Gruha Jyothi; ಮನೆ, ಮನ ಬೆಳಗುತ್ತಿರುವ ಗೃಹ ಜ್ಯೋತಿ ಯೋಜನೆ
ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನಗಳು ಕಳೆದಿವೆ. ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ 'ಗೃಹಜ್ಯೋತಿ' ಯೋಜನೆಗೆ ಜಾರಿಗೊಂಡು ಯಶಸ್ವಿಯಾಗಿದೆ. ಸರ್ಕಾರ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಬಳ್ಳಾರಿ ವಾರ್ತಾ ಇಲಾಖೆ ಪ್ರಕಟಿಸಿದ 'ಗೃಹಜ್ಯೋತಿ' ಯೋಜನೆಯ ಯಶಸ್ಸಿನ ವಿಶೇಷ ಲೇಖನ ಇಲ್ಲಿದೆ.
ರಾಜ್ಯ ಸರ್ಕಾರವು ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ ಒಂದಾದ 'ಗೃಹಜ್ಯೋತಿ' ಯೋಜನೆಯು ಜಾರಿಗೊಂಡು, ಇದೀಗ ರಾಜ್ಯಾದ್ಯಂತ ಜನರ ಮನೆ, ಮನಗಳನ್ನು ಬೆಳಗುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿದೆ.
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 'ಗೃಹಜ್ಯೋತಿ' ಯೋಜನೆಗೆ ನೋಂದಣಿ ಕಾರ್ಯಕ್ಕೆ ಜೂನ್ 18ರಂದು ಅಧಿಕೃತವಾಗಿ ಚಾಲನೆ ನೀಡಿದೆ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ 'ಗೃಹಜ್ಯೋತಿ' ನೋಂದಣಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಾದ್ಯಂತ ಜೂನ್ 18ರಿಂದ ಕರ್ನಾಟಕ ಒನ್, ಗ್ರಾಮಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದೆ. ಅಲ್ಲದೆ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಆಯಾ ವಿದ್ಯುತ್ ಕಂಪನಿಗಳು ಕೂಡ ಕಛೇರಿಗಳಲ್ಲಿ ಅವಕಾಶ ಮಾಡಿಕೊಟ್ಟಿವೆ. ಇದರ ಜೊತೆಗೆ ಫಲಾನುಭವಿಗಳು ತಮ್ಮ ಮೊಬೈಲ್‍ನಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅನುವಾಗುವಂತೆ ಸರಳೀಕರಣ ಮಾಡಲಾಗಿದೆ.
ಬಳ್ಳಾರಿಯಲ್ಲಿ ಯಶಸ್ವಿ; ಬಳ್ಳಾರಿ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಇಲ್ಲಿಯವರೆಗೆ 2,37,427 ಮಂದಿ ನೋಂದಣಿ ಮಾಡಿಕೊಂಡ ಫಲಾನುಭವಿಗಳಿದ್ದಾರೆ. ಇದರಲ್ಲಿ 1,56,418 ಜನ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಬಳ್ಳಾರಿ ಜೆಸ್ಕಾಂ ತಿಳಿಸಿದೆ.
'ಗೃಹಜ್ಯೋತಿ' ಯೋಜನೆಗೆ ಜನರು ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಎದುರಾದರೆ ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಚೇರಿ ಅಥವಾ 24*7 ಸಹಾಯವಾಣಿ ಸಂಖ್ಯೆ 1912 ಗೆ ಕರೆಮಾಡಬಹುದಾಗಿದೆ.
ಜುಲೈ 1ರಿಂದಲೇ 'ಗೃಹಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಆರಂಭವಾಗಿದೆ. ಈಗಾಗಲೇ ಯೋಜನೆಗೆ ಅರ್ಜಿ ಹಾಕಿರುವವರು ಮಾಸಿಕ ಸರಾಸರಿಯಂತೆಯೇ ವಿದ್ಯುತ್ ಬಳಕೆ ಮಾಡಿದ್ದರೆ ಜುಲೈ ತಿಂಗಳ ಬಳಸಿದ್ದಕ್ಕೆ ಆಗಸ್ಟ್‌ನಲ್ಲಿ ಶೂನ್ಯ ಮೊತ್ತದ ಬಿಲ್ ನೀಡಲಾಗಿದೆ. ಗ್ರಾಹಕರು ಮಾಸಿಕ ಸರಾಸರಿಗಿಂತ ಹೆಚ್ಚುವರಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದರೆ ಆ ಹೆಚ್ಚುವರಿ ಬಳಕೆ ಶುಲ್ಕ ಪಾವತಿಸಬೇಕಾಗುತ್ತದೆ.
ಗೃಹಜ್ಯೋತಿ ಯೋಜನೆಯ ಫಲಾನುಭವಿಯಾದ ಬಳ್ಳಾರಿ ನಗರದ ನಿವಾಸಿ ಹನುಮಂತಪ್ಪ ಮಾತನಾಡಿ, "ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ತಿಂಗಳಿಗೆ 1000 ಸಾವಿರ ರೂ. ಆಸುಪಾಸು ಕರೆಂಟ್ ಬಿಲ್ ಬರುತ್ತಿತ್ತು. ಹೊಸ ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ ಜುಲೈ ತಿಂಗಳ ಕರೆಂಟ್ ಬಿಲ್ ಸೊನ್ನೆ ಬಂದಿದೆ, ಇದರಿಂದ ತುಂಬಾ ಅನುಕೂಲವಾಗಿದೆ. ಉಳಿತಾಯವಾದ ಹಣದಿಂದ ಮನೆಗೆ ಬೇಕಾದ ಅಗತ್ಯ ದಿನಸಿ ಸಾಮಗ್ರಿ ಖರೀದಿಸಲು ಸಹಾಯಕವಾಗಿದೆ" ಎಂದರು.
ಸರ್ಕಾರ 'ಗೃಹಜ್ಯೋತಿ' ಯೋಜನೆ ನೋಂದಣಿಗೆ ಯಾವುದೇ ಗಡುವು ನಿಗದಿ ಮಾಡಿಲ್ಲ. ಈಗಲೂ ಸಹ ಯೋಜನೆಗೆ ಜನರು ನೋಂದಣಿ ಮಾಡಿಕೊಳ್ಳಬೇಕಿದೆ. ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಸೇವಾಸಿಂಧು (https://sevasindhugs.karnataka.gov.in) ಪೋರ್ಟ್‌ಲ್‌ನಲ್ಲಿ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ವಿಧಿಸಲಾಗಿಲ್ಲ. ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.
ಲೇಖನ ಕೃಪೆ; ಡಿಐಪಿಆರ್ ಬಳ್ಳಾರಿ











Click it and Unblock the Notifications