ಹಿಜಾಬ್ ಹಿಂದೆ ಕಾಂಗ್ರೆಸ್, ಕೇಸರಿ ಹಿಂದೆ ಬಿಜೆಪಿ: ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೇ?
ಸರ್ವಧರ್ಮದ ಶಾಂತಿಯ ತೋಟ ಎಂದು ಕರೆಯಲಾಗುತ್ತಿದ್ದ ಕರ್ನಾಟದಲ್ಲಿ ಈಗ ಹಿಜಾಬ್ -ಕೇಸರಿ ಶಾಲು ಸಂಘರ್ಷ ಅಲ್ಲಲ್ಲಿ ಹಿಂಸೆಯ ರೂಪಕ್ಕೆ ತಿರುಗುತ್ತಿದೆ. ವಿದ್ಯಾರ್ಥಿ ಸಮೂಹಗಳನ್ನು ಎತ್ತಿ ಕಟ್ಟಿರುವುದರಿಂದ ಪ್ರಸಕ್ತ ವಿದ್ಯಮಾನದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಕೋರ್ಟ್ ನ್ಯಾಯಾಧೀಶರೂ ಅಭಿಪ್ರಾಯ ಪಡುವಂತೆ, ಇಡೀ ವಿದ್ಯಮಾನಗಳ ಹಿಂದೆ ದುಷ್ಕರ್ಮಿಗಳಿದ್ದಾರೆ. ಇದೊಂದು ಯೋಜಿತ ರಾಜಕೀಯ ತಂತ್ರಗಾರಿಕೆಯೇ ಎನ್ನುವ ಸಂದೇಹ ಬರಲು ಆರಂಭವಾಗಿರುವುದು ಕಾಂಗ್ರೆಸ್ ಮತ್ತು ಆಡಳಿತ ಬಿಜೆಪಿ ಪಕ್ಷದ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು.
ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ಅವಲೋಕಿಸಿದರೆ ಹಿಜಾಬ್ ಹಿಂದೆ ಕಾಂಗ್ರೆಸ್, ಕೇಸರಿ ಶಲ್ಯದ ಹಿಂದೆ ಬಿಜೆಪಿ ನಾಯಕರ ಬೆಂಬಲದ ಧ್ವನಿಗಳು ಜೋರಾಗಿ ಏಳುತ್ತಿವೆ. ಇವೆಲ್ಲದರ ನಡುವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೇಸರಿ ಶಲ್ಯ ಬಂದಿದ್ದು ಎಲ್ಲಿಂದ ಎನ್ನುವ ದಾಖಲೆ ಇಲ್ಲದ ಹೇಳಿಕೆಯನ್ನು ನೀಡಿ, ಹೊಸ ಬಾಂಬ್ ಸಿಡಿಸಿದ್ದಾರೆ.
ಇಚ್ಛೆಯಂತೆ ಬಟ್ಟೆ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಸಮರ್ಥನೆಗಳನ್ನು ಹಿಜಾಬ್ ಪರ ವಕೀಲರು ಕೋರ್ಟಿನಲ್ಲಿ ಮಂಡಿಸುತ್ತಿದ್ದಾರೆ. ಹಾಗಾದರೆ, ಶಾಲಾಕಾಲೇಜುಗಳಲ್ಲಿ ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಯಾಕೆ ಬೇಕು ಎನ್ನುವ ಪ್ರಶ್ನೆಯನ್ನು ಕೇಸರಿ ಪರ ವಕೀಲರು ಮಾಡುತ್ತಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಗಂಭೀರ ಹೇಳಿಕೆ
"ಈಗ ನಡೆಯುತ್ತಿರುವ ವಿದ್ಯಮಾನಗಳ ಹಿಂದೆ ಎರಡು ರಾಷ್ಟ್ರೀಯ ಪಕ್ಷಗಳ ಬೆಂಬಲಿತ ಸಂಘಟನೆಗಳು ಕೈಇರುವುದು ಸ್ಪಷ್ಟ. ಅದನ್ನೆಲ್ಲಾ ಹೇಳಿ ನಾನ್ಯಾಕೆ ವಿಲನ್ ಆಗಲಿ. ಈ ವಿಚಾರಗಳನ್ನು ನಿಮ್ಮ ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳಬೇಡಿ. ಪಾಕಿಸ್ತಾನದ ಮೇಲೆ ಅಭಿಮಾನ ಇದ್ದವರು ಈಗಾಗಲೇ ದೇಶ ಬಿಟ್ಟು ಹೋಗಿಯಾಗಿದೆ. ಸರಕಾರ ಆರಂಭಿಕ ಹಂತದಲ್ಲೇ ಇದನ್ನು ಚಿವುಟಿ ಹಾಕಲು ಪ್ರಯತ್ನಿಸಬಹುದಿತ್ತು, ಸರಕಾರ ಎಡವಿದೆ. ಕರಾವಳಿಯಲ್ಲಿ ಇಂತಹ ಸಂಘರ್ಷಗಳ ಮೂಲಕವೇ ರಾಜಕಾರಣವನ್ನು ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಮತ ಪಡೆಯುತ್ತಿರುವುದು"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ, ಘಟನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಜವಾಬ್ದಾರಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

5ಲಕ್ಷ ಬಹುಮಾನ ಪ್ರಕಟಿಸಿದ, ಜಮಾತ್-ಉಲೆಮಾ-ಎ-ಹಿಂದ್
ಮಂಡ್ಯದಲ್ಲಿ ಜೈಶ್ರೀರಾಮ್ ಘೋಷಣೆಗೆ ವಿರುದ್ದವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಐದು ಲಕ್ಷ ರೂಪಾಯಿ ಬಹುಮಾನವನ್ನು ಪ್ರಕಟಿಸುವ ಮೂಲಕ, ಜಮಾತ್-ಉಲೆಮಾ-ಎ-ಹಿಂದ್ ಸಂಘಟನೆ ಹಿಜಾಬ್ ಎನ್ನುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದೆ. "ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದರೆ, ಹಿಂದೂಗಳಿಗೂ ಹಿಜಾಬ್ ಅನ್ನು ಹಾಕಿಸುತ್ತದೆ"ಎಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ಈ ವಿದ್ಯಮಾನ ಪಡೆಯುತ್ತಿರುವ ತಿರುವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಕ್ಕೆ ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೇ ಹಾಲು ಅನ್ನ ಎನ್ನುವಂತಾಗಿದೆಯಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
|
ಭಾರತೀಯ ಸಂವಿಧಾನವೇ ಮಹಿಳೆಯರಿಗೆ ಈ ಹಕ್ಕನ್ನು ನೀಡಿದೆ
"ಹೆಣ್ಣುಮಕ್ಕಳು ಬಿಕಿನಿಯಾದರೂ ಹಾಕಲಿ, ಮುಸುಕಾದರೂ ಧರಿಸಲಿ. ಜೀನ್ಸ್ ಬಟ್ಟೆಯೇ ಆಗಿರಲಿ ಅಥವಾ ಹಿಜಾಬ್ ಆದರೂ ಆಗಿರಲಿ. ತಾನು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ಮಹಿಳೆಯ ಹಕ್ಕು. ಭಾರತೀಯ ಸಂವಿಧಾನವೇ ಮಹಿಳೆಯರಿಗೆ ಈ ಹಕ್ಕನ್ನು ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ," ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡುವ ಮೂಲಕ, ಕಾಂಗ್ರೆಸ್ ಪಕ್ಷ ಹಿಜಾಬ್ ಪರ ಇದೆ ಎಂದು ಸಾರ್ವಜನಿಕವಾಗಿಯೇ ಹೇಳಿಕೊಂಡಂತಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡಾ ಹಿಜಾಬ್ ಪರ ಮಾತನಾಡಿದ್ದಾರೆ.

ಕೇಸರಿ ಶಲ್ಯದ ಹಿಂದೆ ಬಿಜೆಪಿ, ಹಿಜಾಬ್ ಹಿಂದೆ ಕಾಂಗ್ರೆಸ್
ಕೇಸರಿ ಶಲ್ಯದ ಹಿಂದೆ, ಬಿಜೆಪಿ, ಆರ್ ಎಸ್ ಎಸ್ ಮತ್ತು ಎಬಿವಿಪಿ ಸಂಘಟನೆ ಇದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. "ನಿಮ್ಮ ಧಾರ್ಮಿಕ ಆಚರಣೆಯನ್ನು ಪ್ರಶ್ನಿಸುವುದಕ್ಕೆ ನಾವ್ಯಾರು, ಆದರೆ ಅದನ್ನು ನಿಮ್ಮ ಮನೆಯಲ್ಲಿ ಮಾಡಿ, ಸಾರ್ವಜನಿಕವಾಗಿ ಯಾಕೆ ಮಾಡುತ್ತೀರಾ ಎನ್ನುವುದಷ್ಟೇ ಪ್ರಶ್ನೆ. ನಾವೆಲ್ಲಾ ಒಂದೇ ಎನ್ನುವ ಮಾತನ್ನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಕ್ಲಾಸ್ ರೂಂನಲ್ಲಿ ಯಾಕೆ ಹಿಜಾಬ್ ಬೇಕು, ಇಷ್ಟುದಿನ ಇಲ್ಲದಿದ್ದದ್ದು ಈಗ್ಯಾಕೆ ಕೇಳುತ್ತಿದ್ದೀರಾ? ಈ ಇಡೀ ವಿದ್ಯಮಾನ ಆರಂಭ ಮಾಡಿದವರು ಯಾರು"ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.












Click it and Unblock the Notifications