kumbh mela 2025: ಮಹಾ ಕುಂಭಮೇಳಕ್ಕೆ ಅದ್ಧೂರಿ ಚಾಲನೆ, ಭಕ್ತರ ಮಾರ್ಗದರ್ಶನಕ್ಕಿವೆ 50,000 ಕ್ಯೂಆರ್ ಕೋಡ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಇಂದಿನಿಂದ ಶುರುವಾಗಿದೆ. ಇಂದು ಪೌಶ್ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಭಕ್ತರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡುವ ಮೂಲಕ ಮಹಾ ಕುಂಭಮೇಳ ಚಾಲನೆ ಪಡೆದುಕೊಂಡಿದೆ. ಸದ್ಯ ಮೊದಲ ದಿನವೇ ಪ್ರಯಾಗರಾಜ್ ಭಕ್ತ ಸಮೂಹಕ್ಕೆ ಸಾಕ್ಷಿಯಾಗಿದೆ. ಗಂಗಾ, ಯಮುನಾ ಮತ್ತು ಅತೀಂದ್ರಿಯ ಸರಸ್ವತಿ ನದಿಗಳ ಸಂಗಮವಾಗಿರುವ ತ್ರಿವೇಣಿ ಸಂಗಮದ ದಡಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.
ಮಹಾ ಕುಂಭಮೇಳದ ಶುಭ ಸಂದರ್ಭದಲ್ಲಿ ಭಕ್ತರು ಪುಣ್ಯಸ್ನಾನ ಮಾಡುವ ಮೂಲಕ ಪವಿತ್ರ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಇನ್ನು ಇಲ್ಲಿ ಭಕ್ತರ ಸುರಕ್ಷತೆ ಮತ್ತು ಭದ್ರತೆಗಾಗಿ ಎನ್‌ಡಿಆರ್‌ಎಫ್ ತಂಡಗಳು ಮತ್ತು ಉತ್ತರ ಪ್ರದೇಶ ಪೊಲೀಸರನ್ನು ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಇದು ಈ ವರ್ಷದ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮ ಎಂದೆನಿಸಿಕೊಂಡಿದೆ.

ಈ ಮಹಾ ಕುಂಭವು 144 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುವ ಅಪರೂಪದ ಸಂದರ್ಭವಾಗಿರುವುದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸುಮಾರು 12 ವರ್ಷಗಳ ನಂತರ ಮಹಾಕುಂಭವನ್ನು ಮತ್ತೆ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 45 ಕೋಟಿಗೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇಂದಿನಿಂದ ಆರಂಭವಾಗಿರುವ ಮಹಾಕುಂಭ ಮೇಳವು ಫೆಬ್ರವರಿ 26ರಂದು ಸಮಾರೋಪಗೊಳ್ಳಲಿದೆ.
ಮಹಾಕುಂಭ ಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸುವ ಕಾರಣಕ್ಕೆ ಇಲ್ಲಿ ಭದ್ರತೆಗಾಗಿ ಹೆಚ್ಚಿನ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಪೊಲೀಸರು ಸೇರಿದಂತೆ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಈ ಹಬ್ಬಕ್ಕೆ ಬರುವವರಿಗೆ ಸೂಕ್ತ ಮಾಹಿತಿ ಸಿಗಲಿ ಎಂಬ ಕಾರಣಕ್ಕೆ ಡಿಜಿಟಲ್ ವ್ಯವಸ್ಥೆ ಕೂಡ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಮಹಾಕುಂಭ ಮೇಳ ನಡೆಯುವ ಪ್ರದೇಶದಲ್ಲಿ 50,000ಕ್ಕೂ ಹೆಚ್ಚು ಕ್ಯೂಆರ್ ಕೋಡ್‌ಗಳನ್ನು ಕೂಡ ಅಳವಡಿಸಿದೆ.

ಮಹಾಕುಂಭಕ್ಕೆ ಬರುವ ಭಕ್ತಾದಿಗಳು ತಮ್ಮ ಸ್ಥಳಗಳನ್ನು ಗುರುತಿಸಲು ಮತ್ತು ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಈ ಕ್ಯೂಆರ್ ಕೋಡ್‌ಗಳು ಸಹಾಯ ಮಾಡಲಿವೆ. ಇದಕ್ಕಾಗಿ 25 ವಲಯಗಳಲ್ಲಿ ವ್ಯಾಪಿಸಿರುವ ಮಹಾ ಕುಂಭಮೇಳದ ಜಾಗಗಳಲ್ಲಿ ವಿದ್ಯುತ್ ಕಂಬಗಳಲ್ಲೇ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿದೆ.
ಭಾನುವಾರವೇ ದೇಶ ಮತ್ತು ವಿದೇಶಗಳಿಂದ ಒಂದು ಕೋಟಿಗೂ ಹೆಚ್ಚು ಮಂದಿ ಮಹಾಕುಂಭ ಮೇಳದ ಪ್ರದೇಶಗಳು ಹಾಗೂ ಪವಿತ್ರ ಘಾಟ್‌ಗಳಲ್ಲಿ ಜಮಾಯಿಸಿದ್ದಾರೆ. ಸಂಗಮದ ಬಳಿ ಸುಮಾರು 50,000ಕ್ಕೂ ಹೆಚ್ಚು ಕ್ಯೂಆರ್ ಕೋಡ್‌ಗಳನ್ನು ವಿದ್ಯುತ್ ಕಂಬಗಳಲ್ಲಿ ಅಳವಡಿಸಿದ್ದೇವೆ. ಭಕ್ತರು ಗೊಂದಲವಿಲ್ಲದೆ ತಮ್ಮ ಸ್ಥಳಗಳು ಹಾಗೂ ತಲುಪಬೇಕಾದ ಸ್ಥಳಗಳು, ರಸ್ತೆ ಮಾರ್ಗಗಳ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಮೂಲಕ ತಿಳಿದುಕೊಳ್ಳಬಹುದು ಎಂದು ನಗರಾಭಿವೃದ್ಧಿ ಮತ್ತು ಇಂಧನ ಖಾತೆ ರಾಜ್ಯ ಸಚಿವ ಎ.ಕೆ.ಶರ್ಮಾ ಮಾಹಿತಿ ನೀಡಿದ್ದಾರೆ.

ಯಾತ್ರಿಕರು ತಮ್ಮ ಮೊಬೈಲ್ ಮೂಲಕ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ಕಂಟ್ರೋಲ್ ರೂಮ್‌ಗೆ ತಮ್ಮ ಸಲಹೆಗಳು ಮತ್ತು ದೂರುಗಳನ್ನು ಕಳುಹಿಸಬಹುದು ಎನ್ನಲಾಗಿದೆ. ಈ ಮಹಾಕುಂಭವನ್ನು ಅದ್ಧೂರಿಯಾಗಿ ಆಚರಿಸಲು 15 ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರದಿಂ 7 ಸಾವಿರ ಕೋಟಿ ಹಾಗೂ ಕೇಂದ್ರ ಸರ್ಕಾರದಿಂದ 8 ಸಾವಿರ ಕೋಟಿ ರೂಪಾಯಿ ಅನುದಾನ ಕುಂಭಮೇಳಕ್ಕೆ ಸಿಕ್ಕಿದೆ.












Click it and Unblock the Notifications