ದೊಡ್ಡಪತ್ರೆಯಲ್ಲಿ ಏನೆಲ್ಲ ಔಷಧೀಯ ಗುಣವಿದೆ ಗೊತ್ತಾ?
ಎಲ್ಲೆಂದರಲ್ಲಿ ಸುಲಭವಾಗಿ ಬೆಳೆಯುವ ದೊಡ್ಡಪತ್ರೆ ಗಿಡವನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಇದರಲ್ಲಿರುವ ಔಷಧಿ ಗುಣ ಮತ್ತು ಉಪಯೋಗ ಕೆಲವರಿಗಷ್ಟೇ ಗೊತ್ತು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಹಿತ್ತಲಲ್ಲಿ ಅಥವಾ ಕುಂಡದಲ್ಲಿ ನೆಟ್ಟು ಬೆಳೆಸಿದ್ದೇ ಆದರೆ ಮನೆಗೆ ಅಲಂಕಾರ ಮಾತ್ರವಲ್ಲದೆ, ಹಲವು ರೀತಿಯಲ್ಲಿ ಬಳಕೆಯಾಗುವುದರಲ್ಲಿ ಎರಡು ಮಾತಿಲ್ಲ.
ದೊಡ್ಡಪತ್ರೆ ಬಗ್ಗೆ ತಿಳಿಯುತ್ತಾ ಹೋದರೆ ಇದರಿಂದ ಇಷ್ಟೊಂದು ಉಪಯೋಗ ಇದೆಯಾ? ಎಂದು ಅಚ್ಚರಿ ಪಡಬಹುದು. ಆದರೆ ಇದೊಂದು ಗಿಡವಿದ್ದರೆ ಸಾಕು ಹತ್ತಾರು ಆರೋಗ್ಯದ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಾಗಲಿದೆ. ಹಾಗಾದರೆ ಡೊಡ್ಡಪತ್ರೆಯಿಂದ ಏನೇನು ಪ್ರಯೋಜನವಿದೆ ಎಂದು ನೋಡುತ್ತಾ ಹೋದರೆ ಒಂದರ ಮೇಲೊಂದರಂತೆ ಉಪಯೋಗಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ದೊಡ್ಡಪತ್ರೆಯನ್ನು ಸಂಬಾರಬಳ್ಳಿ, ಸಾವಿರ ಸಂಬಾರ(ಅಜವಾನದೆಲೆ), ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದು ನೆಲದ ಮೇಲೆ ಪೊದೆಯಾಗಿ ಬೆಳೆಯುತ್ತದೆ. ಎಲೆಗಳು ಹಸಿರಾಗಿ, ದಪ್ಪವಾಗಿರುತ್ತದೆ. ಅಷ್ಟೇ ಅಲ್ಲ ಎಲೆಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಬರುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆ.
ಸುವಾಸನೆ ಹೊಂದಿರುವ ದೊಡ್ಡಪತ್ರೆ ವಿಟಿಸ್ ಇಂಡಿಕಾ ಎಂಬ ಸಸ್ಯವರ್ಗಕ್ಕೆ ಸೇರಿದೆ. ಜ್ಯೇಷ್ಠದಿಂದ ಭಾದ್ರಪದದವರೆಗೆ ಎಲೆಗಳು ಹುಲುಸಾಗಿ ಬೆಳೆದಿರುತ್ತವೆ. ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮನೆಗಳಲ್ಲಿ ಹೂಕುಂಡಗಳಲ್ಲಿ ಇದನ್ನು ಬೆಳೆಸಬಹುದಾಗಿದೆ. ಭಾರತದ ಮಲಬಾರ ತೀರ ಸೇರಿದಂತೆ ಕರ್ನಾಟಕದ ಹೆಚ್ಚಿನ ಕಡೆ ಇದು ಚೆನ್ನಾಗಿ ಬೆಳೆಯುತ್ತದೆ. ಉಷ್ಣವಲಯದ ಏಷಿಯಾ ಮತ್ತು ಆಫ್ರಿಕಾ ಖಂಡದಲ್ಲಿ ಸಾಧಾರಣವಾಗಿ ಇಪ್ಪತ್ತು ಪ್ರಭೇದಗಳಿವೆಯಂತೆ. ಭಾರತದಲ್ಲಿ ಸುಮಾರು ಹದಿಮೂರು ಬಗೆಗಳಿದ್ದು ಅವುಗಳಲ್ಲಿ ಕೆರೆನೋಷಸ್ವಾಲ್ ಎಂಬ ವರ್ಗ ಹೆಚ್ಚು ಜನಪ್ರಿಯವಾಗಿದ್ದು, ಅದನ್ನೇ ಹೆಚ್ಚಾಗಿ ಬೆಳೆಸುತ್ತಾರೆ. ಪೊದೆಯಂತೆ ಕಾಂಡ ಹರಡಿ ಬೆಳೆಯುವುದರಿಂದ ಸಸ್ಯಾಭಿವೃದ್ಧಿಗೆ ಕಾಂಡವನ್ನು ಬಳಸಬಹುದಾಗಿದೆ.
ಇದನ್ನು ಮಕ್ಕಳಲ್ಲಿ ಕಂಡು ಬರುವ ಉಬ್ಬಸ ಕಫಗಳ ನಿವಾರಣೆಗೆ ಬಳಸಬಹುದಂತೆ ಅದು ಹೇಗೆಂದರೆ? ಗಿಡದಿಂದ ಎಲೆಗಳನ್ನು ಕೊಯ್ದು ಚೆನ್ನಾಗಿ ತೊಳೆದು ಕೆಂಬೂದಿಯಲ್ಲಿ ಅಥವಾ ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬಹುದಾಗಿದೆ. ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಕ್ಲೇಷ್ಮ ಬಿಡಿಸುವ ಗುಣವಿರುವುದರಿಂದ ಕಫ, ನೆಗಡಿಯಾಗಿ ಮೂಗು ಕಟ್ಟಿದರೆ ಎಲೆಗಳನ್ನು ಬಿಸಿ ಬೂದಿ ಇರುವ ಒಲೆಯಲ್ಲಿ ಹಾಕಿಬಾಡಿಸಿ ಬಳಿಕ ಎಲೆಯನ್ನು ಹಿಂಡಿ ಅದರಿಂದ ಬರುವ ಮೂರರಿಂದ ನಾಲ್ಕು ತೊಟ್ಟು ರಸವನ್ನು ಜೀರಿಗೆ ಕಷಾಯದಲ್ಲಿ ಹಾಕಿ ಕುಡಿದರೆ ಒಳ್ಳೆಯದಾಗುತ್ತದೆ.

ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ. ಅಷ್ಟೇ ಅಲ್ಲ ಕಣ್ಣುರಿಯೂ ಕಡಿಮೆಯಾಗುತ್ತದೆ. ಇನ್ನು ಬೇಸಿಗೆ ಸಮಯದಲ್ಲಿ ಬಿಗಿಯಾದ ಬಟ್ಟೆ ತೊಡುವುದರಿಂದ ಬೆವರಿನಿಂದ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ದೊಡ್ಡಪತ್ರೆ ಎಲೆ, ಅರಶಿನ ಪುಡಿ ಸೇರಿಸಿ ಸೇರಿಸಿ ಬೆಣ್ಣೆಯಲ್ಲಿ ಅರೆದು ಚೆನ್ನಾಗಿ ಕಲೆಸಿ ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ.
ಇನ್ನು ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲಾರಾ ಹತೋಟಿಗೆ ಬರುವುದು. ಶೀತ, ಕೆಮ್ಮಿಗೆ ಕಬ್ಬಿನ ರಸದೊಂದಿಗೆ ಎಲೆಗಳ ರಸವನ್ನು ಬೆರೆಸಿ ಕುಡಿಯಬಹುದಾಗಿದೆ. ತೆಂಗಿನ ಹಾಲಿನೊಂದಿಗೆ ಡೊಡ್ಡಪತ್ರೆ ಬೇರಿನ ರಸವನ್ನು ಬೆರೆಸಿ ಕುಡಿದರೆ ಅಲ್ಸರ್ ಗುಣವಾಗುತ್ತದೆ ಎನ್ನಲಾಗಿದೆ. ಇನ್ನು ಕುರುನಂತಹ ವೃಣಗಳಾದಾಗ ಬೇರನ್ನು ಜಜ್ಜಿ ಎಣ್ಣೆ ಮತ್ತು ತೆಂಗಿನ ಹಾಲಿನೊಂದಿಗೆ ಬೆರೆಸಿ ಹಚ್ಚಬೇಕು. ಇನ್ನು ಎಲೆಗಳನ್ನು ಚಟ್ನಿ, ತಂಬುಳಿ ಮೊದಲಾದವುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ.

ಇವತ್ತು ಬಹುತೇಕ ಜನರು ಮತ್ತೆ ವಿವಿಧ ಗಿಡಮೂಲಿಕೆಗಳ ಕಡೆಗೆ ಮುಖ ಮಾಡಿದ್ದಾರೆ. ಅವುಗಳ ಉಪಯೋಗ ಅರಿತು ನಿತ್ಯದ ಜೀವನದ ಚಟುವಟಿಕೆಯಲ್ಲಿ ಕಷಾಯವಾಗಿ, ಆಹಾರವಾಗಿ ಬಳಸಿಕೊಂಡು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗ ದೊಡ್ಡಪತ್ರೆಯಲ್ಲಿರುವ ಔಷಧೀಯ ಗುಣವನ್ನು ಅರಿತು ಅದರ ಬಳಕೆ ಮಾಡುವುದು ಜಾಣತನವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications