• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಕಿನಿಯಿಂದ ಬುರ್ಖಾ; ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆಗಿದ್ದೇಗೆ?

|
Google Oneindia Kannada News

ಇರಾನೀ ಮಹಿಳೆಯರ ಹಳೆಯ ಫೋಟೋಗಳು ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಹರಿದಾಡುತ್ತಿರುವುದನ್ನು ಗಮನಿಸಿರಬಹುದು, ನೋಡಿರಬಹುದು. ಆ ಫೋಟೋಗಳಲ್ಲಿ ಇರಾನೀ ಮಹಿಳೆಯರು ಬಿಕಿನಿ ತೊಟ್ಟಿರುವುದನ್ನು ಕಂಡು ನಿಮಗೆ ಅಚ್ಚರಿ ಎನಿಸಿರಬಹುದು. ಅದು ನಿಜವಾ ಎನಿಸಬಹುದು.

ಇದು ನಿಜವೇ. 1979ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆಗುವುದಕ್ಕೂ ಮುಂಚೆ ಇದ್ದ ಸ್ಥಿತಿಗೂ ಈಗಿರುವ ಸ್ಥಿತಿಗೂ ಅಕ್ಷರಶಃ ಅಜ ಗಜ ಅಂತರ. ಅಷ್ಟಕ್ಕೂ ಎಪ್ಪತ್ತರ ದಶಕದಲ್ಲಿ ಇರಾನ್‌ನಲ್ಲಿ ಆ ಪರಿ ಮಹಾಪರಿವರ್ತನೆ ಆಗಿದ್ದು ಯಾಕೆ? ಕಟ್ಟರ್ ಇಸ್ಲಾಮಿಕ್ ದೇಶವಾಗಿ ಮಾರ್ಪಟ್ಟ ಇರಾನ್‌ನಲ್ಲಿ ಈಗ ಹಿಜಾಬ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳೂ ಅಚ್ಚರಿ ಮೂಡಿಸಬಹುದು.

ಇರಾನ್ ಅಧ್ಯಕ್ಷರು ಅಮೆರಿಕನ್ ನಿರೂಪಕಿಗೆ ಹೆಡ್‌ಸ್ಕಾರ್ಫ್ ಹಾಕಲು ಹೇಳಿದಾಗ...!!ಇರಾನ್ ಅಧ್ಯಕ್ಷರು ಅಮೆರಿಕನ್ ನಿರೂಪಕಿಗೆ ಹೆಡ್‌ಸ್ಕಾರ್ಫ್ ಹಾಕಲು ಹೇಳಿದಾಗ...!!

ಇರಾನ್ ಎಂಬುದು ವಿಶ್ವದ ಅತ್ಯಂತ ಪುರಾತನ ನಾಗರಿಕತೆಗಳ ಬೀಡು. ವಿಶ್ವದ ಅತಿದೊಡ್ಡ ಸಾಮ್ರಾಜ್ಯಗಳ ಕೇಂದ್ರಬಿಂದುವಾಗಿತ್ತು. ಬಹಳ ಭವ್ಯ ಇತಿಹಾಸ ಇರುವಂಥ ನಾಡು. ಹಿಂದೂ ಧರ್ಮಕ್ಕೆ ಬಹಳ ಸಾಮ್ಯ ಇರುವ ಜೊರೋಸ್ಟ್ರಿಯನ್ ಧರ್ಮದ ನೆಲೆಯಾಗಿದ್ದ ನಾಡು. ಪರ್ಷಿಯಾ ಎಂದೇ ಕರೆಸಿಕೊಳ್ಳುತ್ತಿದ್ದ ಇರಾನ್ ದೇಶ ಇಂದು ತೈಲ ಸಂಪತ್ತು ಬಿಟ್ಟರೆ ಬಹುತೇಕ ಹಲ್ಲು ಕಿತ್ತ ಹಾವಿನಂತಾಗಿದೆ ಎಂದು ತೋರಬಹುದು.

ಕ್ರಿಸ್ತ ಪೂರ್ವ 6ರಿಂದ 4ನೇ ಶತಮಾನದಲ್ಲಿ ಚಕ್ರವರ್ತಿ ಸೈರಸ್, ಒಂದನೇ ಡೇರಿಯಸ್ ಕಾಲಘಟ್ಟದಲ್ಲಿದ್ದ ಪರ್ಷಿಯಾ ಸಾಮ್ರಾಜ್ಯವನ್ನು ವಿಶ್ವದ ಮೊದಲ ಸೂಪರ್ ಪವರ್ ಎಂದು ಪರಿಗಣಿಸಲಾಗುತ್ತದೆ. ಅಖಾಮನಿಗಳ ಆಳ್ವಿಕೆ ಇದ್ದ ಪರ್ಷಿಯಾ ಸಾಮ್ರಾಜ್ಯ ಅದೆಷ್ಟು ವಿಶಾಲವಾಗಿತ್ತೆಂದರೆ ಆ ಕಾಲಘಟ್ಟದಲ್ಲಿ ಜಾಗತಿಕ ಜನಸಂಖ್ಯೆಯ ಶೇ. 40ರಷ್ಟು ಜನರು ಈ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದರೆಂದು ಇತಿಹಾಸಕಾರರು ಹೇಳುತ್ತಾರೆ.

ಇಸ್ಲಾಮೀಕರಣ ಮತ್ತು ಶಿಯಾ-ಸುನ್ನಿ

ಇಸ್ಲಾಮೀಕರಣ ಮತ್ತು ಶಿಯಾ-ಸುನ್ನಿ

ಏಳನೇ ಶತಮಾನದಲ್ಲೇ ಇರಾನ್ ಮೇಲೆ ಅರಬ್ ಮುಸ್ಲಿಮರು ಆಕ್ರಮಣ ಮಾಡಿದರಾದರೂ ಇರಾನ್ ಸಂಪೂರ್ಣ ಇಸ್ಲಾಮೀಕರಣ ಆಗಲು 11ನೇ ಶತಮಾನದವರೆಗೂ ಕಾಯಬೇಕಾಯಿತು. ಆ ಬಳಿಕ ಇರಾನ್ ಬಹಳಷ್ಟು ವಿದೇಶೀ ಆಕ್ರಮಣಗಳನ್ನು ಎದುರಿಸಬೇಕಾಯಿತು. ಮೊದಲಿಗೆ ಸುನ್ನಿ ಇಸ್ಲಾಂ ಪಂಥ ಇರಾನ್ ಅನ್ನು ಅವರಿಸಿತು. ಒಂದು ರೀತಿಯಲ್ಲಿ ಸುನ್ನಿ ಪಂಥಕ್ಕೆ ಇರಾನ್ ದೇಶವೇ ಪ್ರಮುಖ ಶಿಕ್ಷಣ ಕೇಂದ್ರವೆಂಬಂತೆ ಮಾರ್ಪಾಡಾಯಿತು. 16ನೇ ಶತಮಾನದಲ್ಲಿ ಸಫವಿ ರಾಜವಂಶದ ಸ್ಥಾಪಕ ಒಂದನೇ ಇಸ್ಮಾಯಿಲ್ ಆಧುನಿಕ ಇರಾನ್‌ನ ಬೆಳವಣಿಗೆಯ ರೂವಾರಿ ಎಂದು ಪರಿಗಣಿಸಲಾಗಿದೆ. ಈತ ರಾಜರ ರಾಜ, ಅಥವಾ ಶೆಹನ್‌ಶಾ ಎಂದು ಬಿರುದು ಪಡೆದಿದ್ದವ. ಇರಾನ್‌ನವರೇ ಆದ ಇಸ್ಮಾಯಿಲ್ ಈಗಿನ ಇರಾನ್, ಅಜುರ್‌ಬೈಜಾನ್, ಆರ್ಮೇನಿಯಾ, ಜಾರ್ಜಿಯಾ, ಇರಾಕ್, ಕುವೇತ್, ನಾರ್ತ್ ಕೌಕೇಸಸ್, ಅಫ್ಘಾನಿಸ್ತಾನದ ಇಡೀ ಭಾಗ ಹಾಗು ಪಾಕಿಸ್ತಾನ, ಟರ್ಕಿ, ಸಿರಿಯಾ, ಪಾಕಿಸ್ತಾನ, ಉಜ್ಬೆಕಿಸ್ತಾನದ ಒಂದಷ್ಟು ಭಾಗಗಳಿಗೆ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದ. ತನ್ನ ಶಿಯಾ ಪಂಥವನ್ನು ಈತ ಬಲವಂತವಾಗಿ ಹೇರಿದ್ದ. ಇರಾನ್ ದೇಶ ಸುನ್ನಿಯಿಂದ ಶಿಯಾಗೆ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಈತನ ಪರ್ಷಿಯನ್ ಸಾಮ್ರಾಜ್ಯದಲ್ಲಿ ಶಿಯಾ ಇಸ್ಲಾಂ ಅಧಿಕೃತ ಧರ್ಮವಾಗಿ ಹೋಯಿತು.

ಅರಬ್‌ನ ಇಸ್ಲಾಮೀಕರಣ, ಸಫವಿ ವಂಶದ ಇಸ್ಮಾಯಿಲ್‌ನಿಂದ ಶಿಯಾ ಇಸ್ಲಾಮೀಕರಣ ಆದ ನಂತರ ಇರಾನ್‌ನಲ್ಲಿ ಆದ ಪರಿವರ್ತನೆ ಎಂದರೆ 19-20ನೇ ಶತಮಾನದಲ್ಲಿ ಪಾಶ್ಚಿಮಾತ್ಯೀಕರಣ. ಆ ಬಳಿಕ, 1979ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಯೇ ಆಗಿಹೋಯಿತು. ಅದು ಇಸ್ಲಾಮಿಕ್ ಕ್ರಾಂತಿಯೋ ಅಥವಾ ಪಾಶ್ಚಿಮಾತ್ಯ ವರ್ಸಸ್ ಪರ್ಷಿಯನ್ ಸಂಸ್ಕೃತಿಯ ಯುದ್ಧವೋ, ಅಥವಾ ಪ್ರಜಾತಂತ್ರ ವರ್ಸಸ್ ಕಮ್ಯೂನಿಸ್ಟ್ ಸಂಘರ್ಷವೋ, ರಾಜ ವರ್ಸಸ್ ಪ್ರಜೆಯ ಸಂಘರ್ಷವೋ ನಿರ್ಧರಿಸುವುದು ಕಷ್ಟ. ಅಥವಾ ತೈಲ ಸಂಪತ್ತಿಗಾಗಿ ನಡೆದ ಪಾಪಗಳ ಫಲವಾಗಿ ಆದ ಕ್ರಾಂತಿಯೂ ಇರಬಹುದು. ಅಷ್ಟಕ್ಕೂ ಇಸ್ಲಾಮಿಕ್ ಕ್ರಾಂತಿ ಹೇಗಾಯಿತು? ಯಾಕಾಯಿತು?

ಇರಾನ್‌ನಲ್ಲಾದ ಇಸ್ಲಾಮಿಕ್ ಕ್ರಾಂತಿ ಬಹಳ ಮಂದಿಗೆ ಅಚ್ಚರಿ ಮೂಡಿಸಿತ್ತು. ಅಚ್ಚರಿ ಯಾಕೆಂದರೆ ಆವರೆಗೂ ಕ್ರಾಂತಿಗೆ ಕಿಡಿ ಹೊತ್ತಿಕೊಳ್ಳಲು ಇದ್ದ ಕಾರಣಗಳೇ ಬೇರೆ, ಇರಾನ್‌ನಲ್ಲಾದ ಕ್ರಾಂತಿಗೆ ಕಾರಣವೇ ಬೇರೆಯಾಗಿತ್ತು. ಕ್ರಾಂತಿ ಎಂದರೆ ಸಾಮಾನ್ಯವಾಗಿ ಬಡವರು, ರೈತರು, ಕೆಳವರ್ಗದವರು ಅಶಾಂತಿಗೊಂಡು ದಂಗೆ ಏಳುತ್ತಾರೆ, ಅಥವಾ ದೇಶದಲ್ಲಿ ಅಸಾಮಾನ್ಯ ಎನಿಸುವ ರೀತಿಯ ಆರ್ಥಿಕ ದುಸ್ಥಿತಿ ಇದ್ದರೆ ಜನರು ದಂಗೆ ಏಳುತ್ತಾರೆ, ಯುದ್ಧದಲ್ಲಿ ದೇಶ ಸೋತಾಗ ಜನರು ದಂಗೆ ಏಳುತ್ತಾರೆ. ಅಥವಾ ಸೈನಿಕರೊಳಗೆಯೇ ಅಸಮಾಧಾನಗಳು ಎದ್ದು ಆಡಳಿತ ವ್ಯವಸ್ಥೆ ವಿರುದ್ಧ ತಿರುಗಿ ನಿಂತಾಗ ಕ್ರಾಂತಿ ಆಗುತ್ತದೆ. ಇವು ಇತಿಹಾಸದಲ್ಲಿ ನಾನಾ ದೇಶಗಳಲ್ಲಿ ನಡೆದ ಕ್ರಾಂತಿಯ ಸಹಜ ಅಂಶಗಳು. ಆದರೆ, ಇರಾನ್ ಬಹುತೇಕ ಸುಸ್ಥಿತಿಯಲ್ಲಿದ್ದ ಕಾಲದಲ್ಲಿ ಮತ್ತು ಹೇಳಿಕೊಳ್ಳುವಂಥ ಯಾವುದೇ ಸಮಸ್ಯೆ ಇಲ್ಲದ ಕಾಲದಲ್ಲಿ ಇಸ್ಲಾಮಿಕ್ ಕ್ರಾಂತಿ ಆಗಿತ್ತು. ಇಸ್ಲಾಮಿಕ್ ಶಕ್ತಿಗಳ ಜೊತೆ ಕಮ್ಯೂನಿಸ್ಟರು ಸೇರಿ ಮಾಡಿದ ಕ್ರಾಂತಿ ಅದು. ಅಂತಿಮವಾಗಿ ರಾಜಾಡಳಿತವನ್ನು ತೊಡೆದುಹಾಕಿ ಇಸ್ಲಾಮಿಕ್ ರಾಷ್ಟ್ರ ಉದಯಕ್ಕೆ ಈ ಕ್ರಾಂತಿ ಎಡೆ ಮಾಡಿಕೊಟ್ಟಿತು.ಪಾಶ್ಚಿಮಾತ್ಯ ಸಂಸ್ಕೃತಿ
ಬ್ರಿಟನ್ ಮತ್ತು ಅಮೆರಿಕದ ಸಖ್ಯೆ ಮತ್ತು ಒಡನಾಟ ಹೆಚ್ಚು ಇದ್ದರಿಂದ ರೇಜಾ ಶಾ ಆಡಳಿತದಲ್ಲಿ ಇರಾನ್ ಪಾಶ್ಚಿಮಾತ್ಯ ನೀತಿಗಳಿಗೆ ಹೆಚ್ಚು ಒತ್ತುಕೊಟ್ಟಿತು. ಜನರು ಇಸ್ಲಾಮಿಕ್ ಆಚರಣೆಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರಲಿಲ್ಲ. ಪಾಶ್ಚಿಮಾತ್ಯ ಶೈಲಿಯ ಉಡುಗೆತೊಡುಗೆಗಳು ಇರಾನ್‌ನಲ್ಲಿ ಬಹಳ ಸಾಮಾನ್ಯವಾಗಿತ್ತು.

ತಂಬಾಕು ಉದ್ಯಮ
1979ರಲ್ಲಿ ಇಸ್ಲಾಮಿಕ್ ಕ್ರಾಂತಿ ಹೇಗಾಯಿತು, ಯಾಕಾಯಿತು ಎಂದು ತಿಳಿಯಬೇಕಾದರೆ, ಕೆಲ ದಶಕಗಳ ಮೊದಲಿನ ಬೆಳವಣಿಗೆಗಳನ್ನು ತಿಳಿಯುವುದು ಬಹಳ ಮುಖ್ಯ. 19ನೇ ಶತಮಾನದ ಅಂಚಿನಿಂದ ಈ ಕ್ರಾಂತಿಗೆ ಕಿಡಿ ಆಗಾಗ ಹೊತ್ತಿಕೊಳ್ಳುತ್ತಿದ್ದುದನ್ನು ಕಾಣಬಹುದು. ಆಗ ಶಾ ವಂಶದ ಆಡಳಿತ ಇತ್ತು. ಶಾ ರಾಜರು ತಮ್ಮ ಪ್ರಜೆಗಳನ್ನು ಬಹಳ ತುಚ್ಛವಾಗಿ ಕಾಣುತ್ತಿದ್ದರೆಂದು ಹೇಳಲಾಗುತ್ತದೆ. ಜನಸಾಮಾನ್ಯರು ಈ ರಾಜರ ಆಡಳಿತಕ್ಕೆ ರೋಸಿಹೋಗಿದ್ದರು.

ಇರಾನ್‌ನಲ್ಲಿ ತಂಬಾಕು ಉದ್ಯಮ ಪ್ರಬಲವಾಗಿತ್ತು. ಆಗ 2 ಲಕ್ಷ ಜನರು ಈ ಉದ್ಯಮದ ಮೇಲೆ ಅವಲಂಬಿತವಾಗಿದ್ದರು. ಅಂದಿನ ರಾಜ ನಾಸೀರ್ ಅಲ್-ದಿನ್ ಶಾ ತಮ್ಮ ದೇಶದ ತಂಬಾಕು ಉತ್ಪಾದನೆ, ಮಾರಾಟ ಮತ್ತು ರಫ್ತನ್ನು ಬ್ರಿಟಿಷರಿಗೆ 50 ವರ್ಷಗಳವರೆ ಹಕ್ಕನ್ನು ಕೊಟ್ಟುಬಿಟ್ಟರು. ಆಗ ಪರ್ಷಿಯನ್ ರೈತರು ಮತ್ತು ಜನಸಾಮಾನ್ಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ, ಮುಷ್ಕರ ಮಾಡಿದ್ದರು. ಪರಿಣಾಮವಾಗಿ ರಾಜ ತನ್ನ ನಿರ್ಧಾರವನ್ನು ಹಿಂಪಡೆಯಬೇಕಾಯಿತು.

ಇಸ್ಲಾಮಿಕ್ ಕ್ರಾಂತಿಗೆ ನಾಂದಿ ಹಾಡಿದ ದೇಶ ಇರಾನ್‌ನಲ್ಲಿ ಹಿಜಾಬ್‌ ವಿರೋಧಿಸಿದ ಮಹಿಳೆಯರುಇಸ್ಲಾಮಿಕ್ ಕ್ರಾಂತಿಗೆ ನಾಂದಿ ಹಾಡಿದ ದೇಶ ಇರಾನ್‌ನಲ್ಲಿ ಹಿಜಾಬ್‌ ವಿರೋಧಿಸಿದ ಮಹಿಳೆಯರು

ತೈಲ ಸಂಪತ್ತು

ತೈಲ ಸಂಪತ್ತು

1901ರಲ್ಲಿ ಬಹಳ ಮಹತ್ವದ ಬೆಳವಣಿಗೆ ಆಯಿತು. ಬ್ರಿಟನ್ ದೇಶದ ಆಂಗ್ಲೋ-ಪರ್ಷಿಯನ್ ಆಯಿಲ್ ಕಂಪನಿಗೆ ಇರಾನ್‌ನಲ್ಲಿ ತೈಲ ನಿಕ್ಷೇಪ ಶೋಧಿಸುವ, ಉತ್ಪಾದಿಸಿ ಮಾರುವ ಹಕ್ಕನ್ನು ಕೊಡಲಾಯಿತು. ಭಾರತದಿಂದ ಬ್ರಿಟಿಷರು ಹೇಗೆ ಕೋಟಿ ಕೋಟಿ ಲೂಟಿ ಮಾಡಿ ತಮ್ಮ ಕೈಗಾರಿಕಾ ಕ್ರಾಂತಿಗೆ ಬಳಸಿಕೊಂಡರೋ ಹಾಗೆಯೇ ಇರಾನ್‌ನ ತೈಲ ಸಂಪತ್ತು ಬ್ರಿಟಿಷ್ ಖಜಾನೆ ಸೇರತೊಡಗಿತು. ಒಂದೆಡೆ ತೈಲ ಸಂಪತ್ತು ಇದ್ದರೂ ಇರಾನಿಯರು ಬಡಸ್ತನದಲ್ಲೇ ಇದ್ದರೆ, ವ್ಯಾಪಾರಿಗಳಾದ ಬ್ರಿಟಿಷರು ಸಂಪತ್ತಿನ ಮೇಲೆ ಸಂಪತ್ತು ಶೇಖರಿಸತೊಡಗಿದ್ದರು.

20ನೇ ಶತಮಾನದ 40-50ರ ದಶಕದಲ್ಲಿ ಮೊಸಾದ್ದೆಗ್ ಜನತಾ ನಾಯಕನಾಗಿ ಹೊರಹೊಮ್ಮಿದರು. ತೈಲ ಮಾರಾಟದಲ್ಲಿ ಬ್ರಿಟಿಷ್‌ ಕಂಪನಿ ಹೊಂದಿದ್ದ ಏಕಸ್ವಾಮ್ಯತೆಯನ್ನು ಕೊನೆಗಾಣಿಸುವ ಉದ್ದೇಶದಿಂದ ತೈಲ ರಾಷ್ಟ್ರೀಕರಣ ಮಾಡುವ ಹೋರಾಟವನ್ನು ಮೊಸಾದ್ದೆಗ್ ಮಾಡಿದರು. ಅವರ ನೇತೃತ್ವದಲ್ಲಿ ನ್ಯಾಷನಲ್ ಫ್ರಂಟ್ ಪಕ್ಷ ಜನಪ್ರಿಯವಾಯಿತು. ತೈಲ ರಾಷ್ಟ್ರೀಕರಣ ವಿರೋಧಿಸಿದ್ದ ಅಂದಿನ ಪ್ರಧಾನಿ ಹಾಜ್ ಅಲಿ ರಾಜಮಾರ ಅವರನ್ನು ಹತ್ಯೆ ಮಾಡಲಾಯಿತು. ಅದಾದ ಬಳಿಕ ಮಹಾರಾಜ ರೇಜಾ ಶಾ ಪಹಲವಿ ಅವರು ಮೊಸಾದ್ದೆಗ್‌ರನ್ನು ಪ್ರಧಾನಿ ಮಾಡಬೇಕಾಯಿತು.

ಇಲ್ಲಿ ಮೊಸಾದ್ದೆಗ್ ಇರಾನೀ ತೈಲ ಉದ್ಯಮವನ್ನು ರಾಷ್ಟ್ರೀಕರಣ ಮಾಡಿದರು. ಇದರಿಂದ ಇರಾನ್ ತೈಲ ಸಂಪತ್ತಿನ ಹಕ್ಕು ಬ್ರಿಟಿಷ್ ಕೈತಪ್ಪಿ ಹೋಯಿತು. ಭಾರೀ ಲಾಭ ತಂದುಕೊಡುತ್ತಿದ್ದ ತೈಲ ಸಂಪತ್ತಿನ ಮೇಲೆ ಮತ್ತೆ ಅಧಿಪತ್ಯ ಸಾಧಿಸುವ ಸಲುವಾಗಿ ಅಮೆರಿಕ ಮತ್ತು ಬ್ರಿಟಿಷ್ ಸೇನಾಪಡೆಗಳು ಇರಾನ್ ರಾಜಕೀಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದವು. ಆಪರೇಷನ್ ಅಜಾಕ್ಸ್ ಸಿದ್ಧಗೊಂಡಿತು. ಇರಾನ್ ಲೋಕಸಭೆಯನ್ನು ಅತಂತ್ರಗೊಳಿಸಿ ರೇಜಾ ಶಾ ಪಹಲವಿ ಬೆಂಬಲಿತ ಪಕ್ಷಗಳಿಗೆ ಅಧಿಕಾರ ಸಿಗುವಂತೆ ಮಾಡುವ ಮಹಾಪ್ಲಾನ್ ಅದು. 1953 ಆಗಸ್ಟ್ 19ರಂದು ಅವರ ಈ ಆಪರೇಷನ್ ಯಶಸ್ವಿಯಾಗುತ್ತದೆ. ಪಹಲವಿಗೆ ಅಧಿಕಾರ ಪ್ರಾಪ್ತಿಯಾಗುತ್ತದೆ. ಅಮೆರಿಕ ಮತ್ತು ಬ್ರಿಟನ್ ಬೆಂಬಲದೊಂದಿಗೆ ಕೆಲ ದಶಕಗಳ ಕಾಲ ಪಹಲವಿ ಆಡಳಿತ ನಡೆಸುತ್ತಾರೆ.

ಬ್ರಿಟಿಷ್ ವರ್ಸಸ್ ರಷ್ಯಾ

19ನೇ ಶತಮಾನದಲ್ಲಿ ಬ್ರಿಟನ್ ಮತ್ತು ರಷ್ಯಾ ನಡುವಿನ ಪೈಪೋಟಿಯಲ್ಲಿ ಇರಾನ್ ಒಂದು ರೀತಿಯ ದಾಳದ ರೀತಿಯಾಗಿ ಹೋಗಿತ್ತು. ಹಿಟ್ಲರ್ ಕಾಲದಲ್ಲಿ ಜರ್ಮನಿಗೆ ಬ್ರಿಟನ್ ಮತ್ತು ರಷ್ಯಾ ಸಮಾನ ಶತ್ರುಗಳಾಗಿ ಹೋಗಿದ್ದರು. ಆಗ ಇರಾನ್‌ನಲ್ಲಿ ದೊರೆಯಾಗಿದ್ದ ರೇಜಾ ಶಾ ಜರ್ಮನಿಗೆ ಹತ್ತಿರವಾಗಿದ್ದರು. ಹೀಗಾಗಿ, ಬ್ರಿಟಿಷ್ ಮತ್ತು ಸೋವಿಯತ್ ಪಡೆಗಳು ಒಟ್ಟಿಗೆ ಸೇರಿ 1941ರಲ್ಲಿ ರೇಜಾ ಶಾರನ್ನು ಸೋಲಿಸಿ ಅವರ ಮಗ ಮೊಹಮ್ಮದ್ ರೇಜಾ ಪಹಲವಿಯನ್ನು ಅಧಿಕಾರಕ್ಕೆ ಕೂರಿಸಿದ್ದರು.

ಆದರೆ, ಎರಡನೇ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಯುಎಸ್‌ಎಸ್‌ಆರ್ ಮಧ್ಯೆ ಶೀತನ ಸಮರ ಮೊದಲಿಟ್ಟಿತು. ಬ್ರಿಟಿಷರು ಮತ್ತು ರಷ್ಯನ್ನರು ಶತ್ರುಗಳಾದರು. ಮೊಸಾದ್ದೆಗ್ ಪ್ರಧಾನಿಯಾದಾಗ ತೈಲ ಉದ್ಯಮ ರಾಷ್ಟ್ರೀಕರಣ ಮಾಡಲಾಯಿತು. ಅದರ ಹಿಂದಿನ ಚಿತಾವಣೆ ರಷ್ಯಾ ಮಾಡಿತ್ತು ಎಂಬುದು ಬ್ರಿಟಿಷರ ಅನುಮಾನ. ಹೀಗಾಗಿ, ಮೊಸಾದ್ದೆಗ್ ಸರಕಾರವನ್ನು ಬ್ರಿಟಿಷರು ಬುಡಮೇಲು ಮಾಡಿ ಮೊಹಮ್ಮದ್ ರೇಜಾ ಪಹಲವಿಗೆ ಅಧಿಕಾರ ಸಿಗುವಂತೆ ಮಾಡಿದ್ದರು. 1979ರವರೆಗೂ ಪಹಲವಿ ಅಧಿಕಾರ ಸಾಗಿತ್ತು.

ಆಯತುಲ್ಲಾ ಖೊಮೇನಿ

ಆಯತುಲ್ಲಾ ಖೊಮೇನಿ

ಇದೇ ವೇಳೆ ಶಿಯಾ ಮುಸ್ಲಿಮ್ ಧರ್ಮಗುರು ಆಯತೊಲ್ಲಾ ರುಹಲ್ಲಾ ಖೊಮೇನಿ 1963ರಲ್ಲಿ ಪಹಲವಿ ವಿರುದ್ಧ ಹೋರಾಟ ರೂಪಿಸದರು. ಇರಾನ್‌ನಾದ್ಯಂತ ದೊಡ್ಡ ಮಟ್ಟದಲ್ಲಿ ದಂಗೆಗಳಾದವು. 15 ಸಾವಿರ ಜನರು ಪೊಲೀಸ್ ಫೈರಿಂಗ್‌ನಲ್ಲಿ ಸತ್ತರೆಂದು ಹೇಳಲಾಗುತ್ತದೆ. ಇಸ್ರೇಲ್ ಜೊತೆ ಇರಾನ್ ನಿಕಟ ಸಂಬಂಧ ಹೊಂದಿರುವುದನ್ನು ಖೊಮೇನಿ ಬಲವಾಗಿ ವಿರೋಧಿಸಿದ್ದರು. ಆದರೆ, ಖೊಮೇನಿ ಹೋರಾಟಕ್ಕೆ ಜಗ್ಗದ ಇರಾನ್ ಸರಕಾರ ಆತನನ್ನು ಬಾರಿ ಬಾರಿ ಬಂಧಿಸುತ್ತದೆ. 1964 ನವೆಂಬರ್‌ನಲ್ಲಿ ಖೊಮೇನಿಯನ್ನು ಗಡೀಪಾರು ಮಾಡುತ್ತದೆ. 1979ರಲ್ಲಿ ಇರಾನ್‌ಲ್ಲಿ ಇಸ್ಸಾಮಿಕ್ ಕ್ರಾಂತಿ ಆಗುವವರೆಗೂ ಖೊಮೇನಿ ನೆರೆಯ ಇರಾಕ್‌ನಲ್ಲಿ ಆಶ್ರಯ ಪಡೆದಿದ್ದರು.

ಇಸ್ಲಾಮಕ್ ಕ್ರಾಂತಿ ಯಾಕೆ?

ಮೊಹಮ್ಮದ್ ರೇಜಾ ಪಹಲವಿ ಆಡಳಿತದ ಅವಧಿಯಲ್ಲಿ ಇರಾನ್ ದೇಶದ ಸಂಪತ್ತು ಹೆಚ್ಚುತ್ತಾ ಹೋಗಿತ್ತು. ಸಮಾಜದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಬೆರೆತುಹೋಗಿತ್ತು. ಈ ಸಂದರ್ಭದಲ್ಲಿ ಇಸ್ಲಾಮಿಕ್ ಧರ್ಮಪ್ರಚಾರ ಹೆಚ್ಚು ಪ್ರಚಲಿತಕ್ಕೆ ಬರತೊಡಗಿತು. ಇರಾನ್ ವಸಾಹತುಶಾಹಿಗೆ ಒಳಗಾಗಿದೆ, ಬಂಡವಾಳಶಾಹಿಗಳ ಗುಲಾಮಗಿರಿಗೆ ಈಡಾಗಿದೆ. ಈ ಸಂಕೋಲೆಗಳಿಂದ ಇರಾನ್ ಅನ್ನು ಮುಕ್ತಗೊಳಿಸಲು ಇಸ್ಲಾಮಿಕ್ ದೇಶವಾಗಿ ಮಾಡುವುದೊಂದೇ ದಾರಿ ಎಂದು ಧರ್ಮಗುರುಗಳು ಹೇಳತೊಡಗಿದರು. ಜನರಿಗೂ ಇದು ಸರಿ ಎನಿಸತೊಡಗಿತು.

ಇಸ್ಲಾಮಿಕ್ ಸಂಘಟನೆಗಳು ಹೋರಾಟಗಳನ್ನು ಕಟ್ಟತೊಡಗಿದರು. ಬ್ರಿಟಿಷರು ಮತ್ತು ಅಮೆರಿಕನ್ನರ ಮೇಲೆ ಹಗೆ ಸಾಧಿಸಬೇಕೆಂದಿದ್ದ ಕಮ್ಯೂನಿಸ್ಟರು ಇಸ್ಲಾಮಿಕ್ ಶಕ್ತಿಗಳಿಗೆ ಬೆಂಬಲ ಕೊಟ್ಟರು. ರಾಜರು ಮತ್ತವರ ಕುಟುಂಬದವರು ಶೇಖರಿಸಿದ್ದ ಅಪಾರ ಸಂಪತ್ತಿನ ವಿರುದ್ಧ ಜನಾಭಿಪ್ರಾಯ ರೂಪಿಸಿದರು. ಇರಾನ್ ಜನರನ್ನು ಕಷ್ಟಕ್ಕೆ ಸಿಲುಕಿಸಿ ಅವರು ಐಷಾರಾಮಿಯಾಗಿ ಜೀವನ ನಡೆಸುತ್ತಿದ್ದಾರೆಂದು ಬಿಂಬಿಸಲಾಯಿತು. ಎಪ್ಪತ್ತರ ದಶಕದಲ್ಲಿ ಇರಾನ್‌ನಲ್ಲಿ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾದಾಗ ಜನರ ಆಕ್ರೋಶ ಹೆಚ್ಚುವಂತೆ ಮಾಡಲಾಯಿತು.

1978ರಿಂದ ಅಲ್ಲಲ್ಲಿ ಪ್ರತಿಭಟನೆಗಳು ನಡೆಯತೊಡಗಿದವು. ಅವು ದೊಡ್ಡಮಟ್ಟದಲ್ಲಿ ಯೋಜಿತಗೊಳ್ಳತೊಡಗಿದವರು. ರಾಜ ಶಾಗೂ ಇದು ಅನಿರೀಕ್ಷಿತವಾಗಿತ್ತು. ಹಲವಾರ ನಗರಗಲ್ಲಿ ಜನರ ಪ್ರತಿಭಟನೆ ತೀವ್ರವಾಗಿ ನಡೆಯತೊಡಗಿದವು. ಆದರೂ ಶಾ ಅವರು ತಮ್ಮ ಉದಾರೀಕರಣ ನೀತಿಯನ್ನು ಜಾರಿಗೊಳಿಸುವ ಪ್ರಯತ್ನ ಮುಂದುವರಿಸಿದರು. ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕದೇ ಸಂಧಾನದ ಹಾದಿ ಮೂಲಕ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಅದ್ಯಾವುದೂ ಉಪಯೋಗಕ್ಕೆ ಬರಲಿಲ್ಲ.

ರೆಕ್ಸ್ ಥಿಯೇಟರ್ ಘಟನೆಯ ಕಿಡಿ

ಇರಾನ್‌ನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ ಕ್ರಾಂತಿಯಾಗುವ ಮಟ್ಟಕ್ಕೆ ಹೋಗಲು ಕಾರಣವಾಗಿದ್ದು ಸಿನಿಮಾ ರೆಕ್ಸ್ ಥಿಯೇಟರ್‌ಗೆ ಬೆಂಕಿ ಬಿದ್ದ ಘಟನೆ. ಅಬಾದಾನ್ ನಗರದ ರೆಕ್ಸ್ ಥಿಯೇಟರ್‌ನಲ್ಲಿ 1978 ಆಗಸ್ಟ್ 19ರಂದು ಜನರು ಸಿನಿಮಾವೊಂದನ್ನು ವೀಕ್ಷಿಸುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಚಿತ್ರಮಂದಿರಕ್ಕೆ ಬೆಂಕಿ ಹಚ್ಚಿದ್ದರು. ಆ ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

ಆ ಬೆಂಕಿ ಹಚ್ಚಿದ ನಾಲ್ವರು ದುಷ್ಕರ್ಮಿಗಳು ಯಾರೆಂದು ಈವರೆಗೂ ಗೊತ್ತಾಗಿಲ್ಲ. ಶಾ ರಾಜರು ಇದು ಇಸ್ಲಾಮಿಕ್ ಕಮ್ಯೂನಿಸ್ಟರ ಕೃತ್ಯ ಎಂದು ಆರೋಪಿಸಿದರೆ, ಪ್ರತಿಭಟನಾಕಾರರು ಇರಾನ್ ಪೊಲೀಸರ ಮೇಲೆ ಬೊಟ್ಟು ಮಾಡಿದ್ದರು. ಆದರೆ, ಜನರ ಆಕ್ರೋಶ ಮಾತ್ರ ರಾಜ ಶಾ ಮೇಲೆ ನೆಟ್ಟಿತು. ಪ್ರತಿಭಟಿಸುತ್ತಿದ್ದವರ ಸಂಖ್ಯೆ ಲಕ್ಷಾಂತರಕ್ಕೇರಿತು. ಪ್ರತಿಭಟನೆ ತೀವ್ರತೆ ದಿನೇ ದಿನೇ ಹೆಚ್ಚಾಗತೊಡಗಿತು.

ಫ್ರೆಂಚ್ ಕ್ರಾಂತಿಯನ್ನೂ ಮೀರಿಸಿತ್ತು....

ಫ್ರೆಂಚ್ ಕ್ರಾಂತಿಯನ್ನೂ ಮೀರಿಸಿತ್ತು....

1978 ಡಿಸೆಂಬರ್ 10 ಮತ್ತು 11ರಂದು ಇರಾನ್‌ನಾದ್ಯಂತ ಬೃಹತ್ ಮೆರವಣಿಗೆಗಳು ನಡೆದವು. ಅವು ಮೊಹರ್ರಂನ 9 ಮತ್ತು 10ನೇ ದಿನ. ಅಂದು 60 ಲಕ್ಷ ಮತ್ತು 90 ಲಕ್ಷ ಜನರು ಆ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದು ಐತಿಹಾಸಿಕವಾದುದು. ಇರಾನ್‌ನ ಶೇ. 10ಕ್ಕಿಂತ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದು ಸಣ್ಣ ವಿಷಯವಲ್ಲ. ವಿಶ್ವದ ಯಾವುದೇ ಕ್ರಾಂತಿ ತೆಗೆದುಕೊಂಡರೂ ಅಲ್ಲಿ ಶೇ. 1ಕ್ಕಿಂತ ಹೆಚ್ಚು ಜನರು ಕ್ರಾಂತಿಯಲ್ಲಿ ಪಾಲ್ಗೊಂಡಿದ್ದು ಇಲ್ಲ. ಇರಾನ್‌ನಲ್ಲಿ ಶೇ. 10ಕ್ಕಿಂತ ಹೆಚ್ಚು ಜನರು ಕ್ರಾಂತಿಯಲ್ಲಿ ತೊಡಗಿದ್ದರು. ಇರಾನ್ ಜನರಿಗೂ ಆಗ ತಮ್ಮ ದೇಶದಲ್ಲಿ ಕ್ರಾಂತಿ ಆಗುತ್ತಿರುವುದು ಭಾಸವಾಗಿ ಉತ್ಸಾಹ ಹೆಚ್ಚಿಸಿತ್ತು.

ಇಷ್ಟು ದೊಡ್ಡ ಮಟ್ಟದ ಕ್ರಾಂತಿಯನ್ನು ನಿರೀಕ್ಷಿಸದ ಸರಕಾರ ಮತ್ತು ಸೇನೆ ಮಾನಸಿಕವಾಗಿ ಕುಂದಿಹೋಗಿತ್ತು. ಪರಿಣಾಮವಾಗಿ ಮಹಾರಾಜ ಶಾ ಪಹಲವಿ ದೇಶ ಬಿಟ್ಟು ಹೋಗಬೇಕಾಯಿತು. ಹೋಗುವ ಮುನ್ನ 1979 ಜನವರಿ 16ರಂದು ಅವರು ಬಖ್ತಿಯಾರ್ ಅವರನ್ನು ಪ್ರಧಾನಿಯಾಗಿ ನೇಮಿಸಿದರು.

ಶಾ ದೇಶ ತೊರೆಯುತ್ತಿದ್ದಂತೆಯೇ ಇರಾನ್ ಜನತೆ ದೇಶಾದ್ಯಂತ ಸಂಭ್ರಮ ಆಚರಿಸಿತು. ಪ್ರಧಾನಿಗಳು ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಿದರು. ಕ್ರಾಂತಿಕಾರರನ್ನು ಸರಕಾರದ ಭಾಗವಾಗಲು ಆಹ್ವಾನಿಸಿದರು. ಗಡೀಪಾರು ಮಾಡಲಾಗಿದ್ದ ಅಯತುಲ್ಲಾ ಖೊಮೇನಿ ಅವರನ್ನು ಹೊಸ ಪ್ರಧಾನಿಗಳು ದೇಶಕ್ಕೆ ಆಹ್ವಾನಿಸಿದರು. ಅಷ್ಟರಲ್ಲಿ ಖೊಮೇನಿ ಇರಾನೀ ಜನತೆಯ ಪಾಲಿಗೆ ದೈವಕ್ಕೆ ಸಮವಾಗಿ ಹೋಗಿದ್ದರು.

ಖೊಮೇನಿಯೇ ಇರಾನ್‌ನ ಸ್ವಘೋಷಿತ ಸರ್ವಾಧಿಕಾರಿಯಾಗಿ ಮಾರ್ಪಟ್ಟರು. ತಮ್ಮನ್ನು ಆಹ್ವಾನಿಸಿದ್ದ ಪ್ರಧಾನಿ ಬಖ್ತಿಯಾರ್‌ರನ್ನು ತಿರಸ್ಕರಿಸಿ ವಿಪಕ್ಷ ನಾಯಕ ಮೆಹದಿ ಬಜಾರ್ಗಮ್‌ರನ್ನು ಪ್ರಧಾನಿಯಾಗಿ ನೇಮಿಸಿದರು. ಇರಾನ್‌ನಲ್ಲಿ ಎರಡು ಸರಕಾರಗಳಾದವು.

ಖೊಮೇನಿಗೆ ಜನರ ಬೆಂಬಲ ಇತ್ತು. ಬಖ್ತಿಯಾರ್ ಪರ ಇದ್ದ ಜನರ ಸಂಖ್ಯೆ ಕಡಿಮೆ ಇತ್ತು, ಅಧಿಕಾರಿಗಳೂ ಕೂಡ ನಿಷ್ಠೆ ಬದಲಿಸತೊಡಗಿದರು. ಇರಾನ್‌ನ ಮಿಲಿಟರಿಯ ಸ್ಥೈರ್ಯ ಕೂಡ ಕಡಿಮೆಯಾಗಿ ಹೋಗಿತ್ತು. ಖೊಮೇನಿ ಪರ ಇದ್ದ ಸೇನೆಯ ಗುಂಪುಗಳು ನಿಧಾನವಾಗಿ ಮೇಲುಗೈ ಸಾಧಿಸತೊಡಗಿದವು. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಗೆರಿಲ್ಲಾ ಪಡೆಗಳೂ ಈ ಕಾರ್ಯದಲ್ಲಿ ಕೈಜೋಡಿಸಿದವು.

ಶಸ್ತ್ರಾಸ್ತ್ರ ಕಾರ್ಖಾನೆಯನ್ನು ವಶಕ್ಕೆ ಪಡೆದು 50 ಸಾವಿರ ಮೆಷಿನ್ ಗನ್‌ಗಳನ್ನು ಕೊಳ್ಳೆ ಹೊಡೆದು ಬಂಡುಕೋರರಿಗೆ ಕೊಡಲಾಯಿತು. ಖೊಮೇನಿ ಪರ ಇದ್ದ ಗುಂಪಿನ ಪ್ರಾಬಲ್ಯ ಹೆಚ್ಚಾಯಿತು. ಕೊನೆಗೆ ಇರಾನ್ ಮಿಲಿಟರಿ ತನ್ನ ಪ್ರತಿರೋಧವನ್ನು ಅಂತ್ಯಗೊಳಿಸಿತು. ಖೊಮೇನಿ ಪರ ಬೆಂಬಲಿಗರು ಸರಕಾರದ ಎಲ್ಲಾ ಕಟ್ಟಡಗಳು, ಇಲಾಖೆಗಳು, ರಾಜರ ಅರಮನೆ ಇತ್ಯಾದಿಯನ್ನು ಆಕ್ರಮಿಸಿದರು.

ಪ್ರಧಾನಿ ಬಖ್ತಿಯಾರ್ ಮಾರುವೇಶದಲ್ಲಿ ಪಹಲವಿ ಅರಮನೆಯನ್ನು ತೊರೆದು ದೇಶ ಬಿಟ್ಟು ಹೋಗಬೇಕಾಯಿತು. ಇದಾಗಿ ಬಹಳ ವರ್ಷಗಳ ನಂತರ ಬಖ್ತಿಯಾರ್‌ನನ್ನು ಹತ್ಯೆ ಮಾಡಲಾಯಿತು.

ಇಸ್ಲಾಮಿಕ್ ರಿಪಬ್ಲಿಕ್ ಸರಕಾರ ಸ್ಥಾಪನೆ

ಇಸ್ಲಾಮಿಕ್ ರಿಪಬ್ಲಿಕ್ ಸರಕಾರ ಸ್ಥಾಪನೆ

1979 ಮಾರ್ಚ್ 30 ಮತ್ತು 31ರಂದು ರಾಜಾಡಳಿತ ಕಿತ್ತು ಇಸ್ಲಾಮಿಕ್ ಗಣತಂತ್ರವಾಗಿ ಇರಾನ್ ಅನ್ನು ಬದಲಾಯಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಶೇ. 98.2ರಷ್ಟು ಜನರು ಇಸ್ಲಾಮಿಕ್ ರಿಪಬ್ಲಿಕ್ ಪರವಾಗಿ ಮತ ಚಲಾಯಿಸಿರು.

ಆ ವರ್ಷ ಡಿಸೆಂಬರ್ ತಿಂಗಳಲ್ಲಿ ಸಂಪೂರ್ಣ ಇಸ್ಲಾಮೀ ಸಿದ್ಧಾಂತಗಳಿಗೆ ಬದ್ಧವಾಗಿರುವ ಸಂವಿಧಾನಕ್ಕೆ ಖೊಮೇನಿ ಅನುಮೋದನೆ ನೀಡಿದರು. ಇರಾನ್ ಇಸ್ಲಾಮಿಕ್ ರಿಪಬ್ಲಿಕ್ ರಾಷ್ಟ್ರವಾಯಿತು.

ಕಮ್ಯೂನಿಸ್ಟರಿಗೆ ಪಾಠ
ಇರಾನ್ ಕ್ರಾಂತಿಯಲ್ಲಿ ಇಸ್ಲಾಮಿಕ್ ಸಂಘಟನೆಗಳ ಜೊತೆ ಕೈ ಜೋಡಿಸಿದ್ದ ಕಮ್ಯೂನಿಸ್ಟರಿಗೆ ಹೊಸ ಇರಾನೀ ನಾಯಕತ್ವ ಬಹುದೊಡ್ಡ ಪಾಠ ಕಲಿಸಿತು. ಕ್ರಾಂತಿಯ ನಂತರ ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾಗಿ ಮಾರ್ಪಟ್ಟಿತು. ಜಾತ್ಯತೀತತೆ, ಪ್ರಗತಿಪರತೆ ಇತ್ಯಾದಿ ಉದಾರ ಧೋರಣೆ ಹೊಂದಿದ್ದವರೆಲ್ಲರವನ್ನೂ ಮೂಲೆಗುಂಪು ಮಾಡಲಾಯಿತು. ಕಮ್ಯೂನಿಸ್ಟ್ ನಾಯಕರೂ ಇದನ್ನು ನಿರೀಕ್ಷಿಸಿರಲಿಲ್ಲ. ಕಟ್ಟರ್ ಇಸ್ಲಾಮೀಕರಣವನ್ನು ಕಮ್ಯೂನಿಸ್ಟರು ಸೇರಿದಂತೆ ಪ್ರಗತಿಪರರ ಅಲ್ಲಲ್ಲಿ ವಿರೋಧಿಸತೊಡಗಿದರಾದರೂ ಅದು ದೊಡ್ಡ ಹೋರಾಟವಾಗಿ ಬೆಳೆಯಲು ಸಾಧ್ಯವಾಗಲಿಲ್ಲ.

ಖೊಮೇನಿ ಬೆಂಬಲಿಗರ ಶಕ್ತಿ ಸರ್ವಾಧಿಕವಾಗಿತ್ತು. ಇಸ್ಲಾಮಿಕ್ ಕ್ರಾಂತಿಯ ಜೊತೆಗೆ ಕಟ್ಟರ್ ಸಾಂಸ್ಕೃತೀಕರಣವೂ ಜರುಗಿತು. ಎಡಪಂಥೀಯರನ್ನು ಹುಡುಕಿಹುಡುಕಿ ಓಡಿಸತೊಡಗಿದರು. ಪಾಶ್ಚಿಮಾತ್ಯ ಪದ್ಧತಿ ಅನುಸರಿಸುತ್ತಿದ್ದಾರೆಂದು ಅನುಮಾನ ಸಾವಿರಾರು ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸಿ ಬೇರೆಯವರನ್ನು ನೇಮಿಸಿಕೊಳ್ಳಲಾಯಿತು. ಇರಾನ್ ಕ್ರಾಂತಿಯ ನಂತರ ಕಮ್ಯೂನಿಸ್ಟ್ ಆಡಳಿತ ತರುವ ಯೋಜನೆಯಲ್ಲಿದ್ದ ಎಡಪಂಥೀಯರಿಗೆ ಭೂಗತವಾಗುವುದು ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿ ಹೋಗಿತ್ತು.

1981ರಿಂದ 82ರ ಒಂದು ವರ್ಷದ ಅವಧಯಲ್ಲಿ ಇಸ್ಲಾಮಿಕ್ ಧರ್ಮವನ್ನಪ್ಪದ ಎಲ್ಲರನ್ನೂ ಗುರಿ ಮಾಡಿ ನಿರ್ಮೂಲನೆ ಮಾಡುವ ಕಾರ್ಯವಾಯಿತು. ಮಾರ್ಕ್ಸ್‌ವಾದಿ ಕಮ್ಯೂನಿಸ್ಟರು, ನಾಸ್ತಿಕರು, ಉದಾರಿ ಇಸ್ಲಾಂವಾದಿಗಳು, ಜಾತ್ಯತೀತರು, ಪ್ರಜಾತಂತ್ರವಾದಿಗಳು, ರಾಜನ ಪರವಾಗಿರುವವರು ಹೀಗೆ ಕಟ್ಟರ್ ಇಸ್ಲಾಮೀಕರಣಕ್ಕೆ ವಿರುದ್ಧವಾಗಿದ್ದವರೆಲ್ಲರನ್ನೂ ಟಾರ್ಗೆಟ್ ಮಾಡಲಾಯಿತು. ಈ ಒಂದು ವರ್ಷದ ಅವಧಿಯಲ್ಲಿ ಇಂಥ ಸಾವಿರಾರು ಮಂದಿಯನ್ನು ನೇಣಿಗೇರಿಸಲಾಯಿತು. ವಿದೇಶಗಳಲ್ಲಿ ಓದಿದ ಮಕ್ಕಳನ್ನೂ ಬಿಡಲಿಲ್ಲ.

ಈಗ ನಡೆಯುತ್ತಿರುವುದು ಇನ್ನೊಂದು ಕ್ರಾಂತಿಯಾ?

ಈಗ ನಡೆಯುತ್ತಿರುವುದು ಇನ್ನೊಂದು ಕ್ರಾಂತಿಯಾ?

ಇಸ್ಲಾಮೀಕರಣ ಆಗುವ ಮುನ್ನ ಇರಾನ್ ಸಾಂಸ್ಕೃತಿಕವಾಗಿ ಬಹಳ ಶ್ರೀಮಂತವಾಗಿದ್ದ ದೇಶ. 20ನೇ ಶತಮಾನದಲ್ಲಿ ಅತಿಯಾದ ಪಾಶ್ಚಿಮಾತ್ಯೀಕರಣದಿಂದ ರೋಸಿಹೋಗಿದ್ದ ಜನತೆ ದಂಗೆ ಇದ್ದು ಇಸ್ಲಾಂ ಧರ್ಮಕ್ಕೆ ಸಂಪೂರ್ಣ ಶರಣಾಗಿದ್ದರು. ಈಗ ಅಲ್ಲಿ ನಾಲ್ಕು ದಶಕಗಳ ಕಾಲ ಕಟ್ಟರ್ ಇಸ್ಲಾಮಿಕ್ ಆಚರಣೆಗಳಿಂದ ಉಸಿರುಗಟ್ಟಿ ಹೋಗಿದ್ದಾರೆಂದು ಹೇಳಲಾಗುತ್ತದೆ. ಮಹ್ಸಾ ಅಮಿನಿಯ ಸಾವು ಅವರ ಒಳಬೇಗುದಿಗೆ ಕಿಡಿ ಹೊತ್ತಿಸಿದೆ. ಹಲವಾರು ನಗರಗಳಲ್ಲಿ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವುದು 1978-79ರ ಪರಿಸ್ಥಿತಿಯನ್ನು ನೆನಪಿಸುವಂತಿದೆ. ಕಮ್ಯೂನಿಸ್ಟರು ಈಗಲೂ ಇರಾನ್‌ನಲ್ಲಿ ಕಡಿಮೆ ಸಂಖ್ಯೆಯಲ್ಲಾದರೂ ಜೀವಂತ ಇದ್ದಾರೆ. ಸಾವನ್ನಪ್ಪಿದ 22 ವರ್ಷದ ಯುವತಿ ಅಮಿನಿ ವಾಸ್ತವದಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತಳಾಗಿ ಹಿಜಾಬ್‌ನಂಥ ಕ್ರಮವನ್ನು ಪ್ರತಿರೋಧಿಸಿದ್ದಳು ಎನ್ನಲಾಗುತ್ತದೆ.

ಈಗ ಇರಾನ್‌ನಲ್ಲಿ ಎದ್ದಿರುವ ಮತ್ತೊಂದು ಕ್ರಾಂತಿಯ ಅಲೆಯನ್ನು ದೊಡ್ಡದಾಗಿಸಲು ಎಡಪಂಥೀಯರು, ಉದಾರವಾದಿಗಳು ಪ್ರಯತ್ನಿಸುವ ಸಾಧ್ಯತೆ ಇದೆ. ಇದು ನಿಜವೇ ಆದಲ್ಲಿ ಕಮ್ಯೂನಿಸಂ ಅಲೆಯನ್ನು ನಿಗ್ರಹಿಸಲು ಅಮೆರಿಕ, ಬ್ರಿಟನ್ ದೇಶಗಳು ಇಸ್ಲಾಮಿಕ್ ಶಕ್ತಿಗಳಿಗೆ ಬಲ ಒದಗಿಸಲು ಮುಂದಾದರೂ ಅಚ್ಚರಿ ಇಲ್ಲ.

(ಒನ್ಇಂಡಿಯಾ ಸುದ್ದಿ)

English summary
Iran is seeing big protests against hijab. This is time to recollect the islamic revolution that took place in 20th century that transformed Iran into complete islamic country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X