ಟೆನ್ಷನ್ ಬಿಡಿ: ಮೊಡವೆ ನಿವಾರಣೆಗೆ ಇಲ್ಲಿದೆ ಸುಲಭದ 5 ಮನೆ ಮದ್ದು!
ಹದಿಹರಯದ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಮೊಡವೆ. ಕನ್ನಡಿ ಮುಂದೆ ನಿಂತು ಅಂದ ನೋಡಿಕೊಳ್ಳುವಾಗ ಮೊಡವೆಯೊಂದು ಇಣುಕಿ ಕುಹಕ ನಗೆ ಬೀರಿ ಹೆಣ್ಣಿಗಾಗಲಿ, ಗಂಡಿಗಾಗಲಿ ದೊಡ್ಡ ಸಮಸ್ಯೆಯಂತೆ ಕಾಡುತ್ತದೆ. ಕೆಲವರು ಕೇವಲ ಮೊಡವೆ ತಾನೇ ಎಂದು ನಿರ್ಲಕ್ಷ್ಯ ತೋರಿದರೆ, ಸೌಂದರ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಮೊಡವೆಯೇ ಪ್ರತಿ ದಿನ ನೋವು ಕೊಡುತ್ತದೆ.
ಹದಿಹರಯದ ದಿನಗಳಲ್ಲಿ ಸಾಮಾನ್ಯವಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ 'ಎ' ಕೊರತೆಯಿಂದಲೂ ಮೊಡವೆ ಕಾಣಿಸಿಕೊಳ್ಳುತ್ತದೆ. ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು, ತ್ವಚೆಗೆ ಸೂಕ್ತವಲ್ಲದ ಬ್ಯೂಟಿ ಪ್ರೊಡಕ್ಟ್ಸ್‌ಗಳನ್ನು ಬಳಸುವುದು, ಅತಿಯಾದ ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಮಾನಸಿಕ ಒತ್ತಡ, ಧೂಳು ಇತ್ಯಾದಿ ಗಳಿಂದ ಮೊಡವೆಗಳು ಕಾಣಿಸಿಕೊಳ್ಳುತ್ತದೆ.

ಮೊಡವೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಒತ್ತಡಕ್ಕೊಳಗಾಗುವ ಯುವಕ ಅಥವಾ ಯುವತಿಯರು ಅದರ ನಿವಾರಣೆಗೆ ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ಹೊರಗಡೆ ಸಿಗುವ ಔಷಧಿಗಳಿಂದಲೇ ಮೊಡವೆಗಳು ಗುಣವಾಗಬೇಕು ಎಂದುಕೊಳ್ಳುವವರು ತಮ್ಮ ಮನೆಯೊಳಗಡೆ ಒಮ್ಮೆ ಕಣ್ಣು ಹಾಯಿಸಿ, ನಿಮ್ಮ ಮೊಡವೆಗಳಿಗೆ ಮನೆಯೊಳಗೆ ಸಿಂಪಲ್ ಆದ ಅತೀ ಕಡಿಮೆ ವೆಚ್ಚದ ಪರಿಹಾರದ ಮಾರ್ಗವಿರುತ್ತದೆ.
ನೀರು
ನೀರು ಸರ್ವ ರೋಗಕ್ಕೂ ಮನೆ ಮದ್ದು. ಶುದ್ಧ ನೀರು ಕುಡಿಯುವುದರಿಂದ ಮನುಷ್ಯ ಆರೋಗ್ಯವಾಗಿರಬಹುದು. ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ 2-3 ಲೀಟರ್ ನೀರನ್ನು ಕುಡಿಯಬೇಕು. ಇನ್ನು ಮುಖದಲ್ಲಿ ಮೊಡವೆ ಇರುವವರು ಹೆಚ್ಚಾಗಿ ನೀರು ಕುಡಿಯುದರಿಂದ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಿ ಮೊಡವೆಗಳು ಕಡಿಮೆ ಮಾಡಲು ನೆರವಾಗುತ್ತದೆ. ಇನ್ನು ಆಗಾಗ ಶುದ್ಧ ನೀರಿನಿಂದ ಮುಖ ತೊಳೆಯವುದು ಮೊಡವೆಗಳ ನಿವಾರಣೆಗೆ ಸಿಂಪಲ್ ಆದ ಪರಿಹಾರ. ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯುವರಿಂದ ಮುಖದ ಆರೋಗ್ಯ ಕಾಪಾಡಿಕೊಳ್ಳಬಹುದು.

