
ಪ್ರತಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸಿದ ಮೊದಲ ರಾಷ್ಟ್ರ
ತಂಬಾಕು ಅಧಿಕ ಸೇವನೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕೂಡ ಅಧಿಕವಾಗಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಹೆಚ್ಚು ಜನ ಜಾಗೃತಿ ಮೂಡಿಸಲು ಕೆನಡಾದಲ್ಲಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸಲು ಯೋಚಿಸಲಾಗಿದೆ. ಇದು ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸುವ ಮೊದಲ ರಾಷ್ಟ್ರವಾಗಿದೆ.
ತಂಬಾಕು ಪೊಟ್ಟಣಗಳ ಮೇಲೆ ಫೋಟೋ ಎಚ್ಚರಿಕೆಗಳು ಪರಿಣಾಮ ಕಳೆದುಕೊಳ್ಳುವ ಆತಂಕ ಹೆಚ್ಚಾಗಿದೆ. ಹೀಗಾಗಿ ಪ್ರತಿ ಸಿಗರೇಟಿನ ಮೇಲೆ ಮುದ್ರಿತ ಎಚ್ಚರಿಕೆಯನ್ನು ಪರಿಚಯಿಸುವ ವಿಶ್ವದ ಮೊದಲ ರಾಷ್ಟ್ರವಾಗಲು ಕೆನಡಾ ಸಜ್ಜಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಗ್ರಾಫಿಕ್ ಫೋಟೋ ಎಚ್ಚರಿಕೆಗಳನ್ನು ಸೇರಿಸಿ ಎರಡು ದಶಕಗಳ ನಂತರ ಈ ಕ್ರಮ ಜಾರಿಗೆ ಬಂದಿದೆ.
ವಿಶ್ವ ತಂಬಾಕು ರಹಿತ ದಿನ 2022: ಸಿಗರೇಟು ಸೇದುತ್ತಾ ಸಾವಿನ ಮನೆ ಸೇರಿದ 80 ಲಕ್ಷ ಜನ!

ಹಳೆ ಸಂದೇಶ ಪ್ರಭಾವ ಕಳೆದುಕೊಳ್ಳುವ ಕಳವಳ
"ತುಂಬಾ ವರ್ಷಗಳ ಬಳಿಕ ಈ ಸಂದೇಶಗಳು ತಮ್ಮ ನವೀನತೆಯನ್ನು ಕಳೆದುಕೊಂಡಿರಬಹುದು ಎಂಬ ಕಳವಳವನ್ನು ನಾವು ಪರಿಹರಿಸಬೇಕಾಗಿದೆ ಮತ್ತು ಸ್ವಲ್ಪ ಮಟ್ಟಿಗೆ ಅವುಗಳು ತಮ್ಮ ಪ್ರಭಾವವನ್ನು ಕಳೆದುಕೊಂಡಿರಬಹುದು ಎಂದು ನಾವು ಚಿಂತಿಸುತ್ತೇವೆ. ಬಹುತೇಕ ಸಿಂಗಲ್ ಸಿಗರೇಟ್ ಸೇದುವವರು ಪ್ಯಾಕೇಜ್‌ನಲ್ಲಿ ಮುದ್ರಿಸಲಾದ ಮಾಹಿತಿಯನ್ನು ಬದಿಗಿಡುತ್ತಾರೆ" ಎಂದು ಮಾನಸಿಕ ಆರೋಗ್ಯ ಮತ್ತು ವ್ಯಸನಗಳ ಸಚಿವ ಕ್ಯಾರೊಲಿನ್ ಬೆನೆಟ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಸಿಗರೇಟ್ ಪರಿಣಾಮಗಳ ದೀರ್ಘ ಪಟ್ಟಿ
"ವೈಯಕ್ತಿಕ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯ ಎಚ್ಚರಿಕೆಗಳನ್ನು ಸೇರಿಸುವುದರಿಂದ ಈ ಅಗತ್ಯ ಸಂದೇಶಗಳು ಯುವಕರನ್ನು ಒಳಗೊಂಡಂತೆ ಜನರನ್ನು ತಲುಪಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ. ಪ್ರಸ್ತಾವಿತ ಬದಲಾವಣೆಯ ಸಮಾಲೋಚನೆಯ ಅವಧಿ ಶನಿವಾರದಿಂದ ಪ್ರಾರಂಭವಾಗಲಿದೆ ಮತ್ತು 2023 ರ ಉತ್ತರಾರ್ಧದ ವೇಳೆಗೆ ಬದಲಾವಣೆಗಳು ಜಾರಿಗೆ ಬರಬೇಕೆಂದು ಸರ್ಕಾರ ಬಯಸಿದೆ. ಸಿಗರೇಟ್ ಪ್ಯಾಕ್ ಮೇಲಿನ ಸಂದೇಶ ಬದಲಾಗಬಹುದು.
ಹೊಟ್ಟೆಯ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಮಧುಮೇಹ ಮತ್ತು ಬಾಹ್ಯ ನಾಳೀಯ ಕಾಯಿಲೆಯಂತಹ ಧೂಮಪಾನದ ಆರೋಗ್ಯ ಪರಿಣಾಮಗಳ ದೀರ್ಘ ಪಟ್ಟಿಯನ್ನು ಒಳಗೊಂಡಂತೆ ಸಿಗರೇಟ್ ಪ್ಯಾಕೇಜುಗಳಿಗೆ ಹೆಚ್ಚಿನ ಎಚ್ಚರಿಕೆಗಳನ್ನು ಮುದ್ರಿಸುವ ಕುರಿತು ಬೆನೆಟ್ ಮಾತನಾಡಿದರು. ಕೆನಡಾ ಎರಡು ದಶಕಗಳ ಹಿಂದೆ ಫೋಟೋ ಎಚ್ಚರಿಕೆಗಳನ್ನು ಪರಿಚಯಿಸಿತ್ತು. ಆದರೆ ಒಂದು ದಶಕದಿಂದ ಚಿತ್ರಗಳನ್ನು ನವೀಕರಿಸಲಾಗಿಲ್ಲ.

ಪ್ರತಿ ಧಮ್‌ನೊಂದಿಗೆ ದೇಹ ಸೇರುವ ಅಪಾಯ
ಕೆನಡಾದ ಕ್ಯಾನ್ಸರ್ ಸೊಸೈಟಿಯ ಹಿರಿಯ ನೀತಿ ವಿಶ್ಲೇಷಕ ರಾಬ್ ಕನ್ನಿಂಗ್‌ಹ್ಯಾಮ್, ಸಿಗರೇಟ್‌ಗಳ ಮೇಲಿನ ಎಚ್ಚರಿಕೆಗಳು ವಿಶ್ವಾದ್ಯಂತ ಜನಪ್ರಿಯವಾಗಲಿ ಎಂದು ಅವರು ಆಶಿಸಿದ್ದಾರೆ. ಜೊತೆಗೆ ಬೇರೆ ಯಾವುದೇ ದೇಶವು ಅಂತಹ ನಿಯಮಗಳನ್ನು ಜಾರಿಗೆ ತಂದಿಲ್ಲ. 'ನೀವು ನಿರ್ಲಕ್ಷಿಸಲಾಗದ ಎಚ್ಚರಿಕೆ ಇದು. ಈ ಅಪಾಯ ಪ್ರತಿಯೊಬ್ಬ ಧೂಮಪಾನಿಗಳನ್ನು ಪ್ರತಿ ಧಮ್‌ನೊಂದಿಗೆ ತಲುಪಲಿದೆ (Poison in every puff)'ಎಂದು ಕನ್ನಿಂಗ್ಹ್ಯಾಮ್ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತಾವಿತ ನೀತಿಯು ವಾಟರ್‌ಲೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಅಂತಾರಾಷ್ಟ್ರೀಯ ತಂಬಾಕು ನಿಯಂತ್ರಣ ನೀತಿ ಮೌಲ್ಯಮಾಪನ ಯೋಜನೆಯ ಪ್ರಧಾನ ತನಿಖಾಧಿಕಾರಿ ಜೆಫ್ರಿ ಫಾಂಗ್ ಅವರಿಂದ ಪ್ರಶಂಸೆಗೆ ಪಾತ್ರವಾಯಿತು. "ಇದು ನಿಜವಾಗಿಯೂ ಸಂಭಾವ್ಯ ಶಕ್ತಿಯುತ ಹಸ್ತಕ್ಷೇಪವಾಗಿದ್ದು ಆರೋಗ್ಯ ಎಚ್ಚರಿಕೆಗಳ ಪರಿಣಾಮವನ್ನು ಹೆಚ್ಚಿಸುತ್ತದೆ" ಎಂದು ಫಾಂಗ್ ಹೇಳಿದ್ದಾರೆ.

ಧೂಮಪಾನಿಗಳ ಸಂಖ್ಯೆ ಇಳಿಕೆ ಮಾಡಲು ಕ್ರಮ
ವರ್ಷಗಳಲ್ಲಿ ಧೂಮಪಾನ ದರಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ. ಕಳೆದ ತಿಂಗಳು ಬಿಡುಗಡೆಯಾದ ಅಂಕಿ ಅಂಶದ ಪ್ರಕಾರ, ಕೆನಡಾದಲ್ಲಿ ಇತ್ತೀಚೆಗೆ ಶೇ.20ಷ್ಟು ಕೆನಡಿಯನ್ನರು ನಿಯಮಿತವಾಗಿ ಧೂಮಪಾನಿಗಳಾಗಿದ್ದಾರೆ ಎಂದು ವರದಿ ಮಾಡಿದೆ. 2035ರ ವೇಳೆಗೆ ಆ ದರವನ್ನು ಅರ್ಧಕ್ಕೆ ಇಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
15 ರಿಂದ 19 ವರ್ಷ ವಯಸ್ಸಿನ ಕೇವಲ ಶೇ.4 ರಷ್ಟು ಜನರಿಗೆ ಹೋಲಿಸಿದರೆ, ಸರಿಸುಮಾರು ಶೇ.11 ಕೆನಡಿಯನ್ನರು 20 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪ್ರಸ್ತುತ ಧೂಮಪಾನಿಗಳೆಂದು ವರದಿ ಮಾಡಿದ್ದಾರೆ ಎಂದು StatCan ಗಮನಿಸಿದೆ.