• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಪಿ ಬಾಲಸುಬ್ರಮಣ್ಯಂ ಕುರಿತ ಆಸಕ್ತಿಕರ ಸಂಗತಿಗಳು

|
Google Oneindia Kannada News

ಮನೆ ಮನಗಳಿಗೆ ಆಪ್ತರಾಗಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಅಗಲುವಿಕೆ ಸಂಗೀತ ಪ್ರೇಮಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ಎಸ್‌ಪಿ ಬಾಲಸುಬ್ರಮಣ್ಯಂ ತಮಿಳುನಾಡಿನಲ್ಲಿ ಜನಿಸಿದರೂ, ದಕ್ಷಿಣ ಭಾರತದ ಪ್ರತಿ ರಾಜ್ಯಕ್ಕೂ ಅವರು ತಮ್ಮವರೇ ಆಗಿದ್ದರು. ಗಾನಗಂಧರ್ವರ ಕಂಠ, ಭಾಷೆಯ ಮೇಲಿನ ಅವರ ಹಿಡಿತ, ಎಷ್ಟೇ ಎತ್ತರಕ್ಕೇರಿದ್ದರೂ ಬದಲಾಗದ ವಿನಮ್ರತೆ ಮತ್ತು ಸರಳತೆ ಅವರನ್ನು ಶ್ರೇಷ್ಠರನ್ನಾಗಿಸಿತ್ತು.

ಸಂಗೀತ ದಿಗ್ಗಜ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ ಸಂಗೀತ ದಿಗ್ಗಜ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ

ಎಸ್‌ಪಿಬಿ ಸೃಷ್ಟಿಸಿದ ದಾಖಲೆಗಳು ಒಂದೆರಡಲ್ಲ. ಜೀವಿತಾವಧಿಯಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಿನ್ನೆಸ್ ದಾಖಲೆ ಅವರ ಹೆಸರಲ್ಲಿದೆ. ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜ ನಟರಿಗೆ ಅವರು ದನಿಯಾಗಿದ್ದಾರೆ. ನಾಲ್ಕು ವಿಭಿನ್ನ ಭಾರತೀಯ ಭಾಷೆಗಳಲ್ಲಿಯೂ ರಾಷ್ಟ್ರಪ್ರಶಸ್ತಿ ಪಡೆದ ಮತ್ತೊಬ್ಬ ದಿಗ್ಗಜನನ್ನು ನೀವು ಕಾಣಲು ಸಾಧ್ಯವಿಲ್ಲ. ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಹೊರತುಪಡಿಸಿ ಎಲ್ಲ ಸಮಕಾಲೀನ ನಟರ ಹಾಡುಗಳಿಗೂ ಅವರು ಕಂಠ ನೀಡಿದ್ದಾರೆ. ಆದರೆ, ಅವರ ಅಭಿನಯದ ಗೀತೆಯನ್ನು ರಾಜ್ ಕುಮಾರ್ ಹಾಡಿದ್ದು ವಿಶೇಷ.

ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನ; ಕರ್ನಾಟಕದ ಗಣ್ಯರ ಕಂಬನಿ ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನ; ಕರ್ನಾಟಕದ ಗಣ್ಯರ ಕಂಬನಿ

ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಕ್ಕೆ ಮೊದಲ ಬಾರಿ ಹಾಡಿದ್ದು 'ಮಾಯಾಬಜಾರ್' ಚಿತ್ರದ ಶೀರ್ಷಿಕೆ ಗೀತೆಯನ್ನು. ಅದೇ ಅವರು ಕನ್ನಡದಲ್ಲಿ ಹಾಡಿದ ಕೊನೆಯ ಹಾಡು. ಪುನೀತ್ ತಮ್ಮ ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಓದಿ.

ISIL ನಾಯಕ ಅಬು ಬಕರ್ ಅಲ್- ಬಗ್ದಾದಿ ಬೆಳೆದು ಬಂದ ಹಾದಿISIL ನಾಯಕ ಅಬು ಬಕರ್ ಅಲ್- ಬಗ್ದಾದಿ ಬೆಳೆದು ಬಂದ ಹಾದಿ

ದಕ್ಷಿಣದಲ್ಲಿ ಅಪಾರ ಬೇಡಿಕೆ

ದಕ್ಷಿಣದಲ್ಲಿ ಅಪಾರ ಬೇಡಿಕೆ

ಎಸ್‌ಪಿಬಿ ಸಂಗೀತ ಕ್ಷೇತ್ರಕ್ಕೆ ದೇವರು ನೀಡಿದ ಕೊಡುಗೆ ಎಂದೇ ಬಣ್ಣಿಸಲಾಗುತ್ತದೆ. ಅವರ ಧ್ವನಿಯಲ್ಲಿನ ಮಾಂತ್ರಿಕತೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವ ಶಕ್ತಿ ಹೊಂದಿತ್ತು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗಕ್ಕೆ ಅವರು ಅಚ್ಚುಮೆಚ್ಚಿನ ಗಾಯಕರಾಗಿದ್ದರು. ಅವರಿಂದಲೇ ಹಾಡಿಸಲು ಸಂಗೀತ ನಿರ್ದೇಶಕರು ಕಾದು ಕುಳಿತಿದ್ದ ದಿನಗಳಿದ್ದವು. ಸತತ ಮೂರು-ನಾಲ್ಕು ದಶಕಗಳ ಕಾಲ ಪ್ರತಿ ಸಂಗೀತ ನಿರ್ದೇಶಕರು, ನಿರ್ಮಾಪಕರ ಮೊದಲ ಆಯ್ಕೆ ಎಸ್‌ಪಿಬಿ ಆಗಿದ್ದರು ಎಂದರೆ ಅವರ ಕಂಠಕ್ಕಿದ್ದ ಬೇಡಿಕೆ ಅರ್ಥವಾಗುತ್ತದೆ.

ಎಂಜಿನಿಯರಿಂಗ್ ತ್ಯಜಿಸಿದ್ದರು

ಎಂಜಿನಿಯರಿಂಗ್ ತ್ಯಜಿಸಿದ್ದರು

ಎಸ್‌ಪಿಬಿ ಅವರು ಎಂಜಿನಿಯರಿಂಗ್ ಪದವಿ ಪಡೆಯುವ ಸಲುವಾಗಿ ಅನಂತಪುರದ ಜೆಎನ್‌ಟಿಯುಕ್ಕೆ ಪ್ರವೇಶ ಪಡೆದಿದ್ದರು. ಆದರೆ ಕಾರಣಾಂತರಗಳಿಂದ ಕಾಲೇಜು ಬಿಟ್ಟರು. ಹಾಗೆಂದು ಅವರು ಶಿಕ್ಷಣದ ಬಗ್ಗೆ ಒಲವು ಹೊಂದಿರಲಿಲ್ಲ ಎಂದಲ್ಲ. ಆದರೆ ಸಂಗೀತ ಕ್ಷೇತ್ರವೂ ಅಷ್ಟೇ ಸೆಳೆಯುತ್ತಿತ್ತು. ಚೆನ್ನೈನ ಎಂಜಿನಿಯರ್ ಸಂಸ್ಥೆಯ ಅಸೋಸಿಯೇಟ್ ಸದಸ್ಯರಾಗಿ ಸೇರಿಕೊಂಡವರು ಅದೇ ಸಮಯಕ್ಕೆ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಒಂದು ಸ್ಪರ್ಧೆಯಲ್ಲಿ ಎಸ್‌ಪಿ ಕೋದಂಡಪಾಣಿ ಮತ್ತು ಘಂಟಸಾಲ ತೀರ್ಪುಗಾರರಾಗಿದ್ದರು. ಆ ಸಮಯದಲ್ಲಿಯೇ ಎಸ್‌ಪಿಬಿಗೆ ಕೋದಂಡಪಾಣಿ ಗುರುಗಳಾಗಿ ಸಿಕ್ಕರು.

ಸಂಗೀತ ತಂಡ ನಡೆಸುತ್ತಿದ್ದ ಎಸ್‌ಪಿಬಿ

ಸಂಗೀತ ತಂಡ ನಡೆಸುತ್ತಿದ್ದ ಎಸ್‌ಪಿಬಿ

ಹೆಚ್ಚಿನವರಿಗೆ ತಿಳಿಯದ ಸಂಗತಿಯೆಂದರೆ ಎಸ್‌ಪಿಬಿ ಒಂದು ಸಂಗೀತ ತಂಡವನ್ನು ನಡೆಸುತ್ತಿದ್ದರು. ಅದರಲ್ಲಿ ಸಂಗೀತ ಮಾಂತ್ರಿಕ ಇಳೆಯರಾಜ ಗಿಟಾರ್ ಹಾಗೂ ಇತರೆ ವಾದ್ಯಗಳನ್ನು ನುಡಿಸುತ್ತಿದ್ದರೆ, ಅನಿರುತ್ತ ಹಾರ್ಮೋನಿಯಂ ನುಡಿಸುತ್ತಿದ್ದರು. ಇಳೆಯರಾಜ ಅವರೊಂದಿಗಿನ ಸಂಗೀತ ಪಯಣ ಹಲವು ವರ್ಷಗಳವರೆಗೆ ನಡೆದಿತ್ತು. ಗುರುಗಳಾದ ಕೋದಂಡಪಾಣಿ ಅವರಿಂದ 1966ರಲ್ಲಿ 'ಶ್ರೀ ಮರ್ಯಾದಾ ರಾಮಣ್ಣ' ಚಿತ್ರದ ಮೂಲಕ ಎಸ್‌ಪಿಬಿ ಸಿನಿಮಾ ಸಂಗೀತಕ್ಕೆ ಕಾಲಿರಿಸಿದರು. ಎಂಟೇ ದಿನದಲ್ಲಿ ಕನ್ನಡದ 'ನಕ್ಕರೆ ಅದೇ ಸ್ವರ್ಗ' ಚಿತ್ರದಲ್ಲಿ ಹಾಡಿದರು. ಕೆಲವು ದಿನಗಳ ಬಳಿಕ ತಮಿಳು ಮತ್ತು ಮಲಯಾಳಂಗೆ ಸಹ ಪದಾರ್ಪಣೆ ಮಾಡಿದರು.

ಕಾದು ಹಾಡಿಸಿದ್ದ ಎಂಜಿಆರ್

ಕಾದು ಹಾಡಿಸಿದ್ದ ಎಂಜಿಆರ್

ಆ ಕಾಲದಲ್ಲಿ ಪಿ.ಬಿ. ಶ್ರೀನಿವಾಸ್, ಟಿ.ಎಂ. ಸೌಂದರರಾಜನ್ ಸಿನಿಮಾ ಹಾಡುಗಳಲ್ಲಿ ಉತ್ತುಂಗದಲ್ಲಿದ್ದರು. ಹೀಗಿರುವಾಗ ಎಂ.ಜಿ.ಆರ್, ಜಯಲಲಿತಾ ಅವರೊಂದಿಗೆ ನಟಿಸಿದ 'ಅದಿಮೈ ಪೆನ್' ಚಿತ್ರದ 'ಆಯಿರಾಮ್ ನಿಲವೆ ವಾ' ಹಾಡನ್ನು ಎಸ್‌ಪಿಬಿಯೇ ಹಾಡಬೇಕು ಎಂದು ವೈಯಕ್ತಿಕವಾಗಿ ಆಸೆಪಟ್ಟು ಹಾಡಿಸಿದ್ದರು. ಈ ಹಾಡು ಹಿಟ್ ಆದ ಪರಿ ಹೇಗಿತ್ತು ಎಂದರೆ, ಪಿಬಿಎಸ್ ಮತ್ತು ಟಿಎಂಎಸ್ ಅವರಿಗಿಂತಲೂ ಎಸ್‌ಪಿಬಿ ಬಹು ಬೇಡಿಕೆಯ ಗಾಯಕರಾದರು.

ಸಂಗೀತ ಜೋಡಿಗಳು

ಸಂಗೀತ ಜೋಡಿಗಳು

ಎಸ್‌ಪಿಬಿ ಮತ್ತು ಇಳೆಯರಾಜ ಸಂಗೀತ ಜೋಡಿ ಸೃಷ್ಟಿಸಿದ ಅಲೆ ಸಾಮಾನ್ಯದ್ದಲ್ಲ. ಕನ್ನಡದಲ್ಲಿಯೂ ಈ ಜೋಡಿ ಮೋಡಿ ಮಾಡಿತ್ತು. ಎಸ್‌ಪಿಬಿ ಕೆಲಸ ಮಾಡಿದ ಎಲ್ಲ ಸಂಗೀತ ನಿರ್ದೇಶಕರಿಂದಲೂ ಇಂತಹ ಮಧುರ ಹಾಡುಗಳು ಸಿಕ್ಕಿವೆ. ಕನ್ನಡದಲ್ಲಿ ಹಂಸಲೇಖ-ಎಸ್‌ಪಿಬಿ ಜೋಡಿ ಕೂಡ ಇಂತಹ ಅಲೆ ಸೃಷ್ಟಿಸಿತ್ತು. ಎಆರ್ ರೆಹಮಾನ್ ಜತೆಗೂ ಎಸ್‌ಪಿಬಿ ಅನೇಕ ಹಿಟ್ ಹಾಡುಗಳನ್ನು ನೀಡಿದ್ದರು. ಇಳೆಯರಾಜಾ ಅವರ ಮೊದಲ ಸಿನಿಮಾ 'ಅನ್ನಕಿಲಿ'ಯಿಂದಲೂ ಎಸ್‌ಪಿಬಿ ಅವರ ಸಂಗೀತದ ಅವಿಭಾಜ್ಯ ಅಂಗದಂತಿದ್ದರು.

ಹಿಂದಿಯಲ್ಲಿಯೂ ರಾಷ್ಟ್ರ ಪ್ರಶಸ್ತಿ

ಹಿಂದಿಯಲ್ಲಿಯೂ ರಾಷ್ಟ್ರ ಪ್ರಶಸ್ತಿ

ದಿಗ್ಗಜ ನಿರ್ದೇಶಕ ಕೆ. ಬಾಲಚಂದರ್ ಅವರ 'ಮನೋಚರಿತ' ತೆಲುಗು ಚಿತ್ರವನ್ನು ಹಿಂದಿಯಲ್ಲಿ 'ಏಕ್ ದುಜೆ ಕೆ ಲಿಯೆ' ಹೆಸರಲ್ಲಿ ರೀಮೇಕ್ ಆಗಿತ್ತು. ಹಿಂದಿ ಆವೃತ್ತಿಗೆ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಸಂಗೀತ ನೀಡಿದ್ದರು. ಲಕ್ಷ್ಮೀಕಾಂತ್ ಅವರಿಗೆ ಬಾಲಚಂದರ್ ಹಾಕಿದ್ದ ಷರತ್ತು ಏನೆಂದರೆ ಈ ಚಿತ್ರದ ಎಲ್ಲ ಪುರುಷ ಹಾಡುಗಳನ್ನೂ ಎಸ್‌ಪಿಬಿ ಅವರೇ ಹಾಡಬೇಕು ಎನ್ನುವುದು. ಈ ಚಿತ್ರದ ಹಾಡಿಗೆ ಎಸ್‌ಪಿಬಿಗೆ ರಾಷ್ಟ್ರಪ್ರಶಸ್ತಿ ಒಲಿಯಿತು. 'ಮೈನೆ ಪ್ಯಾರ್ ಕಿಯಾ', 'ಹಮ್ ಆಪ್ನೆ ಹೈ ಕೌನ್' ಮುಂತಾದ ಹಿಟ್ ಸಿನಿಮಾಗಳಿಗೆ ಎಸ್‌ಪಿಬಿ ಧ್ವನಿಯಾಗಿದ್ದರು. ಅವರು ಕೊನೆಯದಾಗಿ ಹಾಡಿದ ಹಿಂದಿ ಸಿನಿಮಾ 'ಚೆನ್ನೈ ಎಕ್ಸ್‌ಪ್ರೆಸ್' ಕೂಡ ಹಿಟ್ ಆಗಿತ್ತು.

ಖ್ಯಾತ ನಿರ್ದೇಶಕರ ಜತೆ ಕೆಲಸ

ಖ್ಯಾತ ನಿರ್ದೇಶಕರ ಜತೆ ಕೆಲಸ

ಎಆರ್ ರೆಹಮಾನ್ ತಮ್ಮ ಸಂಗೀತ ಕ್ಷೇತ್ರದ ಯಶಸ್ಸಿನ ಮುನ್ನುಡಿ ಬರೆದಿದ್ದು 'ರೋಜಾ' ಚಿತ್ರದ ಮೂಲಕ. ಆ ಯಶಸ್ಸಿಗೆ ದನಿಯಾಗಿದ್ದು ಇದೇ ಎಸ್‌ಪಿಬಿ. ಜಿಕೆ ವೆಂಕಟೇಶ್, ರಂಗರಾವ್, ರಾಜನ್ ನಾಗೇಂದ್ರ, ಹಂಸಲೇಖ, ಕೀರವಾಣಿ, ರಾಜಕುಮಾರ್, ದೇವಾ, ವಿದ್ಯಾಸಾಗರ್ ಹೀಗೆ ಅನೇಕ ಖ್ಯಾತನಾಮ ಸಂಗೀತ ನಿರ್ದೇಶಕರ ಜತೆ ಎಸ್‌ಪಿಬಿ ಕೆಲಸ ಮಾಡಿದ್ದರು.

ಕರ್ನಾಟಕದ ಬಗ್ಗೆ ಪ್ರೀತಿ

ಕರ್ನಾಟಕದ ಬಗ್ಗೆ ಪ್ರೀತಿ

70 ರಿಂದ 90ರ ದಶಕದ ಅಂತ್ಯದವರೆಗೂ ಕನ್ನಡ ಚಿತ್ರರಂಗದ ಪ್ರತಿ ಪ್ರಮುಖ ನಟರ ಸಿನಿಮಾಗಳಲ್ಲಿಯೂ ಒಂದಾರೂ ಎಸ್‌ಪಿಬಿ ಹಾಡು ಇದ್ದೇ ಇರುತ್ತಿತ್ತು. ಅದರಲ್ಲಿಯೂ ಹಂಸಲೇಖ-ಎಸ್‌ಪಿಬಿ ಜೋಡಿ ಹಾಡುಗಳಂತೂ ಸಾರ್ವಕಾಲಿಕ ಹಿಟ್ ಹಾಡುಗಳೆಂದು ಗುರುತಿಸುವಷ್ಟು ಹೆಸರು ಮಾಡಿವೆ. ಕರ್ನಾಟಕದ ಜನತೆ ಅವರನ್ನು ತಮ್ಮವರೆಂದೇ ಪರಿಗಣಿಸಿದೆ. ಎಸ್‌ಪಿಬಿ ಎಂದರೆ ಅಪಾರ ಗೌರವ. ಅದೇ ಗೌರವ, ಪ್ರೀತಿ ಎಸ್‌ಪಿಬಿಯಲ್ಲಿಯೂ ಇತ್ತು ಎನ್ನುವುದನ್ನು ಮರೆಯುವಂತಿಲ್ಲ. ಮುಂದಿನ ಜನ್ಮದಲ್ಲಿ ನಾನು ಕರ್ನಾಟಕದಲ್ಲಿಯೇ ಹುಟ್ಟುಬೇಕು. ಕನ್ನಡಿಗರ ಋಣ ತೀರಿಸಬೇಕು ಎಂದು ಒಮ್ಮೆ ಎಸ್‌ಪಿಬಿ ಹೇಳಿದ್ದರು. ಹಿಂದಿಯಲ್ಲಿ ಒಂದು ಬಾರಿ, ತೆಲುಗಿನ ಹಾಡಿನ ಮೂಲಕ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅವರು, ಇಷ್ಟು ಹಾಡುಗಳನ್ನು ಹಾಡಿದ್ದರೂ ಕನ್ನಡ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬರಲಿಲ್ಲ ಎಂಬ ಬೇಸರ ಹಂಚಿಕೊಂಡಿದ್ದರು. ಅವರ ಬಯಕೆಯನ್ನು 1995ರಲ್ಲಿ 'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರ ಈಡೇರಿಸಿತು.

ಶಾಸ್ತ್ರೀಯ ಸಂಗೀತ ಸವಾಲು

ಶಾಸ್ತ್ರೀಯ ಸಂಗೀತ ಸವಾಲು

ಭಾರತದ ಶಾಸ್ತ್ರೀಯ ಸಂಗೀತ ಆಧಾರಿತ ಸಿನಿಮಾಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಚಿತ್ರ 'ಶಂಕರಾಭರಣಂ'. ಕ್ಲಾಸಿಕಲ್ ಗೀತೆಗಳಿಂದ ಪ್ರಸಿದ್ಧರಾಗಿದ್ದ ಜೇಸುದಾಸ್ ಮತ್ತು ಬಾಲಮುರಳಿ ಕೃಷ್ಣ ಅವರಿದ್ದಾಗಲೂ ಸಂಗೀತ ನಿರ್ದೇಶಕ ಕೆ.ವಿ. ಮಹದೇವನ್ ಅವರು ಎಸ್‌ಪಿಬಿಗೆ ಮಣೆ ಹಾಕಿದ್ದರು. ಶಾಸ್ತ್ರೀಯ ಸಂಗೀತದ ಕಠಿಣ ಸ್ವರಗಳ ಹಾಡುಗಳನ್ನು ಹಾಡುವುದು ಎಸ್‌ಪಿಬಿಗೆ ದೊಡ್ಡ ಸವಾಲಾಗಿತ್ತು. ಹಾಡಿನಿಂದಲೇ ತುಂಬಿದ್ದ ಈ ಚಿತ್ರದ ಎಲ್ಲ ಹಾಡುಗಳನ್ನು ಅವರೇ ಹಾಡಬೇಕಿತ್ತು. ಹಗಲು ರಾತ್ರಿ ನಿದ್ದೆ ಬಿಟ್ಟು ಸತತ ಅಭ್ಯಾಸ ನಡೆಸಿ ಅವರು ಈ ಹಾಡುಗಳನ್ನು ಹಾಡಿದ್ದರಂತೆ. 1980ರಲ್ಲಿ ಬಿಡುಗಡೆಯಾದ ಈ ಚಿತ್ರದ ಹಾಡುಗಳು ಭರ್ಜರಿ ಹಿಟ್ ಆದವು, ಎಸ್ಪಿಬಿಗೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. 1983ರಲ್ಲಿ ಮತ್ತೊಂದು ಸಂಗೀತ ಪ್ರಧಾನ ಚಿತ್ರ 'ಸಾಗರ ಸಂಗಮಮ್'ದಲ್ಲಿಯೂ ಎಸ್‌ಪಿಬಿ ರಾಷ್ಟ್ರಪ್ರಶಸ್ತಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

12 ಗಂಟೆಯಲ್ಲಿ 21 ಹಾಡುಗಳು

12 ಗಂಟೆಯಲ್ಲಿ 21 ಹಾಡುಗಳು

ಎಸ್‌ಪಿಬಿ ಅವರ ಹೆಸರಲ್ಲಿ ವಿಶೇಷ ದಾಖಲೆಯೊಂದಿದೆ. ಆ ದಾಖಲೆ ಸೃಷ್ಟಿಯಾಗಿದ್ದು ಕನ್ನಡದಲ್ಲಿ ಎನ್ನುವುದು ಗಮನಾರ್ಹ. ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಮುದ್ರಿಸಿದ ದಾಖಲೆ ಇದು. ಕನ್ನಡದ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರು ಸಂಯೋಜಿಸಿದ 21 ಹಾಡುಗಳನ್ನು ಕೇವಲ 12 ಗಂಟೆಯಲ್ಲಿ ಅವರು ಹಾಡಿದ್ದರು. ತಮಿಳಿನಲ್ಲಿ ಒಂದೇ ದಿನ 19 ಹಾಡುಗಳು ಮತ್ತು ಹಿಂದಿಯಲ್ಲಿ 16 ಹಾಡುಗಳನ್ನು ಹಾಡಿದ್ದರು.

ಅಪರೂಪದ ದಾಖಲೆ

ಅಪರೂಪದ ದಾಖಲೆ

ಜೀವಮಾನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಿನ್ನೆಸ್ ದಾಖಲೆ ಎಸ್‌ ಪಿ ಬಾಲಸುಬ್ರಮಣ್ಯಂ ಹೆಸರಿನಲ್ಲಿದೆ. ವರ್ಷಕ್ಕೆ ಸರಾಸರಿ 930 ಹಾಡುಗಳಂತೆ ಅಥವಾ ದಿನಕ್ಕೆ ಸುಮಾರು 3 ಹಾಡುಗಳಂತೆ ಅವರು 40,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಜಗತ್ತಿನ ಯಾವ ಗಾಯಕರೂ ಈ ದಾಖಲೆಯನ್ನು ಮುರಿದಿಲ್ಲ. ಅದರಲ್ಲಿಯೂ ಇಷ್ಟು ಭಾಷೆಗಳಲ್ಲಿ ಹಾಡಿ ದಾಖಲೆ ಮಾಡುವುದು ಬಹುಶಃ ಅಸಾಧ್ಯವೇ ಸರಿ. ಇದರ ಜತೆಗೆ ಎಸ್‌ಪಿಬಿ ತಮ್ಮ ಹೆಸರಲ್ಲಿ ಅನೇಕ ಖಾಸಗಿ ಆಲ್ಬಮ್‌ಗಳನ್ನೂ ಮಾಡಿದ್ದರು.

ಆರು ಬಾರಿ ರಾಷ್ಟ್ರ ಪ್ರಶಸ್ತಿ

ಆರು ಬಾರಿ ರಾಷ್ಟ್ರ ಪ್ರಶಸ್ತಿ

ಭಾರತದ ನಾಲ್ಕು ವಿಭಿನ್ನ ಭಾಷೆಗಳಿಗೆ ಆರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಅಪರೂಪದ ಗಾಯಕ ಎಸ್‌ಪಿಬಿ. ತೆಲುಗಿನಲ್ಲಿ ಸಾಗರ ಸಂಗಮಂ, ಶಂಕರಾಭರಣಂ ಮತ್ತು ರುದ್ರವೀಣ ಚಿತ್ರಗಳಿಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಕನ್ನಡದಲ್ಲಿ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ, ತಮಿಳಿನಲ್ಲಿ ಮಿನ್ಸರಾ ಕನುವು ಮತ್ತು ಹಿಂದಿಯಲ್ಲಿ ಏಕ್ ದುಜೆ ಕೆಲಿಯೆ ಚಿತ್ರಕ್ಕೆ ಪ್ರಶಸ್ತಿಗಳು ಒಲಿದಿದ್ದವು. ಇದರ ಜತೆ ಬಾಲಿವುಡ್ ಫಿಲಂ ಫೇರ್ ಅವಾರ್ಡ್, ದಕ್ಷಿಣದಲ್ಲಿ ಐದು ಬಾರಿ ಫಲಂ ಫೇರ್ ಪ್ರಶಸ್ತಿ, 25 ನಂದಿ ಪ್ರಶಸ್ತಿಗಳು, ಪದ್ಮಶ್ರೀ (2001) ಮತ್ತು 2011ರಲ್ಲಿ ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ.

ಸಂಗೀತ, ನಟನೆ, ಕಂಠದಾನ

ಸಂಗೀತ, ನಟನೆ, ಕಂಠದಾನ

ಎಸ್‌ಪಿಬಿ ಗಾಯಕರಷ್ಟೇ ಅಲ್ಲ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಅವರು 46 ಭಾಷೆಗಳಲ್ಲಿ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಹಾಗೆಯೇ ಮೂರು ಭಾಷೆಗಳಲ್ಲಿ ಸುಮಾರು 72 ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿಯೂ ಅವರು ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದರು. ಅವರು ಕನ್ನಡದಲ್ಲಿ ನಡೆಸಿಕೊಡುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ಜನರಿಗೆ ಅಚ್ಚುಮೆಚ್ಚಿನದಾಗಿತ್ತು. ರಜನಿಕಾಂತ್, ಕಮಲ ಹಾಸನ್, ಸಲ್ಮಾನ್ ಖಾನ್, ಗಿರೀಶ್ ಕಾರ್ನಾಡ್, ಜೆಮಿನಿ ಗಣೇಶನ್, ರಘುವರನ್, ಕಾರ್ತಿಕ್ ಮುಂತಾದ ನಟರಿಗೆ ಕಂಠದಾನ ಮಾಡಿದ ಕೀರ್ತಿಯೂ ಅವರದು.


ಸದಾ ಮೆಲುಕು ಹಾಕುವಂತಹ ಸಾವಿರಾರು ಹಾಡುಗಳನ್ನು ನೀಡಿದ ಎಸ್‌ಪಿಬಿ ಅವರ ಅನುಪಸ್ಥಿತಿ ಚಿತ್ರರಂಗವನ್ನು ಕಾಡಲಿದೆ. ಆದರೆ ಅವರ ಅಗಲುವಿಕೆಯ ಮಧ್ಯೆ, ಅವರ ಹಾಡುಗಳು ಎಂದೆಂದಿಗೂ ಅವರನ್ನು ಜೀವಂತವಾಗಿರಿಸಲಿವೆ.

English summary
Interesting Things to Know about Veteran Singer SP Balasubrahmanyam in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X