ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಬಹಿಷ್ಕಾರ ಎಂಬ ಗೌಡರ ಹೊಸ ತಂತ್ರದ ಹಿಂದೇನಿದೆ?

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಮುಂದಿನ ವಿಧಾನಸಭಾ ಚುನಾವಣೆಯ ನಂತರ ತಮ್ಮ ಪುತ್ರ ಕುಮಾರಸ್ವಾಮಿ ಅವರೇನಾದರೂ ಬಿಜೆಪಿ ಜತೆ ಕೈ ಜೋಡಿಸಿದರೆ ಅವರನ್ನು ಕುಟುಂಬದಿಂದಲೇ ಬಹಿಷ್ಕರಿಸುವುದಾಗಿ ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯತ್ನ ಮಾಡಿದ್ದಾರೆ.

ಮೊದಲನೆಯದು, ಅವರ ಈ ವೀರಾವೇಶದ ಮಾತು ಮುಸ್ಲಿಂ ಸಮುದಾಯದಲ್ಲಿ ಸ್ವಲ್ಪ ಮಟ್ಟಿಗಾದರೂ ಪರಿಣಾಮ ಬೀರಬಹುದು. ಎರಡನೆಯದಾಗಿ, ಚುನಾವಣೆಯ ನಂತರ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವುದು ಅನಿವಾರ್ಯ ಎಂಬ ನಂಬಿಕೆಗೆ ಅವರು ಬಂದಿರಬಹುದು.

ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?

ಇದನ್ನು ವಿವರವಾಗಿ ನೋಡೋಣ. ಮೊದಲನೆಯದಾಗಿ ದೇವೇಗೌಡರು ಬಹಿಷ್ಕಾರದಂತಹ ಮಾತುಗಳನ್ನೇಕೆ ಆಡುತ್ತಿದ್ದಾರೆ? ಯಾರಿಗೂ ಬಹುಮತ ಬರದೇ ಇದ್ದರೂ ಸರ್ಕಾರ ರಚಿಸುವವರು ನಾವೇ ಎಂದು ಮೊನ್ನೆ ಮೊನ್ನೆ ಇದೇ ದೇವೇಗೌಡರು ಬಹಿರಂಗವಾಗಿ ಹೇಳಿದ್ದರು.

ದೇವೇಗೌಡರು ಸ್ಪಷ್ಟವಾಗಿ ಹೇಳಿಬಿಡಲಿ

ದೇವೇಗೌಡರು ಸ್ಪಷ್ಟವಾಗಿ ಹೇಳಿಬಿಡಲಿ

ಯಾರಿಗೂ ಬಹುಮತ ಅಂತ ಬಾರದಿದ್ದರೆ ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಲೇಬೇಕು. ಹಾಗಿದ್ದಾಗ ಜೆಡಿಎಸ್ ಪಕ್ಷವೇನು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುತ್ತದೆಯೇ?ಈ ವಿಷಯದಲ್ಲಿ ಸ್ಪಷ್ಟತೆ ಇದ್ದರೆ ದೇವೇಗೌಡರು ಕ್ಲಿಯರ್ ಆಗಿ ಒಂದು ವಿಷಯವನ್ನು ಹೇಳಬಹುದಿತ್ತು. ಮುಂದಿನ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ನಾವು ಕಾಂಗ್ರೆಸ್ ಜತೆ ಕೈ ಜೋಡಿಸಿ ಸರ್ಕಾರ ರಚಿಸುತ್ತೇವೆ. ಯಾವ ಕಾರಣಕ್ಕೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಅಂತ. ಇದುವರೆಗೂ ಅವರು ಅಂತಹ ಮಾತುಗಳನ್ನಾಡಿಲ್ಲ.

ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ

ಬಹಿಷ್ಕಾರ ಹಾಕುವ ಪರಿಸ್ಥಿತಿ ಯಾವಾಗ ಬರುತ್ತದೆ?

ಬಹಿಷ್ಕಾರ ಹಾಕುವ ಪರಿಸ್ಥಿತಿ ಯಾವಾಗ ಬರುತ್ತದೆ?

ಅವರು ಹೇಳಿರುವುದೇನು? ಬಿಜೆಪಿಯ ಜತೆ ಕೈ ಜೋಡಿಸಿದರೆ ಕುಮಾರಸ್ವಾಮಿ ಅವರನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕುತ್ತೇವೆ ಅಂತ ತಾನೇ? ಬಹಿಷ್ಕಾರ ಹಾಕುವ ಸ್ಥಿತಿ ಯಾವಾಗ ಬರುತ್ತದೆ? ಪಕ್ಷದ ಮೇಲೆ ತಮಗೆ ನಿಯಂತ್ರಣವಿಲ್ಲದೆ ಹೋದಾಗ. ಆದರೆ ಇವತ್ತಿಗೂ ದೇವೇಗೌಡರು ಹಳೆ ಮೈಸೂರು ಭಾಗದ ನಿರ್ವಿವಾದ ಒಕ್ಕಲಿಗ ನಾಯಕ.

ಅವರ ಕಣ್ಣಳತೆ ಮೀರಿ ಕುಮಾರಸ್ವಾಮಿ ಕೂಡಾ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕಾಂಗ್ರೆಸ್ ಬದಲು ಬಿಜೆಪಿ ಜತೆಗೇ ಕೈ ಜೋಡಿಸೋಣ ಎಂದು ಬಹುತೇಕ ಜೆಡಿಎಸ್ ಶಾಸಕರು ಹೇಳುತ್ತಾರೆ ಎಂದರೆ ಅದಕ್ಕೆ ಎರಡು ಕಾರಣಗಳಿರಬೇಕು. ಒಂದು ಜೆಡಿಎಸ್ ಪಕ್ಷ ಕುಮಾರಸ್ವಾಮಿ ಅವರ ಹಿಡಿತದಲ್ಲಿದೆಯೇ ಹೊರತು ದೇವೇಗೌಡರ ಹಿಡಿತದಲ್ಲಲ್ಲ ಎಂಬುದು. ಇಲ್ಲವೇ ನಿಮ್ಮ ದಾರಿ ನೀವು ಹಿಡಿಯಿರಿ. ಉಳಿದಿದ್ದನ್ನು ನಾವು ಸ್ವಚ್ಛ ಮಾಡಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಸೂಚಿಸುವುದು.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿಯನ್ನು ಹೊರಗಟ್ಟುತ್ತೇನೆ: ದೇವೇಗೌಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿಯನ್ನು ಹೊರಗಟ್ಟುತ್ತೇನೆ: ದೇವೇಗೌಡ

ದೇವೇಗೌಡರ ಅಂದಿನ ಕೋಪಕ್ಕೆ ಕಾರಣಗಳಿದ್ದವು, ಆದರೆ ಇಂದು?

ದೇವೇಗೌಡರ ಅಂದಿನ ಕೋಪಕ್ಕೆ ಕಾರಣಗಳಿದ್ದವು, ಆದರೆ ಇಂದು?

ಈ ಹಿಂದೆ 2006 ರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿಯ ಜತೆ ಸೇರಿದಾಗ ದೇವೇಗೌಡರು ಅದನ್ನು ಒಪ್ಪಲಿಲ್ಲ ಎಂದೇ ಇವತ್ತಿಗೂ ಹಲವರು ಸಾಧಿಸುತ್ತಾರೆ. ಆದರೆ ಅವತ್ತು ಹಾಗಂತ ಹೇಳಲು ಕಾರಣಗಳಾದರೂ ಇದ್ದವು. ಅದೆಂದರೆ, ದೇವೇಗೌಡರನ್ನು ಪ್ರಧಾನಿ ಹುದ್ದೆಗೇರುವಂತೆ ಮಾಡಿದವರು ಕಮ್ಯೂನಿಸ್ಟರು. ಹೀಗಾಗಿ ಅವರಿಗೆ ಮುಜುಗರವಾಗುವಂತಹ ಯಾವ ತೀರ್ಮಾನವನ್ನೂ ಗೌಡರು ತೆಗೆದುಕೊಳ್ಳುತ್ತಿರಲಿಲ್ಲ. ಹೇಳಿ ಕೇಳಿ ಕಮ್ಯೂನಿಸ್ಟರು ಬಿಜೆಪಿಯ ಕಟ್ಟಾ ವಿರೋಧಿಗಳು. ಹೀಗಿರುವಾಗ ದೇವೇಗೌಡರ ಮಗ ಬಹಿರಂಗವಾಗಿ ಬಿಜೆಪಿಯ ಜತೆ ಕೈ ಜೋಡಿಸಿದರೆ ಅದನ್ನವರು ಹೇಗೆ ಸಹಿಸಿಕೊಳ್ಳುತ್ತಾರೆ? ಅದೇ ರೀತಿ ಆ ಸಂದರ್ಭದಲ್ಲಿ ದೇವೇಗೌಡರನ್ನು ದೇಶದ ರಾಷ್ಟ್ರಪತಿ ಹುದ್ದೆಗೆ ಏರಿಸಬೇಕು ಎಂಬ ವಿಷಯದಲ್ಲಿ ಕಮ್ಯೂನಿಸ್ಟರಿಗೆ ಆಸಕ್ತಿ ಇತ್ತು.

ಅವರಿಗಿರುವ ಆಸಕ್ತಿಯ ಕುರಿತು ದೇವೇಗೌಡರಿಗೂ ಮಾಹಿತಿ ಇತ್ತು. ಆದರೆ ಅದಕ್ಕೂ ಮುನ್ನವೇ ಜೆಡಿಎಸ್ ಪಕ್ಷವನ್ನು ಒಡೆದು ಹಾಕಲು ಕಾಂಗ್ರೆಸ್ ನ ಸ್ಥಳೀಯ ನಾಯಕರು ಮುಂದಾದಾಗ ಮತ್ತು ಕೈ ಪಾಳೆಯದ ಹೈಕಮಾಂಡ್ ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂಬುದು ಗೊತ್ತಾದಾಗ ದೇವೇಗೌಡರು ಧರ್ಮ ಸಂಕಟಕ್ಕೆ ಸಿಲುಕಿಕೊಂಡರು.

ಕಮ್ಯೂ'ನಿಷ್ಠ'ರಾಗಿದ್ದ ಗೌಡರು!

ಕಮ್ಯೂ'ನಿಷ್ಠ'ರಾಗಿದ್ದ ಗೌಡರು!

ಒಂದು, ತಮ್ಮನ್ನು ದೇಶದ ರಾಷ್ಟ್ರಪತಿ ಹುದ್ದೆಗೇರಿಸಲು ಬಯಸಿರುವ ಕಮ್ಯೂನಿಸ್ಟರನ್ನು ದೂರ ಮಾಡಿಕೊಳ್ಳುವುದು ಸರಿಯಲ್ಲ. ಹಾಗಂತ ಕಾಂಗ್ರೆಸ್ ದಾಳಕ್ಕೆ ಬಲಿಯಾಗಿ ಪಕ್ಷ ನಾಶವಾಗುವಂತೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂಬುದು ಅವರ ಈ ಧರ್ಮ ಸಂಕಟ.

ಹೀಗಾಗಿ ಅವರು ಕುಮಾರಸ್ವಾಮಿ ಬಿಜೆಪಿ ಜತೆ ಕೈ ಜೋಡಿಸಿದಾಗ ಬಹಿರಂಗವಾಗಿ ಅದನ್ನೊಪ್ಪಲಿಲ್ಲ. ಆದರೆ ಆಳದಲ್ಲಿ ಕುಮಾರಸ್ವಾಮಿ ಬೆನ್ನಿನ ಹಿಂದೆ ಅವರ ಆಶೀರ್ವಾದದ ನೆರಳು ಇತ್ತು. ಮುಖ್ಯಮಂತ್ರಿಯಾದ ನಂತರ ಕುಮಾರಸ್ವಾಮಿ ಸೋಬರ್ ಆಗಿ ವರ್ತಿಸಿದ್ದು, ಗ್ರಾಮ ವಾಸ್ತವ್ಯದಂತಹ ಹಲವು ಕಾರ್ಯಕ್ರಮಗಳನ್ನು ಮಾಡಿದ್ದರ ಹಿಂದೆ ಈ ನೆರಳೇ ಇದ್ದುದು.
ಪಕ್ಷ ಉಳಿಸುವುದಕ್ಕಾಗಿ ಮೌನರಾದ ಗೌಡರು!

