ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕದಾಸ ಜಯತಿ ವಿಶೇಷ: ಕನಕದಾಸರು ಸೃಷ್ಟಿಸಿದ ಆ ಪವಾಡವೇನು?

|
Google Oneindia Kannada News

ಅನಾದಿ ಕಾಲದಿಂದಲೂ ಸಮಾಜದಲ್ಲಿ ಅಂಟುಜಾಡ್ಯದಂತೆ ಹರಡಿಕೊಂಡಿರುವ ಮೇಲು ಕೀಳೆಂಬ ವ್ಯಾಧಿಯನ್ನು ಹೋಗಲಾಡಿಸುವಲ್ಲಿ ಹಲವು ಸಾಧು-ಸಂತರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಇಂತಹವರ ಪೈಕಿ ತಮ್ಮ ಕೀರ್ತನೆಗಳ ಮೂಲಕ ಸಮಾನತೆ ಸಾರಿದಲ್ಲದೆ, ಭಕ್ತಿಯ ಮೂಲಕವೇ ದೇವರನ್ನು ಕಂಡವರು ಕನಕದಾಸರು.

ನಮಗೆ ಇವತ್ತಿಗೂ ಭಕ್ತಿ ವಿಚಾರಕ್ಕೆ ಬಂದಾಗ ಕನಕದಾಸರ ಕಥೆಗಳು ನೆನಪಾಗುತ್ತವೆ. ಅವರು ಕೃಷ್ಣನನ್ನೇ ಜಪಿಸುತ್ತಾ ಊರೂರು ತಿರುಗಿ ಕೀರ್ತನೆಗಳ ಮೂಲಕ ಮೇಲು- ಕೀಳು ತೊಡೆದು ಮನುಷ್ಯರಾಗಿ ಬಾಳಿ ಎಂಬ ಸಂದೇಶ ಸಾರಿ ಈ ಭೂಮಿ ಮೇಲೆ ಚಿರಸ್ಥಾಯಿಯಾದವರು.

ಕೃಷ್ಣನನ್ನೇ ಒಲಿಸಿಕೊಂಡ ಅವರ ಭಕ್ತಿಗೆ ಇವತ್ತಿಗೂ ನಾವು ಕೈಮುಗಿಯಲೇಬೇಕು. ಉಡುಪಿಯ ಕೃಷ್ಣನ ಜತೆಗೆ ಕನಕನೂ ಭಕ್ತರ ಮನದಲ್ಲಿ ನೆಲೆನಿಂತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಸಂತ. ತನ್ನ ಭಕ್ತಿಯಿಂದಲೇ ಕೃಷ್ಣನ ದರ್ಶನ ಮಾಡಿದ ಕನಕದಾಸರು ಹಲವು ದೈವಪವಾಡವನ್ನು ಸೃಷ್ಟಿಸಿ ಭಕ್ತರಿಂದ ನಿತ್ಯ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ನಡುವೆ ಭಕ್ತಿಗೆ ಇನ್ನೊಂದು ಹೆಸರಾಗಿದ್ದಾರೆ.

 ಮಹದೇವಪುರಕ್ಕೆ ಬಂದಿದ್ದ ಕನಕದಾಸರು

ಮಹದೇವಪುರಕ್ಕೆ ಬಂದಿದ್ದ ಕನಕದಾಸರು

ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಸಲುವಾಗಿ ಲೋಕ ಸಂಚಾರ ಹೊರಟ ಅವರು, ದರ್ಶನ ನೀಡದ ಊರುಗಳಿಲ್ಲ. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರು ಮೈಸೂರಿನಿಂದ 18 ಕಿ.ಮೀ ದೂರದಲ್ಲಿರುವ ಮಹದೇವಪುರಕ್ಕೆ ಬಂದಿದ್ದರು ಎಂಬುದೇ ಸಂತಸದ ವಿಷಯವಾಗಿದೆ. ಲೋಕ ಸಂಚಾರಿಯಾದ ಕನಕದಾಸರು ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆದ ಬಳಿಕ ತಮ್ಮ ಗುರುಗಳಾದ ಸೋಸಲೆ ವ್ಯಾಸರಾಜರ ಮೂಲಸ್ಥಳ ಸೋಸಲೆಗೆ ಹೊರಡುತ್ತಾರೆ.

 ತೆಪ್ಪಕ್ಕೆ ಹತ್ತಿಸಿಕೊಳ್ಳಲು ವಿರೋಧ

ತೆಪ್ಪಕ್ಕೆ ಹತ್ತಿಸಿಕೊಳ್ಳಲು ವಿರೋಧ

ಹೀಗೆ ಬಂದವರಿಗೆ ಮಾರ್ಗ ಮಧ್ಯದಲ್ಲಿ ಸಿಗುವ ಶ್ರೀರಂಗಪಟ್ಟಣದ ಶ್ರೀರಂಗನಾಥನ ದರ್ಶನ ಮಾಡಬೇಕೆಂಬ ಬಯಕೆಯಾಗುತ್ತದೆ. ಹೀಗಾಗಿ ಅವರು ನಡೆಯುತ್ತಾ ಮಹದೇವಪುರಕ್ಕೆ ಬರುತ್ತಾರೆ. ಆದರೆ ಅಲ್ಲಿ ಅಡ್ಡಲಾಗಿ ಕಾವೇರಿ ನದಿ ಹರಿಯುತ್ತಿರುತ್ತದೆ. ಈ ನದಿಯನ್ನು ದಾಟಿಸುವಂತೆ ಅಲ್ಲಿದ್ದ ತೆಪ್ಪ ನಡೆಸುತ್ತಿದ್ದ ಗಂಗಾಮತಸ್ಥರನ್ನು ಕೇಳುತ್ತಾರೆ. ಈ ವೇಳೆ ಅವರು ತೆಪ್ಪದಲ್ಲಿ ಕರೆದುಕೊಂಡು ಹೋಗಲು ಒಪ್ಪಿದರೂ, ತೆಪ್ಪದಲ್ಲಿದ್ದ ಮೇಲ್ಜಾತಿಯವರು ವಿರೋಧ ವ್ಯಕ್ತಪಡಿಸುತ್ತಾರೆ. ಕಾರಣ ನಡೆದು ಹೈರಾಣಗಿದ್ದ ದೇಹ, ಮಾಸಲು ಬಟ್ಟೆಯನ್ನು ನೋಡಿ ಆತ ಕೆಳಜಾತಿಯವನು ಅವನನ್ನು ಹತ್ತಿಸಿಕೊಳ್ಳದಂತೆ ತಾಕೀತು ಮಾಡುತ್ತಾರೆ.

 ಪವಾಡ ತೋರಿದ ಕನಕದಾಸರು

ಪವಾಡ ತೋರಿದ ಕನಕದಾಸರು

ಈ ವೇಳೆ ಕನಕದಾಸರು ತಮ್ಮ ದೈವ ಪವಾಡವನ್ನು ಅಲ್ಲಿದ್ದವರಿಗೆ ತೋರಿಸಲು ಮುಂದಾಗುತ್ತಾರೆ. ಸಮೀಪದ ತೋಟದಲ್ಲಿದ್ದ ಬಾಳೆಗಿಡವನ್ನು ನೋಡಿದ ಅವರು ಅದರ ಮಾಲೀಕನಿಗೆ ಬಾಳೆ ಎಲೆ ನೀಡುವಂತೆ ಕೇಳುತ್ತಾರೆ. ಆದರೆ ಆ ತೋಟದ ಮಾಲೀಕ ಎಲೆ ನೀಡಲು ನಿರಾಕರಿಸುತ್ತಾರೆ. ಈ ವೇಳೆ ಅಲ್ಲಿಯೇ ನಿಂತಿದ್ದ ವ್ಯಕ್ತಿ ಏನು ಮಾಡುತ್ತಾರೆ ನೋಡೋಣ ಎಂಬ ಕುತೂಹಲದಿಂದ ಬಾಳೆ ಎಲೆಯನ್ನು ನೀಡುತ್ತಾನೆ. ಆತನಿಂದ ಎಲೆ ಪಡೆದ ಕನಕದಾಸರು ಅದೇ ಎಲೆಯ ಮೇಲೆ ಕುಳಿತು ತೆಪ್ಪದಂತೆ ನೀರಿನಲ್ಲಿ ಸಾಗಿ ಮತ್ತೊಂದು ದಡವನ್ನು ಸೇರಿ ಅಲ್ಲಿದ್ದ ಬಂಡೆ ಮೇಲೆ ಹತ್ತಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ನಂತರ ತಮ್ಮ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದು ನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ಮತ್ತೆ ತಮ್ಮ ಹೊಟ್ಟೆಯಲ್ಲಿ ಹಾಕಿಕೊಂಡು ನಾನೀಗ ಪರಿಶುದ್ಧನೇ ಎಂದು ಕೇಳುತ್ತಾರೆ. ಅವರ ಪವಾಡ ಕಂಡ ಜನಕ್ಕೆ ಇವರು ಸಾಮಾನ್ಯರಲ್ಲ ದೈವಸ್ವರೂಪಿ ಎಂಬುದು ಅರಿವಾಗುತ್ತದೆ ಹೀಗಾಗಿ ಅವರು ತಮ್ಮನ್ನು ಮನ್ನಿಸುವಂತೆ ಬೇಡುತ್ತಾರೆ.

 ಮಹದೇವಪುರದಲ್ಲಿ ಕನಕ ದೇಗುಲ

ಮಹದೇವಪುರದಲ್ಲಿ ಕನಕ ದೇಗುಲ

ಅವತ್ತು ತೆಪ್ಪ ನಡೆಸುತ್ತಿದ್ದ ಗಂಗಾಮತಸ್ಥರು ಕನಕದಾಸರ ದೈವಪವಾಡವನ್ನು ಕಂಡು ಅಂದಿನಿಂದಲೇ ಅವರನ್ನು ಪೂಜಿಸುತ್ತಾ ಬಂದಿದ್ದಾರೆ. ಅವರು ಕೂತಿದ್ದ ಬಂಡೆಗೆ ಕನಕಬಂಡೆ ಎಂದೇ ಕರೆಯಲಾಗುತ್ತಿದ್ದು, ಪೂಜ್ಯ ಭಾವನೆಯಿಂದ ನೋಡಲಾಗುತ್ತಿದೆ. ಕಳೆದ ಎರಡು ದಶಕಗಳಿಂದ ನಂಜುಂಡಯ್ಯ ಎಂಬುವರು ಕೊಡಗನಹಳ್ಳಿ ರಾಮೇಗೌಡ ಮತ್ತ ಜೆ.ಸಿ. ದರ್ಶನ್ ಎಂಬುವರ ಸಹಕಾರದಲ್ಲಿ 2003ರಲ್ಲಿ ಮಹದೇವಪುರದಲ್ಲಿ ಪುಟ್ಟ ಕನಕ ದೇವಾಲಯವನ್ನು ನಿರ್ಮಿಸಿದ್ದು, ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿಕೊಂಡು ಬರಲಾಗುತ್ತಿದೆ.

 ಬಾಳೆ ನೆಟ್ಟರೂ ಫಸಲು ನೀಡಲ್ಲವಂತೆ!

ಬಾಳೆ ನೆಟ್ಟರೂ ಫಸಲು ನೀಡಲ್ಲವಂತೆ!

ಇನ್ನು ಅವತ್ತು ಬಾಳೆ ಎಲೆ ನೀಡಲು ನಿರಾಕರಿಸಿದವರ ನೆಲದಲ್ಲಿ ಬಾಳೆ ನೆಟ್ಟರೂ ಅದು ಬೆಳೆದು ಫಸಲು ನೀಡಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಏನೇ ಇರಲಿ ಕನಕದಾಸರ ಇಂತಹ ಪವಾಡಗಳು ಅದೆಷ್ಟು ನಡೆದಿವೆಯೋ ಏನೋ? ಆದರೆ ಅವರು ಅವತ್ತು ಲೋಕದ ಅಂಕುಡೊಂಕು ತಿದ್ದಲೆಂದೇ ರಚಿಸಿದ ಕೀರ್ತನೆಗಳು ಇವತ್ತಿಗೂ ನಮ್ಮನ್ನು ಎಚ್ಚರಿಸುತ್ತಲೇ ಇವೆ ಎಂಬುದಂತು ಸತ್ಯ.

Recommended Video

ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯ ಈಗ ಕೆತ್ತಲಾಗಿದೆ | Oneindia Kannada

English summary
Kanakadasa Jayanti 2021: What Is The Miracle Created By Great Saint Kanakadasa at Mahadevapur in Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X