ರಾಷ್ಟ್ರಪಿತ ನೆನಪು ಚಿರವಾಗಿಸಿದ ಆ ಮನೆ ಎಲ್ಲಿದೆ ಗೊತ್ತಾ?, ಇಲ್ಲಿದೆ ಸಂಪೂರ್ಣ ವಿವರಣೆ ಸಹಿತ ಮಾಹಿತಿ
ಮಡಿಕೇರಿ, ಅಕ್ಟೋಬರ್, 01: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ದೇಶದ ಉದ್ದಗಲಕ್ಕೂ ಅಡ್ಡಾಡಿದ್ದು, ಅವರ ನೆನಪುಗಳು ಅಲ್ಲಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ. ಅದರಂತೆಯೇ ಅವರು ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗಿಗೂ ಬಂದಿದ್ದರು ಎನ್ನುವುದು ವಿಶೇಷ.
ಗಾಂಧೀಜಿ ಅವರ ತತ್ವಾದರ್ಶಗಳನ್ನು ಪಾಲಿಸುತ್ತಾ ಗಾಂಧಿವಾದಿಗಳಾಗಿ ಬದುಕಿದ ಬಹಳಷ್ಟು ಮಹನೀಯರು ನಮಗೆ ಸಿಗುತ್ತಾರೆ. ಅಂತಹ ಗಾಂಧಿವಾದಿಗಳು ದೇಶಾದ್ಯಂತ ಇದ್ದಾರೆ. ಆಗಿನ ಕಾಲದಲ್ಲಿ ಗಾಂಧೀಜಿ ಅವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ಒಂದೆಡೆಯಾದರೆ, ಅವರನ್ನು ಹತ್ತಿರದಿಂದ ನೋಡಬೇಕು ಎಂದು ಹಂಬಲಿಸುತ್ತಿದ್ದವರು ಅಸಂಖ್ಯಾತರು.

ಹೀಗಿರುವಾಗಲೇ ಅವರು ಕೊಡಗಿಗೆ ಬರುತ್ತಿದ್ದಾರೆ ಎಂದಾಗ ವಿರಳ ಜನಸಂಖ್ಯೆಯ ಪುಟ್ಟ ಜಿಲ್ಲೆಯಾಗಿದ್ದ ಕೊಡಗಿನಲ್ಲಿ ಮಿಂಚಿನ ಸಂಚಾರವಾಗಿತ್ತು. ಅವತ್ತು ಅವರು ಆಗಮಿಸಿ ವಾಸ್ತವ್ಯ ಹೂಡಿದ್ದ ಮನೆ ಇವತ್ತಿಗೂ ಇದೆ. ಗಾಂಧಿ ಜಯಂತಿಯ ಈ ಸಮಯದಲ್ಲಿ ಅದರ ಪರಿಚಯ ಮಾಡಿಕೊಡಲೇಬೇಕಾಗಿದೆ. ಏಕೆಂದರೆ ಇತ್ತೀಚೆಗಿನ ತಲೆಮಾರಿನವರಿಗೆ ಈ ಬಗ್ಗೆ ಗೊತ್ತೇ ಇಲ್ಲ ಎಂದರೂ ತಪ್ಪಾಗಲಾರದು.
1934ರಲ್ಲಿ ಕೊಡಗಿಗೆ ಬಂದಿದ್ದ ಗಾಂಧಿ
ಅದು ಸ್ವಾತಂತ್ರ್ಯದ ಕಿಚ್ಚು ಹೊತ್ತಿ ಉರಿಯುತ್ತಿದ್ದ ಕಾಲ.. ದೇಶಾದ್ಯಂತ ಬ್ರಿಟೀಷರ ವಿರುದ್ಧ ಹೋರಾಟಗಳು ನಡೆಯುತ್ತಿದ್ದವು. ಗಾಂಧೀಜಿ ಹೋದಲೆಲ್ಲ ಸ್ವಾತಂತ್ರ್ಯ ಸಂಗ್ರಾಮದ ಖರ್ಚಿಗಾಗಿ ಜನ ಸ್ವತಃ ತಮ್ಮ ದುಡಿಮೆಯ ಹಣವನ್ನು ವಂತಿಗೆಯಾಗಿ ನೀಡುತ್ತಿದ್ದರು. ಗಾಂಧೀಜಿ ಹೋದ ಕಡೆಗಳಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡುತ್ತಿದ್ದರು.
ಆಗಿನ ಕಾಲದಲ್ಲಿ ಗಾಂಧಿ ಬಂದಿದ್ದಾರೆಂದರೆ ಹತ್ತಾರು ಕಿ.ಮೀ. ದೂರದಿಂದ ಜನ ಬರುತ್ತಿದ್ದರು. ಇಂತಹ ಸಮಯದಲ್ಲಿ ಗಾಂಧಿ ಅವರು ಕೊಡಗಿಗೆ ಬಂದಿದ್ದರು. ಅದು 1934ನೇ ಇಸವಿ. ಸ್ವಾತಂತ್ರ್ಯ ಪೂರ್ವದ ಕಾಲ. ಕೊಡಗಿನಲ್ಲಿ ಬ್ರಿಟೀಷರ ಆಳ್ವಿಕೆ ನಡೆಯುತ್ತಿತ್ತು. ಇಲ್ಲಿ ಬ್ರಿಟೀಷರ ಪ್ರಭಾವ ತುಸು ಜಾಸ್ತಿಯೇ ಇತ್ತು ಎಂದರೆ ತಪ್ಪಾಗಲಾರದು. ಆದರೂ ಗಾಂಧೀಜಿ ಅವರನ್ನು ಕೊಡಗಿಗೆ ಕರೆಸಲೇಬೇಕೆಂದು ಹಲವರು ಪಣತೊಟ್ಟಿದ್ದರು. ಅವರಲ್ಲಿ ಒಬ್ಬರು ಕೊಡಗಿನ ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿಯ ಮಂಜುನಾಥಯ್ಯ ಒಬ್ಬರು. ಅವರ ಮನೆಯಲ್ಲಿಯೇ ಗಾಂಧೀಜಿ ತಂಗಿದ್ದರು.
ಬೇಳೂರು ಬಾಣೆಯ ಗುರಪ್ಪರವರ ಮನೆಯಲ್ಲಿ ವಾಸ್ತವ್ಯ
ಇದಕ್ಕೂ ಮುನ್ನ ಅವರು ಸೋಮವಾರಪೇಟೆಯ ಬೇಳೂರು ಬಾಣೆಯ ಸನಿಹದ ನಿವಾಸಿಯಾಗಿದ್ದ ದಿವಂಗತ ಬಿ.ಬಿ.ಗುರಪ್ಪ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅವರು ಅವತ್ತು ವಾಸ್ತವ್ಯ ಹೂಡಿದ ಮನೆ ಇಂದಿಗೂ ಇರುವುದು ವಿಶೇಷವಾಗಿದೆ. ಇಷ್ಟಕ್ಕೂ ಗಾಂಧೀಜಿ ಅವರು ಗುರಪ್ಪ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು ಕೂಡ ಆಕಸ್ಮಿಕವೇ. ಅದರ ಹಿಂದೆ ಒಂದು ಕಾರಣವೂ ಇದೆ. ಅದು ಏನೆಂದರೆ ನಿಜವಾಗಿ ಗಾಂಧೀಜಿ ಅವರು ಅವತ್ತಿನ ಶ್ರೀಮಂತೆ ಕಾಫಿ ಉದ್ಯಮಿಯಾಗಿದ್ದ ಸಾಕಮ್ಮ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಬೇಕಾಗಿತ್ತು.
ಅವತ್ತಿನ ಮಟ್ಟಿಗೆ ಸಾಕಮ್ಮ ಅವರು ಲಂಡನ್‌ಗೂ ಕಾಫಿ ಪುಡಿಯನ್ನು ಕಳಿಸಿಕೊಡುತ್ತಿದ್ದರು. ಹೀಗಾಗಿ ಬ್ರಿಟೀಷರು ಅವರ ಮೇಲೆ ಪ್ರಭಾವ ಬೀರಿ ಅವರ ಮನೆಯಲ್ಲಿ ಗಾಂಧೀಜಿ ವಾಸ್ತವ್ಯ ಹೂಡದಂತೆ ನೋಡಿಕೊಂಡರು. ಈ ವೇಳೆ ಅನಿವಾರ್ಯವಾಗಿ ಗಾಂಧೀಜಿ ಅವರು ಬೇಳೂರು ಬಾಣೆಯ ಗುರಪ್ಪ ಅವರ ಮನೆಯಲ್ಲಿ ವಾಸ್ತವ್ಯ ಹೂಡಬೇಕಾಯಿತು ಎನ್ನುವುದು ಜನವಲಯದಲ್ಲಿರುವ ಮಾತಾಗಿದೆ.
ಅದು ಗಾಂಧಿ ಕಲ್ಲು ಎಂದೇ ಪರಿಚಿತ
ಗಾಂಧೀಜಿ ಅವರಿಗೆ ಗುರಪ್ಪ ಮತ್ತು ಗಂಗಮ್ಮ ದಂಪತಿಗಳು 1920ರಲ್ಲಿ ನಿರ್ಮಿಸಿದ್ದ ತಮ್ಮ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಅದರಂತೆ ಗಾಂಧೀಜಿ ಅವರು ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೆ ಅಲ್ಲಿದ್ದು ವಿಶ್ರಾಂತಿ ಪಡೆದರು. ಈ ವೇಳೆ ಗಾಂಧೀಜಿ ಅವರು ತಮ್ಮೊಂದಿಗೆ ತಂದಿದ್ದ ಚರಕದಿಂದ ನೂಲು ತೆಗೆಯುವುದನ್ನು ನಿಲ್ಲಿಸಿರಲಿಲ್ಲ. ಮನೆಯ ಮಹಡಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಅವರಿಗೆ ಬೇಕಾದ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಅವರ ಅನುಯಾಯಿಗಳು ತಯಾರಿಸಿಕೊಡುತ್ತಿದ್ದರಂತೆ.
ಗಾಂಧೀಜಿ ಬೇಳೂರು ಬಾಣೆಯ ಗುರಪ್ಪ ಅವರ ಮನೆಯಲ್ಲಿ ತಂಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅವರನ್ನು ನೋಡಲು ಸುತ್ತಮುತ್ತಲಿನವರು ಬಂದಿದ್ದರು. ಗಾಂಧೀಜಿ ಜನರು ನೀಡುತ್ತಿದ್ದ ವಂತಿಗೆಯನ್ನು ಪಡೆಯುತ್ತಿದ್ದರಂತೆ. ಗಾಂಧಿ ಅವರು ಆಡಿನ ಹಾಲು ಕುಡಿಯುತ್ತಿದ್ದರಿಂದ ಆಡುಗಳನ್ನು ತಂದು ಕಟ್ಟಿಹಾಕಿ ಅದರ ಹಾಲನ್ನು ಬಳಸುವ ವ್ಯವಸ್ಥೆ ಮಾಡಲಾಗಿತ್ತಂತೆ. ಇದಾದ ಬಳಿಕ ಮನೆಯ ಸಮೀಪದ ಹೆಬ್ಬಂಡೆಯ ಬಳಿಗೆ ತೆರಳಿ ಅಲ್ಲಿಂದ ಕಂಡು ಬರುವ ನಿಸರ್ಗ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಂಡಿದ್ದರಂತೆ. ಈ ಹೆಬ್ಬಂಡೆಯನ್ನು ಸ್ಥಳೀಯರು ಗಾಂಧಿ ಕಲ್ಲು ಎಂದು ಕರೆಯುತ್ತಾರೆ.
ಗಾಂಧಿ ಚಿತಾಭಸ್ಮಕ್ಕೆ ಗೌರವ ಸಮರ್ಪಣೆ
ಬೆಳಗ್ಗೆ 5 ಗಂಟೆಯಿಂದ ಸಂಜೆ 10 ಗಂಟೆ ತನಕ ಗುರಪ್ಪ ಅವರ ಮನೆಯಲ್ಲಿದ್ದ ಮಹಾತ್ಮಾ ಗಾಂಧೀಜಿ ಅವರು ನಂತರ ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿ ಮಂಜುನಾಥಯ್ಯ ಅವರ ಮನೆಗೆ ತೆರಳಿದರಂತೆ. ಇನ್ನು ಗಾಂಧೀಜಿ ಅವರಿಗೆ ಅತಿಥ‍್ಯ ನೀಡಿದ್ದ ಬಿ.ಬಿ.ಗುರಪ್ಪ ಮತ್ತು ಗಂಗಮ್ಮ ದಂಪತಿಗಳ ಪೈಕಿ ಗುರಪ್ಪ ಅವರು ತಮ್ಮ 45 ವಯಸ್ಸಿನಲ್ಲಿ ಅಂದರೆ 1945ರಲ್ಲಿ ಮೃತರಾದರೆ ಪತ್ನಿ ಗಂಗಮ್ಮ ತಮ್ಮ 101ನೇ ವಯಸ್ಸಿನಲ್ಲಿ 2015ರಂದು ನಿಧನರಾದರು.
ಮಹಾತ್ಮಾಗಾಂಧೀಜಿ ಅವರು ಕೊಡಗಿಗೆ ಬಂದಿದ್ದರು ಎಂಬುದು ಇತಿಹಾಸವಾಗಿದೆ. ಜೊತೆಗೆ ಅವರ ಚಿತಾಭಸ್ಮವನ್ನು ತಂದು ನಿರ್ಮಿಸಿದ ಗಾಂಧಿ ಮಂಟಪ ಮಡಿಕೇರಿಯಲ್ಲಿದೆ. ಪ್ರತಿ ವರ್ಷ ಗಾಂಧಿ ಜಯಂತಿಯಂದು ಜಿಲ್ಲಾಡಳಿತದ ಖಜಾನೆಯಲ್ಲಿರುವ ಚಿತಾಭಸ್ಮವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಗಾಂಧಿಮಂಟಪದಲ್ಲಿರಿಸಿ ಗೌರವ ಸಮರ್ಪಣೆ ಮಾಡುವುದು ವಿಶೇಷವಾಗಿದೆ.












Click it and Unblock the Notifications