ಪಕ್ಷ ಉಳಿಸುವುದಕ್ಕಾಗಿ ಮೌನರಾದ ಗೌಡರು!

ತಮಗೆ ರಾಷ್ಟ್ರಪತಿ ಹುದ್ದೆ ದಕ್ಕದೆ ಇದ್ದರೂ ಚಿಂತೆಯಿಲ್ಲ. ಆದರೆ ಪಕ್ಷ ಉಳಿಯಬೇಕು ಎಂಬ ಕಾರಣಕ್ಕಾಗಿ ದೇವೇಗೌಡರು ಅವತ್ತು ಕುಮಾರಸ್ವಾಮಿ ಅವರ ನಡೆಯನ್ನು ಮೌನವಾಗಿ ಸಹಿಸಿಕೊಂಡರು. ಕೆಲವೇ ಕಾಲದ ನಂತರ ಪಿತೃ ವಾಕ್ಯಪರಿಪಾಲಕ ಹೆಚ್.ಡಿ.ರೇವಣ್ಣ ಅವರು ಕುಮಾರಸ್ವಾಮಿ ಸಂಪುಟದಲ್ಲಿ ಲೋಕೋಪಯೋಗಿ ಹಾಗೂ ಇಂಧನ ಸಚಿವರಾಗಿದ್ದು ಹೇಗೆ? ಅನ್ನುವುದನ್ನು ಗಮನಿಸಿದರೆ ಇಡೀ ಬೆಳವಣಿಗೆಯ ಹಿಂದಿರುವ ಸ್ಕ್ರೀನ್ ಪ್ಲೇ ಅರ್ಥವಾಗುತ್ತದೆ.

ಇರಲಿ, ಅವತ್ತು ಕುಮಾರಸ್ವಾಮಿ ಅವರು ಬಿಜೆಪಿಯ ಜತೆ ಕೈ ಜೋಡಿಸಿದ್ದು ದೇವೇಗೌಡರಿಗೆ ಇಷ್ಟವಿರಲಿಲ್ಲ ಎಂದೇ ಇವತ್ತಿಗೂ ವಾದಿಸಲಾಗುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರು ನೇರವಾಗಿ ಬಿಜೆಪಿಯ ಜತೆ ಹೋಗಿ ಕೈ ಜೋಡಿಸಲಿ ಎಂಬ ಆಕಾಂಕ್ಷೆ ಇವತ್ತು ದೇವೇಗೌಡರಿಗಿದೆ.

ಯಾಕೆಂದರೆ, ಯಾವ ಮಹತ್ಕಾರಣಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕೈ ಜೋಡಿಸುತ್ತವೆ? ಮೊದಲನೆಯದಾಗಿ ಜೆಡಿಎಸ್ ಪಕ್ಷವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ ಆ ಪಕ್ಷದ ಏಳು ಮಂದಿ ಶಾಸಕರನ್ನು ಕೈ ಪಾಳೆಯಕ್ಕೆ ಸೇರಿಸಿಕೊಂಡರು.

ಕಾಂಗ್ರೆಸ್ ಜೊತೆ ಸೇರುವುದಕ್ಕೆ ಸಾಧ್ಯವೇ?

ಕಾಂಗ್ರೆಸ್ ಜೊತೆ ಸೇರುವುದಕ್ಕೆ ಸಾಧ್ಯವೇ?

ಇದಾದ ನಂತರ ಜೆಡಿಎಸ್ ಎಂದರೆ ಬಿಜೆಪಿಯ ಬಿ ಟೀಂ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಾಯಲ್ಲೇ ಹೇಳಿಸಿದರು. ಇಷ್ಟೆಲ್ಲ ಆದ ನಂತರವೂ ದೇವೇಗೌಡರು ಸಂಕೋಚ ಬಿಟ್ಟು ಕಾಂಗ್ರೆಸ್ ಜತೆ ಸೇರಿಕೊಳ್ಳುತ್ತಾರೆ ಎಂದು ನಂಬುವುದು ಹೇಗೆ?

ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು, ಡಿಕೆಶಿಯನ್ನು ಹೊರಗಿಟ್ಟು ಅವರು ಕೈ ಪಾಳೆಯದ ಜತೆ ಸಂಬಂಧ ಬೆಳೆಸುತ್ತಾರೆ ಎಂದು ನಂಬುವುದು ಅರ್ಥಹೀನ.ಈ ಹಿಂದೆ ಎಸ್.ಎಂ.ಕೃಷ್ಣ ಹಾಗೂ ಡಿಕೆಶಿಯನ್ನು ದೂರವಿರಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸಿದಾಗ ಏನಾಯಿತು ?ಅವರಿಬ್ಬರೇ ಸೇರಿ ಸರ್ಕಾರವನ್ನು ದುರ್ಬಲಗೊಳಿಸಲು ಏನು ಮಾಡಿದರು? ಎಂಬುದು ದೇವೇಗೌಡರಿಗೆ ಗೊತ್ತಿರಲಿಲ್ಲವೇ? ಹೀಗಾಗಿ ಸಿದ್ದರಾಮಯ್ಯ-ಡಿಕೆಶಿಯನ್ನು ಹೊರಗಿರಿಸಬೇಕು ಎಂಬ ಷರತ್ತಿನೊಂದಿಗೆ ಅವರು ಕಾಂಗ್ರೆಸ್ ಜತೆ ಕೈ ಜೋಡಿಸುತ್ತಾರೆ ಎಂಬುದು ಸುಳ್ಳು.

ಒಂದು ಸಲ ಕರಡಿಯನ್ನು ಕಂಡವರು ಎರಡನೇ ಸಲ ಯಾರಾದರೂ ಕಂಬಳಿ ಹಾಕಿಕೊಂಡು ಬಂದರೂ ಆತಂಕದಿಂದ ನಡೆದುಕೊಳ್ಳುತ್ತಾರೆ. ಇಂತಹ ಆತಂಕ ದೇವೇಗೌಡರಲ್ಲೂ ಇದೆ. ಹೀಗಾಗಿ ಯಾವ ಕಾರಣಕ್ಕೂ ತಮ್ಮ ಪಕ್ಷ ಕಾಂಗ್ರೆಸ್ ಜತೆ ಕೈ ಜೋಡಿಸಬೇಕು ಎಂದವರು ಬಯಸುವುದಿಲ್ಲ.

ಮುಸ್ಲಿಂ ಮತಸೆಳೆಯುವ ತಂತ್ರ

ಮುಸ್ಲಿಂ ಮತಸೆಳೆಯುವ ತಂತ್ರ

ಆದರೆ ಮುಂದೇನು ನಡೆಯುತ್ತದೆ? ಅಂತಲೂ ಹೇಳಬೇಕು. ಅದೇ ಕಾಲಕ್ಕೆ ಮುಸ್ಲಿಮರ ಮತಗಳನ್ನೂ ಸೆಳೆಯಬೇಕು ಎಂಬ ಅದಮ್ಯ ಆಕಾಂಕ್ಷೆಯಿಂದ ಅವರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಹೊರಟಿದ್ದಾರೆ. ಮೊದಲನೆಯದು, ಅವರ ಮಾತಿನಿಂದ ಒಂದಷ್ಟು ಮಂದಿ ಮುಸ್ಲಿಂ ಮತದಾರರು ಜೆಡಿಎಸ್ ಗೆ ಮತ ಹಾಕುತ್ತಾರೆ. ಎರಡನೆಯದು, ಕುಮಾರಸ್ವಾಮಿ ಬಹಿಷ್ಕಾರ ಹಾಕಿಸಿಕೊಳ್ಳುವುದು ಗ್ಯಾರಂಟಿ ಎಂಬುದು.

ಮೋದಿ ಕಾಳಜಿ ಹಿಂದಿರುವ ಸೂಚನೆ ಏನು?!

ಮೋದಿ ಕಾಳಜಿ ಹಿಂದಿರುವ ಸೂಚನೆ ಏನು?!

ಕುತೂಹಲದ ಸಂಗತಿ ಎಂದರೆ ದೇವೇಗೌಡರು ಇಂತಹ ಮಾತುಗಳನ್ನಾಡಿದ ಮರುದಿನವೇ ಪ್ರಧಾನಿ ನರೇಂದ್ರಮೋದಿಯವರು ಹಿರಿಯರಿಗೆ ನಾವು ತೋರಿಸುವ ಗೌರವ ಹೇಗಿರಬೇಕು ಎಂದು ಪ್ರಸ್ತಾಪಿಸುತ್ತಾ, ದೇವೇಗೌಡರನ್ನು ಕಾಂಗ್ರೆಸ್ ನವರು ಟೀಕಿಸುತ್ತಾರೆ. ಅವರಂತಹ ಹಿರಿಯರು ನನ್ನ ಮನೆಗೆ ಬಂದರೆ ಬಾಗಿಲಲ್ಲಿ ನಿಂತು ಸ್ವಾಗತಿಸುತ್ತೇನೆ. ಬಾಗಿಲ ತನಕ ಬಂದು ಬೀಳ್ಕೊಡುತ್ತೇನೆ ಎಂದು ಕಕ್ಕುಲತಿ ತೋರುತ್ತಾರೆ.

ಆದರೆ ಇದೇ ಕಕ್ಕುಲತಿಯನ್ನು ಅವರು ದೇವೇಗೌಡರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಅಡ್ವಾಣಿಯವರ ವಿಷಯದಲ್ಲಿ ತೋರಿಸುವುದಿಲ್ಲ. ಯಾಕೆಂದರೆ ರಾಜಕೀಯವಾಗಿ ಅವರು ಶತ್ರು.ಆದರೆ ದೇವೇಗೌಡರು ಮಿತ್ರ. ಹೀಗಾಗಿ ಮಿತ್ರನ ವಿಷಯದಲ್ಲಿ ಅವರು ಎಲ್ಲರೂ ಅಚ್ಚರಿಪಡುವಷ್ಟು ಕಕ್ಕುಲತಿ ತೋರುತ್ತಾರೆ.

ಈ ಬಹಿಷ್ಕಾರ ಎಲ್ಲರಿಗೂ ಬೇಕಿದೆ!

ಈ ಬಹಿಷ್ಕಾರ ಎಲ್ಲರಿಗೂ ಬೇಕಿದೆ!

ಅರ್ಥಾತ್, ದೇವೇಗೌಡರು ಕುಮಾರಸ್ವಾಮಿ ಅವರನ್ನು ಬಹಿಷ್ಕರಿಸುವುದು ಮೋದಿಯವರಿಗೆ ಬೇಕಿದೆ. ಅದಕ್ಕಿಂತ ಮುಖ್ಯವಾಗಿ ಇಂತಹ ಬಹಿಷ್ಕಾರ ಹಾಕುವುದು ದೇವೇಗೌಡರಿಗೇ ಬೇಕಿದೆ.

ಒಂದು ಘಟನೆಯಾದ ನಂತರ ಅದನ್ನು ಪ್ರತಿರೋಧಿಸುವುದು ಬೇರೆ. ಆದರೆ ಮುಂಚಿತವಾಗಿಯೇ ಅದನ್ನು ಪ್ರತಿರೋಧಿಸುವುದು ಎಂದರೆ ಅಂತಹ ಬೆಳವಣಿಗೆಗಳಿಗೆ ಸಜ್ಜಾಗಿ ಎಂದು ಕುಮಾರಸ್ವಾಮಿ ಅವರಿಗೆ ಗ್ರೀನ್ ಸಿಗ್ನಲ್ ನೀಡಿದಂತೆ. ಈಗ ದೇವೇಗೌಡರೂ ಅಂತಹ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಜಕೀಯದ ಓಜೋನ್ ಪರದೆಯನ್ನು ಹರಿಯಲು ಯಾರು, ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು ಎಂಬುದನ್ನು ಅರ್ಥ ಮಾಡಿಕೊಂಡವರಿಗೆ ಇದು ಸುಲಭವಾಗಿ ಅರ್ಥವಾಗುತ್ತದೆ.

English summary
Karnataka assembly elections 2018: Former prime minister HD Deve Gowda has told that, he will boycott his son HD Kumaraswamy, if he join his hands with BJP after Karnataka assemly elections 2018. But political experts say, from these words HD Deve Gowda is trying to hit two birds in a single stone!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X