ಸೊಳ್ಳೆ ಕಚ್ಚಿದ್ರೆ ಏಡ್ಸ್ ರೋಗ ಬರುತ್ತಾ? ಇದು ಯುವ ಜನರ ರಿಯಾಲಿಟಿ ಶೋ
ವಿಶ್ವಾದ್ಯಂತ ಮಂಕಿಪಾಕ್ಸ್ ರೋಗ ವೇಗವಾಗಿ ಹಬ್ಬುತ್ತಿದೆ. ಇದೇ ಹೊತ್ತಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚಳವು ಎಚ್ಐವಿಏಡ್ಸ್ ರೋಗದ ಹರಡುವಿಕೆಗೂ ಕಾರಣವಾಗುತ್ತಿದೆ ಎಂಬಂತಹ ಕೆಲ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಭಾರತೀಯ ವಿಜ್ಞಾನಿಗಳು ಇದನ್ನು ಅಲ್ಲಗಳೆದಿದ್ದಾರೆ.
ಮಂಕಿಪಾಕ್ಸ್ ಪ್ರಕರಣ ಹೆಚ್ಚಳವು ಹೆಚ್‌ಐವಿಗೆ ಎಡೆ ಮಾಡಿಕೊಡುವುದಿಲ್ಲ. ಮಂಕಿಪಾಕ್ಸ್ ಪ್ರಕರಣಗಳಲ್ಲಿ ಸ್ಯಾಂಪಲ್‌ಗಳನ್ನು ಎಲ್ಲಾ ರೀತಿಯ ಲೈಂಗಿಕ ಸಂಬಂಧಿತ ಸೋಂಕುಗಳಿಗೆ ಪರೀಕ್ಷಿಸಲಾಗುತ್ತದೆ. ಮಂಕಿಪಾಕ್ಸ್ ಸೋಂಕಿಗೂ ಎಚ್ಐವಿಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಐಸಿಎಂಆರ್ ವಿಜ್ಞಾನಿ ಡಾ. ಪ್ರಜ್ಞಾ ಯಾದವ್ ಸ್ಪಷ್ಟಪಡಿಸಿದ್ದಾರೆ.
ದಶಕಗಳ ಹಿಂದೆ ಭಾರತಕ್ಕೆ ಎಚ್ಐವಿ ಅಡಿ ಇಟ್ಟಾಗ ಜನರು ಅದೆಷ್ಟು ಭಯಭೀತಗೊಂಡಿದ್ದರೋ ಈಗಲೂ ಆ ಮನಸ್ಥಿತಿ ಹೋಗಿಲ್ಲ. ಮೊದಲಿನಷ್ಟು ಜನರು ಬೆಚ್ಚಿಬೀಳದಿದ್ದರೂ ಏಡ್ಸ್ ರೋಗದ ಬಗ್ಗೆ ಹಲವು ಕಲ್ಪನೆಗಳನ್ನು ಬೆಳೆಸಿಕೊಂಡಿರುವುದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ತಿಳಿದುಬರುತ್ತದೆ.
ಏಡ್ಸ್ ಬಗ್ಗೆ ತಪ್ಪು ಕಲ್ಪನೆ ಅಥವಾ ತಪ್ಪು ತಿಳುವಳಿಕೆ ಪುರುಷರಿಂತ ಮಹಿಳೆಯರಲ್ಲೇ ಹೆಚ್ಚು ಎನ್ನಲಾಗಿದೆ. 15ರಿಂದ 24 ವಯೋಮಾನದ ಸಮುದಾಯದಲ್ಲಿ ಎಚ್ಐವಿಏಡ್ಸ್ ರೋಗದ ಬಗ್ಗೆ ಸರಿಯಾದ ಜ್ಞಾನ ಹೊಂದಿರುವವರು ಕಡಿಮೆ. ಶೇ. 31 ಯುವಕರು ಮತ್ತು ಶೇ. 22ರಷ್ಟು ಯುವತಿಯರು ಏಡ್ಸ್ ರೋಗದ ಬಗ್ಗೆ ತಕ್ಕಮಟ್ಟಿಗೆ ತಿಳಿದುಕೊಂಡಿದ್ದಾರೆ.
