Maha Kumbh Mela 2025: ಮಹಾಕುಂಭ ಮೇಳಕ್ಕೆ ಬಂದ ಸ್ಟೀವ್ ಜಾಬ್ಸ್ ಪತ್ನಿಗೆ "ಕಮಲಾ" ಎಂದು ನಾಮಕರಣ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕಾಗಿ ಆ್ಯಪಲ್ ಸಹ ಸಂಸ್ಥಾಪಕರಾಗಿದ್ದ (Steve Jobs) ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ (Laurene Powell Jobs) ಅವರು ಭಾರತಕ್ಕೆ ಬಂದಿಳಿದಿದ್ದಾರೆ. ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭಕ್ಕೆ ಭೇಟಿ ನೀಡಲು ಅವರು ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಯಾಗ್‌ರಾಜ್‌ಗೆ ಕಾಲಿಟ್ಟಿದ್ದಾರೆ.
ಅಲ್ಲಿನ ಪ್ರಖ್ಯಾತ ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರೊಂದಿಗೆ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನೂ ಪಡೆದುಕೊಂಡಿದ್ದಾರೆ. ಈ ವೇಳೆ ಸ್ಟೀವ್ ಜಾಬ್ಸ್ ಅವರ ಪತ್ನಿಗೆ ಹಿಂದೂ ಹೆಸರನ್ನು ಇಡಲಾಗಿದೆ ಎಂದು ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಮಹಾರಾಜ್ ತಿಳಿಸಿದ್ದಾರೆ. ಅದರಂತೆ ಲಾರೆನ್ ಪೊವೆಲ್ ಅವರಿಗೆ 'ಕಮಲಾ' ಎಂಬ ಹಿಂದೂ ಹೆಸರನ್ನು ನಾಮಕರಣ ಮಾಡಲಾಗಿದೆ.

ಲಾರೆನ್ ಪೊವೆಲ್ ಜಾಬ್ಸ್ ಅವರು ಇಲ್ಲಿಗೆ ತನ್ನ ಗುರುಗಳನ್ನು ಭೇಟಿ ಮಾಡಲು ಬಂದಿದ್ದಾರೆ. ನಾವು ಅವರಿಗೆ ಕಮಲ ಎಂದು ಹೆಸರಿಟ್ಟಿದ್ದೇವೆ. ಮತ್ತು ಅವರು ನಮಗೆ ಮಗಳಿದ್ದಂತೆ ಎಂದಿದ್ದಾರೆ. ಅವಳರು ಭಾರತಕ್ಕೆ ಬರುತ್ತಿರುವುದು ಇದು ಎರಡನೇ ಬಾರಿ. ಮಹಾಕುಂಭಕ್ಕೆ ಎಲ್ಲರಿಗೂ ಸ್ವಾಗತ ಎಂದು ಆಹ್ವಾನಿಸಿದ್ದಾರೆ. ಪೊವೆಲ್ ತನ್ನ ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಮುಖ್ಯವಾಗಿ ಇಲ್ಲಿ ಧ್ಯಾನ ಮಾಡಲು ಬರುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಲಾರೆನ್ ಅವರು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜನವರಿ 13ರಿಂದ ಪ್ರಾರಂಭವಾಗುವ ಪ್ರಯಾಗ್ರಾಜ್ ಮಹಾ ಕುಂಭ 2025ರಲ್ಲಿ ಅವರು ಭಾಗಿಯಾಗಲಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಲಾರೆನ್ ಅವರು ಸನಾತನ ಧರ್ಮದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಕಲ್ಪವಾಸಕ್ಕಾಗಿ ನಿರಂಜನಿ ಅಖಾರದ ಕ್ಯಾಂಪ್ ಪ್ರದೇಶದಲ್ಲಿ ಉಳಿಯುವ ಸಾಧ್ಯತೆಯಿದೆ. ಸ್ಟೀವ್ ಜಾಬ್ಸ್ ಅವರು ಕೂಡ ಆಧ್ಯಾತ್ಮಿಕ ಬೋಧನೆಗಳ ಹುಡುಕಾಟದಲ್ಲಿ 1974ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಲಾರೆನ್ ಅವರು ತನ್ನ ಗುರುಗಳನ್ನು ಭೇಟಿ ಮಾಡಲು ಭಾರತಕ್ಕೆ ಭೇಟಿ ನೀಡಿದ್ದು, ಆಕೆಯ ವಾಸ್ತವ್ಯದ ಸಮಯದಲ್ಲಿ ಅವರು ಇತರ ಯತಿಗಳನ್ನು ಭೇಟಿಯಾಗುತ್ತಾರೆ. ಇಲ್ಲಿನ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಕಾಶಿ ವಿಶ್ವನಾಥ ಧಾಮದಲ್ಲಿ ದರ್ಶಕರು ಹೇಳಿದ್ದಾರೆ. ಲಾರೆನ್ ಅವರಿಗೆ ಆಸಕ್ತಿಯಿದ್ದರೆ ಅಖಾರಾ ಮೆರವಣಿಗೆಯಲ್ಲಿ ಭಾಗವಹಿಸುವ ಸಾಧ್ಯತೆಯೂ ಇದೆ. ಲಾರೆನ್ ಸಂತರನ್ನು ಭೇಟಿಯಾಗಲು ಮಹಾಕುಂಭದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಆಚಾರ್ಯ ಕೈಲಾಶಾನಂದರು ಹೇಳಿದ್ದಾರೆ.
ಈ ಹಿಂದೆಯೇ ಲಾರೆನ್ ಕುಂಭಮೇಳಕ್ಕೆ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಂತೆ ಅವರು ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದಾರೆ. ಮಹಾ ಕುಂಭಮೇಳವು ಜನವರಿ 13ರಂದು ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗಲಿದ್ದು, ಆರು ವಾರಗಳ ಕಾಲ ನೆರವೇರಲಿದೆ. ಇನ್ನು ಈ ಧಾರ್ಮಿಕ ಹಬ್ಬಕ್ಕೆ 400 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು ಎಂದೇ ಹೇಳಲಾಗುತ್ತಿದೆ. ಕುಂಭಮೇಳವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು ಭಾರತದಾದ್ಯಂತ ಹಾಗೂ ಜಗತ್ತಿನ ಮೂಲೆಮೂಲೆಯಿಂದ ಜನ ಇಲ್ಲಿಗೆ ಭೇಟಿ ನೀಡಲಿದ್ದಾರೆ.












Click it and Unblock the Notifications