ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಪ್ರಶ್ನೆ ಕೇಳಲಾಗುತ್ತಿದೆ: ಶಾರುಖ್ ಬೆಂಬಲಕ್ಕೆ ನಿಂತ ಅಮಿತಾಬ್ ಬಚ್ಚನ್
ಕೋಲ್ಕತ್ತ: ಬಾಲಿವುಡ್‌ನ ಹಿರಿಯ ಅಮಿತಾಬ್ ಬಚ್ಚನ್ ಇಂದು ಕೋಲ್ಕತ್ತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬ್ರಿಟಿಷ್ ಸೆನ್ಸಾರ್‌ಶಿಪ್, ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯಪೂರ್ವ ಚಲನಚಿತ್ರಗಳು, ಕೋಮುವಾದ ಮತ್ತು ಸಾಮಾಜಿಕ ಐಕ್ಯತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಾದಗಳಿಂದ ದೂರವೇ ಉಳಿಯಲು ಯತ್ನಿಸುವ ಅಮಿತಾಬ್ ಬಚ್ಚನ್ ಇಂದು ರಾಜಕೀಯವಾಗಿ ಸೂಕ್ಷ್ಮವಾದ ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದರು.

'ವೇದಿಕೆ ಮೇಲಿರುವ ನನ್ನ ಸಹೋದ್ಯೋಗಿಗಳು ಈಗಲೂ ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂಬುದು ನನಗೆ ಖಾತ್ರಿಯಿದೆ' ಎಂದು ಬಚ್ಚನ್ ಹೇಳಿದರು.
ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರಕ್ಕೆ ನಿಷೇಧ ಬೆದರಿಕೆ ಬಂದಿದೆ.
ಈ ವೇಳೆ ಮಾತನಾಡಿದ ಶಾರುಖ್ ಖಾನ್, 'ಜಗತ್ತು ಏನೇ ಮಾಡಿದರೂ, ಎಷ್ಟೇ ದ್ವೇಷ ಕಾರಿದರೂ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತಾರೆ' ಎಂದು ಹೇಳಿದರು.

ಶಾರುಖ್ ಅವರ ಮಾತುಗಳನ್ನು ಶ್ಲಾಘಿಸಿದ ಅಮಿತಾಬ್ ಬಚ್ಚನ್, 'ಬಹುತ್ವ ಮತ್ತು ಸಮಾನತೆಯನ್ನು ಅಳವಡಿಸಿಕೊಳ್ಳುವ ನಿಮ್ಮ ಕಲಾತ್ಮಕ ಮನೋಧರ್ಮಕ್ಕೆ ನಾನು ನಮಸ್ಕರಿಸುತ್ತೇನೆ' ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್, 'ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತದ ಮಕ್ಕಳು ಪಾಶ್ಚಿಮಾತ್ಯರ ವಿಚಾರಗಳನ್ನು ತಿರಸ್ಕರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅವರು ಪಾಶ್ಚಿಮಾತ್ಯರಿಂದ ಪಡೆದ ಪಾಠವಾಗಿದೆ. ಇದು ನಮ್ಮ ಧ್ಯೇಯವಲ್ಲ. ಎಲ್ಲಾ ಜನಾಂಗಗಳನ್ನು ಒಂದುಗೂಡಿಸಲು ಭಾರತವಿದೆ' ಎಂದು ತಿಳಿಸಿದರು.

28 ನೇ ಅಂತರರಾಷ್ಟ್ರೀಯ ಕೋಲ್ಕತ್ತಾ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್, ಚಲನಚಿತ್ರ ತಾರೆಯರಾದ ಶಾರುಖ್ ಖಾನ್, ರಾಣಿ ಮುಖರ್ಜಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾಗವಹಿಸಿದರು.












Click it and Unblock the Notifications