• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಳ್ಳು ಸುದ್ದಿಯ ಬೆಂಕಿ ಹೊತ್ತಿ ಉರಿಯುತ್ತಿರುವಾಗ ನೆನಪಾದ ದೇವಲಾಪುರ

|

ಸುಳ್ಳು ಸುದ್ದಿ ಎಂಬ ಬೆಂಕಿ ಹೇಗೆ ಹಬ್ಬುತ್ತದೆ ಎಂಬುದನ್ನು ವಿವರಿಸುವುದಕ್ಕೆ ಹೊಳೆದ ಒಂದು ಸತ್ಯ ಘಟನೆಯನ್ನು ನಿಮಗೆ ಹೇಳಬೇಕಿದೆ. ಈ ಘಟನೆ ನಡೆದು ಹದಿನೈದು ವರ್ಷಗಳೇ ಕಳೆದುಹೋಗಿವೆ. ಆದರೆ ಜನರ ಮನಸ್ಥಿತಿ, ಪರಿಸ್ಥಿತಿಗಳು ಬದಲಾಗಿಲ್ಲವೇನೋ ಎಂಬ ತೀರ್ಮಾನಕ್ಕೆ ಬಹಳ ಬೇಸರದಿಂದಲೇ ಬರಬೇಕಿದೆ.

ಮಂಡ್ಯ ಜಿಲ್ಲೆಯಲ್ಲಿ ದೇವಲಾಪುರ ಅನ್ನೋ ಊರು. ಅಲ್ಲಿ ದೇವಸ್ಥಾನವೊಂದರ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿನಿಂದ ಆರೇಳು ಮಂದಿ ಪುರೋಹಿತರು ಜಯನಗರದಿಂದ ಹೊರಟಿದ್ದರು. ಈ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದವರು ನೀಲಕಂಠ ದೀಕ್ಷಿತರು. ಅವರೇ ಪ್ರಧಾನ ಪುರೋಹಿತರು.

ವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ಸೂಚನೆ

ಹತ್ತು-ಹನ್ನೆರಡು ಜನ ಕೂರಬಹುದಾದ ಫೋರ್ ನಾಟ್ ಸೆವೆನ್ ಪ್ರಯಾಣಿಕರ ಮೆಟಡಾರ್ ನಲ್ಲಿ ಹೋಗಿದ್ದರು. ಬೆಂಗಳೂರಿನಿಂದ ಹೊರಡುವ ಹೊತ್ತಿಗೆ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ದೇವಲಾಪುರ ತಲುಪುವ ಹೊತ್ತಿಗೆ ಸಂಜೆಯಾಗಿ, ನಿಧಾನಕ್ಕೆ ಕತ್ತಲು ಕಣ್ಣು ಬಿಡುತ್ತಿತ್ತು. ಈ ಎಲ್ಲ ಪುರೋಹಿತರನ್ನು ವಾಪಸ್ ಬೆಂಗಳೂರಿಗೆ ಕರೆದುಕೊಂಡು ಬರುವ ಜವಾಬ್ದಾರಿ ಕೂಡ ಮೆಟಡಾರ್ ಡ್ರೈವರ್ ವಹಿಸಿಕೊಂಡಿದ್ದ.

"ನನ್ನ ಸಂಬಂಧಿಕರ ಮನೆ ಇಲ್ಲೇ ಹತ್ತಿರದಲ್ಲಿದೆ. ಇವತ್ತು ರಾತ್ರಿ ಅಲ್ಲೇ ಮಲಗಿದ್ದು, ನಾಳೆ ನಿಮ್ಮ ಕಾರ್ಯಕ್ರಮ ಮುಗಿಸಿದ ಮೇಲೆ ಬಂದು ಕರೆದುಕೊಂಡು ಹೋಗ್ತೀನಿ" ಎಂದವನೇ ಆ ಸಂಬಂಧಿಯ ಮನೆಯ ಫೋನ್ ನಂಬರ್ ಅನ್ನು ಕೊಟ್ಟು, ಅಲ್ಲಿಂದ ಹೊರಟಿದ್ದಾನೆ. ದಾರಿಯಲ್ಲಿ ಹೋಗ್ತಾ ಮೊದಲೇ ತಾನು ತಂದಿದ್ದ ಮದ್ಯದ ಸೇವನೆ ಮಾಡಿದ್ದಾನೆ.

ಆ ಮೇಲೆ ತನ್ನ ಸಂಬಂಧಿಕರ ಮನೆಗೆ ಹೋಗಿ ಮಲಗಿದ್ದಾನೆ. ಅವನು ಸಾಗಿದ ಮಾರ್ಗ ಮಧ್ಯದಲ್ಲಿ ಒಂದು ಗಬ್ಬ ಆದ ಹಸುವಿಗೆ ಮೆಟಡಾರ್ ಗುದ್ದಿದ್ದು, ಅದಕ್ಕೆ ಕಾಲು ಮುರಿದಿದೆ ಎಂಬುದು ಯಾವುದೂ ಗೊತ್ತಿಲ್ಲ. ಜತೆಗೆ ಆ ಹಸುವಿನ ಮಾಲೀಕನ ಪಾಲಿಗೆ ಅದೇ ಜೀವನಾಧಾರ. ಊರಲ್ಲಂತೂ ಆತ ಒಳ್ಳೆ ಮನುಷ್ಯ ಅಂತಲೇ ಹೆಸರಾದವರು.

ದೇವಲಾಪುರಕ್ಕೆ ಮೆಟಡಾರ್ ನಲ್ಲಿ ಬಂದವರು ಯಾರು ಅನ್ನೋದು ಬಹಳ ಬೇಗ ಪತ್ತೆಯಾಯಿತು. ಬೆಂಗಳೂರಿನ ಪುರೋಹಿತರಿಗೆ ತಗುಲಿಕೊಂಡ ಗ್ರಾಮಸ್ಥರು ಡ್ರೈವರ್ ನ ಅಡ್ರೆಸ್, ಫೋನ್ ನಂಬರ್ ಕೊಡಿ ಅಂತ ಒತ್ತಡ ಹಾಕಿದ್ದಾರೆ. ಅವರೆಲ್ಲರ ಸಿಟ್ಟು ಕಂಡ ಪುರೋಹಿತರು, ನಮಗೆ ಮೆಟಡಾರ್ ಸಿಕ್ಕಿದ್ದು ಮೆಜೆಸ್ಟಿಕ್ ನಲ್ಲಿ. ಅವನ ಬಗ್ಗೆ ಏನೇನೂ ಗೊತ್ತಿಲ್ಲ ಎಂದುಬಿಟ್ಟರು.

ಆದರೆ, ಪಟ್ಟು ಬಿಡದ ಗ್ರಾಮಸ್ಥರು ಒಂದೋ ಅವನ ಮಾಹಿತಿ ಕೊಡಿ. ಇಲ್ಲದಿದ್ದರೆ ನಿಮಗೆ ಬಾಕಿ ಉಳಿದಿರುವ ದಕ್ಷಿಣೆಯನ್ನು ಮರೆತುಬಿಡಿ ಅಂತ ಖಡಾಖಡಿಯಾಗಿ ಹೇಳಿ, ನಾಲ್ಕೈದು ಜನರನ್ನು ಪಹರೆಗೆ ಅಂತ ಬಿಟ್ಟು ತಮ್ಮ ಮನೆಗಳಿಗೆ ತೆರಳಿದರು.

ನೀಲಕಂಠ ದೀಕ್ಷಿತರಿಗೆ ಪರಿಸ್ಥಿತಿಯ ಗಾಂಭೀರ್ಯ ಅರ್ಥವಾಯಿತು. ಆದರೆ ಡ್ರೈವರ್ ನ ವಿಳಾಸ, ಮಾಹಿತಿ ಕೊಟ್ಟರೆ, ಹಸುವಿಗೆ ಗುದ್ದಿ ಕೂಡ ನಿಲ್ಲಿಸದೆ ಹೋಗಿದ್ದಾನೆ ಅನ್ನೋ ಸಿಟ್ಟಿಗೆ ಏನು ಬೇಕಾದರೂ ಮಾಡಬಹುದು ಅಂತ ಗೊತ್ತಾದ ಮೇಲೆ, ಹೇಗೋ ಒಂದು ಲ್ಯಾಂಡ್ ಲೈನ್ ನಂಬರ್ ನಿಂದ ಡ್ರೈವರ್ ನ ಸಂಬಂಧಿ ಮನೆಗೆ ಫೋನ್ ಮಾಡಿ, ಯಾವ ಕಾರಣಕ್ಕೂ ದೇವಲಾಪುರದ ಕಡೆ ಬಾರದಿರುವಂತೆ ಹೇಳಿ, ಆಗಿದ್ದನ್ನೆಲ್ಲ ವಿವರಿಸಿದ್ದಾರೆ.

ಅಲ್ಲಿಗೆ ಆತ ಬಚಾವಾದ. ಆದರೆ ಪುರೋಹಿತರನ್ನು ಬೆಂಗಳೂರಿಗೆ ಕರೆದುಕೊಂಡು ಬರಬೇಕಲ್ಲ, ಅದಕ್ಕಾಗಿ ಒಂದು ಮಾರುತಿ ವ್ಯಾನ್ ನಲ್ಲಿ ಹೊರಟು ನಿಂತೆವು. ದೇವಲಾಪುರಕ್ಕೆ ಹೋಗುವ ದಾರಿ ಮಧ್ಯೆ ವ್ಯಕ್ತಿಯೊಬ್ಬರು ಮಾತಿಗೆ ಸಿಕ್ಕರು, ಒಂದಷ್ಟು ದೂರ ತಮ್ಮನ್ನು ಬಿಡುವಂತೆಯೂ ಕೇಳಿಕೊಂಡರು.

"ಅಂದಹಾಗೆ ನಿನ್ನೆ ಏನು ಸರ್ ಗಲಾಟೆಯಂತೆ?" ಅಂತ ಅವರನ್ನು ಕೇಳಿದೆವು. "ಯಾರೋ ಹತ್ತು ಜನ ಹುಡುಗರು ಫುಲ್ ಕುಡಿದುಬಿಟ್ಟಿದ್ದಾರೆ. ಮೆಟಡಾರ್ ನಲ್ಲಿ ಜಾಲಿ ರೈಡ್ ಗೆ ಬಂದವ್ರೆ. ಜತೆಗೆ ಹುಡುಗಿಯರೂ ಇದ್ದರಂತೆ. ಕುಡಿದ ಗ್ಯಾನದಲ್ಲಿ ಡ್ರೈವರ್ ಗಬ್ಬ ಆಗಿರುವ ಹಸುಗೆ ಗುದ್ದುಬಿಟ್ಟು, ಅದರ ಕಾಲ ಮ್ಯಾಗೆ ಬೇಕಂತಲೇ ಟೈರ್ ಹತ್ತಿಸಿಕೊಂಡು ಹೋಗವ್ನೆ" ಅಂದ ಪುಣ್ಯಾತ್ಮ.

ಒಂದು ಕ್ಷಣ ಎದೆ ಧಸಕ್ಕೆಂದಿತು. ಮೆಟಡಾರ್ ನಲ್ಲಿ ಇದ್ದದ್ದು ಒಬ್ಬನೇ. ಅದೂ ಡ್ರೈವರ್. ಅವನಿಗೆ ತಾನು ಹಸುವಿಗೆ ಗುದ್ದಿರುವುದೂ ಗೊತ್ತಿಲ್ಲ. ಒಂದು ವಿಚಾರಕ್ಕೆ ರೆಕ್ಕೆ ಪುಕ್ಕ ಬೆಳೆದು ಹೇಗೆಲ್ಲ ಹರಡಬಹುದು ಅನ್ನೋದಕ್ಕೆ ಇದು ಒಂದು ಉದಾಹರಣೆ. ಈಚೆಗೆ ಮಕ್ಕಳಕಲ್ಳರು ಅನ್ನೋ ಗುಮಾನಿಯಲ್ಲಿ ಆಗುತ್ತಿರುವ ಹಲ್ಲೆ, ಹತ್ಯೆಗಳ ಸುದ್ದಿಯನ್ನೆಲ್ಲ ಕೇಳಿ, ಈ ಘಟನೆ ನೆನಪಾಯಿತು.

ಅಂದಹಾಗೆ, ಆ ಪುರೋಹಿತರಿಗೆ ಕಾರ್ಯಕ್ರಮದ ದಕ್ಷಿಣೆ ಒಂದೇ ಒಂದು ರುಪಾಯಿ ಕೂಡ ಊರ ಜನ ಕೊಡಲಿಲ್ಲ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fake news and rumors circulate very fast. Recent days so many deaths happened to such rumors spread through Whats app. Here is an example of real example for such incident.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more