ಆರೋಗ್ಯಕರ ಜೀವನ ಬೇಕೆ?; 'ಕನ್ನಡ ರಾಜ್ಯೋತ್ಸವ' ಪುರಸ್ಕೃತೆ ಸಾಂಬಾರ್ ಸೊಪ್ಪಿನ ಪುಟ್ಟೀರಮ್ಮನ ಇಂಟರೆಸ್ಟಿಂಗ್ ಸ್ಟೋರಿ ತಿಳಿಯಿರಿ
ಚಾಮರಾಜನಗರ, ಅಕ್ಟೋಬರ್, 31: ಅಬ್ಬಬ್ಬಾ ಎಂದರೇ ಈಗಿನವರು 5 ಸೊಪ್ಪುಗಳನ್ನು ಗುರುತಿಸಬಹುದು. ಆದರೆ, ಈ ದೇಸಿ ತಜ್ಞೆ ಬರೋಬ್ಬರಿ 60ಕ್ಕೂ ಹೆಚ್ಚು ಬೆರಕೆ ಸೊಪ್ಪನ್ನು ಗುರುತಿಸುತ್ತಾರೆ. ಅಷ್ಟೇ ಅಲ್ಲದೇ, ಯಾವ ರೋಗಕ್ಕೆ ಯಾವುದು ಮದ್ದು ಎಂಬುದೂ ಈಕೆಗೆ ಕರಗತವಾಗಿದ್ದು, ಈಗ ಇವರ ಪಾರಂಪರಿಕ ಜ್ಞಾನಕ್ಕೆ ರಾಜ್ಯೋತ್ಸವ ಗರಿ ಸಂದಿದೆ.
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ ಪುಟ್ಟೀರಮ್ಮ ಎಂಬ ವೃದ್ಧೆ ಈಗಲೂ ಹರಳು ಹುರುಳಿದಂತೆ ಸಾಂಬಾರು ಸೊಪ್ಪಿನ ಹೆಸರುಗಳನ್ನು ಹೇಳುತ್ತಾರೆ. ರಸ್ತೆಬದಿ, ಜಮೀನಿನಲ್ಲಿ ಕಳೆಗಿಡವಾಗಿ ಪ್ರಕೃತಿದತ್ತವಾಗಿ ಬರುವ ಇವುಗಳನ್ನು ಗುರುತಿಸಿ ಬೇರೆಯವರಿಗೂ ತಮ್ಮ ಆಹಾರ ಜ್ಞಾನ ಹರಡುತ್ತಾರೆ. ಹೀಗೆ ಆಹಾರದ ಮೂಲಕ ಮದ್ದು ಎಂಬುದು ಇವರ ಜೀವನ ಶೈಲಿಯಾಗಿದೆ.

ಬರೀ ತೊಗರಿ ಕಾಳಲ್ಲೇ ಊಟ ಮಾಡಲಾಗದು. ಒಂದೊಂದು ದಿನ ಅವರೆಕಾಳು, ಅಲಸಂದೆ, ಹುರುಳಿ, ತಡಗುಣಿ ಎಲ್ಲವೂ ಇರುವ ಮಿಶ್ರ ಬೆಳೆಯ ಮಹತ್ವವನ್ನು ವಿವರಿಸುತ್ತಾರೆ ಈ ಪುಟ್ಟೀರಮ್ಮ. ಅದಕ್ಕೆ ತಕ್ಕಂತೆ ಮನೆಗೆ ಬೇಕಾಗುವ ಪ್ರತಿಯೊಂದು ಪದಾರ್ಥಗಳೂ ಹೊಲದಲ್ಲೇ ಸಿಗುವಂತಹ ವ್ಯವಸಾಯವನ್ನೂ ಅವರು ಮಾಡುತ್ತಾರೆ.
ಯಾವೆಲ್ಲಾ ಸೊಪ್ಪುಗಳು ಇವೆ.?: ಗಣಿಕೆಸೊಪ್ಪು, ಪಸರೆಸೊಪ್ಪು, ಗುಳ್ಸುಂಡೆ ಸೊಪ್ಪು, ಮಳ್ಳಿ ಸೊಪ್ಪು, ಹಾಲೆ ಸೊಪ್ಪು, ಜವಣ ಸೊಪ್ಪು, ಅಣ್ಣೆ ಸೊಪ್ಪು, ಗುರುಜೆ ಸೊಪ್ಪು, ಕಲ್ಲು ಗುರುಜೆ ಸೊಪ್ಪು, ಹಿಟ್ಟಿನಕುಡಿ ಸೊಪ್ಪು, ಕರಿಕಡ್ಡಿ ಸೊಪ್ಪು, ಅಡಕ ಪುಟ್ಟ, ಕೊಟ್ಟನ ಗುರುಜೆ, ಸಾರಿನ ಸೀಗೆಕುಡಿ, ತಡಗುಣಿ ಚಿಗುರು, ನಲ್ಲಿಕುಡಿ ಚಿಗುರು, ಹೊನಗಾಲ ಸೊಪ್ಪು, ಹೊನಗೊನೆ ಸೊಪ್ಪು, ಕಾರೇಸೊಪ್ಪು, ಕನ್ನೆ ಸೊಪ್ಪು, ಕಿರುನಗಲ ಸೊಪ್ಪು, ನುಗ್ಗೆ ಸೊಪ್ಪು, ಅಗಸೆ ಸೊಪ್ಪು, ಕಿರಕೀಲೆ ಸೊಪ್ಪು.
ದಂಟು ಸೊಪ್ಪು, ಬೋದಗೀರ ಸೊಪ್ಪು, ಸಪ್ಪಸೀಗೆ ಸೊಪ್ಪು, ಮುಳ್ಳುಗೀರ ಸೊಪ್ಪು, ಕೀರೆ ಸೊಪ್ಪು, ಮೆಂತೆ ಸೊಪ್ಪು, ಕುಂಬಳ ಸೊಪ್ಪು, ಪಾಲಕ ಸೊಪ್ಪು, ಬಿಳಿ ಬಗ್ಗರವಾಟ, ಕೆಂಪನ ಬಗ್ಗರವಾಟ, ಒಂದೆಲಗ ಸೊಪ್ಪು, ಕಾಡುನುಗ್ಗೆ ಸೊಪ್ಪು, ಕಾಡಂದಗ, ದ್ಯವನದ ಸೊಪ್ಪು, ಪುಂಡಿ ಸೊಪ್ಪು, ಬಸಲೆ ಸೊಪ್ಪು, ಕಳ್ಳೆ ಸೊಪ್ಪು ಹೀಗೆ ಹಲವರು ಈಗಿನ ಜೀವನಕ್ಕೆ ಒಗ್ಗಿಕೊಂಡಿರುವ ನಮ್ಮಂತಹವರಿಗೆ ಪರಿಚಯವೇ ಇಲ್ಲದ ಸೊಪ್ಪುಗಳ ಹೆಸರು ಈ ಪುಟ್ಟಿರಮ್ಮನ ಜ್ಞಾನದ ಬುಟ್ಟಿಯಲ್ಲಿವೆ.
ನಗರದ ಮಂದಿಗಷ್ಟೇ ಅಲ್ಲ, ಈಗಿನ ಹಳ್ಳಿ ಮಕ್ಕಳಿಗೂ ಕೊತ್ತಂಬರಿ, ಪಾಲಕ್, ಕರಿಬೇವು, ಮೆಂತೆ ಸೊಪ್ಪು ಬಿಟ್ಟರೇ ಬೇರೆ ಸೊಪ್ಪುಗಳ ಬಗ್ಗೆ ಗೊತ್ತಿರುವುದಿಲ್ಲ. ಕಳೆನಾಶಕಗಳನ್ನು ಬಳಸುತ್ತಿರುವುದರಿಂದ ಬಹುಪಾಲು ಜಮೀನುಗಳಲ್ಲಿ ಬೆರಕೆ ಸೊಪ್ಪು ಮಾಯವಾಗಿದೆ. ಆದರೂ, ಪ್ರಕೃತಿ ದತ್ತವಾಗಿ ಬೇಲಿ, ರಸ್ತೆಬದಿಗಳಲ್ಲಿ ಈಗಲೂ ನೂರಾರು ಬಗೆಯ ಸೊಪ್ಪುಗಳು ಸಿಗುತ್ತಿವೆ. ನಾನು ಕೀಳುವಾಗ ಎಲೆ, ಚಿಗುರುನಷ್ಟೇ ಕೀಳುತ್ತೇನೆ. ಗಿಡ ನಶಿಸಿಹೋಗದೆ, ಬೇರೆಯವರಿಗೂ ಅದು ದೊರಕುವಂತಾಗಲಿ ಎಂದು ಬೇರನ್ನು ಅಲ್ಲೇ ಬಿಡುತ್ತೇನೆ ಎನ್ನುತ್ತಾರೆ ಪುಟ್ಟೀರಮ್ಮ.
ಪುಟ್ಟೀರಮ್ಮನ ಸೊಪ್ಪಿನ ಪ್ರೀತಿ ಇಷ್ಟಕ್ಕೇ ಮುಗಿಯಲ್ಲ, ದೇವರ ಜಾನಪದ ಗೀತೆಗಳಂತೆ ಸೊಪ್ಪಿನ ಬಗ್ಗೆಯೂ ಪುಟ್ಟೀರಮ್ಮ ಹಾಡು ಕಟ್ಟಿ ಹಾಡುತ್ತಾರೆ. ಸಾಮಾನ್ಯವಾಗಿ ಕಾಡುವ ಕಾಯಿಲೆಗಳಿಗೆ ಸೊಪ್ಪಿನ ಸಾರಲ್ಲೇ ಮದ್ದನ್ನು ಕಂಡುಕೊಂಡಿದ್ದಾರೆ. ಈ ನೆಲದ ಅಮೂಲ್ಯ ಕೃಷಿಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರಜ್ಞಾನದ ಹಂಗೂ ಇಲ್ಲದೇ, ಮಹಾನ್ ಜ್ಞಾನ ಪರಂಪರೆಯನ್ನು ಸಾರುತ್ತಾ ಬಂದಿರುವ ಪುಟ್ಟೀರಮ್ಮಗೆ ಈಗ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.












Click it and Unblock the Notifications