ನುಡಿದಂತೆ ನಡೆದ ಸರ್ಕಾರ; ನೂರು ದಿನದಲ್ಲಿ 4 ಗ್ಯಾರಂಟಿ ಜಾರಿ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 100 ದಿನ ಪೂರೈಸಿದೆ. ಸರ್ಕಾರ ನುಡಿದಂತೆ ನಡೆದಿದೆ, ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಸರ್ಕಾರ ಯಶಸ್ಸಿನತ್ತ ಸಾಗಿದೆ. ವಿಧಾನಸಭೆ ಚುನಾವಣೆಯ ಬಳಿಕ ಮೇ 20ರಂದು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಸರ್ಕಾರ ಅಧಿಕಾರಕ್ಕೆ ಬಂದ 100 ದಿನದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರ ಮನಃ ಗೆದ್ದಿದೆ.
5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಗೆ ಬಂದಿದ್ದು, 'ಶಕ್ತಿ ಯೋಜನೆ'. ಜೂನ್ 11ರಂದು ಪ್ರಥಮ ಯೋಜನೆಯಾಗಿ ಇದು ಜಾರಿಗೊಂಡಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿರುವುದು ವಿಶೇಷವಾಗಿದೆ. ಕೊಡಗು ಜಿಲ್ಲೆಯಲ್ಲಿ ಆಗಸ್ಟ್, 27ರವರೆಗೆ 11,10,983 ಮಂದಿ ಮಹಿಳೆಯರು ಬಸ್‍ನಲ್ಲಿ ಪ್ರಯಾಣ ಬೆಳೆಸಿದ್ದು, 4,10,54,728 ರೂ. ವೆಚ್ಚವನ್ನು ಸರ್ಕಾರ ಭರಿಸಿದೆ.

'ಅನ್ನಭಾಗ್ಯ ಯೋಜನೆ'ಯಡಿ ಸರ್ಕಾರ ಬಿಪಿಎಲ್, ಎಎವೈ ಫಲಾನುಭವಿಗಳಿಗೆ ಈಗಾಗಲೇ ವಿತರಿಸುತ್ತಿರುವ 5 ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲು ಉದ್ದೇಶಿಸಿತ್ತು.
ಆದರೆ ಅಕ್ಕಿಯ ಕೊರತೆ ಇರುವ ಕಾರಣ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂ.ನಂತೆ ಪ್ರತಿ ಫಲಾನುಭವಿಗೆ ಮಾಸಿಕ 170 ರೂ.ನಂತೆ ಡಿಬಿಟಿ ಮೂಲಕ ಫಲಾನುಭವಿಗಳಿಗೆ ಜುಲೈ ತಿಂಗಳಲ್ಲಿ 4.24 ಕೋಟಿ ರೂ. ನಗದನ್ನು ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ತಿಂಗಳಲ್ಲಿನ ನಗದು ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಮನೆ ಬೆಳಗಿದ ಗೃಹಜ್ಯೋತಿ; ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ 'ಗೃಹಜ್ಯೋತಿ' ಯೋಜನೆಗೆ ಇದೇ ಆಗಸ್ಟ್ 5ರಂದು ಚಾಲನೆ ಸಿಕ್ಕಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿ ಸರ್ಕಾರದ ಧ್ಯೇಯವಾಗಿದ್ದು, ನುಡಿದಂತೆ ನಡೆಯುತ್ತಿರುವುದು ವಿಶೇಷವಾಗಿದೆ.
ಕೊಡಗು ಜಿಲ್ಲೆಯಲ್ಲಿ ಇದುವರೆಗೆ 1.30 ಲಕ್ಷಕ್ಕೂ ಹೆಚ್ಚು ಮಂದಿ ಗೃಹಜ್ಯೋತಿ ಯೋಜನೆಗೆ ಹೆಸರು ನೋಂದಾಯಿಸಿದ್ದು, ಈ ಯೋಜನೆಯಡಿ ರೂ. 3 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಭರಿಸಿದೆ.
ಪ್ರತಿ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ 'ಗೃಹಲಕ್ಷ್ಮಿ' ಯೋಜನೆಗೆ ಆಗಸ್ಟ್ 30ರಂದು ಅಧಿಕೃತವಾಗಿ ಚಾಲನೆ ದೊರಕಿದೆ. ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ.
ಈ ದಿಸೆಯಲ್ಲಿ ಸರ್ಕಾರ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ನೋಂದಣಿ ಕಾರ್ಯ ಮುಂದುವರಿದಿದೆ. ಕೊಡಗು ಜಿಲ್ಲೆಯಲ್ಲಿ 1,31,863 ಗುರಿಯಲ್ಲಿ ಆಗಸ್ಟ್ 28ರವರೆಗೆ 1,05122 ಮಂದಿ ಹೆಸರು ನೋಂದಾಯಿಸಿದ್ದು, ಶೇ.81.14 ರಷ್ಟು ಪ್ರಗತಿ ಸಾಧಿಸಲಾಗಿದೆ.
ಹಾಗೆಯೇ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಮುಂಗಡ ಪತ್ರದಲ್ಲಿ ಹಣವನ್ನು ಕಾಯ್ದಿರಿಸಿದೆ. 5 ಗ್ಯಾರಂಟಿಗಳ ಅನುಷ್ಠಾನ ಇಡೀ ರಾಷ್ಟ್ರದಲ್ಲಿಯೇ ಹೆಸರುಗಳಿಸಿ, ರಾಜ್ಯದ ಎಲ್ಲಾ ಬಡ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸರ್ಕಾರ ಬಜೆಟ್‍ನಲ್ಲಿ ಪರಿಶಿಷ್ಟ ಪಂಗಡದ ಸೋಲಿಗ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಕೊರಗ, ಇರುಳಿಗ ಮೊದಲಾದ ಆದಿವಾಸಿಗಳು ಮತ್ತು ಅಲೆಮಾರಿ ಜನಾಂಗದವರ ಅಭಿವೃದ್ಧಿಗೆ 50 ಕೋಟಿ ರೂ. ವನ್ನು ಸರ್ಕಾರ ಮುಂಗಡ ಪತ್ರದಲ್ಲಿ ಪ್ರಕಟಿಸಿದೆ.
ಬುಡಕಟ್ಟು ಆದಿವಾಸಿ ಪಂಗಡದವರಿಗೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರ ಯೋಜನೆಯನ್ನು 6 ತಿಂಗಳಿನಿಂದ 12 ತಿಂಗಳವರೆಗೆ ವಿಸ್ತರಿಸಿರುವುದು ವಿಶೇಷವಾಗಿದೆ. ಇದರಿಂದ ಕೊಡಗಿನ ಆದಿವಾಸಿ ಜನರಿಗೆ ಬಹು ಉಪಯುಕ್ತವಾಗಿದೆ. ಅಮೃತ್ 2.0 ಯೋಜನೆಯಡಿ ನಗರ ನೀರು ಸರಬರಾಜು ಯೋಜನೆಗೆ ಹೆಚ್ಚಿನ ಹಣ ಕಾಯ್ದಿರಿಸಲಾಗಿದೆ.
ಹೀಗೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿರುವುದು ವಿಶೇಷವಾಗಿದೆ.
ಲೇಖನ ಕೃಪೆ; ಕೊಡಗು ವಾರ್ತಾ ಇಲಾಖೆ












Click it and Unblock the Notifications