2nd Moon: ಭೂಮಿಗೆ ಎರಡು ತಿಂಗಳ ಕಾಲ ಸಿಗಲಿದೆ ಎರಡನೇ ಚಂದ್ರ! ಏನಿದು ಖಗೋಳ ವಿಸ್ಮಯ
ಚಂದಮಾಮ, ಚಂದಿರ ಎಂದೆಲ್ಲಾ ಮಕ್ಕಳಿಂದ ಮುದ್ದಾಗಿ ಕರೆಸಿಕೊಳ್ಳುವ ಚಂದ್ರ ಭೂಮಿಯ ಉಪಗ್ರಹ. ಹುಣ್ಣಿಮೆ ದಿನದಂದು ಪ್ರಕಾಶಮಾನವಾಗಿ ಬೆಳಗುವ ಚಂದ್ರನನ್ನು ನೋಡುವುದೇ ಒಂದು ಸೊಬಗು. ಒಬ್ಬ ಚಂದಿರನ ನೋಡುವ ಖುಷಿಯ ನಡುವೆ ಮತ್ತೊಂದು ಚಂದಿರನ ದರ್ಶನವಾದರೆ ಹೇಗಿರುತ್ತದೆ? ಹೌದು ಇಂತಹ ಖಗೋಳ ವಿಸ್ಮಯವೊಂದು ನಡೆಯಲಿದ್ದು, ಭೂಮಿಗೆ ಎರಡು ತಿಂಗಳ ಕಾಲ ಎರಡು ಚಂದ್ರರು ಇರಲಿದ್ದಾರೆ.
ಸೆಪ್ಟೆಂಬರ್ 29 ರಿಂದ ನವೆಂಬರ್ 25 ರವರೆಗೆ ಭೂಮಿಗೆ ಎರಡು ಚಂದ್ರ ಇರಲಿವೆ. ಕ್ಷುದ್ರಗ್ರಹವೊಂದು ಭೂಮಿಯ ಗುರುತ್ವಾಕರ್ಷಣೆಗೆ ಸಿಗಲಿದೆ. ಎರಡು ತಿಂಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಆದರೆ ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಕಾಣಿಸುವುದಿಲ್ಲ ಎಂದು ಹೇಳಲಾಗಿದೆ.

ಆಗಸ್ಟ್ 7 ರಂದು ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಬಳಸಿಕೊಂಡು 2024 ಪಿಟಿ5 ಕ್ಷುದ್ರಗ್ರಹವನ್ನು ಗುರುತಿಸಲಾಗಿದೆ. ಇದು ನಾಸಾದ ಕ್ಷುದ್ರಗ್ರಹಗಳನ್ನು ಗುರುತಿಸುವ ಅಪಾಯವನ್ನು ಗುರುತಿಸುವ ಎಚ್ಚರಿಕೆ ವ್ಯವಸ್ಥೆಯಾಗಿದೆ.
ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿಯ ಸಂಶೋಧನಾ ಟಿಪ್ಪಣಿಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕ್ಷುದ್ರಗ್ರಹವು ಕೇವಲ 10 ಮೀಟರ್ (33 ಅಡಿ) ವ್ಯಾಸವನ್ನು ಹೊಂದಿರಲಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ದೂರ ಸರಿಯುವ ಮೊದಲು ಭೂಮಿಯ ಸುತ್ತ 53 ದಿನಗಳ ಕಾಲ ಸುತ್ತಲಿದೆ.
ಕಾರ್ಲೋಸ್ ಡೆ ಲಾ ಫ್ಯೂಯೆಂಟೆ ಮಾರ್ಕೋಸ್ ಮತ್ತು ರೌಲ್ ಡೆ ಲಾ ಫ್ಯೂಯೆಂಟೆ ಮಾರ್ಕೋಸ್ ಬರೆದಿರುವ ಆರ್‌ಎನ್‌ಎಎಎಸ್ ವರದಿಯಲ್ಲಿ ಭೂಮಿಯು ಕ್ಷುದ್ರಗ್ರಹಗಳನ್ನು ಸೆರೆಹಿಡಿಯುವ ಮತ್ತು ತನ್ನ ಕಕ್ಷೆಗೆ ಎಳೆಯುವ ಗುಣವನ್ನು ಹೊಂದಿದೆ ಎಂದು ಹೇಳಿದೆ. ಕ್ಷುದ್ರಗ್ರಹವು ಕಕ್ಷೆಯನ್ನು ಪೂರ್ಣಗೊಳಿಸುವ ಮೊದಲು ಭೂಮಿಯ ಅಂಡಾಕಾರದ ಮಾರ್ಗದಿಂದ ದೂರ ಹೋಗಲಿದೆ.
ಈ ಮೊದಲೂ ಕೂಡ ಈ ಕ್ಷುದ್ರಗ್ರಹ ಭೂಮಿಯ ಸುತ್ತ ಒಂದು ವರ್ಷಗಳ ಕಾಲ ಪ್ರದಕ್ಷಿಣೆ ಹಾಕಿತ್ತು. ಜುಲೈ 2006 ರಲ್ಲಿ, ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕಿದ್ದ ಕ್ಷುದ್ರಗ್ರಹ ಜುಲೈ 2007ವರೆಗೆ ಸುತ್ತಿತ್ತು. ಈಗ ಪತ್ತೆಯಾಗಿರುವ ಹೊಸ ಕ್ಷುದ್ರಗ್ರಹ 2024 ಪಿಟಿ5 2022 ಎನ್‌ಎಕ್ಸ್1 ನ ಮಾರ್ಗವನ್ನು ಹೋಲುತ್ತದೆ, ಇದು 1981 ಮತ್ತು 20222 ರಲ್ಲಿ ಭೂಮಿಯ ಸುತ್ತಲೂ ಸುತ್ತಿತ್ತು. 2051 ರಲ್ಲಿ ಮತ್ತೊಮ್ಮೆ ಭೂಮಿಯ ಸಮೀಪ ಬರುವ ಸಾಧ್ಯತೆ ಇದೆ. ಭೂಮಿಯು ಕೆಲವೊಮ್ಮೆ ಬಾಹ್ಯಾಕಾಶದಲ್ಲಿ ಚಲಿಸುವ ಕ್ಷುದ್ರಗ್ರಹಗಳನ್ನು ಅನ್ನು ತನ್ನ ಕಕ್ಷೆಗೆ ಸೆಳೆಯುತ್ತದೆ, 2024 ಪಿಟಿ5 ನೈಸರ್ಗಿಕ ವಸ್ತು ಎಂದು ಹೇಳಿದೆ.












Click it and Unblock the Notifications