ಮಲೆನಾಡಿನ ಕಾಡಿನಲ್ಲಿ ಸಂತನಂತೆ ಬದುಕಿದ ತೇಜಸ್ವಿ...!
ಮಲೆನಾಡು ಶಿವಮೊಗ್ಗದ ಕುಪ್ಪಳ್ಳಿಯಿಂದ ಮೈಸೂರಿಗೆ ಬಂದು ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಜತಜತೆಯಲ್ಲಿಯೇ ಬರವಣಿಗೆ ಮೂಲಕ ರಾಷ್ಟ್ರಕವಿಯಾದ ಕುವೆಂಪು ಅವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಆದರೆ ಅವರ ಪುತ್ರ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಇದಕ್ಕೆ ತದ್ವಿರುದ್ಧ ಅವರು ಪಟ್ಟಣದಲ್ಲಿ ಬೆಳೆದು ಓದಿದರೂ ಸರ್ಕಾರಿ ಉದ್ಯೋಗವನ್ನು ಬದಿಗೊತ್ತಿ ನಾಡಿನಿಂದ ಮತ್ತೆ ಮಲೆನಾಡಿನ ಮೂಡಿಗೆರೆಗೆ ಹೋಗಿ ಕಾಡುಮೇಡುಗಳ ನಡುವೆ ಕೃಷಿಯಲ್ಲಿಯೇ ಬದುಕು ಕಂಡರು. ಅದರ ಜತೆಯಲ್ಲಿಯೇ ಎಲ್ಲ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸಿದರು.
ಹಳ್ಳಿಯಲ್ಲಿ ಏನು ಮಾಡಲು ಸಾಧ್ಯ ಎಂದು ಕೇಳುವ ಈಗಿನವರ ಪ್ರಶ್ನೆಗೆ ಆಗಲೇ ಏನೆಲ್ಲ ಮಾಡಬಹುದು ಎಂಬುವುದನ್ನು ತೇಜಸ್ವಿಯವರು ತೋರಿಸಿಕೊಟ್ಟಿದ್ದಾರೆ. ಹಾಗಾದರೆ ತೇಜಸ್ವಿಯವರು ಅಂದರೆ ಏನು? ಪ್ರಶ್ನೆಗಳಿಗೆ ಅವರು ಎಲ್ಲವೂ ಹೌದು ಎಂಬ ಉತ್ತರವಾಗಿ ಕಂಗೊಳಿಸುತ್ತಾರೆ. ಅವರು ಏನೆಲ್ಲ ಆಗಿದ್ದರು ಎಂಬುದನ್ನು ನೋಡುತ್ತಾ ಹೋದರೆ.. ಅವರೊಬ್ಬ ಅದ್ಭುತ ಫೋಟೋಗ್ರಾಫರ್, ಅಪ್ರತಿಮ ಸಹಜ ಕೃಷಿಕ. ಅನನ್ಯ ಚಿತ್ರ ಕಲಾವಿದ, ಅಸಾಮಾನ್ಯ ಬೇಟೆಗಾರ, ಅಪೂರ್ವ ಸಂಗೀತಗಾರ, ಅಸಮಬಲ ಹೋರಾಟಗಾರ, ಕನ್ನಡ ಸಾಫ್ಟ್‌ವೇರ್ ಅಭಿವೃದ್ಧಿಗಾರ, ಅರಣ್ಯ ಸುತ್ತುವ ಸಾಹಸಿಗ, ಪರಿಸರ ಸಂರಕ್ಷಕ ಅದರಾಚೆಗೂ ಅವರೊಬ್ಬ ಸಾಹಿತಿ.
ತೇಜಸ್ವಿಯವರು ತಮ್ಮ ಬದುಕಿನುದ್ದಕ್ಕೂ ಒಂದೇ ಕ್ಷೇತ್ರಕ್ಕೆ ಜೋತು ಬೀಳಲೇ ಇಲ್ಲ. ಅವರೊಬ್ಬ ಸಂಶೋಧಕನಂತೆ ಹೊಸತಿನತ್ತ ಬೆನ್ನತ್ತಿ ಹೋಗುತ್ತಿದ್ದರು. ಗಿಡ-ಮರ, ಹಕ್ಕಿ-ಪಕ್ಷಿ, ಹೂವು-ಹಣ್ಣು, ಮಣ್ಣು-ನೀರು, ಇಳೆ-ಬೆಳೆ, ಕಾಡು-ಮೇಡು ಅಂತ ಸದಾ ನಿಸರ್ಗದಲ್ಲೇ ಸ್ವರ್ಗ ಕಾಣುತ್ತಿದ್ದರು. ಪಟ್ಟಣದ ಗೌಜು ಗದ್ದಲದಿಂದ ದೂರವಾಗಿ ಮಲೆನಾಡಿನ ಕಾಡಿನಲ್ಲಿ ಸಂತನಂತೆ ಬದುಕಿದರು. ಹಾಗಾಗಿಯೇ ಅವರನ್ನು ಕೆಲವರು ಕನ್ನಡದ ರಾಬಿನ್ಸನ್ ಕ್ರೂಸೋ ಎಂದು ಕರೆಯುತ್ತಾರೆ.

ಮಲೆನಾಡಿನ ಬದುಕನ್ನು ಸಾಹಿತ್ಯದಲ್ಲಿ ಕಟ್ಟಿದವರು
ಬರವಣಿಗೆಯನ್ನು ಪ್ರೀತಿಸುತ್ತಿದ್ದ ಅವರು ಮಲೆನಾಡಿನ ಬದುಕನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದರು ಅಷ್ಟೇ ಅಲ್ಲ ಉದಾತ್ತ ಚಿಂತನೆಗಳಿಂದ, ಪ್ರಗತಿಪರ ಧೋರಣೆಯಿಂದ, ವಿಚಾರಾತ್ಮಕ ಸೃಜನ ಶೀಲ ಕೃತಿಗಳಿಂದ, ಸಾಹಿತ್ಯ; ವೈಜ್ಞಾನಿಕ ಬರವಣಿಗೆಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಥೇಟ್ 'ಪೂರ್ಣಚಂದ್ರ' ಬದುಕಿ ಬಾಳಿದ್ದು ವಿಶೇಷವೇ. ಇಷ್ಟಕ್ಕೂ ಏಕೆ ಅವರ ನೆನಪಾಯಿತೆಂದರೆ ಇವತ್ತು ಅವರ ಜನ್ಮದಿನ. ಇವತ್ತಿನ ಆಧುನಿಕ ಬದುಕಿನ ಬಗ್ಗೆ ಅವತ್ತೇ ಅವರು ಕಲ್ಪನೆ ಕಂಡಿದ್ದರು. ದಟ್ಟ ಮಲೆನಾಡಿನ ಕಾಫಿ, ಏಲಕ್ಕಿ, ಬಾಳೆ ಅಡಿಕೆ ತೋಟಗಳ ನಡುವೆ ಪಟ್ಟಣದ ಬದುಕಿನ ಅವಿಷ್ಕಾರಗಳ ಬಗೆಗೆ ಅವರ ಚಿಂತನೆಯಿತ್ತು.

ಮೂಡಿಗೆರೆ ಅವರ ಕಾರ್ಯಕ್ಷೇತ್ರ
ಇನ್ನು ತೇಜಸ್ವಿಯವರ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅವರು ಸೆಪ್ಟಂಬರ್ 08, 1938 ರಂದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ತಂದೆ ಮೇರು ಕವಿ ಕುವೆಂಪು. ತಾಯಿ ಹೇಮಾವತಿ ಅವರ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮುಗಿಸಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಮಾಡಿ ನಂತರ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪದವಿಗಳಿಸಿದರು. ಅವತ್ತಿನ ಕಾಲದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಿರಲಿಲ್ಲ. ಆದರೆ ಅವರನ್ನು ಮಲೆನಾಡು ಕೈಬೀಸಿ ಕರೆಯತೊಡಗಿತ್ತು. ಹಾಗಾಗಿ ಅವರು ನಗರ ಬದುಕನ್ನು ತ್ಯಜಿಸಿ ಮಲೆನಾಡಿನತ್ತ ಮುಖಮಾಡಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅವರ ಕಾರ್ಯಕ್ಷೇತ್ರವಾಯಿತು.

ಕೃಷಿ ಜತೆಗೆ ಸಾಹಿತ್ಯದ ಕೃಷಿ
ಕೃಷಿ ಜತೆಗೆ ಸಾಹಿತ್ಯದ ಕೃಷಿ ಮಾಡುತ್ತಾ ಬದುಕು ಕಂಡು ಕೊಂಡರು. ಮೊದಲ ಕಥೆ 'ಲಿಂಗ ಬಂದ'ದ ಮೂಲಕ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ ಅವರು ತಮ್ಮದೇ ಶೈಲಿಯಲ್ಲಿ ವಿಭಿನ್ನ ದೃಷ್ಟಿಕೋನಗಳಲ್ಲಿ ಬರಹದ ಬದುಕನ್ನು ಕಂಡುಕೊಂಡರು ಅದರಿಂದ 'ಅಬಚೂರಿನ ಪೋಸ್ಟ್ ಆಫೀಸು'ನಂತಹ ಕೃತಿಗಳು ಹೊರಬರಲು ಸಾಧ್ಯವಾಯಿತು. ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿ, ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಧರ್ಮಗಳ ಇವರ ಲೇಖನಿಯಿಂದ ಹೊರಬಂದವು.
ತಬರನ ಕಥೆ, ಕಿರಗೂರಿನಗಯ್ಯಾಳಿಗಳು, ಹುಲಿಯೂರಿನ ಸರಹದ್ದು, ಚಿದಂಬರ ರಹಸ್ಯ, ಮಾಯಾಲೋಕ, ಜುಗಾರಿ ಕ್ರಾಸ್, ಕರ್ವಲೋ, ಮಲೆನಾಡಿನ ಹಕ್ಕಿಗಳು, ಪರಿಸರದ ಕಥೆ, ಹಜ್ಜೆ ಮೂಡದ ಹಾಡಿಯಲ್ಲಿ, ಕಾಡಿನ ಕಥೆಗಳು ಕೃತಿಗಳ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಹೊಸ ಪ್ರಭಾವಳಿಯಾದವು. ತಂದೆ ಕುವೆಂಪು ಅವರನ್ನು ಕುರಿತ 'ಅಣ್ಣನ ನೆನಪು' ಮತ್ತು 'ಅಲೆಮಾರಿಯ ಅಂಡಮಾನ್' ಕೃತಿಗಳು ಅವರ ಲೇಖನಿಯಂದ ಸೃಷ್ಟಿಯಾದ ಅಪೂರ್ವ ಸಾಹಿತ್ಯಗಳು.

ಅನೇಕ ಪ್ರಶಸ್ತಿಗಳ ಗೌರವ
ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸು, ಕುಬಿ ಮತ್ತು ಇಯಾಲ, ತಬರನ ಕಥೆ, ಕಿರಗೂರಿನಗಯ್ಯಾಳಿಗಳು ಕೃತಿಗಳು, ಬೆಳ್ಳಿತೆರೆಯಲ್ಲಿ ವಿಜೃಂಭಿಸಿದವು. ಅವರು ಅವರ ಪಾಡಿಗೆ ಬರೆಯುತ್ತಾ ಹೋದರು, ಹಾಗೆಯೇ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಕೃಪಾಕರ-ಸೇನಾನಿ ನಿರ್ದೇಶನದಲ್ಲಿ ತೇಜಸ್ವಿ ಅವರನ್ನು ಕುರಿತು 'ಮಾಯಾಲೋಕ' ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿ ಗೌರವ ಸಲ್ಲಿಸಿರುವುದು ವಿಶೇಷವಾಗಿದೆ.

2007ರಲ್ಲಿ ಬಾರದ ಲೋಕಕ್ಕೆ ಪಯಣ
1966 ರಲ್ಲಿ ತಾವು ಪ್ರೀತಿಸಿದ ಆರ್. ರಾಜೇಶ್ವರಿ ಯವರನ್ನು ಅಂತರ್ಜಾತಿ ವಿವಾಹವಾಗಿ, ಸುಸ್ಮಿತಾ ಮತ್ತು ಈಶಾನ್ಯೆ ಎಂಬ ಎರಡು ಹೆಣ್ಣು ಮಕ್ಕಳ ತಂದೆಯಾಗಿ ಪಟ್ಟಣದ ಸೋಂಕಿಲ್ಲದೆ ಪ್ರಕೃತಿಯ ತೊಟ್ಟಿಲು ಮೂಡಿಗೆರೆಯ 'ಚಿತ್ರಕೂಟ' ಎಂಬ ತೋಟದ ಮನೆಯಲ್ಲಿ ಬದುಕು ಕಳೆದು ಸಾಹಿತ್ಯ ಲೋಕಕ್ಕೆ ತಮ್ಮ ಅಮೂಲ್ಯ ಕೃತಿಗಳನ್ನು ಕಾಣಿಕೆಯಾಗಿ ನೀಡಿದ ಅವರು ಏಪ್ರಿಲ್ 5, 2007ರಂದು ಬಾರದ ಲೋಕದತ್ತ ಪಯಣ ಬೆಳೆಸಿದರು. ಡಿಸೆಂಬರ್ 14, 2021ರಂದು ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಕೂಡ ನಮ್ಮನ್ನಗಲಿದ್ದಾರೆ. ಈಗ ಅವರು ಬರೀ ನೆನಪಷ್ಟೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications