ಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮುದುಡಲಿದೆ ಕಮಲ
ನವದೆಹಲಿ, ಮೇ 19: ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಏರುವ ಬಿಜೆಪಿ ಕನಸು ಈಡೇರಲಿದೆಯೇ ಅಥವಾ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಮೈತ್ರಿಕೂಟದ ಬಯಕೆಗೆ ಮತದಾರರು ಆಶೀರ್ವಾದ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಮೇ 23ರ ನಂತರ ದೊರಕಲಿದೆ.
ಯಾವ ರಾಜ್ಯಗಳಲ್ಲಿ ಯಾವ ಪಕ್ಷಗಳಿಗೆ ಎಷ್ಟು ಮತಗಳು ದೊರಕಲಿವೆ. ಈ ಚುನಾವಣೆಯ ಬಳಿಕ ಎಲ್ಲೆಲ್ಲಿ ಯಾವ ರೀತಿಯ ರಾಜಕೀಯ ಚಿತ್ರಣ ಬದಲಾವಣೆಯಾಗಲಿವೆ ಎಂಬುದೂ ಕುತೂಹಲ ಕೆರಳಿಸಿವೆ. ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಚುನಾವಣೋತ್ತರ ಸಮೀಕ್ಷೆಗಳು ಮಾಡುತ್ತಿವೆ. ಒಂದೊಂದು ಸಮೀಕ್ಷೆಗಳು ತರಹೇವಾರಿ ಫಲಿತಾಂಶವನ್ನು ಅಂದಾಜಿಸಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕೆಲವು ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿವೆ. ಹೆಚ್ಚಿನ ಸಮೀಕ್ಷೆಗಳ ಪ್ರಕಾರ ಎನ್‌ಡಿಎ ಪುನಃ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ. ಇನ್ನು ಕೆಲವು ಸಮೀಕ್ಷೆಗಳು ಯಾವ ಮೈತ್ರಿಕೂಟವೂ ಸರಳ ಬಹುಮತ ಪಡೆದುಕೊಳ್ಳುವುದಿಲ್ಲ ಎಂದಿವೆ. ಆದರೆ, ಯಾವ ಸಮೀಕ್ಷೆಯಲ್ಲಿಯೂ ಮಹಾಮೈತ್ರಿಕೂಟ ಸುಲಭವಾಗಿ ಅಧಿಕಾರ ಪಡೆದುಕೊಳ್ಳಲಿದೆ ಎಂದು ಹೇಳಿಲ್ಲ. ಎಬಿಪಿ ನ್ಯೂಸ್ ಕೂಡ ಕೇಂದ್ರದಲ್ಲಿ ಯಾವ ಮೈತ್ರಿಕೂಟ ಕೂಡ ಬಹುಮತ ಪಡೆದುಕೊಳ್ಳುವುದಿಲ್ಲ ಎಂದಿದೆ.
ಎಬಿಪಿ ನ್ಯೂಸ್ ಸಮೀಕ್ಷೆ ಅನ್ವಯ ಬಿಜೆಪಿ 217 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎನ್‌ಡಿಎ ಮೈತ್ರಿಕೂಟ ಒಟ್ಟು 267 ಸೀಟುಗಳಲ್ಲಿ ಗೆದ್ದರೆ, ಕಾಂಗ್ರೆಸ್ ಮೈತ್ರಿಕೂಟ 127 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಇತರರು 148 ಸೀಟುಗಳಲ್ಲಿ ಜಯಗಳಿಸಲಿದ್ದಾರೆ.
ದಕ್ಷಿಣ ಭಾರತದಲ್ಲಿ ಎನ್‌ಡಿಎ ಚಿತ್ರಣ ಬೇರೆಯದೇ ರೀತಿಯಲ್ಲಿ ಇರಲಿದೆ ಎನ್ನುತ್ತದೆ ಸಮೀಕ್ಷೆ.

ದಕ್ಷಿಣದಲ್ಲಿ ಯುಪಿಎಗೆ ಸಿಂಹಪಾಲು
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭರ್ಜರಿ ಜಯಗಳಿಸಲಿದೆ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸೇರಿ ಇರುವ 129 ಕ್ಷೇತ್ರಗಳ ಪೈಕಿ 53 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಎನ್‌ಡಿಎ ಕೇವಲ 27ರಲ್ಲಿ ಗೆಲುವು ಕಾಣಲಿದೆ. ಇತರೆ ಪಕ್ಷಗಳು ಒಟ್ಟು 48ರಲ್ಲಿ ಗೆಲುವು ಸಾಧಿಸಲಿವೆ.

ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಲ
ಎಬಿಪಿ ನ್ಯೂಸ್ ಪ್ರಕಾರ ರಾಜ್ಯದಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಜಯಭೇರಿ ಭಾರಿಸಲಿದೆ. ಅಂದರೆ ಕಳೆದ ಸಾಲಿಗಿಂತ ಎರಡು ಸ್ಥಾನಗಳನ್ನು ಕಳೆದುಕೊಳ್ಳಲಿದೆ. 28 ಕ್ಷೇತ್ರಗಳ ಪೈಕಿ ಉಳಿದ 13 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪಾಲಾಗಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಮೈತ್ರಿಕೂಟದ ಫಲವಾಗಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎರಡು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿವೆ. ಅದರಲ್ಲಿ ಜೆಡಿಎಸ್ ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾಗೆ ಆಘಾತ
ಪಶ್ಚಿಮ ಬಂಗಾಳದಲ್ಲಿ ಮೋದಿ ಮತ್ತು ಅಮಿತ್ ಶಾ ಜೋಡಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಆಘಾತ ನೀಡಲಿದೆ. ಇಲ್ಲಿನ 42 ಕ್ಷೇತ್ರಗಳಲ್ಲಿ ಬಿಜೆಪಿ 16 ಸೀಟುಗಳಲ್ಲಿ ಗೆಲ್ಲಲಿದೆ. ಕಳೆದ ಚುನಾವಣೆಯಲ್ಲಿ ಎರಡು ಸೀಟುಗಳನ್ನು ಗೆದ್ದು ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಂಡಿತ್ತು. ಆದರೆ, ಆಡಳಿತಾರೂಢ ಟಿಎಂಸಿ 34 ರಿಂದ 24 ಸೀಟುಗಳಿಗೆ ಕುಸಿಯಲಿದೆ. ಉಳಿದ ಎರಡು ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ.

ರಾಜಸ್ಥಾನ- ಗುಜರಾತ್‌ನಲ್ಲಿ ಬಿಜೆಪಿ ಅಬ್ಬರ
ರಾಜಸ್ಥಾನದಲ್ಲಿ ಬಿಜೆಪಿ ಇತ್ತೀಚೆಗೆ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ರಚಿಸಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ. ಇಲ್ಲಿನ 25 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳು ಬಿಜೆಪಿಗೆ ಸಿಗಲಿವೆ. ಕಾಂಗ್ರೆಸ್ ಕೇವಲ 6 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಗುಜರಾತ್‌ನಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ಕಮಲ ಪಕ್ಷ, ಎರಡು ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿದೆ. ಇಲ್ಲಿ ಬಿಜೆಪಿ 24 ಸೀಟುಗಳಲ್ಲಿ ಗೆಲ್ಲಲಿದೆ.











Click it and Unblock the Notifications