Happy Mother's Day: ನಿನ್ನಂತೆ ಯಾರಿಲ್ಲಾ ಅಮ್ಮಾ..!!
ಒಂಬತ್ತು ತಿಂಗಳು ಹೆತ್ತು-ಹೊತ್ತು, ಸಾಕಿ-ಸಲುಹಿ ತನ್ನೆಲ್ಲಾ ಪ್ರೀತಿಯನ್ನು ಧಾರೆ ಎರೆದು ಮಗುವನ್ನು ಬೆಳೆಸಲು, ತನ್ನಿಡೀ ಜೀವನವನ್ನೇ ಮುಡಿಪಿಡುವ ತಾಯಿಯನ್ನು ವರ್ಣಿಸಲು ಪದಗಳೇ ಸಾಲದು. ಆಕೆ ಕರುಣಾಮಯಿ, ಹೃದಯವಂತೆ, ಭೂಮಿ ತೂಕದ ಹೆಣ್ಣು. ತನ್ನ ಕಣ-ಕಣವನ್ನೂ ಅರ್ಪಿಸುವ ತ್ಯಾಗಮಯಿ. ಇಷ್ಟೆಲ್ಲಾ ವರ್ಣನೆ ಬಹುಶಃ ಎಲ್ಲಾ ತಾಯಂದಿರಿಗೂ ಕೂಡ ಅನ್ವಯಿಸುತ್ತೆ ಅನ್ನೋದು ಒಂದ್ ಕಡೆ ಆದ್ರೆ, ಈ ಎಲ್ಲಾ ಗುಣಗಳನ್ನ ಹೊತ್ತು ನನ್ನ ಆಶಾ ಕಿರಣವಾಗಿ, ತನ್ನ ಇಡೀ ಸರ್ವಸ್ವವನ್ನೇ ನನಗಾಗಿ ಧಾರೆ ಎರೆದಿರೋದು ನನ್ನಮ್ಮ ಗಾಯತ್ರಿದೇವಿ.
ಆಕೆ ನನ್ನ ನಿಲುವು, ನನ್ನ ಶಕ್ತಿ ಮತ್ತು ನನ್ನ ಆತ್ಮವಿಶ್ವಾಸದ ಓಡತಿ. ನನ್ನಮ್ಮನ ಮತ್ತು ನನ್ನ ಸಂಬಂಧ, ಬಿಡಿಸಲಾಗದ ಗಂಟಿನ ಹಾಗೆ ಬೆರೆತು ಗಟ್ಟಿಯಾಗಿದೆ. ನನ್ನ ಪ್ರತೀ ಬೆಳವಣಿಗೆಯಲ್ಲೂ ನನಗೆ ಮಾರ್ಗದರ್ಶನ ನೀಡುತ್ತಾ, ತಿದ್ದುತ್ತಾ, ಪೋಷಿಸುತ್ತಾ, ರಕ್ಷಾ ಕವಚದಂತೆ ನನ್ನ ಬೆನ್ನೆಲುಬಾಗಿ ನಿಂತಿದ್ದಾಳೆ.

ಅಮ್ಮ ವೃತ್ತಿಯಲ್ಲಿ ಪ್ರಾಧ್ಯಾಪಕಿ. ಮನೆಯಲ್ಲಿ ನನಗೆ ತಾಯಿ ಎನ್ನುವುದಕ್ಕಿಂತ ಹೆಚ್ಚಾಗಿ ನನ್ನ ಆಪ್ತ ಸ್ನೇಹಿತೆ. ನನ್ನ ಜೀವನದಲ್ಲಿ ಎಲ್ಲರ ಸ್ಥಾನವನ್ನು ತುಂಬಿದ ಒಡತಿ. ಆಕೆ ಸಮಾಜದಲ್ಲಿ ಎಲ್ಲವನ್ನು ನಿಭಾಯಿಸುವುನ್ನು ನೋಡಿಯೇ ನನಗೆ ಈಗ ನಾಲ್ಕಾರು ಜನರ ಮುಂದೆ ತಲೆ ಎತ್ತಿ ಮಾತಾಡುವ ಧೈರ್ಯ ಬಂದಿದೆ.. ಸುಮಾರು ಐದನೇ ತರಗತಿಗೆ ಬರುವ ತನಕ ನಮ್ಮದ್ಯಾವ ಜಾತಿ ಹಾಗು ಮತ ಎಂದು ಆಕೆ ನನಗೆ ಹೇಳೆ ಇರಲಿಲ್ಲಾ., ಅದರ ಅರಿವು ಹಾಗು ಅಗತ್ಯ ನನ್ನ ಆ ವಯಸ್ಸಿಗೆ ಬೇಕಾಗಿಲ್ಲಾ ಅಂತ ಆಕೆಗೆ ಅನ್ನಿಸಿತ್ತು. ಒಮ್ಮೆ ಹೀಗೆ ಶಾಲೆಯಲ್ಲಿ ಗೆಳತಿಯರು ನನ್ನ ಜಾತಿಯ ಬಗ್ಗೆ ಕೇಳಿದಾಗ ನನ್ನಲ್ಲಿ ಉತ್ತರವಿರಲಿಲ್ಲ. ಅಮ್ಮನಲ್ಲಿ ಬಂದು ನಡೆದುದನ್ನು ವಿವರಿಸಿದಾಗ ಒಂದು ಕಿರುನಗೆ ಬೀರಿ, ಜಾತಿ ಮುಖ್ಯವಲ್ಲ, "ಮನುಷ್ಯತ್ವ ಹಾಗು ಸಮಾನತೆ ಮುಖ್ಯ," ಎಂದು ಹೇಳಿದ್ದ ಮಾತು ಇವತ್ತಿಗೂ ಕಿವಿಗೆ ಅಪ್ಪಳಿಸುತ್ತದೆ. ಆಕೆ ನನ್ನ ಹೆಮ್ಮೆ ಮತ್ತು ನನ್ನ ಆದರ್ಶ.
ಚಿಕ್ಕ ವಯಸ್ಸಿಗೆ ನನಗೆ ಕನ್ನಡಕ ಹಾಕುವಂತಾಯಿತು. ಆ ದಿನ, ಮಗಳ ಕಣ್ಣಿಗೆ ಹೀಗಾಯಿತಲ್ಲಾ ಎಂದು ಮಗುವಿನಂತೆ ಅಜ್ಜಿಗೆ ಕರೆ ಮಾಡಿ ಅತ್ತ ಮುಗ್ದ ಅಮ್ಮನನ್ನು ನಾನು ಬಲ್ಲೆ. ಅಮ್ಮ ಭಾವುಕಳು. ತನ್ನಲ್ಲಿ ಇರೋ ಎಲ್ಲಾ ಆಸೆ, ಕನಸನ್ನು ನನ್ನನ್ನ ರೂಪಿಸುವ ಪರಿಯಲ್ಲಿ ನನಸು ಮಾಡಿಕೊಳ್ಳುತ್ತಾ ಸರಳ ಜೀವನವನ್ನ ನಡೆಸುತ್ತಾ ಬಂದಿದ್ದಾಳೆ. ಸಂದರ್ಭಗಳನ್ನು ನಿಭಾಯಿಸುವುದನ್ನು, ಸ್ವಂತ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಸುವುದರೊಟ್ಟಿಗೆ, ಭವಿಷ್ಯದಲ್ಲಿ ನನ್ನ ಬೇಕು-ಬೇಡಗಳನ್ನು ಆಯ್ಕೆಮಾಡಿ, ನನ್ನ ಜೀವನವನ್ನು ರೂಪಿಸಿಕೊಳ್ಳುವ ಸ್ವಾತಂತ್ರವನ್ನು ನೀಡಿದ್ದಾಳೆ.
ತನ್ನ ಆಸೆ-ಆಕಾಂಕ್ಷೆಗಳನ್ನ ಬದಿಗಿಟ್ಟು, ನನ್ನ ಕನಸಿನ ಹಣತೆಯನ್ನು ಹಚ್ಚುವ ದೇವತೆ ನನ್ನಮ್ಮ. ಆಕೆಯ ತ್ಯಾಗಗಳಿಗೆ ಎಂದು ಬೆಲೆ ಕಟ್ಟಲು ಸಾಧ್ಯವಿದೆಯೇ? ನೀವು ಇರಲು ದೇವರೇಕೆ ಅಮ್ಮಾ? ನನ್ನ ಲೋಕಕ್ಕೆ.. ಅಮ್ಮಾ ಐ ಲವ್ ಯೂ... ನನ್ನ ಪ್ರತಿ ನಿರ್ಧಾರಗಳಿಗೂ ನನಗೆ ಸಾತ್ ಕೊಟ್ಟ ನನ್ನನ್ನ ರೂಪಿಸುವಲ್ಲಿ ಹಗಲಿರುಳು ಶ್ರಮ ಪಟ್ಟ ನಿನಗೊಂದು ಸಲಾಂ! ಥ್ಯಾಂಕ್ಯೂ ಅಮ್ಮಾ..! ಹೆಮ್ಮ ನನಗೆ ಅಮ್ಮಾ ನಿನ್ನನ್ನ ನನ್ನ ತಾಯಿ ಎಂದು ಕರೆಯಲು. ನಿನ್ನಂತೆ ಯಾರೂ ಇಲ್ಲಾ ಅಮ್ಮಾ!!
ಅಮ್ಮಾ ಎಂದ ಕೂಡಲೆ ನನಿಗೆ ಈ ಹಾಡಿನ ಸಾಲುಗಳೇ ನೆನಪಿಗೆ ಬರತ್ತೆ
ಕೇಳದೇನೆ ಅಂದು ನಿನ್ನ ಎದೆ ಅಮೃತ ನೀಡಿದೆ! ಕದಲಿದಾಗ ಕೈ ಹಾಕುತಾ ನಿದ್ದೆಯಲ್ಲೂ ಮಲಗದೆ!
ನಿನ್ನ ಸ್ಪರ್ಷವೆಲ್ಲಾ ಹರ್ಷ! ನೋಟವೆಲ್ಲಾ ಪ್ರೀತಿ, ರಕ್ಷೆಯೂ!
ಮಾತಲೆಲ್ಲಾ ಜೇನ ಹರ್ಷಾ ಹೆಜ್ಜೆಗೊಂದು ನೀತಿಯು!
ನಾನು ನಗಲು ನೀನು ನಕ್ಕೆ! ನಾನು ಅಳಲು ನೀನು ಬಿಕ್ಕಿದೆ!
ನನ್ನ ಕಣ ಕಣ ನಿನ್ನದವ್ವ! ನಾನು ಜೀವ ನೀನೆ ದೈವ ಬೇರೆ ಏನು ತಿಳಿಯದು!
ಸಂಹಿತಾ ಎಸ್. ಮೈಸೂರು | ಸೀನಿಯರ್ ಪ್ರೊಡಕ್ಷನ್ ಅಸೋಸಿಯೇಟ್, ಎಸ್.ಡಿ.ಎಂ. ಕಾಲೇಜು, ಉಜಿರೆ.












Click it and Unblock the Notifications