ಅಂಗನವಾಡಿಯಲ್ಲಿ ಬಿರಿಯಾನಿ ಬೇಕು ಎಂದ ಪುಟ್ಟ ಪೋರ, ತಥಾಸ್ತು ಎಂದ ಸರ್ಕಾರ
ಮಕ್ಕಳಿಗೆ ಆರಂಭಿಕ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರತಿ ರಾಜ್ಯದಲ್ಲಿ ಅಂಗನವಾಡಿಗಳನ್ನು ನಡೆಸುತ್ತಿವೆ. ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯ ದೃಷ್ಟಿಯಿಂದ ಈಗಾಗಲೇ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರದ ಮೆನು ಕೂಡ ಇದೆ. ಆದರೆ ಪುಟ್ಟ ಬಾಲಕನೊಬ್ಬ ಬಿರಿಯಾನಿ ಹಾಗೂ ಚಿಕನ್‌ಗೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೌದು ಶಂಕು ಎನ್ನುವ ಪುಟ್ಟ ಬಾಲಕನೊಬ್ಬ ಅಂಗನವಾಡಿಯಲ್ಲಿ ಕೊಡ್ತಿದ್ದ ಉಪ್ಪಿಟ್ಟಿನಿಂದ ಬೇಸತ್ತಿದ್ದನೋ ಏನೋ, ಸೀದಾ ವಿಡಿಯೋ ಮಾಡಿದ್ದಲ್ಲದೆ ಉಪ್ಪಿಟ್ಟು ಬದಲಿಗೆ ಚಿಕನ್ ಬಿರಿಯಾನಿ ಹಾಗೂ ಚಿಕನ್ ಫ್ರೈಗೆ ಡಿಮ್ಯಾಂಡ್ ಮಾಡಿರುವ ಅಪರೂಪದ ಸಂಗತಿ ಪಕ್ಕದ ಕೇರಳದಲ್ಲಿ ನಡೆದಿದೆ.

ಇನ್ನು ಈ ಬಾಲಕನ ಕೂಗು ಕೇರಳ ಸರ್ಕಾರದ ಕದ ಕೂಡ ತಟ್ಟಿರುವುದು ವಿಶೇಷ. ಈ ಮಗು ಮನವಿ ಮಾಡಿದ್ದ ವಿಡಿಯೋ ಅನ್ನು ತಾಯಿ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದರು. ಇದು ಕೇರಳ ಸರ್ಕಾರಕ್ಕೆ ತಲುಪಿದ್ದಲ್ಲದೆ, ಕೇರಳದ ಅಂಗನವಾಡಿಗಳಲ್ಲಿ ನೀಡುವ ಆಹಾರದ ಮೆನು ಬದಲಾಯಿಸಲು ಕೂಡ ಮುಂದಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಿಜುಲ್ ಸುಂದರ್ ಎನ್ನುವ ಬಾಲಕ ಈ ರೀತಿ ಬೇಡಿಕೆ ಇಟ್ಟಿದ್ದಾನೆ. ತನ್ನ ತಾಯಿಯು ಮುದ್ದಾಗಿ ಶಂಕು ಎಂದು ಆ ಬಾಲಕನನ್ನು ಕರೆಯುತ್ತಿರುವುದು ವಿಡಿಯೋದಲ್ಲಿದೆ. ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬದಲಾಗಿ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡಬೇಕೆಂದು ತನ್ನ ತಾಯಿಗೆ ಹೇಳಿದ್ದಾನೆ. ಬಳಿಕ ತಾಯಿ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕ ಶಂಕು ಅಂಗನವಾಡಿಯಲ್ಲಿ ಉಪ್ಪಿಟ್ಟು (ಉಪ್ಮಾ) ಬದಲಿಗೆ ಬಿರಿಯಾನಿ ನೀಡುವಂತೆ ಬೇಡಿಕೆ ಇಟ್ಟಿರುವ ವೀಡಿಯೊ ಕೂಡ ಶೇರ್ ಮಾಡಿದ್ದಾರೆ. ಪುಟಾಣಿ ಶಂಕು ಕೇಳಿಕೊಂಡಂತೆ ಅಂಗನವಾಡಿ ಮಕ್ಕಳಿಗೆ ಆಹಾರದ ಮೆನು ಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದ್ದಾರೆ.

"ಶಂಕು ಬಹಳ ಮುಗ್ಧವಾಗಿ ತಮ್ಮ ಬೇಡಿಕೆ ಇಟ್ಟಿದ್ದಾನೆ. ಈಗಾಗಲೇ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು ಅಂಗನವಾಡಿಗಳಲ್ಲಿ ವಿವಿಧ ರೀತಿಯ ಆಹಾರವನ್ನು ನೀಡಲಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಅಂಗನವಾಡಿಗಳಲ್ಲಿ ಮೊಟ್ಟೆ ಮತ್ತು ಹಾಲು ನೀಡುವ ಯೋಜನೆ ಜಾರಿಯಲ್ಲಿದೆ. ಶಂಕು ಅವರ ವಿಶೇಷ ಮನವಿಯನ್ನು ಪರಿಗಣಿಸಿ ಅಂಗನವಾಡಿಗಳಲ್ಲಿ ಕೊಡುವ ಆಹಾರದ ಮೆನು ಪರಿಷ್ಕರಿಸಲಾಗುವುದು" ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಬಗ್ಗೆ ಹಲವರು ಕೆಟ್ಟದಾಗಿ ಆರೋಪ ಮಾಡುತ್ತಾರೆ. ಒಂದು ಪುಟ್ಟ ಬಾಲಕನ ಮನವಿಗೆ ಇಡೀ ಸರ್ಕಾರವೇ ಸ್ಪಂದಿಸಿದೆ ಎಂದರೆ ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ನೆಟ್ಟಿಗರು ಖುಷ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಜನ ಧ್ವನಿ ಎತ್ತುತ್ತಾರೆ, ಅದರ ಬಗ್ಗೆಯೂ ಕ್ರಮ ಕೈಗೊಂಡರೆ ಜನರಿಗೆ ಧೈರ್ಯ ಬಂದಂತಾಗುತ್ತೆ ಎಂದು ಸಲಹೆ ಕೊಟ್ಟಿದ್ದಾರೆ.












Click it and Unblock the Notifications