ಲೋಳೆ ರಸ ಅಥವಾ ಅಲೋವೇರಾ
ಅಲೋವೇರಾ ಮನೆಯ ಗಾರ್ಡನ್‌ನಲ್ಲಿ ಸಿಗುವ ದುಬಾರಿಯೂ ಅಲ್ಲದ ಅತೀ ಸುಲಭವಾಗಿ ಸಿಗುವ ಮೆಡಿಸಲ್ ಪ್ಲಾಂಟ್ ಅಂದರೆ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ. ಅಲೋವೇರಾ ಗಿಡ ಚಿಕ್ಕದಾಗಿ ಕಂಡರೂ ಇದರ ಔಷಧೀಯ ಗುಣಗಳು ಮಾತ್ರ ಹೇಳತೀರದು. ಅನೇಕ ಕಾಯಿಲೆಗಳಿಗೆ ಔಷಧವಾಗಿರುವ ಅಲೋವೇರಾ ಮೊಡವೆಗೆ ರಾಮಬಾಣ. ಯಾವುದೇ ಇತರ ವಸ್ತುಗಳನ್ನು ಮಿಶ್ರಣ ಮಾಡದೇ ಅಲೋವೇರಾ ಲೋಳೆಯನ್ನು ಪ್ರತಿ ನಿತ್ಯ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಅರಿಶಿನ
ಅರಿಶಿನ ಮನೆಯ ಸಾಂಬಾರು ಪದಾರ್ಥಗಳ ಡಬ್ಬಿಯಲ್ಲಿ ಸಿಗುವ ಸುಲಭದ ವಸ್ತು. ಪುರಾತನ ಕಾಲದಿಂದಲೂ ಸೌಂದರ್ಯ ವರ್ಧಕವಾಗಿ ಅರಿಶಿನವನ್ನು ಬಳಸುತ್ತಿದ್ದರು. ಹೀಗಾಗಿ ಧಾರ್ಮಿಕವಾಗಿಯೂ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ನಂಜು ನಿವಾರಿಸುವ, ತ್ವಚೆಯ ಆರೋಗ್ಯ ಕಾಪಾಡುವ ಅರಶಿನವನ್ನು ನೀರಿನೊಂದಿಗೆ ಕಲುಹಿಸಿ ಮೊಡವೆಗಳ ಮೇಲೆ ಲೇಪಿಸುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ. ಆದರೆ ಎಚ್ಚರವಿರಲಿ ಹೊರಗಿನ ಅಂಗಡಿಗಳಲ್ಲಿ ಸಿಗುವ ಪ್ಯಾಕೇಟ್ ಅರಿಶಿನ ಪುಡಿಗಿಂತ, ಮನೆಯಲ್ಲೇ ಬೆಳೆಯುವ ಅರಿಶಿನದ ಕೊಂಬುಗಳು ಉತ್ತಮ.

ಕಡ್ಲೆ ಹಿಟ್ಟು
ಮೊಡವೆಗಳು ಆರಂಭವಾಗುತ್ತಿದ್ದಂತೆ ದುಬಾರಿ ಫೇಸ್‌ವಾಶ್ ಸೋಪುಗಳ ಬಳಕೆಯತ್ತ ಮುಖ ಮಾಡುವ ಬದಲು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಸಿಗುವ ಕಡ್ಲೆ ಹಿಟ್ಟಿನ ಬಗ್ಗೆಯೂ ಗಮನ ಇರಲಿ. ಫೇಸ್‌ವಾಶ್‌ಗಳನ್ನು ಮೊಡವೆಗಳ ಮೇಲೆ ಉಜ್ಜುವ ಬದಲು ಮುಖ ತೊಳೆಯಲು ಕಡ್ಲೆ ಹಿಟ್ಟನ್ನು ಬಳಸಿ. ಕಡ್ಲೆ ಹಿಟ್ಟಿನಿಂದ ನಯವಾಗಿ ಉಜ್ಜಿ ಉಗುರು ಬೆಚ್ಚಿಗಿನ ನೀರಿನಿಂದ ತೊಳೆಯವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಈ ಅಭ್ಯಾಸದಿಂದ ದಿನ ಕಳೆದಂತೆ ಮೊಡವೆಗಳು ಕಡಿಮೆಯಾಗುತ್ತದೆ.
ಲಿಂಬೆ ಹಣ್ಣು
ಝಳ-ಝಳ ಬಿಸಿಲಿಗೆ ತಂಪನೆಯ ಲಿಂಬೆ ಪಾನಕ ಇದ್ದರೆ ಎಷ್ಟು ಹಿತವೋ, ಅದೇ ರೀತಿ ಮೊಡವೆಗಳ ಸಮಸ್ಯೆಗೆ ಕೂಡ ಲಿಂಬೆ ಹಣ್ಣು ಪರಿಹಾರ. ಮೊಡವೆ ಮೇಲೆ ಲಿಂಬೆ ಹಣ್ಣು ಹಚ್ಚುವುದರಿಂದ ಉರಿಯುತ್ತದೆ. ಆದರೆ ಕಾಲಕ್ರಮೇಣ ಮೊಡವೆಗಳು ಕಡಿಮೆಯಾಗುತ್ತದೆ. ಇನ್ನು ಸೂಕ್ಷ್ಮವಾದ ಚರ್ಮ ಉಳ್ಳವರು ಲಿಂಬೆ ಹಣ್ಣು ಮೊಡವೆ ಮೇಲೆ ಹಚ್ಚಬೇಕೆಂದಿಲ್ಲ. ಇನ್ನು ಮೊಡವೆ ನಿವಾರಣೆಗೆ ಜಾಸ್ತಿ ನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳಲು ಬಯಸುವವರು ನೀರಿನ ಬದಲು ಲೆಮನ್ ಜ್ಯೂಸ್ ಕೂಡ ಕುಡಿಯಬಹುದು. ಇದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ.












Click it and Unblock the Notifications