ಮತ್ತೆ ಬಂದ ಜನಸಂಖ್ಯೆ ನಿಯಂತಣ ಮಸೂದೆ; ಏನಿದರ ಮರ್ಮ?
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆ ಮತ್ತೆ ಸುದ್ದಿಯಲ್ಲಿದೆ. ಬಿಜೆಪಿ ನಾಯಕ ಹಾಗು ಗೋರಖಪುರ್ ಸಂಸದ ರವಿ ಕಿಶನ್ ಖಾಸಗಿಯಾಗಿ ಜನಸಂಖ್ಯೆ ನಿಯಂತ್ರಣ ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ.
ದೇಶದಲ್ಲಿ ಜನಸಂಖ್ಯೆ ವಿಪರೀತವಾಗಿ ಏರುತ್ತಿದ್ದು, ಅದನ್ನು ನಿಯಂತ್ರಿಸುವುದು ಅಗತ್ಯ. ಅದಾದಾಗ ಮಾತ್ರ ಭಾರತ ವಿಶ್ವ ಗುರು ಆಗಬಲ್ಲುದು ಎಂದು ರವಿ ಕಿಶನ್ ತಿಳಿಸಿದ್ದಾರೆ.
ಭಾರತದಲ್ಲಿ ಸದ್ಯ 140 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಕೆಲವೇ ವರ್ಷಗಳಲ್ಲಿ ಚೀನಾ ಜನಸಂಖ್ಯೆಯನ್ನೂ ಭಾರತ ಮೀರಿ ಹೋಗುತ್ತದೆ ಎಂದು ಕೆಲ ವರದಿಗಳು ಹೇಳುತ್ತವೆ. ಭಾರತದ ಅಭಿವೃದ್ಧಿಗೆ ಜನಸಂಖ್ಯೆ ತೊಡಕಾಗಿದೆ. ಇದು ಹೀಗೇ ಸಾಗಲು ಬಿಟ್ಟರೆ ಭಾರತದಲ್ಲಿ ಬಡತನ ತಾಂಡವವಾಡಬಹುದು ಎಂದು ಹೇಳಲಾಗುತ್ತದೆ.
ಜನಸಂಖ್ಯೆ ಮಸೂದೆ ಇದೂವರೆಗೂ 35ಕ್ಕೂ ಹೆಚ್ಚು ಬಾರಿ ಸಂಸತ್‌ನಲ್ಲಿ ಮಂಡನೆಯಾಗಿದೆ. ಒಮ್ಮೆಯೂ ಅನುಮೋದನೆ ಸಿಕ್ಕಿಲ್ಲ. 2019ರಲ್ಲೂ ಮಸೂದೆ ಮಂಡಿಲಾಗಿತ್ತು. ಬಿಜೆಪಿಯ ಹಲವು ನಾಯಕರು ಜನಸಂಖ್ಯೆ ನಿಯಂತ್ರಣ ಕಾನೂನು ತರಬೇಕೆಂಬ ಅಭಿಪ್ರಾಯ ಆಗಾಗ್ಗೆ ವ್ಯಕ್ತಪಡಿಸುತ್ತಾ ಬರುತ್ತಾರೆ. ಬಿಜೆಪಿಯ ಚುನಾವಣಾ ಆಶ್ವಾಸನೆಗಳಲ್ಲಿ ಇದೂ ಪ್ರಮುಖವಾದುದು.
|
ಖಾಸಗಿ ಸದಸ್ಯರ ಮಸೂದೆಗಿಲ್ಲ ಬೆಂಬಲ
ಭಾರತದ ಸಂಸತ್‌ನಲ್ಲಿ ಖಾಸಗಿ ಸದಸ್ಯರ ಮಸೂದೆಗೆ ಅನುಮೋದನೆ ಸಿಕ್ಕಿದ್ದು ಅಪರೂಪ. ಪಿಟಿಐನ ಒಂದು ವರದಿ ಪ್ರಕಾರ 1970ರ ನಂತರ ಸಂಸತ್‌ನಲ್ಲಿ ಮಂಡನೆಯಾದ ಯಾವ ಖಾಸಗಿ ಸದಸ್ಯರ ಮಸೂದೆಗೂ ಅನುಮೋದನೆ ಸಿಕ್ಕಿಲ್ಲವಂತೆ.
ಇದೀಗ ಬಿಜೆಪಿ ಸಂಸದ ರವಿ ಕಿಶನ್ ಜನಸಂಖ್ಯಾ ನಿಯಂತ್ರಣ ಖಾಸಗಿ ಸದಸ್ಯರ ಮಸೂದೆಯನ್ನು ಮಂಡನೆ ಮಾಡುವುದಾಗಿ ಹೇಳಿದ್ದಾರೆ.
"ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಜಾರಿಗೆ ತಂದಾಗ ಮಾತ್ರ ನಾವು ವಿಶ್ವ ಗುರು ಆಗಬಲ್ಲೆವು. ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವುದು ಮುಖ್ಯ. ಜನಸಂಖ್ಯೆ ಬೆಳೆಯುತ್ತಿರುವ ರೀತಿ ನೋಡಿದರೆ ಜನಸಂಖ್ಯಾ ಸ್ಫೋಟದತ್ತ ನಡೆಯುತ್ತಿದ್ದೇವೆ. ಈ ಮಸೂದೆಯನ್ನು ಮಂಡಿಸಲು ವಿಪಕ್ಷಗಳು ಅನುವು ಮಾಡಿಕೊಡಬೇಕು, ಮತ್ತು ನನ್ನ ವಾದವನ್ನು ಆಲಿಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಗೋರಖಪುರ್ ಸಂಸದರೂ ಆದ ರವಿ ಕಿಶನ್ ತಿಳಿಸಿದ್ದಾರೆ.

ಏನಿದು ಜನಸಂಖ್ಯೆ ಮಸೂದೆ?
2019ರ ಭಾರತದ ಜನಸಂಖ್ಯೆ ನಿಯಂತ್ರ ಮಸೂದೆ ಇದು. ಒಂದು ಜೋಡಿಗೆ ಎರಡು ಮಕ್ಕಳು ಇರಬೇಕೆಂಬುದು ಈ ಮಸೂದೆಯಲ್ಲಿನ ಪ್ರಮುಖ ಅಂಶ. ಹಾಗೆಯೇ, ಈ ನೀತಿ ಪ್ರಕಾರ ಹುಟ್ಟಿದ ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಉದ್ಯೋಗಾವಕಾಶ, ಆರೋಗ್ಯಪಾಲನೆ, ತೆರಿಗೆ ಕಡಿತ, ಗೃಹ ಸಾಲ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶವೂ ಈ ಮಸೂದೆಯಲ್ಲಿದೆ.
ಹಾಗೆಯೇ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಸರಕಾರಿ ಉದ್ಯೋಗದ ಅವಕಾಶ ನಿರಾಕರಣೆ, ಸರಕಾರದ ಸಬ್ಸಿಡಿಗಳ ಅಲಭ್ಯತೆ ಇತ್ಯಾದಿ ಕ್ರಮಗಳಿಗೆ ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.

ಸಂವಿಧಾನ ಏನು ಹೇಳುತ್ತದೆ?
ಎಷ್ಟು ಮಕ್ಕಳನ್ನು ಹೊಂದಬೇಕೆಂಬ ಆಯ್ಕೆ ಸ್ವಾತಂತ್ರ್ಯ ಪ್ರತೀ ದಂಪತಿಗೂ ಇರಬೇಕು ಎಂಬ ನಿರ್ಣಯವನ್ನು 1969ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಭಾರತದ ಸಂವಿಧಾನದ ಆರ್ಟಿಕಲ್ 16ರ ಪ್ರಕಾರ ಸರಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ ಮತ್ತು ಆರ್ಟಿಕಲ್ 21ರಲ್ಲಿ ಜೀವನ ಮತ್ತು ಸ್ವಾತಂತ್ರ್ಯ ರಕ್ಷಣೆಯ ಹಕ್ಕುಗಳನ್ನು ನೀಡಲಾಗಿದೆ. ಜನಸಂಖ್ಯೆ ನಿಯಂತ್ರಣ ಮಸೂದೆಯಂತಹ ನೀತಿಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂಬ ಅನಿಸಿಕೆ ಬಲವಾಗಿ ವ್ಯಕ್ತವಾಗಿದೆ.
ಹಾಗೆಯೇ, ಜನಸಂಖ್ಯೆ ನಿಯಂತ್ರಣ ಮಸೂದೆಯಲ್ಲಿ ವಿಚ್ಛೇದಿತ ದಂಪತಿಗೆ ಮಕ್ಕಳ ಹಕ್ಕು ಏನು, ಮುಸ್ಲಿಮರ ಮಕ್ಕಳ ಹಕ್ಕು ಏನು ಎಂಬುದನ್ನು ನಿರ್ದಿಷ್ಟಪಡಿಸಲಾಗಿಲ್ಲ. ಸಮಾನ ನಾಗರಿಕ ಸಂಹಿತೆ ಬರದೇ ಜನಸಂಖ್ಯೆ ನಿಯಂತ್ರಣ ಮಸೂದೆ ತರಲು ಅಸಾಧ್ಯ ಎಂಬ ಅಭಿಪ್ರಾಯವೂ ಇದೆ.

ಅಸ್ಸಾಂ, ಉ.ಪ್ರ.ದಲ್ಲಿ ಪ್ರಯೋಗ
ಭಾರತದ ಕೆಲ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ಚಿಂತನೆ ನಡೆಸಿವೆ. ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಈ ನಿಟ್ಟಿನಲ್ಲಿ ಪೂರಕವಾದ ಕೆಲ ಕಾನೂನುಗಳನ್ನು ತರಲಾಗಿದೆ.
2017ರಲ್ಲಿ ಅಸ್ಸಾಮ್ ವಿಧಾನಸಭೆಯಲ್ಲಿ "ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ" ಜಾರಿಗೆ ತರಲಾಯಿತು. ಅದರ ಪ್ರಕಾರ, ಎರಡು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳಿಗೆ ಸರಕಾರಿ ಉದ್ಯೋಗ ಸಿಗುವುದಿಲ್ಲ. ಸರಕಾರಿ ಉದ್ಯೋಗಿಗಳೆಲ್ಲರೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ.
2021ರಲ್ಲಿ ಈ ಕಾನೂನಿನಲ್ಲೂ ತಿದ್ದುಪಡಿ ತರಲಾಗಿದೆ. ಇದು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಯಾರಿಗೂ ಸರಕಾರಿ ಉದ್ಯೋಗ ಸಿಗದಂತೆ ನಿರ್ಬಂಧಿಸುತ್ತದೆ.
ಇನ್ನು, 2021ರಲ್ಲಿ ಉತ್ತರ ಪ್ರದೇಶದಲ್ಲೂ ಇಂಥದ್ದೇ ರೀತಿಯ ಕಾನೂನು ರೂಪಿಸಲಾಗಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಸರಕಾರದ ಸಬ್ಸಿಡಿಗಳು ಸಿಗುವುದಿಲ್ಲ. ಈ ಮಸೂದೆ ಇನ್ನೂ ಕರಡು ರೂಪದಲ್ಲಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications