Cyclone Asani: 2022ರ ಮೊದಲ ಚಂಡಮಾರುತಕ್ಕೆ 'ಅಸನಿ' ಎಂದು ಹೆಸರು ಬಂದಿದ್ದು ಹೇಗೆ?
ನವದೆಹಲಿ, ಮಾರ್ಚ್ 20: 2022ರ ಮೊದಲ ಚಂಡಮಾರುತವು ಮಾರ್ಚ್ 21 ರಂದು ಅಂಡಮಾನ್ ಮತ್ತು ನಿಕೋಬಾರ್ ಅನ್ನು ಅಪ್ಪಳಿಸಲಿದೆ. ಇದನ್ನು ಅಸನಿ ಚಂಡಮಾರುತ/ಸೈಕ್ಲೋನ್ ಅಸನಿ ಎಂದು ಹೆಸರಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಈ ಚಂಡಮಾರುತವು ಅಂಡಮಾನ್‌ಗೆ ಅಪ್ಪಳಿಸಿದ ನಂತರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ಚಲಿಸಲಿದೆ.
ಅಸನಿ ಚಂಡಮಾರುತವು ಮಾರ್ಚ್ 21 ರಂದು ಬಂಗಾಳಕೊಲ್ಲಿಯ ಕಡಿಮೆ ಒತ್ತಡದ ಪ್ರದೇಶದಲ್ಲಿ ತೀವ್ರಗೊಳ್ಳಲಿದೆ. ಸುಮಾರು 70-80 ಕಿಮೀ ವೇಗದ ಗಾಳಿಯು ಗಂಟೆಗೆ 90 ಕಿಮೀ ಗೆ ಏರಿಕೆ ಆಗಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗಗಳಲ್ಲಿ ಕಡಿಮೆ ಒತ್ತಡದ ಪ್ರದೇಶದಲ್ಲಿ ಶನಿವಾರದಂದು ಈ ಚಂಡಮಾರುತ ತೀವ್ರವಾಗಲಿದೆ.
ದಕ್ಷಿಣ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮಧ್ಯ ಭಾಗಗಳಿಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸಲಹೆಯನ್ನು ನೀಡಲಾಗಿದೆ. ಶನಿವಾರದಿಂದ ಮಂಗಳವಾರದವರೆಗೆ ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ಈಗಾಗಲೇ ಭಾರತೀಯ ಹವಾಮಾನ ಇಲಾಖೆಯು ಸೂಚನೆ ನೀಡಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾನುವಾರ ಬಿರುಗಾಳಿ ಬೀಸಲಿದೆ ಎಂದು ಕೂಡಾ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇನ್ನು ಸೋಮವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಿರುಗಾಳಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಭಾರತೀಯ ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್ ಮತ್ತು ವಾಯುಪಡೆಯ ತಂಡಗಳು ಈಗಾಗಲೇ ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ಧವಾಗಿದೆ.
ಚಂಡಮಾರುತಕ್ಕೆ ಅಸನಿ ಹೆಸರು ಬಂದಿದ್ದು ಹೇಗೆ?
ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ಪ್ರಕಾರ, ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸುವುದು ಅವಶ್ಯಕವಾಗಿದೆ. ಏಕೆಂದರೆ ಇದು ಹಲವಾರು ಕಡೆಗಳ ಮೇಲೆ ಪ್ರಭಾವ ಬೀರಲಿದೆ. ಪ್ರಾದೇಶಿಕ ಮಟ್ಟದಲ್ಲಿ ನಿಯಮಗಳ ಪ್ರಕಾರ ಹೆಸರುಗಳನ್ನು ಇರಿಸಲಾಗುತ್ತದೆ. ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶಗಳ ಉಷ್ಣವಲಯದ ಚಂಡಮಾರುತದ ಹೆಸರುಗಳನ್ನು ವರ್ಣಮಾಲೆಯ ಕ್ರಮದಲ್ಲಿ ನಿಗದಿಪಡಿಸಲಾಗಿದೆ. ಸೈಕ್ಲೋನ್ ಅಸನಿ ಎಂಬ ಹೆಸರನ್ನು ಶ್ರೀಲಂಕಾ ಸೂಚಿಸಿದೆ.
ಈ ಚಂಡಮಾರುತದ ಬಗ್ಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, "ಹವಾಮಾನಶಾಸ್ತ್ರದ ಪ್ರಕಾರ ಮಾರ್ಚ್ ಚಂಡಮಾರುತದ ಕಾಲವಲ್ಲ. ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ಸಂದರ್ಭದಲ್ಲಿ ಚಂಡಮಾರುತಗಳು ಕಾಣಿಸಿಕೊಳ್ಳುತ್ತದೆ. ಮಾರ್ಚ್‌ನಲ್ಲಿ ಸಮುದ್ರವು ತಂಪಾಗಿರುತ್ತದೆ ಮತ್ತು ಸೌರಶಕ್ತಿಯು ತುಂಬಾ ಹೆಚ್ಚಿರುವುದಿಲ್ಲ. ಆದರೆ ಈಗ ತಾಪ ಹೆಚ್ಚಾಗಿದೆ. ಅಸನಿ ಚಂಡಮಾರುತದ ಮೊದಲು ಕೊಂಚ ದುರ್ಬಲವಾಗಿ ಕಾಣಬಹುದು. ಆದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಬಹಳ ಹತ್ತಿರದಲ್ಲಿದೆ. ಆದ್ದರಿಂದ, ವ್ಯಾಪಕವಾದ ಭಾರೀ ಮಳೆ ಮತ್ತು ಬಲವಾದ ಗಾಳಿಯು ದ್ವೀಪಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ," ಎಂದು ತಿಳಿಸಿದರು.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಅಸನಿ ಚಂಡಮಾರುತವು ಮಾರ್ಚ್ 23ರ ಬೆಳಿಗ್ಗೆ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್‌ನ ಪಕ್ಕದ ಪ್ರದೇಶಗಳ ಕಡೆ ದಿಕ್ಕು ಬದಲಾಯಿಸಬಹುದು. ಚಂಡಮಾರುತವು ಬೆಳವಣಿಗೆಯಾಗುತ್ತಿದ್ದಂತೆ, ಇಂದು ಮತ್ತು ನಾಳೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗ ಹಾಗೂ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಒರಟು ವಾತಾವರಣವನ್ನು ನಿರೀಕ್ಷಿಸಲಾಗಿದೆ.
ಭಾನುವಾರದಂದು ಯುಟಿಯಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ಸೋಮವಾರದಂದು ಗಂಟೆಗೆ 90 ಕಿಲೋಮೀಟರ್‌ಗಳ ವೇಗದಲ್ಲಿ ಗಂಟೆಗೆ 70-80 ಕಿಲೋಮೀಟರ್‌ಗಳ ವೇಗದಲ್ಲಿ ಚಲಿಸುವ ಚಂಡಮಾರುತದಿಂದ ಹವಾಮಾನ ತೀವ್ರಗೊಳ್ಳುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿಯಲ್ಲಿರುವ ರೂಪಗೊಳ್ಳಲಿರುವ 'ಅಸನಿ' ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಳೆ, ಗಾಳಿ, ಸಿಡಿಲಿನ ಅಬ್ಬರಕ್ಕೆ ಮೂವರು ಮೃತಪಟ್ಟಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಸಹ ಏರಿಕೆಯಾಗಿದೆ.












Click it and Unblock the Notifications