Mahalaya Amavasya 2025: ಇಂದು ಮಹಾಲಯ ಅಮಾವಾಸ್ಯೆ: ಈ ಕೆಲಸಗಳನ್ನು ಯಾವ ಕಾರಣಕ್ಕೂ ಮಾಡಲೇಬೇಡಿ
Mahalaya Amavasya 2025: ಇಂದು ಎಲ್ಲೆಡೆ ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಅಗಲಿದ ಪೂರ್ವಜರ ಆತ್ಮಗಳನ್ನು ಗೌರವಿಸಿ, ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಈ ಮಹಾಲಯ ಅಮಾವಾಸ್ಯೆಯ ಪ್ರತೀತಿ. ಈ ದಿನದಂದು ತರ್ಪಣ ಮತ್ತು ದಾನ ಕಾರ್ಯಗಳ ಮೂಲಕ ನಮ್ಮ ಪೂರ್ವಜರಿಗೆ ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸುವುದು ಈ ಆಚರಣೆಯ ಭಾಗ ಎಂದು ನಂಬಲಾಗಿದೆ. ಇದರಿಂದ ನಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುವುದಲ್ಲದೆ ಅವರ ಆಶೀರ್ವಾದವನ್ನು ಪಡೆಯಲು, ನಮ್ಮ ಜೀವನದಲ್ಲಿ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ರಕ್ಷಣೆಯನ್ನು ತರುತ್ತವೆ ಎಂಬ ನಂಬಿಕೆ ಇದೆ.
ಸುಮಾರು 16 ದಿನಗಳ ಪಿತೃ ಪಕ್ಷದ ಕೊನೆಯ ದಿನದಂದು ಮಹಾಲಯ ಅಮಾವಾಸ್ಯೆಯ ವಿಧಿವಿಧಾನಗಳು ನೆರವೇರುತ್ತವೆ. ಅಂದು ತಮ್ಮ ಮನೆಯ ಎಲ್ಲ ಮೃತ ಪಿತೃಗಳನ್ನು ಸ್ಮರಿಸುವ ಮೂಲಕ ಈ ದಿನವನ್ನು ಅವರಿಗಾಗಿ ಮೀಸಲಿಡಲಾಗಿದೆ. ಈ ವಿಶೇಷವಾದ ದಿನದಂದು ಏನು ಮಾಡಬೇಕು, ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿ ತಿಳಿಯಿರಿ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಮಹಾಲಯ ಅಮಾವಾಸ್ಯೆಯ ದಿನದಂದು ಅಗಲಿದ ಪೂರ್ವಜರ ಆತ್ಮಗಳು ಭೂಮಿಗೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ. ಈ ದಿನವನ್ನು "ಸರ್ವಪಿತೃ ಅಮಾವಾಸ್ಯೆ" ಅಥವಾ "ಪಿತೃ ಮೋಕ್ಷ ಅಮಾವಾಸ್ಯೆ" ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತಮ್ಮ ಪೂರ್ವಜರ ಮರಣದ ನಿರ್ದಿಷ್ಟ ಮಾಹಿತಿ ಗೊತ್ತಿಲ್ಲದವರೂ ಕೂಡ ಈ ದಿನವೇ ಅವರನ್ನು ಪೂಜಿಸಬಹುದು. ಹಾಗಾಗಿ ಈ ದಿನವು 15 ದಿನಗಳ ಪಿತೃ ಪಕ್ಷದ ಮುಕ್ತಾಯವನ್ನು ಸೂಚಿಸುತ್ತದೆ. ಇದು ಅಗಲಿದ ಪೂರ್ವಜರಿಗೆ ಶ್ರಾದ್ಧ, ತರ್ಪಣ ಮತ್ತು ಇತರ ಆಚರಣೆಗಳನ್ನು ಮಾಡಲು ಕೊನೆಯ ಅವಕಾಶ ಎನ್ನಲಾಗಿದೆ.

ಈ ಆಚರಣೆಗಳಿಂದ ನಮ್ಮ ಪೂರ್ವಜರಿಂದ ನಮಗೆ ಬಂದಿರುವ ಯಾವುದೇ ಕರ್ಮದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ನಂಬಲಾಗುತ್ತದೆ. ಈ ದಿನ ಅವರ ಆಶೀರ್ವಾದವು ನಮಗೆ ಉತ್ತಮ ಆರೋಗ್ಯ, ಸಮೃದ್ಧಿ ತರುತ್ತದೆಯಂತೆ. ಈ ದಿನ ಪೂರ್ವಜರಿಗೆ ನೀರು, ಎಳ್ಳು ಮತ್ತು ಹೂವು ಅರ್ಪಿಸುತ್ತಾರೆ. ಇದನ್ನೇ ತರ್ಪಣ ಎಂದು ಕರೆಯುತ್ತಾರೆ. ಇಂದು ಪಿಂಡ ಪ್ರದಾನವೂ ನೆರವೇರುತ್ತದೆ. ಕೆಲವರು ಸಸ್ಯಾಹಾರ, ಮಾಂಸಾಹಾರ ಸೇರಿ ತಮಗೆ ಮನೆಯವರಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಎಡೆಯಲ್ಲಿಡುತ್ತಾರೆ.
ಈ ದಿನ ಬಡವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರ, ಬಟ್ಟೆ, ಹಣ ಅಥವಾ ಇತರ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಎಂಬ ನಂಬಿಕೆ ಇದೆ. ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದೂ ಶುಭ ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಈ ವಿಶೇಷವಾದ ದಿನ ಕೆಲವು ವಿಚಾರಗಳಿಗೆ ನಿರ್ಬಂಧವೂ ಇದೆ. ಈ ದಿನ ಏನೆಲ್ಲ ಮಾಡಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಏನೆಲ್ಲ ಮಾಡಬಾರದು?
ಹಿರಿಯರು ಹೇಳುವಂತೆ ಮಹಾಲಯ ಅಮಾವಾಸ್ಯೆಯ ದಿನದಂದು ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಬಾರದು. ತಮ್ಮ ಕೂದಲು ಕತ್ತರಿಸಬಾರದು, ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಬೇಕು. ಮಾಂಸಾಹಾರ ಸೇವಿಸಬಾರದು (ಆದರೆ ಕೆಲವೆಡೆ ಮಾಂಸಾಹಾರ ಇಟ್ಟು ಪೂಜಿಸುವ ರೂಢಿ ಇದೆ). ಯಾವುದೇ ಹೊಸ ಬಿಸಿನೆಸ್ ಆರಂಭಿಸಬಾರದು. ಈ ದಿನ ಯಾವುದೇ ಕೋಪ-ಜಗಳಗಳು ಒಳ್ಳೆಯದಲ್ಲ. ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ದಾನ-ಧರ್ಮ ಮಾಡಬಹುದು. ಪೂಜೆ ಮಾಡುವಾಗ ಭಕ್ತಿಯಿಂದ ಪಾಲ್ಗೊಳ್ಳಬೇಕು. ಹಗಲಿನಲ್ಲಿ ನಿದ್ದೆ ಮಾಡಬಾರದು. ಮದ್ಯಪಾನ ಮಾಡಬಾರದು. ತಿನ್ನುವ ಆಹಾರವನ್ನು ವ್ಯರ್ಥ ಮಾಡಬಾರದು. ಮನೆಯ ಬಾಗಿಲಲ್ಲಿ ರಂಗೋಲಿ ಹಾಕಬಾರದು ಎಂಬ ನಂಬಿಕೆ ಇದೆ.












Click it and Unblock the Notifications