ನೌಕಾಪಡೆಯ ಪ್ರಾಜೆಕ್ಟ್ 17ಎ; ಭಾರತದ ಬತ್ತಳಿಕೆಗೆ ತಾರಾಗಿರಿ
ಭಾರತೀಯ ನೌಕಾಪಡೆ ಮೊನ್ನೆ ಭಾನುವಾರ ತಾರಾಗಿರಿ ಎಂಬ ಫ್ರಿಗೇಟ್ ನೌಕೆಯ ಉದ್ಘಾಟನೆ ಮಾಡಿತು. ಭಾರತದ ಸಾಗರ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಇದು. ಇತ್ತೀಚೆಗಷ್ಟೇ ವಿಕ್ರಾಂತ್ ಎಂಬ ಬೃಹತ್ ಏರ್‌ಕ್ರಾಫ್ಟ್ ಕ್ಯಾರಿಯರ್ ಹಡಗನ್ನು ನಿಯೋಜನೆ ಮಾಡಿದ್ದ ಭಾರತೀಯ ನೌಕಾ ಪಡೆಗೆ ತಾರಾಗಿರಿ ಇನ್ನಷ್ಟು ಬಲ ಕೊಟ್ಟಿದೆ.
ತಾರಾಗಿರಿ ಫ್ರಿಗೆಟ್ ಹಡಗು ಭಾರತೀಯ ನೌಕಾಪಡೆಯ ನೀಲಗಿರಿ ದರ್ಜೆಗೆ ಸೇರಿದ ಒಂದು ಯುದ್ಧನೌಕೆ. ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿ (ಎಂಡಿಎಲ್) ಸಂಸ್ಥೆ ಈ ಫ್ರಿಗೆಟ್ ಅನ್ನು ತಯಾರಿಸುತ್ತಿದೆ.
ಐಎನ್‌ಎಸ್ ತಾರಾಗಿರಿ ಹಡಗನ್ನು ಭಾರತೀಯ ಸೇನೆಯ ಪ್ರಾಜೆಕ್ಟ್ 17ಎ ಅಡಿಯಲ್ಲಿ ತಯಾರಿಸಲಾಗಿದೆ. ಪ್ರಾಜೆಕ್ಟ್ 17ಎ ಎಂಬುದು ಗೈಡೆಡ್-ಮಿಸೈಲ್ ಫ್ರಿಗೆಟ್‌ಗಳನ್ನು ತಯಾರಿಸಲು ಇರುವ ಯೋಜನೆ. ಐಎನ್‌ಎಸ್ ತಾರಾಗಿರಿ ಇಂಥ ಫ್ರಿಗೆಟ್‌ಗಳಲ್ಲಿ ಮೂರನೆಯದಾಗಿದೆ.

ಫ್ರಿಗೆಟ್ ಎಂದರೆ ಹಡಗಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಬಹಳ ವೇಗವಾಗಿ ಸಾಗಲು ಸಾಧ್ಯವಾಗುವ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿರುತ್ತದೆ. ಆಧುನಿಕ ಫ್ರಿಗೆಟ್‌ಗಳು ಅಕ್ಷರಶಃ ಯುದ್ಧನೌಕೆಯ ಕೆಲಸವನ್ನು ಮಾಡುತ್ತವೆ. ಬಹಳ ಕ್ಷಿಪ್ರ ಗತಿಯಲ್ಲಿ ಇವು ಸಾಗುತ್ತವೆ. ಜೊತೆಗೆ ಗೈಡೆಡ್ ಮಿಸೈಲ್‌ಗಳನ್ನೂ ಇವು ಹೊತ್ತು ಸಾಗುತ್ತವೆ.
ಐಎನ್‌ಎಸ್ ತಾರಾಗಿರಿ ಯುದ್ಧನೌಕೆಯ ವಿವಿಧ ಬಿಡಿಭಾಗಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ತಯಾರಿಸಿ ನಂತರ ಒಂದೆಡೆ ಅಸೆಂಬಲ್ ಮಾಡಲಾಗಿದೆ.
ಏನಿದು ಪ್ರಾಜೆಕ್ಟ್ 17ಎ?
ಭಾರತೀಯ ನೌಕಾಪಡೆ 2015ರಲ್ಲಿ ಪ್ರಾಜೆಕ್ಟ್ 17 ಆರಂಭಿಸಿತು. 2019ರಲ್ಲಿ ಪ್ರಾಜೆಕ್ಟ್ 17ಎಗೆ ಚಾಲನೆ ಕೊಟ್ಟಿತು. ಈ 17ಎ ಅಡಿಯಲ್ಲಿ ಸ್ಟೀಲ್ತ್ ಗೈಡೆಡ್ ಮಿಸೈಲ್ ಫ್ರಿಗೆಟ್‌ಗಳನ್ನು ತಯಾರಿಸಲಾಗುತ್ತದೆ. ಈ ಸರಣಿಯಲ್ಲಿ ತಾರಾಗಿರಿ ಮೂರನೆಯ ಫ್ರಿಗೆಟ್ ಆಗಿದೆ. ಪ್ರಾಜೆಕ್ಟ್ 17ಎ ಅಡಿಯಲ್ಲಿ ಬರುವ ಫ್ರಿಗೆಟ್‌ಗಳನ್ನು ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ (ಎಂಡಿಎಲ್) ಮತ್ತು ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಸಂಸ್ಥೆಗಳು ನಿರ್ಮಿಸುತ್ತಿವೆ.

ಸ್ಟೀಲ್ತ್ ಗೈಡೆಡ್ ಮಿಸೈಲ್ ಎಂದರೇನು?
ಗೈಡೆಡ್ ಮಿಸೈಲ್ ಎಂದರೆ ನಿರ್ದೇಶಿತ ಕ್ಷಿಪಣಿ. ರಿಮೋಟ್ ಆಗಿ ದೂರದಿಂದಲೇ ಕ್ಷಿಪಣಿಯನ್ನು ನಿಯಂತ್ರಿಸಬಹುದಾದ ವ್ಯವಸ್ಥೆ. ಸ್ಟೀಲ್ತ್ ಎಂದರೆ ಎದುರಾಳಿಗಳ ಕಣ್ತಪ್ಪಿಸುವ ಸಾಮರ್ಥ್ಯ. ಈ ಯುದ್ಧನೌಕೆಗಳು ಎದುರಾಳಿಗಳ ರಾಡಾರ್ ದೃಷ್ಟಿಗೆ ಬೀಳದ ರೀತಿಯಲ್ಲಿ ಕೋಟಿಂಗ್‌ಗಳನ್ನು ಹೊಂದಿರುತ್ತವೆ. ಇನ್ಫ್ರಾರೆಡ್ ಸಿಗ್ನಲ್‌ಗಳು ಹೆಚ್ಚು ಬರದಂತೆ ಮಾಡುವ ಹೊಸ ತಂತ್ರಜ್ಞಾನವನ್ನು ಹೊಂದಿರುತ್ತವೆ.
ಪ್ರಾಜೆಕ್ಟ್ 17ಎ ಯೋಜನೆಯ ಒಟ್ಟು ಮೊತ್ತ 25,700 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಮೊದಲ ಫ್ರಿಗೆಟ್ ಎಂದರೆ ಐಎನ್‌ಎಸ್ ನೀಲಗಿರಿ. 2019ರಲ್ಲಿ ಇದಕ್ಕೆ ಚಾಲನೆ ಕೊಡಲಾಯಿತು. ಇದೀಗ ಇದು ಸಂಪೂರ್ಣ ಸಿದ್ಧವಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ನೌಕಾಪಡೆಯ ಬತ್ತಳಿಕೆ ಸೇರಲಿದೆ.
ಪ್ರಾಜೆಕ್ಟ್ 17ಎ ಅಡಿಯಲ್ಲಿ ನಿರ್ಮಾಣವಾದ ಎರಡನೇ ಯುದ್ಧನೌಕೆ ಐಎನ್‌ಎಸ್ ಉದಯಗಿರಿ. ಇದು ಈ ವರ್ಷ ಮೇ ತಿಂಗಳಲ್ಲಿ ಆರಂಭವಾಗಿದ್ದು, 2024ರಲ್ಲಿ ನಿಯೋಜನೆಯಾಗುವ ನಿರೀಕ್ಷೆ ಇದೆ.
ತಾರಾಗಿರಿ ವಿಶೇಷತೆ ಏನು?
ಐಎನ್‌ಎಸ್ ತಾರಾಗಿರಿ ಪ್ರಾಜೆಕ್ಟ್ 17ಎ ಅಡಿಯಲ್ಲಿ ಆರಂಭವಾದ ಮೂರನೇ ಯುದ್ಧನೌಕೆಯಾಗಿದೆ. 2023ರಲ್ಲಿ ಇದು ಸಂಪೂರ್ಣ ಸಿದ್ಧಗೊಂಡು ನೌಕಾಪಡೆಯಲ್ಲಿ ನಿಯೋಜನೆಗೊಳ್ಳುವ ನಿರೀಕ್ಷೆ ಇದೆ.
ಇದು ನೀಲಗಿರಿ ಯುದ್ಧನೌಕೆಯ ದರ್ಜೆಗೆ ಸೇರಿದ ಫ್ರಿಗೇಟ್ ಆಗಿದೆ. ಐಎನ್‌ಎಸ್ ನೀಲಗಿರಿಯ ಬಹುತೇಕ ವ್ಯವಸ್ಥೆಯನ್ನು ಇದು ಹೊಂದಿದೆ. ನೀಲಗಿರಿ, ಉದಯಗಿರಿ ಫ್ರಿಗೇಟ್‌ಗಳ ವಿನ್ಯಾಸವನ್ನು ಇದು ಹೊಂದಿದೆ.
ಎದುರಾಳಿಗಳ ಕಣ್ತಪ್ಪಿಸಬಲ್ಲಲು ಸಾಧ್ಯವಾಗುವಂತೆ ತಾರಾಗಿರಿಯ ವಿನ್ಯಾಸ ಮಾಡಲಾಗಿದೆ. ಇಂಟಿಗ್ರೇಟ್ಡ್ ಮಾಡುಲಾರ್ ಕನ್ಸ್‌ಟ್ರಕ್ಷನ್ ವಿಧಾನದಲ್ಲಿ ತಯಾರಿಸಲಾಗುತ್ತದೆ. ಈ ಹಡಗಿನ ವಿವಿಧ ಭಾಗಗಳನ್ನು ಬೇರೆ ಬೇರೆ ಕಡೆ ತಯಾರಿಸಿ ನಂತರ ಅದನ್ನು ಒಂದೆಡೆ ಅಸೆಂಬಲ್ ಮಾಡಿ ಹಡಗು ರಚಿಸಲಾಗುತ್ತದೆ.
ಭಾರತದಲ್ಲಿ ಎಷ್ಟಿವೆ ಯುದ್ಧನೌಕೆಗಳು?
ಭಾರತೀಯ ನೌಕಾಪಡೆಯಲ್ಲಿ ಶಿವಾಲಿಕ್, ತಲ್ವಾರ್, ಬ್ರಹ್ಮಪುತ್ರ ಮತ್ತು ಗೋದಾವರಿ ದರ್ಜೆಯ ಗೈಡೆಡ್ ಮಿಸೈಲ್ ಫ್ರಿಗೇಟ್‌ಗಳ ಸಂಖ್ಯೆ 14 ಇವೆ. ಈಗ ಪ್ರಾಜೆಕ್ಟ್ 17 ಎ ಅಡಿಯಲ್ಲಿ 7 ಸ್ಟೀಲ್ತ್ ಫ್ರಿಗೇಟ್‌ಗಳನ್ನು ತಯಾರಿಸಲಾಗುತ್ತಿದೆ.
ಶಿವಾಲಿಕ್ ದರ್ಜೆಯ ಫ್ರಿಗೇಟ್‌ಗಳು ಉಳಿದವುಗಳಿಗಿಂತ ದೊಡ್ಡದು. ಐಎನ್‌ಎಸ್ ಶಿವಾಲಿಕ್ ಭಾರತದಲ್ಲಿ ತಯಾರಾದ ಮೊದಲ ಸ್ಟೀಲ್ತ್ ಯುದ್ಧನೌಕೆಯಾಗಿದೆ. ಇದನ್ನು ತಯಾರಿಸಿದ್ದೂ ಎಂಡಿಎಲ್ ಸಂಸ್ಥೆಯೇ. ರಷ್ಯಾದ ಕ್ರಿವಾಕ್ ದರ್ಜೆಯ ಯುದ್ಧನೌಕೆಯ ವಿನ್ಯಾಸದ ಆಧಾರದಲ್ಲಿ ಶಿವಾಲಿಕ್ ಯುದ್ಧನೌಕೆಗಳನ್ನು ತಯಾರಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications