• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋರಾಟ, ಚಳವಳಿ ಮರೆತಿರುವ ಕಾಂಗ್ರೆಸ್ ಗೆ 'ಜೋಡೆತ್ತು'ಗಳು ಬೇಕಿದೆ!

By ಅನಿಲ್ ಆಚಾರ್
|
   ಹೋರಾಟ ಚಳುವಳಿ ಮರೆತಿರುವ ಕಾಂಗ್ರೆಸ್ ಗೆ ಶಕ್ತಿ ಬೇಕಿದೆ | Oneindia Kannada

   ಲೋಕಸಭೆ ಚುನಾವಣೆ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಕುಸಿದುಹೋಗಿದೆ. ಕಾಂಗ್ರೆಸ್ ನ ಇವತ್ತಿನ ಪರಿಸ್ಥಿತಿಗೆ ನಾನಾ ಕಾರಣ ಇರಬಹುದು. ಆದರೆ ಪರ್ಯಾಯ ನಾಯಕತ್ವಕ್ಕೆ ಇಷ್ಟೆಲ್ಲ ಸಮಸ್ಯೆ ಆಗುತ್ತಿರುವುದಕ್ಕೆ ಮಾತ್ರ ದೂರದರ್ಶಿತ್ವದ ಕೊರತೆ ಎದ್ದು ಕಾಣುತ್ತಿದೆ. ನಿಮಗೆ ಒಂದು ಉದಾಹರಣೆ ಹೇಳಬೇಕು: ಕನ್ನಡದ ದಿನಪತ್ರಿಕೆಯೊಂದರಲ್ಲಿ ಹತ್ತು ವರ್ಷಕ್ಕೆ ಹಿಂದೆ ಇಬ್ಬರು ಸಮರ್ಥರು ಏಕ ಕಾಲಕ್ಕೆ ಕೆಲಸ ಮಾಡುತ್ತಿದ್ದರು.

   ಹೆಚ್ಚೂ ಕಡಿಮೆ ಇಬ್ಬರ ಹುದ್ದೆಯೂ ಒಂದೇ ಹಂತದ್ದಾಗಿದ್ದರೂ ಆ ಪೈಕಿ ಒಬ್ಬರು ಪತ್ರಿಕೆಯ ಪುಟ ವಿನ್ಯಾಸ, ತಂತ್ರಜ್ಞಾನ, ಸಿಬ್ಬಂದಿಯ ನಿರ್ವಹಣೆಯನ್ನು ಮಾಡುತ್ತಿದ್ದರೆ, ಮತ್ತೊಬ್ಬರು ವರದಿಗಾರಿಕೆ, ಸುದ್ದಿ ಆಯ್ಕೆ, ಅರೆಕಾಲಿಕ ವರದಿಗಾರರ ನೇಮಕ ಇಂಥ ವಿಷಯಗಳ ಬಗ್ಗೆ ಗಮನ ಹರಿಸುತ್ತಿದ್ದರು. ಪ್ರತಿ ವಿಭಾಗಕ್ಕೂ (ಉದಾ: ಸಾಪ್ತಾಹಿಕ, ವಾಣಿಜ್ಯ, ಇಂಟರ್ ನೆಟ್) ಪ್ರತ್ಯೇಕವಾಗಿ ಸಮರ್ಥ ಮುಖ್ಯಸ್ಥರು ಇದ್ದರು. ಆಯಾ ವಿಭಾಗದ ನಿರ್ಧಾರ ಅವರದಾಗಿರುತ್ತಿತ್ತು.

   ಅಧಿಕಾರದ ವಿಕೇಂದ್ರೀಕರಣ ಅಂದರೆ ಹೀಗೆ. ಇದರ ಜತೆಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ತಮಗಿಂತ ಕಿರಿಯರನ್ನೂ ಜೊತೆಗೆ ಇರಿಸಿಕೊಳ್ಳುತ್ತಿದ್ದರು. ಹಿರಿತನವನ್ನು ನೋಡಿ ವೇತನ ಹೆಚ್ಚಳ ಮಾಡದೆ, ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ, ಹುದ್ದೆ ಹಾಗೂ ಜವಾಬ್ದಾರಿ ನೀಡುತ್ತಿದ್ದರು. ಎಷ್ಟೋ ಮಂದಿ 'ಸೀನಿಯರ್'ಗಳು ತಮಗಿಂತ ಕಿರಿಯರ ಕೈ ಕೆಳಗೆ ಕೆಲಸ ಮಾಡಬೇಕಾಯಿತು.

   ರಾಹುಲ್ ಗಾಂಧಿ ಉತ್ತರಾಧಿಕಾರಿ ಯಾರು? ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಸಭೆರಾಹುಲ್ ಗಾಂಧಿ ಉತ್ತರಾಧಿಕಾರಿ ಯಾರು? ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಸಭೆ

   ಆ ಪೈಕಿ ಕೆಲವರಿಗೆ ಆತ್ಮಾಭಿಮಾನ ಅಡ್ಡ ಬಂದು ಕೆಲಸ ಬಿಟ್ಟರು. ಆದರೆ ಆ ಪತ್ರಿಕೆ ಅದೇ ಪದ್ಧತಿಯಲ್ಲಿ ಮುಂದುವರಿಯಿತು. ಯಾರೇ ಬದಲಾದರೂ ಪತ್ರಿಕೆ ಗುಣಮಟ್ಟ ಈಗಲೂ ಹಾಗೇ ಉಳಿದಿದೆ.

   ಮಲ್ಲಿಕಾರ್ಜುನ ಖರ್ಗೆಯವರನ್ನೇ ಅಧ್ಯಕ್ಷರಾಗಿ ಮಾಡಬಹುದಿತ್ತು

   ಮಲ್ಲಿಕಾರ್ಜುನ ಖರ್ಗೆಯವರನ್ನೇ ಅಧ್ಯಕ್ಷರಾಗಿ ಮಾಡಬಹುದಿತ್ತು

   ಮತ್ತೆ ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿ ಬಗ್ಗೆ ಬರೋಣ. ಕಳೆದ ಲೋಕಸಭೆ ಚುನಾವಣೆ ನಂತರ ಸಂಸತ್ ನ ಹೊರಗೆ ಹಾಗೂ ಕಾಂಗ್ರೆಸ್ ನ ಮಾನವನ್ನು ಉಳಿಸಿದವರು ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಖರ್ಗೆ ಅವರಷ್ಟು ಛೇಡಿಸಿದವರು, ಕಾಡಿಸಿದವರು ತಕ್ಷಣಕ್ಕೆ ನೆನಪಿಗೆ ಬರುವುದು ಕಷ್ಟ. ಅವರ ಜ್ಞಾನ, ಭಾಷೆ, ನೆನಪಿನ ಶಕ್ತಿ, ವಾಗ್ಝರಿ ಅದ್ಭುತವಾಗಿತ್ತು. ಆದರೆ ಅವರನ್ನು ರಾಹುಲ್ ಗಾಂಧಿ ಸಮವಾಗಿ ಕಾಣಲೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಆಡಳಿತ ಅನುಭವ, ಶ್ರಮವನ್ನು ಗುರುತಿಸಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದರೂ ನಡೆಯುತ್ತಿತ್ತು. ದಲಿತರೊಬ್ಬರಿಗೆ ಕಾಂಗ್ರೆಸ್ ಆಧ್ಯಕ್ಷ ಸ್ಥಾನ ನೀಡಿದ್ದಷ್ಟೇ ಅಲ್ಲ, ಸಮರ್ಥರೊಬ್ಬರಿಗೆ ಪಕ್ಷದ ಚುಕ್ಕಾಣಿ ನೀಡಿದಂತಾಗುತ್ತಿತ್ತು. ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಏರಲು ಎಪ್ಪತ್ತು ವರ್ಷ ದಾಟಿದ, ಕಾಂಗ್ರೆಸ್ ಹೈ ಕಮಾಂಡ್ ಗೆ ನಿಷ್ಠರಾದ ಖರ್ಗೆ ಖಂಡಿತಾ ಅಡ್ಡಿಯೂ ಆಗುತ್ತಿರಲಿಲ್ಲ. ಎಸ್ಸೆಂ ಕೃಷ್ಣರಂಥ ಮುತ್ಸದ್ದಿಯನ್ನು ಬಿಜೆಪಿಗೆ ಬಿಟ್ಟುಕೊಡುವ ಸ್ಥಿತಿಯೂ ಇರುತ್ತಿರಲಿಲ್ಲ.

   ಇನ್ನೂ 50 ವರ್ಷ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಿರಲಿ ಎಂದ ಬಿಜೆಪಿ ನಾಯಕ ಇನ್ನೂ 50 ವರ್ಷ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಿರಲಿ ಎಂದ ಬಿಜೆಪಿ ನಾಯಕ

   ಜೋಡೆತ್ತುಗಳು ಇರುವುದು ಯಾವತ್ತಿದರೂ ಸೇಫ್

   ಜೋಡೆತ್ತುಗಳು ಇರುವುದು ಯಾವತ್ತಿದರೂ ಸೇಫ್

   ಇನ್ನು ಹೇಗೆ ಬಿಜೆಪಿಗೆ ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ- ಅಡ್ವಾಣಿ, ಈಗ ನರೇಂದ್ರ ಮೋದಿ- ಅಮಿತ್ ಶಾ ಥರ ಇದ್ದಾರೋ ಆ ರೀತಿಯ ಸನ್ನಿವೇಶ ಕಾಂಗ್ರೆಸ್ ನಲ್ಲಿ ಇಲ್ಲ. ಪ್ರಾಮಾಣಿಕರು, ಪ್ರಕಾಂಡ ಪಂಡಿತರು, ಜಗತ್ತಿನಾದ್ಯಂತ ಹೊಗಳಿಸಿಕೊಳ್ಳುವ ಆರ್ಥಿಕ ತಜ್ಞರು, ವಿಶ್ವ ಸಂಸ್ಥೆಯಲ್ಲೂ ಲಾಬಿ ಮಾಡಬಲ್ಲ ಪ್ರಭಾವಿಗಳು ಎಲ್ಲರೂ ಕಾಂಗ್ರೆಸ್ ನಲ್ಲಿ ಇದ್ದಾರೆ. ಆದರೆ ಆ ರೀತಿಯ ಲೆಬೆಲ್ ನವರೆಲ್ಲ 'ಗಾಂಧಿ ಕುಟುಂಬ' ಕುಟುಂಬದ ಹೊರಗೆ ಜನರಿಗೆ ಕಾಣುತ್ತಾರೆ. ಅಂಥದ್ದೊಂದು ವರ್ಚಸ್ಸು ವರ್ತಮಾನದಲ್ಲಿ ಆ ಕುಟುಂಬದಲ್ಲಿ ಕಾಣುತ್ತಿಲ್ಲ. ಪ್ರಿಯಾಂಕಾ ಗಾಂಧಿ ಅವರ ರೂಪು ಥೇಟ್ ಇಂದಿರಾ ಗಾಂಧಿ ಅವರನ್ನು ಹೋಲುತ್ತದೆ ಎಂದು ಮೈಲೇಜ್ ತೆಗೆದುಕೊಳ್ಳಲು ಯತ್ನಿಸಲಾಯಿತು. ಅವರ ಪತಿ ರಾಬರ್ಟ್ ವಾದ್ರಾ ಕೇಸ್ ಗಳ ಮುಂದೆ ಎಲ್ಲ ಡಲ್ ಆಯಿತು. ಇನ್ನು ಚುನಾವಣೆಗೆ ಕೆಲವೇ ದಿನಗಳಿರುವಾಗ ಅಖಾಡಕ್ಕೆ ಇಳಿದು, ಒಂದಷ್ಟು ರೋಡ್ ಶೋ ಹಾಗೂ ಪ್ರಚಾರ ಮಾಡಿದರೆ ಸಾಕೆ? ಅದೂ ತಳಮಟ್ಟದಲ್ಲಿ ತುಂಬ ಗಟ್ಟಿಯಾದ ಸಂಘಟನೆಯನ್ನು ಬೆಳೆಸಿರುವ ಬಿಜೆಪಿಯಂಥ ಪಕ್ಷದ ಎದುರು ರಾತ್ರೋ ರಾತ್ರಿ ಮ್ಯಾಜಿಕ್ ಸಾಧ್ಯವೆ?!

   ಬೀದಿಗಿಳಿದು ಹೋರಾಟ ಮಾಡಿದ ಉದಾಹರಣೆಯೇ ಇಲ್ಲ

   ಬೀದಿಗಿಳಿದು ಹೋರಾಟ ಮಾಡಿದ ಉದಾಹರಣೆಯೇ ಇಲ್ಲ

   ಬೀದಿಗಿಳಿಯದೆ, ಹೋರಾಟಗಳನ್ನು ದೊಡ್ಡ ಮಟ್ಟದಲ್ಲಿ ಮಾಡದೆ ಏನೂ ಸಿಗುವುದಿಲ್ಲ ಅನ್ನೋದು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಅರ್ಥವೇ ಆಗಿಲ್ಲ. ಹಾಗೇ ನೆನಪಿಸಿಕೊಳ್ಳಿ: ಈ ದೇಶದಲ್ಲಿ ಅವ್ಯವಸ್ಥೆ ವಿರುದ್ಧದ ಪಾದಯಾತ್ರೆಗಳು, ಉಪವಾಸ ಸತ್ಯಾಗ್ರಹ, ಚಳವಳಿಗಳಿಂದ ನಾಯಕರು ಹುಟ್ಟಿಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ರಿಂದ ಈಚಿನ ಜಗನ್ ಮೋಹನ್ ರೆಡ್ಡಿ ತನಕ ತಾಜಾ ಉದಾಹರಣೆಗಳಿವೆ. ಬೆಂಗಳೂರಿಂದ ಬಳ್ಳಾರಿ ತನಕ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ ನಂತರ ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಬಲ ಬಂದಿದ್ದು ಮರೆಯುವಂತಿಲ್ಲ. ತೆಲಂಗಾಣ ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಕೆ ಚಂದ್ರಶೇಖರ್ ಹೋರಾಟ ಹಾಗೂ ಆ ನಂತರದ ಬೆಳವಣಿಗೆ ನಮ್ಮೆದುರು ಸಾಕ್ಷಿಯಾಗಿ ಇದೆ. ಇಂಥ ಬೇಕಾದಷ್ಟು ಉದಾಹರಣೆಗಳು ಇವೆ. ಆದರೆ ಕಾಂಗ್ರೆಸ್ ನ ಕೇಂದ್ರ ನಾಯಕತ್ವದಿಂದ ಇಂಥ ಹೋರಾಟ, ಕೆಚ್ಚು ಏನೂ ಕಂಡುಬರಲಿಲ್ಲ.

   ರಾಜಸ್ತಾನದಲ್ಲಿ ಅಲುಗಾಡುತ್ತಿದೆ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ರಾಜಸ್ತಾನದಲ್ಲಿ ಅಲುಗಾಡುತ್ತಿದೆ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ

   ಪಕ್ಷದೊಳಗೆ ಎರಡು ಪ್ರಬಲ ಹುದ್ದೆ ಸೃಷ್ಟಿಯಾಗಲಿ

   ಪಕ್ಷದೊಳಗೆ ಎರಡು ಪ್ರಬಲ ಹುದ್ದೆ ಸೃಷ್ಟಿಯಾಗಲಿ

   ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್ ಗೆ ಎರಡು ಶಕ್ತಿ ಕೇಂದ್ರದ ಅಗತ್ಯ ಇದೆ. ಒಂದು ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆಯೋ ಅಲ್ಲಿನ ಆಡಳಿತಾತ್ಮಕ ವಿಚಾರಗಳು, ನೀತಿ- ನಿಯಮ ನಿರೂಪಣೆಗೆ ಹಾಗೂ ಪಕ್ಷ ಸಂಘಟನೆ, ಶಿಸ್ತು ಇತ್ಯಾದಿ ನೋಡಿಕೊಳ್ಳುವುದಕ್ಕೆ ಎರಡು ಹುದ್ದೆ ಆಗಬೇಕು. ಈ ದೇಶದ ನಕ್ಷೆ ಗೊತ್ತಿದ್ದರಷ್ಟೇ ಸಾಲದು, ಇಲ್ಲಿನ ಜನರ ಭಾವನೆ, ಅಭಿಪ್ರಾಯ, ಭಾವುಕತೆ, ಸಮಸ್ಯೆಗಳು ಎಲ್ಲ ತಿಳಿದುಕೊಳ್ಳುವುದಕ್ಕೆ ದೇಶದಾದ್ಯಂತ ಒಂದು ಯಾತ್ರೆ ಆರಂಭಿಸಬೇಕು. ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆಯನ್ನು ಪಕ್ಕಕ್ಕೆ ಇಟ್ಟು, ಯವುದೇ ಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಸಿದ್ಧವಾಗಬೇಕು. ಪಕ್ಷದಲ್ಲಿ ಸದ್ಯಕ್ಕೆ ಇರುವ ಸಮರ್ಥರನ್ನು 'ಫ್ಯಾಮಿಲಿ' ಎಂಬ ಮಾನದಂಡದಿಂದ ಅಳೆಯದೆ, ಅರ್ಹತೆ ಆಧಾರದಲ್ಲಿ ಆರಿಸಿ, ತಳ ಮಟ್ಟದಿಂದ ಕಾರ್ಯಕರ್ತರಲ್ಲಿ ಅತ್ಮಸ್ಥೈರ್ಯ, ಜನರಲ್ಲಿ ಕಾಂಗ್ರೆಸ್ ನಾಯಕತ್ವ ಹಾಗೂ ಪಕ್ಷದ ಬಗ್ಗೆ ನಂಬಿಕೆ ಮೂಡಿಸುವುದಕ್ಕೆ ಯಶಸ್ವಿಯಾದಲ್ಲಿ ಕನಿಷ್ಠ ಪಕ್ಷ ವಿರೋಧ ಪಕ್ಷವಾಗಿಯಾದರೂ ಕಾಂಗ್ರೆಸ್ ಚಲಾವಣೆಯಲ್ಲಿ ಇರಬಹುದು.

   English summary
   After Lok Sabha Elections defeat Congress lost hopes. Here is an analysis of how party can come back at least as strong opposition party.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   loader
   X