• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಚಾಯಿತಿಯಿಂದ ಪರಿಷತ್ ತನಕ; ಎಸ್. ಎಲ್. ಧರ್ಮೇಗೌಡ ಪರಿಚಯ

By ಚಿಕ್ಕಮಗಳೂರು ಪ್ರತಿನಿಧಿ
|

ಬೀರೂರು ಕ್ಷೇತ್ರದ ಮಾಜಿ ಶಾಸಕ, ವಿಧಾನ ಪರಿಷತ್ ಉಪ ಸಭಾಪತಿ ಎಸ್. ಎಲ್. ಧರ್ಮೇಗೌಡ (65) ಮೃತಪಟ್ಟಿದ್ದಾರೆ. ರೈಲಿಗೆ ತಲೆಕೊಟ್ಟು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದ ಹಲವು ನಾಯಕರು ಧರ್ಮೇಗೌಡರ ನಿಧನಕ್ಕೆ ಸಂತಾಪ ಸೂಚಿಸಿರು.

1955ರ ಡಿಸೆಂಬರ್ 16ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸರಪನಹಳ್ಳಿಯಲ್ಲಿ ಜನಿಸಿದ್ದರು. ಎಸ್. ಆರ್. ಲಕ್ಷ್ಮಯ್ಯ ತಂದೆ, ತಾಯಿ ಕೃಷ್ಣಮ್ಮಾ. ಎಸ್.ಎಲ್.ಧರ್ಮೇಗೌಡರ ಸಹೋದರ ಭೋಜೇಗೌಡ ಅವರು ಸಹ ವಿಧಾನ ಪರಿಷತ್ ಸದಸ್ಯರು.

2004ರಲ್ಲಿ ಬೀರೂರು ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ ಸದದ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಳಿಕ ವಿಧಾನ ಪರಿಷತ್ ಉಪಸಭಾಪತಿಯಾಗಿದ್ದರು.

ಪತ್ನಿ ಮಮತಾ,ಮಗ ಸೋನಾಲ್, ಮಗಳುಸಾಲೋನಿ, ಸಹೋದರ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಸೇರಿದಂತೆ ಅಪರ ಬಂಧು ಬಳಗವನ್ನು ಧರ್ಮೇಗೌಡರು ಅಗಲಿದ್ದಾರೆ.

ಎಸ್. ಎಲ್. ಧರ್ಮೇಗೌಡ ರಾಜಕೀಯದಲ್ಲಿ ದಿಢೀರ್ ಏಳಿಗೆ ಕಂಡವರಲ್ಲ. ತಂದೆ ಶಾಸಕರಾಗಿದ್ದರೂ ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕೀಯ ಶುರು ಮಾಡಿ ವಿಧಾನ ಪರಿಷತ್ ಉಪ ಸಭಾಪತಿ ಹುದ್ದೆಗೇರಿದವರು.

3 ದಶಕಗಳ ರಾಜಕೀಯ ಇತಿಹಾಸದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ವಿವಿಧ ಹಂತದಲ್ಲಿ ಅಧಿಕಾರ ಹಿಡಿದು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿದ್ದರು. ಹಿಡಿದ ಕೆಲಸವನ್ನು ಸಾಧಿಸದೆ ಹೆಜ್ಜೆ ಹಿಂದಿಟ್ಟವರಲ್ಲ. ಹಠ ಸಾಧಿಸಿ ಕೆಲಸ ಮಾಡಿಸುವ ಜಾಯಮಾನ ಎಸ್.ಎಲ್.ಧರ್ಮೇಗೌಡ ಅವರದ್ದಾಗಿತ್ತು.

ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾದ ಎಸ್. ಎಲ್. ಧರ್ಮೇಗೌಡ, ಚಿಕ್ಕಮಗಳೂರು ತಾಲೂಕು ಬಿಳೇಕಲ್ಲಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಮಂಡಲ ಪಂಚಾಯಿತಿ ಪ್ರಧಾನರಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ್ದರು.

ನಂತರ ಸಹಕಾರ ಕ್ಷೇತ್ರದತ್ತ ಹೊರಳಿದ ಅವರು ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ, ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ, ಹಾಸನ ಹಾಲು ಒಕ್ಕೂಟದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜನತಾ ಬಜಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ವಿಮಾ ಸಹಕಾರ ಸಂಘದ ನಿರ್ದೇಶಕ, ರಾಜ್ಯ ಕೈಗಾರಿಕಾ ಬ್ಯಾಂಕ್ ನಿರ್ದೇಶಕ, ಹೊಸದಿಲ್ಲಿಯ ಕ್ರಿಬ್ಕೊ ಸಂಸ್ಥೆ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೊಟಾಷ್ ಲಿಮಿಟೆಡ್ ನಿರ್ದೇಶಕ, ಎನ್‍ಸಿಡಿಸಿ ನಿರ್ದೇಶಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿದ್ದರು.

ಒಮ್ಮೆ ತಾಲೂಕು ಪಂಚಾಯಿತಿ ಸದಸ್ಯ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಏಕ ಕಾಲಕ್ಕೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಆಯ್ಕೆಯಾಗಿ ಜನಸೇವೆ ಮಾಡಿದ ಹೆಗ್ಗಳಿಕೆ ಇವರದ್ದು.

ಬೀರೂರು ವಿಧಾನಸಭಾ ಕ್ಷೇತ್ರದಿಂದ ಜನತಾದಳದಿಂದ ಒಂದು ಬಾರಿ ಶಾಸಕರಾಗಿದ್ದರು. ನಂತರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸಿ. ಟಿ. ರವಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೀರೂರು ಕ್ಷೇತ್ರ ಮಾಯವಾದ ಮೇಲೆ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ಪರದಾಡಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾದ ನಂತರ ಎಸ್. ಎಲ್. ಧರ್ಮೇಗೌಡ ಅವರನ್ನು ವಿಧಾನ ಪರಿಷತ್‍ಗೆ ನೇಮಕ ಮಾಡಲಾಗಿತ್ತು. ನಂತರ ಉಪ ಸಭಾಪತಿ ಸ್ಥಾನವೂ ದಕ್ಕಿತ್ತು.

ಕಳೆದವಾರ ವಿಧಾನಸಭೆ ಅಧಿವೇಶನದಲ್ಲಿ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಪ್ರಕರಣದಲ್ಲಿ ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಎಸ್. ಎಲ್. ಧರ್ಮೇಗೌಡ ಅವರನ್ನು ಸದಸ್ಯರು ಎಳೆದಾಡಿ ರಂಪ ರಾಮಾಯಣ ಮಾಡಿದ್ದರು.

ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದ ಎಸ್. ಎಲ್. ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗುವಷ್ಟು ದುರ್ಬಲ ಮನಸ್ಸಿನವರಲ್ಲ ಎಂಬುದು ಜನರ ಅಭಿಪ್ರಾಯ. ಕೆಲ ವರ್ಷಗಳಿಂದ ಅನಾರೋಗ್ಯ ಕಾಣಿಸಿಕೊಂಡ ಕಾರಣ ಆರೋಗ್ಯದ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸುತ್ತಿದ್ದರು.

English summary
The body of deputy chairman of Karnataka legislative council S. L. Dharme Gowda was found dead. Here are the profile JD(S) leader Dharme Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X