ಹವ್ಯಕರ ಸಿಗ್ನೇಚರ್ ಫುಡ್: ಕಿಕ್ಕುಹೊಡೆಯೋ ಅಪ್ಪೆ ಹುಳಿ ಅಂದ್ರೆ... ಬಾಯಲ್ಲಿ ನೀರು!
"ಎಂತು? ಆ ಮದ್ವೇಲಿ ಅಪ್ಪೆ ಹುಳಿ ಮಾಡಿದ್ವಿಲ್ಯಾ? ಅದೆಂತಾ ಮದ್ವೆನೋ ಮಾರಾಯಾ...!" ಇಂಥದೊಂದು ಸಂಭಾಷಣೆ ಹವ್ಯಕರ ಮನೆಗಳಲ್ಲಿ ಕೇಳಿಬಂದರೆ ಅಚ್ಚರಿಯೇನಿಲ್ಲ. ಮದುವೆ, ಮುಂಜಿಯಂಥ ನೂರಾರು ಜನ ಸೇರುವ ಸಮಾರಂಭಗಳಲ್ಲಿ 'ಅಪ್ಪೆ ಹುಳಿ' ಎಂಬ ಕಿಕ್ಕುಹತ್ತಿಸುವ ಪದಾರ್ಥ ಊಟದ ಕೊನೆಯಲ್ಲಿ ನಾಲಿಗೆ ಮೇಲೆ ಬಿದ್ದರೆ ಮಾತ್ರವೇ ಊಟಕ್ಕೂ ತೂಕ!
ಅಪ್ಪೆ ಮಾವಿನ ಕಾಯಿ, ಅಥವಾ ಹುಳಿ ಇರುವ ಯಾವುದೇ ಮಾವಿನ ಕಾಯಿಯಿಂದ ಮಾಡಬಹುದಾದ ಈ 'ಅಪ್ಪೆ ಹುಳಿ', ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಉತ್ತರ ಕನ್ನಡದ ಹವ್ಯಕರ ಮನೆಗಳ ಸಿಗ್ನೇಚರ್ ಡಿಶ್!
ವಿಶೇಷವಾಗಿ ಬೇಸಿಗೆ ಬಂತು ಅಂದ್ರೆ ಹವ್ಯಕರ ಮನೆಗಳಲ್ಲಿ ಮಧ್ಯಾಹ್ನ ಊಟಕ್ಕೆ ಅಪ್ಪೆ ಹುಳಿ ಕಡ್ಡಾಯ! ಮಾವಿನ ಕಾಯಿಯ ರಸವನ್ನು ಸಂಗ್ರಹಿಸಿಟ್ಟು, ಮಾವಿನ ಕಾಯಿ ಇಲ್ಲದ ಸಮಯದಲ್ಲೂ ಅಪ್ಪೆಹುಳಿಗೆ ಕೊರತೆಯಾಗದ ರೀತಿಯಲ್ಲಿ ಹವ್ಯಕರ ಮನೆಗಳಲ್ಲಿ ಮಾವಿನ ಕಾಯಿಯ ರಸದ ದಾಸ್ತಾನಿರುತ್ತದೆ. ಅಷ್ಟರ ಮಟ್ಟಿಗೆ "ಅಪ್ಪೆ ಹುಳಿ" ಹವ್ಯಕರ ಆಹಾರ ಸಂಸ್ಕೃತಿಯ ಅವಿಭಾಜ್ಯ ಖಾದ್ಯ ಎನ್ನಿಸಿದೆ.

ಯಾವ ಮಾವಿನ ಕಾಯಿ ಸೂಕ್ತ?
ತೀರಾ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಪದಾರ್ಥವಿದು. ಅಪ್ಪೆ ಮಿಡಿ, ಅಥವಾ ಹುಳಿ ಇರುವ, ಬೆಳೆದ ಯಾವ ಮಾವಿನ ಕಾಯಿಯಿಂದ ಬೇಕಾದರೂ ಅಪ್ಪೆ ಹುಳಿ ತಯಾರಿಸಬಹುದು. ಸಿಹಿ ಬೇಕೆಂದರೆ ಮಾವಿನ ಹಣ್ಣಿನಿಂದಲೂ ತಯಾರಿಸಬಹುದು. ಆದರೆ ಅದರ ರುಚಿಯೇ ಬೇರೆ. ಅಪ್ಪೆ ಮಾವಿನ ಕಾಯಿಯಾದರೆ ಅದಕ್ಕೆ ರುಚಿ ಜಾಸ್ತಿ.

ಅಪ್ಪೆ ಹುಳಿಗೆ ಏನೆಲ್ಲಾ ಬೇಕು?
* ಹುಳಿ ಇರುವ, ಬೆಳೆದ ಯಾವುದೇ ಜಾತಿಯ 1 ಮಾವಿನ ಕಾಯಿ, ಅಪ್ಪೆ ಮಾವಿನ ಕಾಯಿಯಾದರೆ ರುಚಿ ಹೆಚ್ಚು
* ಮೂರು ಟೀ ಲೋಟ ನೀರು
(ಮಾವಿನ ಕಾಯಿ ಹೆಚ್ಚು ಹುಳಿ ಇದ್ದರೆ ಇನ್ನೂ ಹೆಚ್ಚು ನೀರು ಸೇರಿಸಬಹುದು)
* ಒಗ್ಗರಣೆಗೆ ಎಣ್ಣೆ
ಎರಡು ಎಸಳು ಬೆಳ್ಳುಳ್ಳಿ(ಉಪಯೋಗಿಸದೆ ಇದ್ದರೂ ಆಗುತ್ತದೆ. ಸಾಮಾನ್ಯವಾಗಿ ಮದುವೆ, ಮುಂಜಿಯಂಥ ಶುಭ ಕಾರ್ಯಗಳಲ್ಲಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ), 2
ಹಸಿಮೆಣಸಿನ ಕಾಯಿ(ಒಣ ಮೆಣಸಿಕ ಕಾಯಿಯನ್ನೂ ಉಪಯೋಗಿಸಬಹುದು)
ಅರ್ಧ ಟೀ ಚಮಚ ಉದ್ದಿನಬೇಳೆ, ಅರ್ಧ ಟೀ ಚಮಚ ಸಾಸಿವೆ, ಆರೇಳು ಕರಿಬೇವಿನ ಎಲೆ, ಹಿಂಗು(ಇಂಗು)
ರುಚಿಗೆ ತಕ್ಕಷ್ಟು ಉಪ್ಪು
ಸಿಹಿ ಬೇಕಿದ್ದರೆ ಬೆಲ್ಲ ಅಥವಾ ಸಕ್ಕರೆ ಉಪಯೋಗಿಸಬಹುದು

ಅಪ್ಪೆ ಹುಳಿ ತಯಾರಿಸೋದು ಹೇಗೆ?
ಮೊದಲಿಗೆ ಸ್ವಚ್ಛವಾಗಿ ತೊಳೆದ ಒಂದು ಇಡೀ ಮಾವಿನ ಕಾಯಿಯನ್ನು ಸರಿಯಾಗಿ ಬೇಯಿಸಿಕೊಳ್ಳಬೇಕು. ಕುಕ್ಕರ್ ನಲ್ಲಿಟ್ಟು ಒಂದೆರಡು ಬಾರಿ ಕೂಗಿಸಿದರೂ ನಡೆಯುತ್ತದೆ. ನಂತರ ಅದನ್ನು ಆರಿಸಿಕೊಂಡು ಸಿಪ್ಪೆ ಮತ್ತು ಒಳಗಿನ ವಾಟೆಯನ್ನು ತೆಗೆದು ಒಳಗಿನ ಮೆದು ತಿರುಳನ್ನು(pulp) ಕೈಯಿಯಲ್ಲಿಯೇ ಸರಿಯಾಗಿ ಸ್ಮಾಶ್ ಮಾಡಿಕೊಳ್ಳಬೇಕು, ಅಥವಾ ಮಿಕ್ಸಿಗೆ ಹಾಕಿ ಒಮ್ಮೆ ರುಬ್ಬಿಕೊಂಡರೂ ಆಗುತ್ತದೆ.
ಇದಕ್ಕೆ ಅಗತ್ಯ ಇರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಒಗ್ಗರಣೆ ಸೌಟಿನಲ್ಲಿ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿಯನ್ನು ಜಜ್ಜಿ ಎಣ್ಣೆಗೆ ಹಾಕಬೇಕು, ಉದ್ದಿನ ಬೇಳೆಯನ್ನೂ ಸೇರಿಸಿ. ಅದು ಕೊಂಚ ಹುರಿದ ಮೇಲೆ ಅದಕ್ಕೆ ಸಾಸಿವೆ, ಕರಿಬೆವಿನ ಎಲೆ, ಹಿಂಗನ್ನು ಹಾಕಿ ಈ ಒಗ್ಗರಣೆಯನ್ನು ಮಿಶ್ರಣ ಮಾಡಿಟ್ಟ ನೀರಿಗೆ ಸೇರಿಸಿ. ಇಷ್ಟೇ. ಅಪ್ಪೆಹುಳಿ ರೆಡಿ!
ಅಪ್ಪೆಹುಳಿಯನ್ನು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಹುಣಸೇ ಹನ್ಣಿನಿಂದಲೂ, ನಿಂಬೆ ಹಣ್ಣಿನ ರಸದಿಂದಲೂ ಅಪ್ಪೆಹುಳಿ ತಯಾರಿಸಬಹುದು.

ಅಪ್ಪೆಹುಳಿಯ ಉಪಯೋಗ
ಮಾವಿನ ಕಾಯಿಯಲ್ಲಿ ವಿಟಾಮಿನ್ 'ಸಿ' ಹೇರಳವಾಗಿರುವುದರಿಂದ ಅದು ಆರೋಗ್ಯಕ್ಕೂ ಒಳ್ಳೆಯದು. ವಿಟಾಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದವಡೆಯಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದನ್ನು ಮಾವಿನ ಕಾಯಿ ಸೇವನೆಯಿಂದ ನಿಯಂತ್ರಿಸಬಹುದು. ಪಿತ್ಥಜನಕಾಂಗಕ್ಕೂ ಮಾವಿನ ಕಾಯಿ ಸೇವನೆ ಒಳ್ಳೆಯದು, ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರೂ ಇದರಿಂದ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಅಪ್ಪೆ ಹುಳಿ ಸೇವನೆಯಿಂದ ವ್ಯಕ್ತಿ ಉತ್ತಮ ನಿದ್ದೆಯನ್ನೂ ಪಡೆಯಬಹುದು. ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಪ್ಪೆಹುಳಿ ಸೇವಿಸಿದರೆ ಉತ್ತಮ ನಿದ್ದೆ ಪಡೆದು, ಎದ್ದ ನಂತರ ಮನಸ್ಸು ಉಲ್ಲಸಿತವಾಗಿರುತ್ತದೆ. ಆದ್ದರಿಂದಲೇ ಹವ್ಯಕರ ಮನೆಗಳಲ್ಲಿ ಅಪ್ಪೆ ಹುಳಿ ಎಂದರೆ ಕಿಕ್ಕುಹತ್ತಿಸುವ ಪದಾರ್ಥ ಎಂಬ ಮಾತು ಛಾಲ್ತಿಯಲ್ಲಿದೆ!












Click it and Unblock the Notifications