ರೈಲು ನಿಲ್ದಾಣದ ಬಗ್ಗೆ ಪ್ರಯಾಣಿಕರು ತಿಳಿದಿರಬೇಕಾದ ಮಾಹಿತಿಗಳು
ಭಾರತೀಯ ರೈಲ್ವೆ ದೇಶದಲ್ಲಿ ಅತಿ ಉದ್ದದ ಸಂಪರ್ಕ ಜಾಲವನ್ನು ಒಳಗೊಂಡಿದೆ. ಪ್ರತಿನಿತ್ಯ ಕೋಟ್ಯಾಂತರ ಜನರು ರೈಲಿನಲ್ಲಿ ಸಂಚಾರ ನಡೆಸುತ್ತಾರೆ. ಐಷಾರಾಮಿ ರೈಲಿನಿಂದ ಹಿಡಿದು, ಸಾಮಾನ್ಯ ದರ್ಜೆಯ ರೈಲಿನ ತನಕ ಹಲವು ವಿಧದ ರೈಲುಗಳಿವೆ.
ಕಾಲ ಕಾಲಕ್ಕೆ ರೈಲ್ವೆ ವಲಯದಲ್ಲಿ ಹಲವಾರು ಬದಲಾವಣೆ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ, ವಿವಿಧ ಆರ್ಥಿಕ ವಲಯಗಳಿಗೆ ಸಂಪರ್ಕಿಸಲು, ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ರೈಲ್ವೆಯಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ.

ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ಅಮೃತ್ ಭಾರತ ಸ್ಟೇಷನ್ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೊಸ ಮಾರ್ಗ, ಗೇಜ್ ಪರಿವರ್ತನೆ ಮತ್ತು ಹಳಿ ದ್ವಿಗುಣಗೊಳಿಸುವಿಕೆ ಕಾಮಗಾರಿ ಯೋಜನೆ ರೂಪಿಸಲಾಗಿದೆ.
ಕೈಗಾರಿಕಾ ಪಾರ್ಕ್, ಬಂದರು, ಗಣಿ, ವಿದ್ಯುತ್ ಸ್ಥಾವರಸ, ಪ್ರವಾಸಿ ಮತ್ತು ಸಾಂಸ್ಕೃತಿಕ ತಾಣಗಳು, ಕೃಷಿ ವಲಯಗಳು ಇತ್ಯಾದಿಗಳಿಗೆ ಸಂಪರ್ಕವನ್ನು ಒಳಗೊಂಡಂತೆ ಜನರು, ಸರಕು ಮತ್ತು ಸೇವೆಗಳ ಸಾಗಣೆಗೆ ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ರೈಲು ನಿಲ್ದಾಣದ ಮಾಹಿತಿ: ಭಾರತೀಯ ರೈಲ್ವೆ ರೈಲು ನಿಲ್ದಾಣಗಳಲ್ಲಿ ಹಲವು ವಿಧಗಳನ್ನು ಮಾಡಿದೆ. ಇವುಗಳಲ್ಲಿ ರೋಡ್, ಹಾಲ್ಟ್ ಸ್ಟೇಷನ್, ಜಂಕ್ಷನ್, ಕಂಟೋನ್ಮೆಂಟ್, ಟರ್ಮಿನಲ್ ಹೀಗೆ ವಿವಿಧ ಬಗೆ ಇದೆ. ಇವುಗಳನ್ನು ಏನನ್ನು ಸೂಚಿಸುತ್ತವೆ ಎಂಬ ಕುರಿತು ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಮಾಹಿತಿ ಇಲ್ಲಿದೆ ನೋಡಿ.
ಭಾರತೀಯ ರೈಲ್ವೆ ನಿಲ್ದಾಣದ ಹೆಸರಿನೊಂದಿಗೆ road, halt, junction, cant, terminal, central ಎಂಬೆಲ್ಲ ಹೆಸರುಗಳು ಇದೆ. ಇದರ ಕುರಿತು ಮಾಹಿತಿ ಹೇಳುತ್ತೆನೆ ಎಂದು ವಿವರಣೆ ನೀಡಿರುವ ಬರಹ ಇದಾಗಿದೆ.
* Road : ರಸ್ತೆ ರೈಲು ನಿಲ್ದಾಣ ಎಂದರೆ ರೈಲು ಮಾರ್ಗದಿಂದ ದೂರದಲ್ಲಿರುವ ಊರಿನ ರೈಲು ನಿಲ್ದಾಣ. ಇದಕ್ಕೆ ರಸ್ತೆಯ ಮೂಲಕ ಮಾತ್ರ ಹೋಗಬೇಕು. ಈ ಮಾದರಿಯಲ್ಲಿ ಕರ್ನಾಟಕದಲ್ಲಿ ಸುಬ್ರಹ್ಮಣ್ಯ ರೋಡ್ ಸೇರಿ ವಿವಿಧ ರೈಲು ನಿಲ್ದಾಣಗಳಿವೆ.
* Halt : ಈ ಹೆಸರಿನ ರೈಲು ನಿಲ್ದಾಣಗಳಲ್ಲಿ ಸ್ಥಳೀಯ ರೈಲು ಮಾತ್ರ ನಿಲ್ಲುತ್ತದೆ. ಈ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ಸೇರಿ ಹಲವು ನಿಲ್ದಾಣಗಳಿವೆ.
* Junction : ಜಂಕ್ಷನ್ ಎಂದರೆ ಮೂರು ಅಥವಾ ಹೆಚ್ಚಿನ ರೈಲು ಮಾರ್ಗಗಳು ಸಂಧಿಸುವ ರೈಲು ನಿಲ್ದಾಣ. ನಿಲ್ದಾಣಕ್ಕೆ ಬರುವ ರೈಲುಗಳು ಕನಿಷ್ಠ ಎರಡು ಹೊರ ಹೋಗುವ ರೈಲು ಮಾರ್ಗಗಳನ್ನು ಹೊಂದಿರಬೇಕು. ಅರಸೀಕೆರೆ ಜಂಕ್ಷನ್, ಮಂಗಳೂರು ಜಂಕ್ಷನ್, ಮೈಸೂರು ಜಂಕ್ಷನ್ ಹೀಗೆ ಹಲವು ನಿಲ್ದಾಣಗಳು ರಾಜ್ಯದಲ್ಲಿವೆ.
* Cant (Contonment) : ಕ್ಯಾಂಟ್ ಅಥವ ಕಂಟೋನ್ಮೆಂಟ್ ರೈಲು ನಿಲ್ದಾಣವು ಮಿಲಿಟರಿ ಕಚೇರಿ ಮತ್ತು ಶಿಬಿರದ ಬಳಿ ಸ್ಥಾಪಿಸಲಾದ ರೈಲು ನಿಲ್ದಾಣವಾಗಿದೆ. ಬೆಂಗಳೂರು ನಗರದಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣವು ನಗರದ ಪ್ರಮುಖ ರೈಲು ನಿಲ್ದಾಣದಲ್ಲಿ ಒಂದಾಗಿದೆ.
* Central : ಒಂದಕ್ಕಿಂತ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಹೊಂದಿರುವ ನಗರಗಳಲ್ಲಿನ ಮುಖ್ಯ ಪ್ರಯಾಣಿಕರ (ಪ್ಯಾಸೆಂಜರ್ )ರೈಲು ನಿಲ್ದಾಣವನ್ನು ಕೇಂದ್ರ ನಿಲ್ದಾಣವೆಂದು ಗುರುತಿಸಲಾಗುತ್ತದೆ. ಈ ನಿಲ್ದಾಣವು ರೈಲು ಸಂಚಾರದ ಪ್ರಧಾನ ಕೇಂದ್ರ ಆಗಿರುತ್ತದೆ. ಈ ಸ್ಟೇಷನ್‌ಗಳಿಂದ ಎಲ್ಲಾ ಕಡೆಗೂ ರೈಲು ಸಂಪರ್ಕ ಇರುತ್ತದೆ. ಮಂಗಳೂರು ಸೆಂಟ್ರಲ್, ಚೆನ್ನೈ ಸೆಂಟ್ರಲ್ ಸೇರಿ ವಿವಿಧ ನಿಲ್ದಾಣಗಳಿವೆ.
* Terminal : ಈ ಮಾದರಿ ನಿಲ್ದಾಣಗಳ ಮೂಲಕ ರೈಲ್ವೆ ಸಂಪರ್ಕವು ಕೊನೆಗೊಳ್ಳುತ್ತದೆ ಮತ್ತು ಇಲ್ಲಿಗೆ ಬರುವ ರೈಲುಗಳು ಮತ್ತೆ ಇಲ್ಲಿಂದಲೇ ಆರಂಭವಾಗಬೇಕು. ನಿಲ್ದಾಣದಿಂದ ಯಾವುದೇ ಫಾರ್ವರ್ಡ್ ಟ್ರ್ಯಾಕ್‌ಗಳಿರುವುದಿಲ್ಲ. ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣ ಈ ಮಾದರಿಯದ್ದು.












Click it and Unblock the Notifications