ಕೊಡಗಿನ 'ಕೈಲ್ ಮುಹೂರ್ತ'ದ ಹಿಂದಿದೆ ರೋಚಕ ಇತಿಹಾಸ!

ಕೊರೊನಾದ ಬಳಿಕ ಕೊಡಗಿನಲ್ಲಿ ಮೊದಲ ಬಾರಿಗೆ ಕೈಲ್ ಮುಹೂರ್ತ ಹಬ್ಬವನ್ನು ಜನ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಬ್ಬ ಕೊಡಗಿನಲ್ಲಿ ಆಚರಿಸಲ್ಪಡುವ ಕೆಲವೇ ಕೆಲವು ಹಬ್ಬಗಳಲ್ಲಿ ಇದು ಒಂದಾಗಿದ್ದು, ಸಂಪ್ರದಾಯದ ಲೇಪನದ ಜತೆಗೆ ಖುಷಿ, ಗಮ್ಮತ್ತು ಹಬ್ಬದ ವಿಶೇಷತೆಯಾಗಿದೆ.

ಬೇರೆಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ವಿಭಿನ್ನತೆ ಮತ್ತು ವಿಶಿಷ್ಟತೆ ಎದ್ದು ಕಾಣುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳು ಭತ್ತದ ಕೃಷಿಯ ಮೇಲೆಯೇ ಅವಲಂಭಿತವಾಗಿದೆ. ಅವತ್ತಿನ ಕಾಲದಲ್ಲಿ ಸಂಚಾರ ವ್ಯವಸ್ಥೆಯೂ ಇಲ್ಲದ ಜನವಿರಳ ಪ್ರದೇಶಗಳಲ್ಲಿ ಕಾಡಿನ ನಡುವೆ ಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ ಕೊಡಗಿನ ಹಿರಿಯರ ಧೈರ್ಯಕ್ಕೆ ಸಲಾಂ ಎನ್ನಲೇಬೇಕು. ಕೋಳಿ ಕೂಗಿನಿಂದ, ನಾಯಿಗಳು ಬೊಗಳುವ ಸದ್ದಿನಿಂದಷ್ಟೆ ದೂರದಲ್ಲೆಲ್ಲೋ ಮನೆಗಳಿವೆ ಎಂದು ಅಂದಾಜಿಸಿಕೊಳ್ಳುತ್ತಿದ್ದರು. ಕೃಷಿ ಮಾಡುತ್ತಾ ಬೇಟೆಯಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು. ವರ್ಷದ ಆರು ತಿಂಗಳು ಮಳೆ ಸುರಿಯುತ್ತಿತ್ತು. ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಗದ್ದೆಗಳನ್ನು ನಿರ್ಮಿಸಿ ಭತ್ತ ಬೆಳೆಯುತ್ತಿದ್ದರು. ಮುಂಗಾರು ಆರಂಭದಲ್ಲಿ ಗದ್ದೆ ಕೃಷಿ ಕಾರ್ಯ ಆಗಸ್ಟ್ ತಿಂಗಳಲ್ಲಿ ಮುಗಿಯುತ್ತಿತ್ತು.

ಹೊರ ಪ್ರಪಂಚವನ್ನು ಮರೆತು ಮಳೆಗಾಳಿ, ಚಳಿಯಲ್ಲಿಯೇ ಭತ್ತದ ಕೃಷಿಯನ್ನು ಮಾಡುತ್ತಿದ್ದರು. ತಿಂಗಳಾನುಗಟ್ಟಲೆ ಕಷ್ಟಪಟ್ಟು ದುಡಿದವರು ಭತ್ತದ ನಾಟಿ ಕಾರ್ಯ ಮುಗಿಸಿದ ಖುಷಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸುತ್ತಿದ್ದರು. ಈ ಹಬ್ಬದಲ್ಲಿ ಸಂಪ್ರದಾಯದ ಪೂಜೆಯೊಂದಿಗೆ ಹೊಟ್ಟೆ ತುಂಬಾ ಉಂಡು... ಕಂಠಮಟ್ಟ ಕುಡಿದು... ಸಂಭ್ರಮಿಸುತ್ತಿದ್ದರು. ಜತೆಗೆ ದೂರವಿದ್ದವರು ಒಂದೆಡೆ ಸೇರಿ ಕ್ರೀಡಾ ಕೂಟ ಏರ್ಪಡಿಸಿ ಸಂತಸ ಪಡುತ್ತಿದ್ದರು.

"ಕೈಲ್‌ಮುಹೂರ್ತ" ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್‌ಪೊಳ್ದ್" ಎಂದು ಕರೆಯಲಾಗುತ್ತದೆ. "ಕೈಲ್" ಎಂದರೆ ಆಯುಧ "ಪೊಳ್ದ್" ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ... "ಕೈಲ್‌ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಖಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.

 ಕೈಲ್ ಮುಹೂರ್ತ ಹಬ್ಬದ ಹಿನ್ನಲೆ

ಕೈಲ್ ಮುಹೂರ್ತ ಹಬ್ಬದ ಹಿನ್ನಲೆ

ಇನ್ನು ಹಬ್ಬಕ್ಕೆ ರೋಮಾಂಚನಕಾರಿ ಹಿನ್ನಲೆ ಇರುವುದನ್ನು ಕಾಣಬಹುದಾಗಿದೆ. ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ಧಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು.

ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು.

 ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗುತ್ತಿದ್ದ ರೈತ

ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗುತ್ತಿದ್ದ ರೈತ

ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ಧಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇ ಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ(ದೇವರಕೋಣೆ)ಯಲ್ಲಿಡಲಾಗುತ್ತಿತ್ತು. ಅಲ್ಲದೆ ಕಕ್ಕಡ ಮಾಸ (ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು.

ಹೀಗೆ ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‌ಮುಹೂರ್ತಕ್ಕೆ. ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. (ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ.) ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತಿತ್ತು.

 ಹಿರಿಯರಿಂದ ಕಿರಿಯರಿಗೆ ಆಶೀರ್ವಾದ

ಹಿರಿಯರಿಂದ ಕಿರಿಯರಿಗೆ ಆಶೀರ್ವಾದ

ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸಿ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಿದ್ದರು (ಇದನ್ನು ಕೊಡವ ಭಾಷೆಯಲ್ಲಿ ಆಪ್‌ಪತರ್ ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು ತಳಿಯತಕ್ಕಿ ಬೊಳಕ್ (ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಿದ್ದರು.

ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಪ್ರಾರ್ಥನೆ ಸಲ್ಲಿಸಿ, ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು.

 ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು. ಆದುದರಿಂದಲೇ ಇಂದಿಗೂ ಈ ಹಬ್ಬದಲ್ಲಿ ಮಾಂಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಇಂದು ಎಲ್ಲವೂ ಬದಲಾಗಿದೆ ಆದರೆ ಸಾಂಪ್ರದಾಯ ಉಳಿದುಕೊಂಡಿದ್ದರೂ ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್‌ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.

ಸಾಮಾನ್ಯವಾಗಿ ಕೈಲ್‌ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹುದು. ಕೈಲ್‌ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಅದರಲ್ಲೂ ಸೈನ್ಯದಲ್ಲಿದ್ದವರು ಹಬ್ಬಕ್ಕೆ ಬಂದು ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳಬೇಕೆಂದು ಬಯಸುತ್ತಾರೆ. ಅದು ಏನೇ ಇರಲಿ ಕೈಲ್‌ಮುಹೂರ್ತ ಪ್ರತಿ ಕುಟುಂಬ ಹಾಗೂ ಊರಿನಲ್ಲಿ ಆತ್ಮೀಯ ಸಂಬಂಧ ಬೆಸೆಯುವ ಹಾಗೂ ಎಲ್ಲರೂ ಸಂಭ್ರಮ ಪಡುವ ಹಬ್ಬವಾಗಿರುವುದಂತು ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+