ಬಿಸಿಗಾಳಿ vs ಬಿರುಗಾಳಿ, ಯಾವುದು ಡೇಂಜರ್? ಹೀಟ್‌ವೇವ್ ಸೃಷ್ಟಿ ಹೇಗೆ?
ಬೆಂಗಳೂರು, ಏ. 29: ಭಾರತದಲ್ಲಿ ವರ್ಷ ಕಳೆದಂತೆ ಸರಾಸರಿಯಾಗಿ ಉಷ್ಣಾಂಶ ತುಸುತುಸು ಏರಿಕೆ ಕಾಣುತ್ತಲೇ ಇದೆ. ಬೇಸಿಗೆ ಬಂತೆಂದರೆ ಜನರು ಶೆಖೆಗೆ ಬಸವಳಿದುಹೋಗುತ್ತಾರೆ. ಈ ವರ್ಷದ ಬೇಸಿಗೆ ದಾಖಲೆ ಮಟ್ಟದ ಉಷ್ಣಾಂಶ ಕಾಣುವ ಸಾಧ್ಯತೆ ಇದೆ. ಬೇಸಿಗೆ ಆರಂಭದಲ್ಲೇ ಮಾಮೂಲಿಗಿಂತ ಹೆಚ್ಚು ಉಷ್ಣತೆ ಇದೆ. ಬೇಸಿಗೆ ಉಚ್ಛ್ರಾಯ ಹಂತಕ್ಕೆ ಹೋದರೆ ಸಹಿಸಲು ಅಸಾಧ್ಯವೆನಿಸುವ ಮಟ್ಟಕ್ಕೆ ಬಿಸಿಗಾಳಿ ರಾಚಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಬಿಸಿಗಾಳಿ ದೇಶದ ಹಲವೆಡೆ ಮೂರು ದಿನಗಳ ಹಿಂದೇ ಆರಂಭಗೊಂಡಿದೆ. ಮುಂಬರುವ ದಿನಗಳು ಭಯಾನಕವಾಗಿರಲಿವೆ.
ಹೀಟ್ ವೇವ್ ಎಂದರೇನು?
ಒಂದು ಪ್ರದೇಶದಲ್ಲಿ ಈ ಸಂದರ್ಭದಲ್ಲಿ ಈ ಹಿಂದೆ ದಾಖಲಾದ ಸರಾಸರಿ ಉಷ್ಣಾಂಶಕ್ಕಿಂತ ತುಸು ಹೆಚ್ಚೇ ಎನಿಸುವಷ್ಟು ಉಷ್ಣಾಂಶ ಇದ್ದರೆ ಅದನ್ನ ಹೀಟ್ ವೇವ್ ಎಂದು ಪರಿಗಣಿಸಬಹುದು ಎಂಬುದು ತಜ್ಞರ ಅನಿಸಿಕೆ. ಅಂದರೆ, ಸದಾ ಕೂಲ್ ಆಗಿರುವ ಊಟಿಯಂಥ ಪ್ರದೇಶದಲ್ಲಿ 35 ಡಿಗ್ರಿ ಉಷ್ಣಾಂಶ ದಾಖಲಾದಲ್ಲಿ ಅದು ಬಿಸಿಗಾಳಿ ಎಂದು ವರ್ಗೀಕರಿಸಬಹುದು. ದಿಲ್ಲಿ, ಇಂದೋರ್, ಜೈಪುರ, ನಾಗಪುರದಂಥ ಭಯಂಕರ ಬಿಸಿಲಿರುವ ಪ್ರದೇಶಗಳಲ್ಲಿ 48 ಡಿಗ್ರಿ ದಾಟಿದರೆ ಅದು ಹೀಟ್ ವೇವ್ ಎನಿಸುತ್ತದೆ.
ಹೀಟ್ ವೇವ್ ಹೇಗೆ ನಿರ್ಮಾಣವಾಗುತ್ತದೆ?:
ಒಂದೇ ಸ್ಥಳದಲ್ಲಿ ಬಹಳ ಕಾಲ ಗಾಳಿ ಸಿಕ್ಕಿಕೊಂಡಾಗ ಹೀಟ್ ವೇವ್ ನಿರ್ಮಾಣವಾಗುತ್ತದೆ. ಒಂದು ಪ್ರದೇಶದಲ್ಲಿ ಮೇಲಿನ ವಾತಾವರಣದಲ್ಲಿ ಅಧಿಕ ಒತ್ತಡ (High Pressure System) ಏರ್ಪಟ್ಟು ಹಲವು ದಿನಗಳವರೆಗೆ ಒಂದೇ ಕಡೆ ಇದ್ದಾಗ ಉಷ್ಣ ಅಲೆ ಸೃಷ್ಟಿಯಾಗಲು ಅರಂಭವಾಗುತ್ತದೆ. ಈ ಹೈಪ್ರೆಷರ್ ವಾತಾವರಣವು ಗಾಳಿ ಮೇಲೆರದಂತೆ ತಡೆಯೊಡ್ಡುತ್ತದೆ. ಗಾಳಿ ಚಲಿಸಲು ಸಾಧ್ಯವಾಗದೇ ಒಂದೇ ಕಡೆ ಬಹಳ ದಿನ ಇದ್ದರೆ ಅದು ಬಿಸಿಯಾಗುತ್ತಾ ಹೋಗುತ್ತದೆ. ಅದರ ಪರಿಣಾಮವೇ ಅಸಹಜ ಎನಿಸುವಷ್ಟು ಹೆಚ್ಚು ಉಷ್ಣಾಂಶ ದಾಖಲಾಗುವುದು. ಅದೇ ಉಷ್ಣ ಅಲೆ ಎನ್ನುವುದು.

ಬಿರುಗಾಳಿಯಂಥ ವಿಕೋಪಕ್ಕಿಂತಲೂ ಡೇಂಜರ್ ಈ ಉಷ್ಣ ಅಲೆ:
ಮೇಲ್ನೋಟಕ್ಕೆ ನಮಗೆ ಚಂಡಮಾರುತ, ಬಿರುಗಾಳಿ, ಸಿಡಿಲು ಇತ್ಯಾದಿ ನೈಸರ್ಗಿಕ ವಿಕೋಪಗಳು ಬಹಳ ಅಪಾಯಕಾರಿ ಎನಿಸಬಹುದು. ಆದರೆ, ಅಮೆರಿಕ ಮೊದಲಾದ ದೇಶಗಳಲ್ಲಿನ ದಾಖಲೆಗಳ ಪ್ರಕಾರ ಈ ಮೇಲಿನ ನೈಸರ್ಗಿಕ ವಿಕೋಪಗಳಿಗಿಂತಲೂ ಹೀಟ್ ವೇವ್ ಹೆಚ್ಚು ಅಪಾಯಕಾರಿ ಎನಿಸಿದೆ. ಈ ಉಷ್ಣ ಅಲೆಯಿಂದ ಹೆಚ್ಚು ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ.
ವಾತಾವರಣದಲ್ಲಿ ತೇವಾಂಶ ಹೆಚ್ಚು ಇದ್ದರೆ ಉಷ್ಣ ಅಲೆ ಇನ್ನೂ ಡೇಂಜರಸ್ ಆಗಿರುತ್ತದೆ. ದಾಖಲಾಗುವ ಉಷ್ಣಾಂಶಕ್ಕಿಂತ ಬಹಳ ತೀವ್ರವಾದ ಬಿಸಿಯ ಅನುಭವ ಜನರಿಗೆ ಆಗಲು ಈ ಹ್ಯೂಮಿಡಿಟಿ ಕಾರಣ.
ಭಾರತದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಬಿಸಿ:
ಸಂಶೋಧನೆಯೊಂದರ ಪ್ರಕಾರ ಭಾರತದಲ್ಲಿ ತೀವ್ರವೆನಿಸುವ ಬಿಸಿಗಾಳಿಯ ದಿನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದು ತಿಳಿದುಬಂದಿದೆ. 1981ರಿಂದ 1990ರವರೆಗಿನ 10 ವರ್ಷಗಳ ಅವಧಿಯಲ್ಲಿ 413 ದಿನಗಳು ಉಷ್ಣ ಅಲೆ ಕಂಡಿದ್ದವು. ಅದೇ 2011ರಿಂದ 2020ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ 600 ಉಷ್ಣ ಅಲೆ ದಿನಗಳಿವೆ.
ಹವಾಮಾನ ಬದಲಾವಣೆಯು ಬೇಸಿಗೆಯ ಬಿಸಿಯನ್ನ ಎಂದಿಗಿಂತ ತಾರಕಕ್ಕೇರಿಸಿದೆ. ಈ ಹವಾಮಾನ ಬದಲಾವಣೆಯೇ ಭಾರತದಲ್ಲಿ ಇತ್ತೀಚೆಗೆ ಹೀಟ್ ವೇವ್ ದಿನಗಳ ಸಂಖ್ಯೆ ಏರಲು ವಿಲನ್ ಆಗಿದೆ.
ಉಷ್ಣ ಅಲೆಗಳು ಜನಜಾನುವಾರುಗಳ ಜೀವನವನ್ನು ಹೈರಾಣಗೊಳಿಸಿರುವುದು ಒಂದೆಡೆಯದರೆ ರೈತರ ಬೆಳೆಗಳು ಮೂರಾಬಟ್ಟೆಯಾಗಲಿವೆ. ಉಷ್ಣ ವಾತಾವರಣ ತಡೆದುಕೊಳ್ಳದ ಗೋದಿಯನ್ನು ಹೆಚ್ಚಾಗಿ ಬೆಳೆಯುವ ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಉಷ್ಣ ಅಲೆ ಪ್ರವಹಿಸುವ ಸಾಧ್ಯತೆ ಇದೆ. ಹೀಗಾಗಿ, ಗೋದಿಯಂಥ ಬೆಳೆಗಳು ಜಮೀನಿನಲ್ಲೇ ಒಣಗಿಹೋಗುವ ಅಪಾಯ ಇದೆ.












Click it and Unblock the Notifications