Karnataka 7th Pay Commission; ಎನ್‌ಪಿಎಸ್ ರದ್ದಾಗಿ ಹಳೇ ಪದ್ಧತಿ ಜಾರಿ?
ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಯಲ್ಲಿ ಸರ್ಕಾರಿ ನೌಕರರಿಂದ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿ ಕುರಿತು ಸಹ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಸುಧಾಕರ್ ರಾವ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಉತ್ತರ ನೀಡಿದೆ. ಇದರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಬಗ್ಗೆಯೂ ಪ್ರಸ್ತಾವನೆ ಇದೆ.
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಗೆ ಉತ್ತರ ನೀಡಲಿ ಫೆಬ್ರವರಿ 28ರ ತನಕ ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ವೇತನ ಆಯೋಗಕ್ಕೆ ನೀಡಿರುವ ಉತ್ತರದ ಪ್ರತಿಯನ್ನು ಪ್ರಕಟಣೆ ಮೂಲಕ ಬಿಡುಗಡೆ ಮಾಡಿದ್ದಾರೆ.
7ನೇ ವೇತನ ಆಯೋಗ ತನ್ನ ಪ್ರಶ್ನಾವಳಿಯಲ್ಲಿ ಕಾಲಕಾಲಕ್ಕೆ ತರಲಾದ ಬದಲಾವಣೆಗಳೊಂದಿಗೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಜಾರಿಗೊಳಿಸಿರುವ ಮಾದರಿಯಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಎನ್. ಪಿ. ಎಸ್. ಯೋಜನೆಯನ್ನು ಅನುಷ್ಟಾನಗೊಳಿಸಿದೆ. ಈ ಯೋಜನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಅಥವಾ ಸುಧಾರಣೆಗೆ ಯಾವುದೇ ಸಲಹೆಗಳಿವೆಯೇ? ಎಂದು ಕೇಳಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರ ನೀಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 1/4/2004ರಿಂದ ಅನ್ವಯಗೊಳ್ಳುವಂತೆ ನೂತನ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ವಿರೋಧದ ನಡುವೆಯೂ ರಾಜ್ಯ ಸರ್ಕಾರವು ಈ ಯೋಜನೆಯನ್ನು 1/4/2006 ರಿಂದ ಜಾರಿಗೆ ತಂದಿದೆ ಎಂದು ಹೇಳಿದೆ.
ಅಲ್ಲದೇ, ಈ ಯೋಜನೆಯು ಅನೇಕ ನ್ಯೂನತೆಗಳಿಂದ ಕೂಡಿರುವುದರಿಂದ ಕೆಲವೊಂದು ಉಪಲಬ್ದಗಳನ್ನು ಮಂಜೂರು ಮಾಡಿದ್ದಾಗಿಯೂ ಎನ್. ಪಿ. ಎಸ್. ನೌಕರರಿಗೆ ಅನುಕೂಲವಾಗುತ್ತಿಲ್ಲ ಎಂದು ಉಲ್ಲೇಖಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯನ್ನಾಧರಿಸಿ ಸರ್ಕಾರವು ಈ ಯೋಜನೆಯ ಸಾಧಕ-ಬಾಧಕಗಳ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಆದರೆ, ಈ ಸಮಿತಿಯು ಇದುವರೆವಿಗೂ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ ಎಂದು ಉತ್ತರದಲ್ಲಿ ತಿಳಿಸಿದೆ.

ಎನ್. ಪಿ. ಎಸ್. ರದ್ದುಪಡಿಸಿ; ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಈ ಯೋಜನೆಗೆ ಒಳಪಡುವ ಕೇಂದ್ರ ಸರ್ಕಾರಿ ನೌಕರರು ಹಾಗೂ ರಾಷ್ಟ್ರದ ಬಹುತೇಕ ರಾಜ್ಯಗಳ ಸರ್ಕಾರಿ ನೌಕರರು ಆಯಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯ ತರಲು ಅನೇಕ ಹೋರಾಟಗಳನ್ನು ನಡೆಸುತ್ತಿವೆ.
ಇಂತಹ ಹೋರಾಟಗಳಿಗೆ ಮಣಿದ ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯದ ಸರ್ಕಾರಗಳು ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸುವ ಘೋಷಣೆಯನ್ನು ಮಾಡಿರುತ್ತವೆ. ಪಶ್ಚಿಮ ಬಂಗಾಳ ಈವರೆವಿಗೂ ಈ ಯೋಜನೆಯನ್ನು ಜಾರಿಗೊಳಿಸಿರುವುದಿಲ್ಲ.
ಹಾಗಾಗಿ ಮೇಲಿನ 6 ರಾಜ್ಯಗಳಲ್ಲಿ ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸಲು ವಹಿಸಿರುವ ಕ್ರಮಗಳಂತೆ ಕರ್ನಾಟಕ ರಾಜ್ಯದಲ್ಲಿಯು ಸಹ ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವುದು ಎಂದು ನೌಕರರ ಸಂಘ ಹೇಳಿದೆ.
ರಾಷ್ಟ್ರದ ಕೆಲವು ರಾಜ್ಯಗಳು ಈಗಾಗಲೇ ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸಿರುವ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಎನ್. ಪಿ. ಎಸ್ ಯೋಜನೆಯನ್ನು ರದ್ದುಗೊಳಿಸಿ ದಿನಾಂಕ 01/4/2006 ರಿಂದ ಅನ್ವಯವಾಗುವಂತೆ ಹಳೆ ಪಿಂಚಣಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ಸಂಘ ತಿಳಿಸಿದೆ.
* ವಯೋನಿವೃತ್ತಿ/ ಮೃತಪಟ್ಟಿರುವ ನೌಕರನ ಸೇವಾವಧಿಯಲ್ಲಿ ಕಟಾವಣೆಗೊಂಡ ಎನ್. ಪಿ. ಎಸ್. ಮೊತ್ತವನ್ನು ಅವಲಂಬಿತ ಕುಟುಂಬ ಸದಸ್ಯರಿಗೆ ಮರುಪಾವತಿಸುವುದು.
* ಈಗಾಗಲೇ ಎನ್. ಪಿ. ಎಸ್. ಯೋಜನೆಗೆ ಒಳಪಟ್ಟು ವಯೋನಿವೃತ್ತಿ ಮೃತಪಟ್ಟಿರುವ ನೌಕರರಿಗೆ ಹಳೆ ಪಿಂಚಣಿದಾರರ ಮಾದರಿಯಲ್ಲಿ ನಿವೃತ್ತಿ ವೇತನ ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸುವುದು.
* ಸೇವೆಯಲ್ಲಿರುವ ಎನ್. ಪಿ. ಎಸ್. ಯೋಜನೆಗೆ ಒಳಪಡುವ ನೌಕರನಿಂದ ಇದುವರೆವಿಗೂ ಕಟಾವಣೆಗೊಂಡಿರುವ ಯೋಜನೆಯ ಒಟ್ಟು ಮೊತ್ತವನ್ನು ನೌಕರನಿಗೆ ಹಿಂದಿರುಗಿಸುವುದು ಅಥವಾ ಸಾಮಾನ್ಯ ಭವಿಷ್ಯ ನಿಧಿ ಖಾತೆ ತೆರೆದು ವರ್ಗಾಯಿಸುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ತಿಳಿಸಿದೆ.












Click it and Unblock the Notifications