ವಯಸ್ಸಾಗುತ್ತಾ ಆಗುತ್ತಾ, ಪ್ರೌಢಿಮೆ ಬೆಳೆಯುತ್ತಾ ಹೋದಂತೆ ಜನರಿಗೆ ಎಚ್ಐವಿಬಗ್ಗೆ ಸರಿಯಾದ ತಿಳಿವಳಿಕೆ ಸಿಗುತ್ತಾ ಹೋಗುತ್ತದೆ. ಹದಿಹರೆಯದವರಿಗಂತೂ ಈ ರೋಗದ ಬಗ್ಗೆ ಇರುವುದು ಕನಿಷ್ಠ ಜ್ಞಾನ.
15-17 ವರ್ಷ ವಯೋಮಾನದ ಶೇ. 17 ಹುಡುಗಿಯರು ಮತ್ತು ಶೇ. 24ರಷ್ಟು ಹುಡುಗರಿಗೆ ಮಾತ್ರ ಏಡ್ಸ್ ಬಗ್ಗೆ ಅರಿವುಂಟು. ಇನ್ನು, 23-24 ವರ್ಷ ವಯೋಮಾನದ ಶೇ. 24 ಯುವತಿಯರು ಮತ್ತು ಶೇ. 33ರಷ್ಟು ಯುವತಿಯರಿಗೆ ಈ ರೋಗದ ಬಗ್ಗೆ ತಿಳಿವಳಿಕೆ ಉಂಟು ಎಂದು ಈ ಸಮೀಕ್ಷೆ ಹೇಳುತ್ತದೆ.

ಸೊಳ್ಳೆ ಕಚ್ಚಿದರೆ ಏಡ್ಸ್ ಬರುತ್ತಾ?
ಬಹಳ ಜನರು ಈಗಲೂ ಸೊಳ್ಳೆ ಕಚ್ಚಿದರೆ ಏಡ್ಸ್ ಹರಡುತ್ತದೆ ಎಂದು ನಂಬಿದ್ದಾರಂತೆ. ಕುತೂಹಲವೆಂದರೆ, ಇಷ್ಟು ವರ್ಷ ಏಡ್ಸ್ ಬಗ್ಗೆ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳು ನಡೆದಿದ್ದರೂ ಜನರು ಆಹಾರದ ಮೂಲಕ ಏಡ್ಸ್ ಹಬ್ಬುತ್ತದೆ ಎಂದು ಜನರು ಭಾವಿಸಿದ್ದಾರೆ.
ಸೊಳ್ಳೆಯಿಂದ ಏಡ್ಸ್ ಹಬ್ಬುತ್ತದೆ ಎಂದು ಭಾವಿಸಿರುವವರಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣವೇ ಹೆಚ್ಚು. ಸೊಳ್ಳೆ ಕಚ್ಚಿದರೆ ಏಡ್ಸ್ ಅಂಟುವುದಿಲ್ಲ ಎಂಬ ವಿಚಾರ ತಿಳಿದಿರುವುದು ಶೇ. 54 ಮಹಿಳೆಯರು ಮತ್ತು ಶೇ. 64 ಪುರುಷರಿಗೆ ಮಾತ್ರವಂತೆ. ಹಾಗೆಯೇ, ಏಡ್ಸ್ ರೋಗಿ ಜೊತೆ ಆಹಾರ ಹಂಚಿಕೊಂಡರೆ ಸೋಂಕು ತಗುಲುವುದಿಲ್ಲ ಎಂಬ ವಿಚಾರದ ಬಗ್ಗೆ ಶೇ. 45 ಮಹಿಳೆಯರು ಮತ್ತು ಶೇ. 59 ಪುರುಷರಿಗೆ ಮಾತ್ರ ಅರಿವು ಇದೆ.
ಆರೋಗ್ಯವಂತನಾಗಿ ಕಾಣುವ ವ್ಯಕ್ತಿಯಲ್ಲಿ ಎಚ್ಐವಿಏಡ್ಸ್ ಇರಬಹುದು ಎಂಬುದು ಶೇ. 67 ಮಹಿಳೆಯರು ಮತ್ತು ಶೇ. 71 ಪುರುಷರಿಗೆ ತಿಳಿದಿದೆ ಎಂದು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆಯಲ್ಲಿ ತಿಳಿಸಲಾಗಿದೆ.

ಏಡ್ಸ್ ಹೆಸರೇ ಗೊತ್ತಿಲ್ಲ
ಇನ್ನು ಎಚ್ಐವಿ ಅಥವಾ ಏಡ್ಸ್ ರೋಗದ ಹೆಸರೇ ಕೇಳದ ಮಂದಿಯೂ ಇದ್ದಾರೆ. ಶೇ. 87ರಷ್ಟು ಮಹಿಳೆಯರು ಮತ್ತು ಶೇ. 94ರಷ್ಟು ಪುರುಷರಿಗೆ ಮಾತ್ರ ಈ ರೋಗದ ಹೆಸರು ತಿಳಿದಿದೆ. ಏಡ್ಸ್ ಹೆಸರು ಕೇಳದವರಲ್ಲಿ ಉತ್ತರ ಭಾರತೀಯರೇ ಹೆಚ್ಚು. ಶೇ. 90ಕ್ಕಿಂತ ಹೆಚ್ಚು ದಕ್ಷಿಣ ಭಾರತೀಯರು ಏಡ್ಸ್ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ.

ಅರಿವು ಇಳಿಮುಖ
ಎಚ್ಐವಿಬಗ್ಗೆ ಸಮಗ್ರ ಜ್ಞಾನ ಹೊಂದಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಹೋಗುತ್ತಿದೆ. 2015-16ರಲ್ಲಿ ಶೇ. 22 ಮಂದಿ ಹೆಣ್ಮಕ್ಕಳಿಗೆ ಎಚ್ಐವಿ ಬಗ್ಗೆ ಸಮಗ್ರ ಜ್ಞಾನ ಇತ್ತು. ಅದೇ 2019-21ರಲ್ಲಿ ಈ ಸಂಖ್ಯೆ ಶೇ.20ಕ್ಕೆ ಬಂದು ನಿಂತಿದೆ. ಇನ್ನು ಗಂಡು ಹುಡುಗರ ಲೆಕ್ಕ ತೆಗೆದುಕೊಂಡರೆ ಇದೇ ಎರಡು ಅವಧಿಯಲ್ಲಿ ಶೇ. 32 ಮತ್ತು ಶೇ. 29ಕ್ಕೆ ಸಂಖ್ಯೆ ಇಳಿಮುಖವಾಗಿದೆ.

ಏನಿದು ಏಡ್ಸ್?
ಇದು ಎಚ್‌ಐವಿ ಎಂದು ಹೆಸರಿಸಲಾಗಿರುವ ವೈರಸ್‌ನಿಂದ ತಗಲುವ ರೋಗವಾಗಿದೆ. ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದು. ಎಂಬತ್ತರ ದಶಕದಿಂದಲೂ ಇದು ಜಗತ್ತಿಗೆ ಭೀತಿ ಮೂಡಿಸುತ್ತಾ ಬಂದಿದೆ. ಎಂಬತ್ತು ತೊಂಬತ್ತರ ದಶಕದಲ್ಲಿ ಜನರು ಏಡ್ಸ್ ಎಂದರೆಯೇ ಹೌಹಾರುತ್ತಿದ್ದರು. ಈಗ ಸೋಂಕು ಬಹಳ ಮಟ್ಟಕ್ಕೆ ನಿಯಂತ್ರಣಕ್ಕೆ ಬಂದಿದೆ.
ಇದೂವರೆಗೆ 4 ಕೋಟಿ ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ. ಸದ್ಯ 3.8 ಕೋಟಿ ಜನರು ಸೋಂಕಿತರಿದ್ದಾರೆ. ಸದ್ಯ ಪ್ರತೀ ವರ್ಷ 15 ಲಕ್ಷ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ.
ಎಚ್‌ಐವಿ ಏಡ್ಸ್ ಲೈಂಗಿಕವಾಗಿ ಹರಡುವ ರೋಗವಾಗಿದೆ. ಸೋಂಕಿತರ ರಕ್ತದ ಮೂಲಕವೂ ಇದು ಹರಡುತ್ತದೆ. ತಾಯಿಯಿಂದ ಮಗುವಿಗೆ ಇದು ಹರಡಬಹುದು. ಸೋಂಕಿತ ತಾಯಿಯ ಎದೆಹಾಲಿನ ಮೂಲಕವೂ ಮಗುವಿಗೆ ಸೋಂಕು ಹರಡಬಹುದು. ಇದು ಬಿಟ್ಟರೆ ಏಡ್ಸ್ ರೋಗ ಬೇರೆ ರೀತಿಯಲ್ಲಿ ಹರಡುವ ಸಾಧ್ಯತೆ ಇಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications