ಬೇರೆಲ್ಲ ಹಬ್ಬಕ್ಕಿಂತ ದೀಪಾವಳಿ ವಿಭಿನ್ನ ಏಕೆ? ಆಚರಣೆ ಹೇಗೆ?
ನಾವು ಆಚರಿಸುವ ಹಬ್ಬಗಳ ಪೈಕಿ ದೀಪಾವಳಿ ಮೂರು ದಿನಗಳ ಕಾಲ ಆಚರಿಸುವ ಹಬ್ಬವಾಗಿದ್ದು, ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಹಬ್ಬವಾಗಿದೆ. ಹೀಗಾಗಿ ಪ್ರತಿಯೊಬ್ಬರ ಬದುಕಿನಲ್ಲಿಯೂ ಬೆಳಕಿರಲಿ ಎಂದು ಹಣತೆ ಹಚ್ಚಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾ ಸಂಭ್ರಮಿಸುವುದನ್ನು ನಾವು ಕಾಣಬಹುದಾಗಿದೆ.
ಹಾಗೆನೋಡಿದರೆ ದೀಪಾವಳಿ ಹಬ್ಬ ಮೂರು ದಿನಗಳ ಆಚರಣೆಯಾಗಿದ್ದು, ಮೂರು ದಿ ನವೂ ಮನೆ ಮತ್ತು ಮನದಲ್ಲಿ ಸಂಭ್ರಮ ಸಂತಸದೊಂದಿಗೆ ಒಂದಷ್ಟು ಸಂಪ್ರದಾಯದ ಆಚರಣೆ ಹಬ್ಬದಲ್ಲಿ ಎದ್ದು ಕಾಣಿಸುತ್ತದೆ. ಜತೆಗೆ ರಾಮಾಯಣ, ಮಹಾಭಾರತದಂತಹ ಪುರಾಣದ ಹಿನ್ನಲೆಯೂ ಇರುವುದರಿಂದಾಗಿ ನಾವು ಆಚರಣೆ ಮಾಡುವ ಎಲ್ಲ ಹಬ್ಬಗಳಿಗಿಂತ ಈ ಹಬ್ಬದಲ್ಲಿ ವಿಭಿನ್ನತೆ ಮತ್ತು ವೈಶಿಷ್ಟ್ಯತೆ ಈ ಹಬ್ಬಕ್ಕಿದೆ.

ದೀಪಾವಳಿ ಹಬ್ಬದ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದು ಹೇಗೆ ಬಂತು ಎಂಬುದನ್ನು ನೋಡುವುದಾದರೆ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ್ದು, ಹೀಗಾಗಿ ಈ ದಿನ ಸ್ನಾನ ಮಾಡುವ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ ಜನರಲ್ಲಿದ್ದು, ಎಣ್ಣೆ ಸ್ನಾನ ಮಾಡುವುದರಿಂದ ಆಯುರಾರೋಗ್ಯ ಆಯಸ್ಸು ವೃದ್ಧಿಸಿ ಸಕಲ ಪಾಪ ನಿವಾರಣೆ ಆಗುತ್ತದೆ ಎಂಬುದು ನಂಬಿಕೆಯಾಗಿದೆ.
ಪೌರಾಣಿಕ ಇತಿಹಾಸವನ್ನು ಗಮನಿಸಿದರೆ ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನಂತೆ. ಇದೆಲ್ಲವನ್ನು ಗಮನಿಸಿದರೆ ಹಬ್ಬದಾಚರಣೆ ಹಿಂದಿನ ಮಹತ್ವ ನಮಗೆ ಅರಿವಾಗುತ್ತದೆ. ಹಬ್ಬದ ಮೂರು ದಿನಗಳ ಆಚರಣೆಯಲ್ಲಿನ ಮೊದಲ ದಿನ ನರಕಚತುದರ್ಶಿಯಾಗಿದೆ.

ಇದು ಹೇಗೆ ಆಯಿತು ಎಂಬುದನ್ನು ನೋಡುವುದಾದರೆ ಲೋಕಕಂಠಕನಾದ ನರಕಾಸುರ ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನು ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ. ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವೀಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿಯಾಗಿದೆ.
ಸಾಮಾನ್ಯವಾಗಿ ದೀಪಾವಳಿಯಂದು ಪಟಾಕಿ ಸಿಡಿಸುವುದೇಕೆ ಎಂಬುದಕ್ಕೆ ಇಲ್ಲಿ ಒಂದಿಷ್ಟು ಮಾಹಿತಿ ಸಿಗುತ್ತದೆ. ಅದು ಏನೆಂದರೆ ದುಷ್ಟ ಸಂಹಾರದ ಸಂಕೇತವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆಯಂತೆ. ಇದೊಂದು ವಿಜಯದ ಸಂಕೇತಾಗಿದ್ದು, ಆ ದಿನ ಕೃಷ್ಣ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಬಂಧಮುಕ್ತಗೊಳಿಸಿದ್ದನಂತೆ. ಅದರಂತೆ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವೂ ಇದೆ.
ಹಬ್ಬದ ಎರಡನೇ ದಿನ (ನರಕ ಚತುರ್ದಶಿಯ ಮಾರನೆಯ ದಿನ) ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಪೂಜಿಸಿ ಧನಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ವ್ಯಾಪಾರಿಗಳು ದೀಪ ಬೆಳಗಿ ಧನಲಕ್ಷ್ಮೀಯನ್ನು ಆರಾಧಿಸುವ ದಿನವಾಗಿದೆ. ಹಬ್ಬದಲ್ಲಿ ಮೂರನೆಯ ದಿನ ಬಲಿಪಾಡ್ಯಮಿಯಾಗಿದ್ದು, ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು,
ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ-ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.
ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಸಲಾಗುತ್ತದೆ. ಅದು ಏನೇ ಇರಲಿ ದೀಪಾವಳಿ ಹಬ್ಬ ನಾವು ಆಚರಿಸುವ ಎಲ್ಲ ಹಬ್ಬಕ್ಕಿಂತ ವಿಭಿನ್ನವಾಗಿರುವುದಂತು ನಿಜ.












Click it and Unblock the Notifications