ ಆರೋಪವನ್ನು ಮಾಡಿದವರು ಅಲ್ಲ, ಸಾಮಾನ್ಯ ನಾಗರಿಕರು ಎಂದು ಕೂಡಾ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಈ ವಿಶೇಷ ಅಧಿಕಾರವನ್ನು ಉಪಯೋಗಿಸಿ ಹಲವಾರು ಮಂದಿಯನ್ನು ಬಂಧನ ಮಾಡಲಾಗಿದೆ ಹಾಗೂ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಕಾಯ್ದೆಯನ್ನು ಇರೋಮ್ ಶರ್ಮಿಳಾರಂತ ಸಾಮಾಜಿಕ ಕಾರ್ಯಕರ್ತರು ಟೀಕೆ ಮಾಡಿದ್ದಾರೆ. ಈ ಕಾನೂನಿನ ವಿರುದ್ಧ ಸುಮಾರು 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಾರೆ. ಇನ್ನು ಇತ್ತೀಚೆಗೆ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಡಿಸೆಂಬರ್ 4 ರಂದು ನಾಗಾಲ್ಯಾಂಡ್‌ನಲ್ಲಿ 14 ನಾಗರಿಕರು ಸಾವನ್ನಪ್ಪಿದರು ಮತ್ತು 30 ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಿಂದಾಗಿ ಈ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯು ಹೆಚ್ಚು ವಿವಾದವನ್ನು ಸೃಷ್ಟಿ ಮಾಡಿದೆ.

ಚುನಾವಣೆಯ ಪ್ರಮುಖ ವಿಚಾರವಾದ AFSPA ರದ್ಧತಿ
ಮಣಿಪುರದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಈ AFSPA ರದ್ಧತಿ ಮಾಡಬೇಕು ಎಂಬ ವಿಚಾರವು ಪ್ರಮುಖ ಚುನಾವಣಾ ವಿಚಾರವಾಗಿದೆ. ಜೆಪಿಯ ಎರಡು ಪ್ರಮುಖ ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಈಗಾಗಲೇ ಎಎಫ್‌ಎಸ್‌ಪಿಎ ಅನ್ನು ರದ್ದು ಮಾಡುವಂತೆ ಆಗ್ರಹ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಕೂಡಾ ಈ ಕಾಯ್ದೆ ರದ್ದು ಮಾಡಲು ಆಗ್ರಹ ಮಾಡಿದೆ. ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಎಎಫ್‌ಎಸ್‌ಪಿಎ ರದ್ದು ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಬಳಿ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಕೀಶಮ್ ಮೇಘಚಂದ್ರ ಹೇಳಿದ್ದಾರೆ. ಇಡೀ ರಾಜ್ಯದಿಂದ ಎಎಫ್‌ಎಸ್‌ಪಿಎಯನ್ನು ತಕ್ಷಣವೇ ತೆಗೆದುಹಾಕಲು ಮಣಿಪುರ ಕ್ಯಾಬಿನೆಟ್ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಕೂಡಾ ಆಗ್ರಹ ಮಾಡಿದ್ದಾರೆ. ಇನ್ನು ಈ ಹಿಂದೆ ಮಣಿಪುರದ ಏಳು ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ಸರ್ಕಾರ ಎಎಫ್‌ಎಸ್‌ಪಿಎ ತೆಗೆದುಹಾಕಿತ್ತು ಎಂದು ಮೇಘಚಂದ್ರ ಹೇಳಿದ್ದಾರೆ. ಇನ್ನು ಈ ಕಾಯ್ದೆ ರದ್ಧತಿಯನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. "2022 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ AFSPA ರದ್ಧತಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಮಣಿಪುರದಲ್ಲಿ ಚುನಾವಣಾ ಪ್ರಚಾರ ಕಾರ್ಯ ಹೇಗಿದೆ?
ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಮತ್ತು ಗೋವಾ ಜೊತೆಗೆ 60 ವಿಧಾನಸಭೆ ಸ್ಥಾನಗಳನ್ನು ಹೊಂದಿರುವ ಮಣಿಪುರದಲ್ಲಿ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ. ಈ ಹಿನ್ನೆಲೆ ಮಣಿಪುರದಲ್ಲಿ ಬಿಜೆಪಿ, ಕಾಂಗ್ರೆಸ್, ಎನ್‌ಪಿಪಿ ಸೇರಿದಂತೆ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅಕ್ಟೋಬರ್‌ನಿಂದ ಮೂರು ಬಾರಿ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅನೇಕ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಕಾಂಗ್ರೆಸ್ ಕೂಡಾ ಚುನಾವಣಾ ಪ್ರಚಾರವನ್ನು ಆರಂಭ ಮಾಡಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಎನ್‌ಪಿಪಿ ಅಧ್ಯಕ್ಷ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಮತ್ತು ಇತರ ಅನೇಕ ರಾಜಕಾರಣಿಗಳು ಸಹ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಸಾಂಸ್ಥಿಕ ನೆಲೆಯನ್ನು ಹೊಂದಿರುವ ಎನ್‌ಪಿಪಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಬೆಂಬಲದೊಂದಿಗೆ ಆಡಳಿತಾರೂಢ ಬಿಜೆಪಿ 2017 ರಿಂದ ಸರ್ಕಾರವನ್ನು ನಡೆಸುತ್ತಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications