Maha Kumbh Mela 2025: ಈ ಬಾರಿಯ ಮಹಾ ಕುಂಭಮೇಳದಲ್ಲಿ ಇವರೇ ಪ್ರಮುಖ ಆಕರ್ಷಣೆ: ಏಕೆ?
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಸಾಧು-ಸಂತರು, ನಾಗ ಸಾಧುಗಳು, ಪಂಡಿತರು ಸೇರಿದಂತೆ ಕೋಟ್ಯಂತರ ಜನರು ಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ.
ಪ್ರಯಾಗ ರಾಜ್‌ಗೆ ಈಗಾಗಲೇ ಸಾವಿರಾರು ನಾಗ ಸಾಧುಗಳು ಆಗಮಿಸಿದ್ದು, ತಮಗೆ ನಿಗದಿ ಮಾಡಲಾದ ಶಿಬಿರಗಳಲ್ಲಿ ಹೋಮ-ಹವನಗಳನ್ನು ನಡೆಸುತ್ತಿದ್ದಾರೆ. ನಾಗ ಸಾಧುಗಳು ಮಂತ್ರ ಪಠಣ ಹಾಗೂ ಧ್ಯಾನದಲ್ಲಿ ನಿರತರಾಗಿದ್ದು, ಕುಂಭ ಮೇಳದ ಪೂಜೆ ಸಜ್ಜಾಗುತ್ತಿದ್ದಾರೆ. ಆದರೆ ಈ ಮಧ್ಯೆ ಈ ಬಾರಿಯ ಮಹಾ ಕುಂಭಮೇಳದಲ್ಲಿ ಗಂಗಾಪುರಿ ಮಹಾರಾಜರು ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಗಂಗಾಪುರಿ ಮಹಾರಾಜ ಅವರು ಅತಿದೊಡ್ಡ ಜುನಾ ಅಖಾರದ ನಾಗಾ ಸಂತ. ಹಾಗೂ ಇವರು ಅಸ್ಸಾಂನ ಕಾಮಾಖ್ಯ ಪೀಠಕ್ಕೆ ಸಂಬಂಧಿಸಿದವರಾಗಿದ್ದಾರೆ. ಹೀಗಾಗಿ ಅವನನ್ನು ನೋಡಲು ಅನೇಕ ಭಕ್ತರು ಕಾದಿದ್ದು ಅವರ ಆಶೀರ್ವಾದ ಪಡೆದು ಜೊತೆಯಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಗಂಗಾಪುರಿ ಮಹಾರಾಜ್ ಅವರು ಇತರ ಸಂತರಿಗಿಂತ ಹೇಗೆ ವಿಶೇಷ ಎನ್ನುವುದರ ವಿವರಣೆ ಇಲ್ಲಿದೆ.
ಮಹಾ ಕುಂಭ ಮೇಳಕ್ಕೆ ಕೋಟ್ಯಂತರ ಭಕ್ತರು ಹಾಗೂ ಸಂತರು ಗಂಗೆಯ ಮಡಿಲಿನಲ್ಲಿ ಪುಣ್ಯ ಸ್ನಾನ ಮಾಡಲು ಬರುತ್ತಾರೆ. ಆದರೆ ಗಂಗಾಪುರಿ ಮಹಾರಾಜರು ಗಂಗೆಯಲ್ಲಿ ಸ್ನಾನ ಮಾಡುವುದಿಲ್ಲ. ನಿಜ ಹೇಳಬೇಕು ಎಂದರೆ ಮಹಾ ಕುಂಭ ಮೇಳದಲ್ಲಿ ಅಲ್ಲ ಅವರು ಎಲ್ಲಿಯೂ ಸ್ನಾನ ಮಾಡುವುದಿಲ್ಲವಂತೆ. ಗಂಗಾಪುರಿ ಮಹಾರಾಜರು ಕಳೆದ 32 ವರ್ಷಗಳಿಂದ ಸ್ನಾನ ಮಾಡಿಲ್ಲ. 32 ವರ್ಷಗಳಿಂದ ಈಡೇರದ ಆಸೆಯೊಂದು ಇರುವುದರಿಂದ ಸ್ನಾನ ಮಾಡುವುದಿಲ್ಲ ಎಂದು ಹೇಳಿರುವ ಗಂಗಾಪುರಿ ಮಹಾರಾಜರು ದೇಹಕ್ಕಿಂತ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ ಎಂದು ಭಕ್ತರಿಗೆ ಬೋಧಿಸುತ್ತಾರೆ.

ಇನ್ನು 57 ವರ್ಷದ ಗಂಗಾಪುರಿ ಮಹಾರಾಜರು ಅವರು ಕೇವಲ ಮೂರು ಅಡಿ ಎತ್ತರದ ಇದ್ದಾರೆ. ಹೀಗಾಗಿ ಅನೇಕರು ಅವರನ್ನು ಚೋಟು ಬಾಬಾ ಎಂದು ಸಹ ಕರೆಯುತ್ತಾರೆ. ಮಹಾ ಕುಂಭಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಅವರು, ಎತ್ತರವು ತಮ್ಮ ದೌರ್ಬಲ್ಯವಲ್ಲ ಬದಲಿಗೆ ಶಕ್ತಿ ಎಂದು ನಂಬುತ್ತಾರೆ. ಜೀವನದಲ್ಲಿ ಸಕರಾತ್ಮಕ ಯೋಚನೆಗಳನ್ನೇ ಹೊಂದಿರುವ ಗಂಗಾಪುರಿ ಮಹಾರಾಜರನ್ನು ಜನರು ಬಹಳ ಇಷ್ಟಪಡುತ್ತಾರೆ. ಅಲ್ಲದೇ ಅವರನ್ನು ನೋಡಲು ಜನ ಮುಗಿಬೀಳುತ್ತಾರೆ.
ಇನ್ನು ಛೋಟು ಬಾಬಾ ಅಂದರೆ ಗಂಗಾಪುರಿ ಮಹಾರಾಜರು ಪ್ರಯಾಗ್ ರಾಜ್‌ನ ಮಹಾ ಕುಂಭ ಮೇಳಕ್ಕೆ ಮೊದಲ ಬಾರಿಗೆ ಬಂದಿದ್ದು, ಅವರಿಗಿನ್ನೂ ಶಿಬಿರದ ವ್ಯವಸ್ಥೆ ಆಗಿಲ್ಲವಂತೆ. ಸದ್ಯ ಅವರು ಬೇರೆ ಸಂತರ ಶಿಬಿರದಲ್ಲೇ ಇದ್ದು, ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಶೀಘ್ರದಲ್ಲೇ ಶಿಬಿರ ಮತ್ತು ಸೌಲಭ್ಯಗಳನ್ನು ಒದಗಿಸುತ್ತಾರೆ ಎನ್ನುವ ಆಶಯವನ್ನು ಛೋಟು ಬಾಬಾ ವ್ಯಕ್ತಪಡಿಸಿದ್ದಾರೆ.












Click it and Unblock the Notifications