ರಾಜ್ಯದ ‘ಕೈ’ ನಾಯಕರಿಗೆ ‘ದಳಪತಿ’ಗಳದ್ದೇ ಭಯ!

ಮೈಸೂರು, ಏಪ್ರಿಲ್ 7: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಿಂದೂಪರ ಸಂಘಟನೆಗಳ ವಿರುದ್ಧ ಸೆಟೆದು ನಿಂತಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯಲು ಆರಂಭಿಸಿದ್ದು, ಇದರಿಂದ ಜೆಡಿಎಸ್ ಪಕ್ಷಕ್ಕೆ ಎಷ್ಟು ಲಾಭವಾಗುತ್ತೋ ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ನಷ್ಟವಾಗುತ್ತದೆ ಎಂಬುದಂತು ಸತ್ಯ.

ಯಾವಾಗ ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯದ ಪರವಾಗಿ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡಲು ಆರಂಭಿಸಿದರೋ ಕಾಂಗ್ರೆಸ್ ನಾಯಕರಲ್ಲಿ ಆತಂಕ ಶುರುವಾಗಿದೆ. ಹಿಜಾಬ್ ವಿಚಾರದಿಂದ ಆರಂಭಗೊಂಡು ಇಲ್ಲಿಯವರೆಗೆ ಕಾಂಗ್ರೆಸ್‌ನ ಒಂದಷ್ಟು ನಾಯಕರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದಂತೆ ಹೆಚ್ಚಿನ ನಾಯಕರು ಯಾವುದೇ ಹೇಳಿಕೆಗಳನ್ನು ನೀಡದೆ ಮೌನಕ್ಕೆ ಶರಣಾಗಿದ್ದರು.

 ಧ್ವನಿ ಎತ್ತಿರುವ ಎಚ್.ಡಿ. ಕುಮಾರಸ್ವಾಮಿ

ಧ್ವನಿ ಎತ್ತಿರುವ ಎಚ್.ಡಿ. ಕುಮಾರಸ್ವಾಮಿ

ಯಾವಾಗ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾದರೋ ಅದೇ ವೇಳೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಸಾಮರಸ್ಯದ ವಿಚಾರವನ್ನು ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳ ವಿರುದ್ಧ ಧ್ವನಿ ಎತ್ತಿದರು. ಅದರ ಪರಿಣಾಮ ಕಾಂಗ್ರೆಸ್‌ನವರು ಅನಿವಾರ್ಯವಾಗಿ ಮಾತನಾಡುವಂತಾಗಿದೆ.

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಬಿಜೆಪಿ ಮೊದಲಿನಿಂದಲೂ ಹಿಂದುತ್ವದ ಆಧಾರದಲ್ಲಿಯೇ ಚುನಾವಣೆಗೆ ತೆರಳುತ್ತಿದೆ. ಜತೆಗೆ ಪಕ್ಷದ ವಿವಿಧ ಘಟಕಗಳು ಅಲ್ಲದೆ ಹಿಂದೂಪರ ಸಂಘಟನೆಗಳು ಬಿಜೆಪಿ ಬೆನ್ನಿಗೆ ನಿಂತಿವೆ. ಆದರೆ ಕಾಂಗ್ರೆಸ್‌ಗೆ ಈ ಬಾರಿ ಸಂಕಷ್ಟ ಶುರುವಾಗಿದೆ. ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ತಮ್ಮ ಪರವಾಗಿ ಗಟ್ಟಿಯಾದ ನಿಲುವು ತಾಳಿಲ್ಲ ಎಂಬ ಅಸಮಾಧಾನವಿದೆ. ಹಾಗೆಂದು ಒಂದು ಸಮುದಾಯದ ಪರವಾಗಿ ನಿಂತರೆ ಬಹುಸಂಖ್ಯಾತ ಹಿಂದೂಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯವೂ ಕಾಂಗ್ರೆಸ್ಸಿಗಿದೆ.

 ಕಾಂಗ್ರೆಸ್‌ನಿಂದ ದಿಕ್ಕು ತಪ್ಪಿಸುವ ಯತ್ನ

ಕಾಂಗ್ರೆಸ್‌ನಿಂದ ದಿಕ್ಕು ತಪ್ಪಿಸುವ ಯತ್ನ

ಹಾಗೆ ನೋಡಿದರೆ ಕಾಂಗ್ರೆಸ್ ಇಲ್ಲಿಯವರೆಗೆ ಜಾಣ ನಡೆ ಅನುಸರಿಸುತ್ತಾ ಬಂದಿತ್ತು. ಈಗ ಮಾಜಿ ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮೇಲೆ ಟೀಕಾಸ್ತ್ರ ಮಾಡುತ್ತಿದ್ದು, ಅದಕ್ಕೆ ಪ್ರತ್ಯುತ್ತರ ನೀಡುವುದು ಕಾಂಗ್ರೆಸ್‌ಗೆ ಕಷ್ಟವಾಗಿ ಪರಿಣಮಿಸಿದೆ. ಆದರೆ ಕಾಂಗ್ರೆಸ್‌ನ ವಕ್ತಾರರು ಜೆಡಿಎಸ್ ನಡೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕುಮಾರಸ್ವಾಮಿಗೆ ಹಿಂದೂಪರ ಸಂಘಟನೆಗಳನ್ನು ಟೀಕಿಸಲು ಬಿಜೆಪಿಯವರೇ ಸುಪಾರಿ ನೀಡಿದ್ದಾರೆ. ಆ ಮೂಲಕ ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿ ಲಾಭ ಮಾಡಿಕೊಳ್ಳಲು ಹುನ್ನಾರ ನಡೆಸಿದೆ ಎಂಬ ಆರೋಪಗಳನ್ನು ಮಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿಯವರ ವೇಗಕ್ಕೆ ಕಡಿವಾಣ ಹಾಕಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

 ಜೆಡಿಎಸ್‌ಗೆ ಲಾಭವಾದರೆ ಕಾಂಗ್ರೆಸ್‌ಗೆ ನಷ್ಟ

ಜೆಡಿಎಸ್‌ಗೆ ಲಾಭವಾದರೆ ಕಾಂಗ್ರೆಸ್‌ಗೆ ನಷ್ಟ

ಎಚ್.ಡಿ. ಕುಮಾರಸ್ವಾಮಿ ಅವರು ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡಿ ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆದು ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದರು. ಹೀಗಾಗಿ ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿದರೆ ಅದರಿಂದ ಜೆಡಿಎಸ್‌ಗೆ ಎಷ್ಟು ಲಾಭವಾಗುತ್ತದೋ ಇಲ್ಲವೋ? ಆದರೆ ನಷ್ಟವಾಗುವುದು ಮಾತ್ರ ಕಾಂಗ್ರೆಸ್‌ಗೆ ಎಂಬುದಂತು ಸತ್ಯ. ಹೀಗಾಗಿಯೇ ಕಾಂಗ್ರೆಸ್ ನಾಯಕರು ಆತಂಕದಲ್ಲಿದ್ದಾರೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಸಂಘಟನೆಗೆ ಹೆಚ್ಚು ಒತ್ತುಕೊಡುತ್ತಿದ್ದಾರೆ. ಜತೆಗೆ ಹೇಳಿಕೆ ನೀಡುವಾಗಲೂ ತುಂಬಾ ಎಚ್ಚರಿಕೆ ವಹಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಎರಡು ಸಮುದಾಯವನ್ನು ಬ್ಯಾಲೆನ್ಸ್ ಮಾಡಿ ಮಾತನಾಡುವಲ್ಲಿ ಎಡವುತ್ತಿದ್ದಾರೆ. ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಾ ಎಂಬ ಭಯವೂ ಇಲ್ಲದಿಲ್ಲ. ಸಿದ್ದರಾಮಯ್ಯ ಅವರು ಯಾವುದೇ ಹೇಳಿಕೆ ನೀಡಿದರೂ ಅದನ್ನು ವಿವಾದವಾಗಿಸಲು ಬಿಜೆಪಿ ತಯಾರಿ ನಡೆಸಿದೆ.

 ವಾಗ್ಬಾಣಕ್ಕೆ ತತ್ತರಿಸಿದ ಕೈ- ಕಮಲ

ವಾಗ್ಬಾಣಕ್ಕೆ ತತ್ತರಿಸಿದ ಕೈ- ಕಮಲ

ಇದೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಸ್ಲಿಂ ಮುಖಂಡ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ಗೆ ಎಳೆದು ತಂದಿದ್ದಾರೆ. ಇಬ್ರಾಹಿಂ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದು ಅವರ ಉದ್ದೇಶವಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ಭಾಣ ಎಸೆಯುತ್ತಿದ್ದಾರೆ.

ಇನ್ನೊಂದೆಡೆ ಸಿ.ಎಂ. ಇಬ್ರಾಹಿಂ ಅವರ ಮೂಲಕ ಕಾಂಗ್ರೆಸ್ ಪಕ್ಷದಿಂದ ಇನ್ನಷ್ಟು ಮುಸ್ಲಿಂ ನಾಯಕರನ್ನು ಎಳೆದು ತರುವ ಸುಳಿವನ್ನು ಕುಮಾರಸ್ವಾಮಿ ನೀಡಿದ್ದಾರೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಜೆಡಿಎಸ್ ತೋರಿಸುತ್ತಿರುವ ಈ ಗುಮ್ಮ ಕಾಂಗ್ರೆಸ್‌ನಲ್ಲಿ ತಳಮಳಕ್ಕೆ ಕಾರಣವಾಗಿದೆ.

 ಜೆಡಿಎಸ್ ನಡೆಯಿಂದ ಕಾಂಗ್ರೆಸ್‌ನಲ್ಲಿ ಆತಂಕ

ಜೆಡಿಎಸ್ ನಡೆಯಿಂದ ಕಾಂಗ್ರೆಸ್‌ನಲ್ಲಿ ಆತಂಕ

ಈಗಾಗಲೇ ಎಸ್‌ಡಿಪಿಐ ರಾಜ್ಯದಲ್ಲಿ ಸಂಘಟನೆಯಾಗುತ್ತಿದೆ. ಆ ಪಕ್ಷದಿಂದ ಮುಂದಿನ ಚುನಾವಣೆಗೆ ಅಭ್ಯರ್ಥಿಗಳು ಕಣಕ್ಕಿಳಿದರೆ ಒಂದಷ್ಟು ಮತಗಳು ಹಂಚಿಹೋಗಲಿದೆ. ಇದರ ಮಧ್ಯೆ ಜೆಡಿಎಸ್ ಕೂಡ ಮತ ಸೆಳೆಯುವ ಕಾರ್ಯಕ್ಕೆ ಕೈಹಾಕಿದೆ. ಇದೆಲ್ಲವನ್ನು ಗಮನಿಸಿದರೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್ ನಡೆಯೇ ಭಯಹುಟ್ಟಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ ವರ್ಷವಿರುವಾಗಲೇ ಚುನಾವಣೆಗೆ ವೇದಿಕೆ ಸೃಷ್ಟಿಯಾಗಿದ್ದು, ಎಲ್ಲ ವಿಚಾರಗಳು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಜತೆಗೆ ರಾಜಕೀಯ ಪಕ್ಷಗಳು ಲಾಭ ಮಾಡಿಕೊಳ್ಳಲು ಮುಂದಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+