Colors: ಮಕ್ಕಳಿಗೆ ಬಣ್ಣಗಳಂದ್ರೆ ಯಾಕಿಷ್ಟ ಗೊತ್ತಾ?
ಆಕಾಶದಲ್ಲಿ ಮೂಡುವ ಕಾಮನಬಿಲ್ಲು ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಮಕ್ಕಳಿಗೆ ಕಾಮನಬಿಲ್ಲಿನಲ್ಲಿ ಮೂಡವ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ನೇರಳೆ ಬಣ್ಣಗಳನ್ನು ನೋಡುತ್ತಲೆ ಕುಣಿದು ಕುಪ್ಪಳಿಸುತ್ತವೆ. ಆ ಬಣ್ಣಗಳನ್ನು ಕಣ್ತುಂಬಿಸಿಕೊಳ್ಳಬೇಕು. ಸಾಧ್ಯವಾದರೆ, ಆ ಬಣ್ಣಗಳ ಜೊತೆ ಆಟವಾಡಬೇಕೆಂದು ಬಯಸುತ್ತವೆ. ಹಾಗಾದರೆ, ಬಣ್ಣಗಳಂದ್ರೆ ಮಕ್ಕಳಿಗೆ ಯಾಕೆ ಅಷ್ಟೊಂದು ಇಷ್ಟ ಎನ್ನುವುದನ್ನು ನೋಡೋಣ ಬನ್ನಿ.
ಮಕ್ಕಳ ಸಂವಹನಕ್ಕಿರುವ ಮೊದಲ ದಾರಿ
ಮಕ್ಕಳ ಮನಸು, ಆಲೋಚನೆ ಅರಿಯುವುದು ಅಷ್ಟು ಸುಲಭವಲ್ಲ. ಪೋಷಕರಾದ ನಾವು ಮಕ್ಕಳೊಂದಿಗೆ ಎಷ್ಟು ಸಮಯ, ಯಾವ ರೀತಿ ಕಳೆಯುತ್ತೇವೆ ಎನ್ನುವುದರ ಆಧಾರದ ಮೇಲೆ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಆದರೆ, ಇವೆಲ್ಲವುಗಳ ನಡುವೆಯೂ ಮಕ್ಕಳಿಗೆ ಸಾಕಷ್ಟು ತಮ್ಮದೇ ಆದ ಖಾಸಗಿ ಸಮಯ ಇರುತ್ತದೆ. ಇಂತಹ ವೇಳೆ ಮಕ್ಕಳಿಗೆ ತಮ್ಮಲ್ಲಿ ಮೂಡುವ ಭಾವನೆಗಳನ್ನು ಪ್ರಕೃತಿಯಲ್ಲಿರುವ ನೈಸರ್ಗಿಕವಾದ ಬಣ್ಣಗಳನ್ನು ನೋಡುವುದರ ಮೂಲಕ ಮತ್ತು ಬಣ್ಣಗಳನ್ನು ಮೂಡಿಸುವುದರ ಮೂಲಕ ಸಮಯ ಕಳೆಯಲು ಇಷ್ಟ ಪಡುತ್ತಾರೆ. ತೃಪ್ತಿ ಆಗುವವರೆಗೆ ಬಣ್ಣಗಳೊಂದಿಗೆ ಬೆರೆಯಲು ಅವಕಾಶಕ್ಕಾಗಿ ಮಕ್ಕಳು ಕಾಯುತ್ತಿರುತ್ತಾರೆ.

ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು
ಮಕ್ಕಳ ನಗುವಿಗೆ, ಸಿಟ್ಟಿಗೆ ಸಾಕಷ್ಟು ಕಾರಣಗಳಿರುತ್ತವೆ. ಮಕ್ಕಳಿಗೆ ಹಸಿವಾದರೆ ಸಿಟ್ಟಾಗುತ್ತಾರೆ. ಹಾಗೂ ಅವರಿಗೆ ಆಟಿಕೆಗಳನ್ನು ಕೊಟ್ಟರೆ ಖುಷಿ ಆಗುತ್ತಾರೆ ಎಂದು ಭಾವಿಸುತ್ತೇವೆ. ಆದರೆ, ಅವುಗಳಾಚೆಗೂ ಮಕ್ಕಳೊಳಗೆ ಒಂಟಿತನ, ಬೇಸರ, ಸ್ಪರ್ಶ, ಆಪ್ತತೆಯ ಭಾವಗಳು ಮೂಡುತ್ತಿರುತ್ತವೆ.
ಎಲ್ಲ ಕ್ಷಣಗಳಲ್ಲೂ ಮಕ್ಕಳ ಈ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು, ಅವುಗಳನ್ನು ಸ್ಪಂದಿಸಲು ಸಾಧ್ಯವಾಗದೇ ಹೋಗಬಹುದು. ಆ ಸಂದರ್ಭದಲ್ಲಿ ಮಕ್ಕಳಿಗೆ ಬಣ್ಣಗಳನ್ನು ನೀಡಿದರೆ, ಆ ಬಣ್ಣಗಳಲ್ಲಿ ತಮಗೆ ತೋಚಿದಂತೆ ಚಿತ್ರಗಳನ್ನು ಗೀಚುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಹಗುರವಾಗಲು ಸಹಾಯಕವಾಗುತ್ತದೆ.
ಬಣ್ಣಗಳ ಮೂಲಕ ತೃಪ್ತಿ ಕಾಣಲು
ಮಕ್ಕಳ ಭೌತಿಕ ಜಗತ್ತು ಸಣ್ಣದಿರುತ್ತದೆ. ಬಹುತೇಕ ಮನೆಯೇ ಮಕ್ಕಳ ಜಗತ್ತಾಗಿರುತ್ತದೆ. ಮಕ್ಕಳ ಮನಃಸ್ಥಿತಿಯ ಬಗ್ಗೆ ಅರಿವಿರುವ ಪೋಷಕರು, ಒಂದಷ್ಟು ಹೊತ್ತು ಪಾರ್ಕ್‌ಗಳಲ್ಲಿ ಸುತ್ತಾಡಿಸಿ ಬರುತ್ತಾರೆ. ಹೀಗಾಗಿ ಮಕ್ಕಳಿಗೆ ಮನೆಯೆಂಬ ಭೌತಿಕ ಚೌಕಟ್ಟಿನೊಳಗೆಯೇ ತೃಪ್ತಿ ಕಾಣಬೇಕಾದರೆ ಬಣ್ಣಗಳು ಸಹಾಯಕವಾಗಬಲ್ಲವು. ಬಣ್ಣ ಬಣ್ಣದ ಆನೆ, ಜಿಂಕೆ, ಪಕ್ಷಿಗಳ ಚಿತ್ರಗಳನ್ನು ನೋಡಿಯೇ ಕಲ್ಪನೆಯ ಪ್ರಪಂಚದಲ್ಲಿ ವಿಹರಿಸಬಲ್ಲರು. ಆನೆಯ ಮೇಲೆ ಕುಳಿತಂತೆ, ಜಿಂಕೆಯ ಜೊತೆ ಆಟವಾಡಿದಂತೆ ಭಾವಿಸಿ ತೃಪ್ತಿ ಅನುಭವಿಸುತ್ತಾರೆ.
ಬಣ್ಣಗಳ ಮೂಲಕ ಮಕ್ಕಳ ಸೃಜನಶೀಲತೆ ಸಾಕಾರ
ಮಕ್ಕಳ ಸೃಜನಶೀಲತೆ ಹುಟ್ಟಿನ ಜೊತೆ ಜೊತೆಯಲ್ಲಿಯೇ ಮೊಳಕೆ ಹೊಡೆದಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆ ಸೃಜನಶೀಲತೆಯನ್ನು ಬಣ್ಣಗಳ ಮೂಲಕ ಹೊಸ ಲೋಕವನ್ನು ಸೃಷ್ಟಿಸಲು ಮಕ್ಕಳು ಹಾತೊರೆಯುತ್ತಾರೆ. ಮಕ್ಕಳು ಬಣ್ಣಗಳ ಜೊತೆ ಮಾತನಾಡುತ್ತಲೆ, ನಲಿಯುತ್ತಾರೆ ಬೆಳೆಯುತ್ತಾ ಸಾಗುತ್ತಾರೆ. ಬಣ್ಣಗಳ ಜೊತೆ ಹೆಚ್ಚು ಒಡನಾಟ ಇರುವ ಮಕ್ಕಳ ಮನಸು ಹೆಚ್ಚು ಸಮೃದ್ಧಿಯಿಂದ ಕೂಡಿರುತ್ತದೆ.












Click it and Unblock the Notifications